ಭಾಗ – 63
ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೬೩ ಮಹಾಭಾರತ
ಮರುದಿನದ ಸೂರ್ಯೋದಯವಾಯಿತು. ಪ್ರಾತಃ ವಿಧಿ ಪೂರೈಸಿ ಎಲ್ಲರೂ ಕರ್ಣಾರ್ಜುನರ ವಿದ್ಯಾ ವಿಕ್ರಮ ನೋಡಲು ಸೇರಿದರು. ಇಬ್ಬರೂ ಒಬ್ಬರಾದ ಬಳಿಕ ಒಬ್ಬರು ಶರ ಪ್ರಯೋಗ ನೈಪುಣ್ಯತೆ ತೋರುತ್ತಾ ಸಮಬಲರಾಗಿ ಮುನ್ನಡೆಯುತ್ತಿದ್ದಾರೆ. ಒಮ್ಮೆ ಅರ್ಜುನನಿಗೆ ಶಹಬ್ಬಾಸ್ ಗಿರಿ ಸಿಕ್ಕಿದರೆ ಮತ್ತೊಮ್ಮೆ ಕರ್ಣನಿಗೆ ಭಲೇ ಭಲೇ ಹೀಗೆ ಧನುರ್ವೇದ ಕೌಶಲ್ಯ ಪ್ರದರ್ಶನ ಗುರು ದ್ರೋಣ – ಗುರು ಭಾರ್ಗವ ಶಿಷ್ಯರು ತೋರ್ಪಡಿಸುತ್ತಿದ್ದಾರೆ. ಮಂತ್ರಾಸ್ತ್ರ ಪ್ರಯೋಗ, ಲಾಂಛನ ಭೇದನ, ದಿವ್ಯ ಶರ ಪ್ರಯೋಗಗಳಿಂದ ವಿಶಿಷ್ಟ ಕೌತುಕ ತೋರಿಸುತ್ತಾ ಒಬ್ಬರಿಗೊಬ್ಬರು ಪ್ರತ್ಯಸ್ತ್ರ ಪ್ರಯೋಗ ಪ್ರದರ್ಶನ ತೋರುತ್ತಾ ಸಾಗುತ್ತಿತ್ತು ಸ್ಪರ್ಧೆ. ವಿದ್ಯಾ ಪ್ರದರ್ಶನ ಒಮ್ಮಿಂದೊಮ್ಮೆಲೇ ಯುದ್ದವಾಗಿ ಪರಿವರ್ತನೆಯಾಗುವ ಹಾದಿ ಹಿಡಿಯಿತು. ನೇರ ಆಕ್ರಮಣಕ್ಕೆ ಮುಂದಾಗುವ ಲಕ್ಷಣ ಗೋಚರಿಸಿತು. ಹಾಗೇ ತೊಡಗಿಕೊಳ್ಳುವುದಕ್ಕೆ ಮುಂದಾದಾಗ ಗುರು ದ್ರೋಣಾಚಾರ್ಯ, ಅಶ್ವತ್ಥಾಮ, ಕೃಪಾಚಾರ್ಯರು ತಡೆದರು. ಇದು ವಿದ್ಯಾ ಪ್ರದರ್ಶನರಂಗವೇ ಹೊರತು ರಣರಂಗವಲ್ಲ ಎಂದು ಇಬ್ಬರ ಶರಸಂಧಾನವನ್ನೂ ಉಪಸಂಹರಿಸಲು ಆದೇಶ ನೀಡಿದರು. ಅರ್ಜುನ ಕರ್ಣರ ವಿಕ್ರಮ ಮೆರೆದು ಮಿಗಿಲು ಯಾರೆಂಬ ಕುತೂಹಲ ಹಾಗೇ ಉಳಿಯಿತು. ಇಬ್ಬರೂ ಪರಸ್ಪರ ಶಪತಗೈದವರಂತೆ ಒಂದಲ್ಲ ಒಂದು ದಿನ ಅವಕಾಶ ಒದಗೀತು! ಆಗ ನೋಡಿಕೊಳ್ಳುವ ಎಂಬಷ್ಟರ ಮಟ್ಟಿಗೆ ಪ್ರಕರಣ ಬೆಳೆಯಿತು. ಈ ಎಲ್ಲಾ ವಿದ್ಯಮಾನ ಕಂಡ ಕುಂತಿಯ ಸ್ಥಿತಿ ಮಾತ್ರ ನರಕ ಸದೃಶವಾಗಿ ಬಿಟ್ಟಿತ್ತು. ಇತ್ತ ದುರ್ಯೋಧನನಿಗಂತೂ ತಡೆಯಲಾಗದ ಪರಮಾನಂದ. ಇಂದಿನವರೆಗಿದ್ದ ಅರ್ಜುನನ ಬಗೆಗಿನ ಭಯಕ್ಕೊಂದು ಉತ್ತರ ಸಿಕ್ಕಿದ ಸಮಾಧಾನವಾಗಿ ಬಿಟ್ಟಿದ್ದ ಕರ್ಣ.
ಈ ವೃತ್ತಾಂತದಿಂದ ಆಂತರಂಗಿಕವಾಗಿದ್ದ ದಾಯಾದಿ ಕಲಹ ಪ್ರಥಮ ಬಾರಿಗೆ ಇತ್ತಂಡಗಳಾಗಿ ವಿಭಜನೆಯಾಗಿ ಲೋಕಮುಖಕ್ಕೆ ಪ್ರಕಟವಾಯಿತು. ಭೀಷ್ಮ – ವಿದುರರಿಗೆ ಇದನ್ನು ಹೀಗೆ ಮುಂದುವರಿಯಗೊಟ್ಟರೆ ಅನಾಹುತವೇ ಆಗಲಿದೆ. ತಡೆಯುವ ಬಗೆ ಆದರೂ ಹೇಗೆಂಬ ಚಿಂತೆ ಅತಿಭಾರವೆನಿಸಿತು.
ಪರೀಕ್ಷಾರಂಗವಾದ ಬಳಿಕ ಕೆಲ ದಿನ ಕಳೆದು ಗುರು ದ್ರೋಣಾಚಾರ್ಯರು ಶಿಷ್ಯರನ್ನು ಕರೆದು ಒಂದೆಡೆ ಸೇರಿಸಿದರು. ಶಿಷ್ಯರೇ ನಾನು ಈ ಹಿಂದೆ ನನ್ನ ಅಪೇಕ್ಷೆಯೊಂದರ ಕುರಿತು ಹೇಳಿದಾಗ ಅರ್ಜುನ ಮುಂದೆ ಬಂದು ನಡೆಸಿಕೊಡುವೆ ಎಂದಿದ್ದ. ಈಗ ಕಾಲ ಪಕ್ವವಾಗಿದೆ. ವಿದ್ಯಾ ಸಂಪನ್ನರಾದ ನೀವು ಗುರುದಕ್ಷಿಣೆ ನೀಡುವ ಕ್ರಮವಿದೆ. ನನ್ನ ಆಶೆ ಪೂರೈಸಿದರೆ ಅದೇ ನನಗೆ ದಕ್ಷಿಣೆಯಾಗಲಿದೆ. ಇಂದು ನಾನು ನನ್ನ ಅಪೇಕ್ಷೆ ಮುಂದಿಡುವೆ. ಹಿಂದೆ ನನ್ನ ಮಿತ್ರನೇ ಆಗಿದ್ದವನು ಪಾಂಚಾಲ ದೇಶದ ಮಹಾರಾಜ ದ್ರುಪದ. ಬಡತನದ ಕಷ್ಟ ಪರಿಹಾರ ಬಯಸಿ ಅವನ ಆಸ್ಥಾನಕ್ಕೆ ಹೋದ ನನಗೆ ಅಪಮಾನ ಮಾಡಿದ. ಸಶಕ್ತನಾಗಿದ್ದರೂ ಧರ್ಮ ಮೀರದೆ, ದಂಡಿಸಲು ಮನ ಮಾಡದೆ, ಸ್ವಯಂ ನಿಯಂತ್ರಣದಿಂದ ವಿವೇಕಿಯಾಗಿ ಅಂದು ಸಹಿಸಿಕೊಂಡಿದ್ದೆ. ಆದರೆ ನನ್ನ ವಿದ್ಯೆಗೆ ಮಾನ್ಯತೆ ನೀಡದ ನಿನ್ನನ್ನು ವಿದ್ಯಾದಾನ ಮುಖೇನ ಸಿದ್ಧಗೊಂಡ ಶಿಷ್ಯರ ಮೂಲಕ ನಿನ್ನನ್ನು ಸೆರೆ ಹಿಡಿದು ತಂದು ನನ್ನ ಮಂಚದ ಕಾಲಿಗೆ ಕಟ್ಟಿ ಹಾಕುವೆ ಎಂದು ಶಪಥಗೈದು ಬಂದಿದ್ದೇನೆ. ಈಗ ಹೇಳಿ ನಿಮ್ಮಲ್ಲಿ ಯಾರು ಈ ಕೆಲಸ ಮಾಡಬಲ್ಲಿರಿ? ಎಂದು ಕೇಳಿದರು ಗುರುಗಳು.
ದುರ್ಯೋಧನ ಎದ್ದು ನಿಂತು ಇಷ್ಟೇ ತಾನೇ!! ನಾವು ಆತನನ್ನು ಸೆರೆ ಹಿಡಿದು ತಂದು ನಿಮ್ಮ ಕಾಲಬುಡದಲ್ಲಿ ಕಟ್ಟಿ ಹಾಕುತ್ತೇವೆ ಎಂದನು. ಗುರು ದ್ರೋಣಾಚಾರ್ಯರು ಶಿಷ್ಯರನ್ನು ಕುರಿತು ಶಿಷ್ಯರೇ, ನೀವಂದುಕೊಂಡಷ್ಟು ಸುಲಭದ ಕೆಲಸವಲ್ಲ. ದ್ರುಪದ ಬಲಿಷ್ಠನೂ, ಪರಾಕ್ರಮಿಯೂ, ರಾಜತಂತ್ರ- ರಣತಂತ್ರ ನಿಪುಣನೂ ಆಗಿದ್ದಾನೆ. ಹಾಗಾಗಿ ವಿದ್ಯೆಯ ಜೊತೆ ವಿವೇಕದ ಪ್ರದರ್ಶನವೂ ಅವಶ್ಯಕವಾಗಿದೆ ಎಂದರು. ಇತ್ತ ಪಾಂಡವರೂ ಎದ್ದು ಗುರುಗಳೇ ಆಶೀರ್ವದಿಸಿ, ನಾವು ಆತನನ್ನು ಸೆರೆಹಿಡಿದು ತಂದು ತಮ್ಮ ಆಸೆ ಪೂರೈಸುತ್ತೇವೆ ಎಂದರು. ಕೂಡಲೆ ದುರ್ಯೋಧನ – ಮೊದಲು ಹೇಳಿದ ನಮಗೇ ಮೊದಲ ಅವಕಾಶ ಎಂದು ಹೇಳಿ ಸೇನಾ ಸಮೇತನಾಗಿ ಹೊರಟನು. ಜೊತೆಗೆ ಕರ್ಣನನ್ನೂ ಸೇರಿಸಿ ಪಾಂಚಾಲದತ್ತ ಕೌರವ ಸೇನೆ ಮುನ್ನುಗ್ಗಿತು. ಬೆನ್ನಲ್ಲೇ ಪಾಂಡವರೂ ಸೈನ್ಯ ಸಮೇತರಾಗಿ ಪಾಂಚಾಲದತ್ತ ಸಾಗಿದರು.
ದುರ್ಯೋಧನ ಕರ್ಣಾದಿಗಳು, ಪಾಂಡವರೂ ಸಹಿತ ಹಸ್ತಿನೆಯ ಸೇನೆ ಪಾಂಚಾಲದತ್ತ ಬರುವ ಸುದ್ದಿ ತಿಳಿದ ದ್ರುಪದನೂ ಯುದ್ದ ಸನ್ನದ್ದನಾದನು. ಬಲಿಷ್ಠ ಸೈನ್ಯ, ವ್ಯೂಹ ಬಲಿದು ಸಿದ್ದನಾದನು. ದ್ರುಪದನಿಗೆ ಯುದ್ದ ಆಹ್ವಾನ ನೀಡಿದ ದುರ್ಯೋಧನ. ದ್ರುಪದನೂ ಸನ್ನದ್ಧನಾಗಿದ್ದ ಕಾರಣ ಯುದ್ದಾರಂಭವಾಯಿತು. ದ್ರುಪದನೆದುರು ಕೌರವರ ಕೈಸಾಗಲಿಲ್ಲ. ನೋಡನೋಡುತ್ತಿದ್ದಂತೆ ದುರ್ಯೋಧನ ಬಂಧನಕ್ಕೊಳಗಾದನು. ಕರ್ಣ ಎಷ್ಟೇ ಸೆಣಸಿ ಹೋರಾಡಿದರೂ ಕೌರವನನ್ನು ಬಂಧ ಮುಕ್ತಮಾಡಲಾಗದೆ ಅಸಹಾಯಕನಾಗಿ ದ್ರುಪದನೆದುರು ಸೋತು ತಾನೂ ಬಂಧಿಯಾದನು. ತಕ್ಷಣ ಯುದ್ದ ಮುಂದುವರಿಸಿದ ಪಾಂಡವರು ಕೂಡ ದ್ರುಪದನೆದುರು ಪರದಾಡ ಬೇಕಾಯಿತು. ಯುದ್ದ ತಂತ್ರ ನಿಪುಣ ದ್ರುಪದ, ಅಸಾಮಾನ್ಯ ವೀರಾಗ್ರಣಿಯಾಗಿದ್ದ. ಅರ್ಜುನನಿಗೂ ದ್ರುಪದನಿಗೂ ಘನಘೋರ ಸಂಗ್ರಾಮವೇ ಸಾಗಿತು. ಅರ್ಜುನನ ಯುದ್ದ ಕೌಶಲ್ಯ ಹಾಗೂ ಧೀ ಶಕ್ತಿಗೆ ದ್ರುಪದನೂ ಮೆಚ್ಚಿ ಮಾರು ಹೋದನು. ತೀವ್ರಗೊಂಡ ಅರ್ಜುನನ ವಿಕ್ರಮಕ್ಕೆ ದ್ರುಪದನ ಅಂಗರಕ್ಷಕರೂ, ರಥ ರಕ್ಷಕರೂ ಕೆಡಹಲ್ಪಟ್ಟರು. ದ್ರುಪದನ ರಥವೂ ಪುಡಿಗಟ್ಟಲ್ಪಟ್ಟು ವಿರಥನಾದ. ಕಾಲಾಳುವಾಗಿ ಯುದ್ದ ಮುಂದುವರಿಸಿದ ದ್ರುಪದನ ಬಿಲ್ಲಿನ ಪ್ರತ್ಯಂಚವನ್ನೇ ಕತ್ತರಿಸಿತು ಪಾರ್ಥಶರ. ನಿರಾಯುಧನಾದ ದ್ರುಪದನ ಸುತ್ತ ಬಾಣಗಳ ಸುರಿಮಳೆಗೈದು ಶರಪಂಜರವೇ ಬಲಿಯಲ್ಪಟ್ಟಿತು. ಚಾಕಚಕ್ಯತೆಯಿಂದ ದ್ರುಪದನನ್ನು ಸೆರೆ ಹಿಡಿದು ಬಂಧಿಸಿ ಬಿಟ್ಟನು ಅರ್ಜುನ. ದ್ರುಪದನ ಸೇನೆಯೂ ಸೋಲೊಪ್ಪಿತು. ಬಂಧಿಗಳಾದ ಕೌರವ ಕರ್ಣಾದಿಗಳನ್ನೂ ಬಂಧಮುಕ್ತಗೊಳಿಸಿದ ಅರ್ಜುನ. ಇಲ್ಲೊಂದು ಪರ್ಯಾಯ ಉತ್ತರವೂ ಪ್ರಾಪ್ತವಾಯಿತು. ಕರ್ಣಾರ್ಜುನರ ಸಾಮರ್ಥ್ಯವೇನೆಂಬುದೂ ಲೋಕಮುಖಕ್ಕೆ ಪ್ರಕಟವಾಯಿತು.
ಗುರು ದ್ರೋಣರ ಎದುರಲ್ಲಿ ಬಂಧಿಸಿ ತಂದ ದ್ರುಪದನನ್ನು ನಿಲ್ಲಿಸಿ ಅರ್ಜುನ ಗುರುದಕ್ಷಿಣೆ ಅರ್ಪಿಸಿ ನಮಿಸಿ ನಿಂತನು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್



