27.8 C
Udupi
Monday, May 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 511

ಭರತೇಶ ಶೆಟ್ಟಿ, ಎಕ್ಕಾರು

ತನ್ನ ವಲ್ಲಭೆ ಸತ್ಯಭಾಮೆ ಕೃಷ್ಣನನ್ನು ಈ ರೀತಿ ಪ್ರಶ್ನಿಸುತ್ತಾ “ಹೆಣ್ಣಾದ ನಾನು ಆಪತ್ತನ್ನು ಎದುರಿಸಲು ಆಯುಧಧಾರಣೆ ಮಾಡಿದ್ದೇನೆ, ಪತಿದೇವಾ! ನೀನು ಸುಮ್ಮನೆ ನಿಲ್ಲಬಾರದು. ದುರ್ಬುದ್ಧಿಯಿಂದ ಆಕ್ರಮಿಸಿರುವ ಈ ರಾಕ್ಷಸರನ್ನು ಸದೆಬಡಿದು ಸರ್ವರಕ್ಷಕನಾಗು” ಎಂದು ಪ್ರಾರ್ಥಿಸಿದಳು.

ಆ ಕೂಡಲೆ ಶ್ರೀಕೃಷ್ಣನು ರಥವನ್ನೇರಿ ಶಂಖಧ್ವಾನ ಮಾಡಿದನು. ಅಸುರಾರಿಗೆ ಹೆಚ್ಚು ಹೊತ್ತು ಬೇಕೆ? ಒಣ ಹುಲ್ಲಿಗೆ ಕಿಡಿ ಸಾಕಾಗದೆ? ಅರೆ ಕ್ಷಣದಲ್ಲಿ ಬಂದ ಅನುಸಾಲ್ವನ ಸೇನಾ ಸಹಿತವಾಗಿ ಶರವರ್ಷದಿಂದ ಪಂಜರ ನಿರ್ಮಿಸಿ ಬಂಧಿಯನ್ನಾಗಿಸಿದನು. ಗಾಯಗೊಂಡಿದ್ದ ಸೈನಿಕರು ಓಡಿ ಪಾರಾಗಲೂ ಆಗದೆ ಆಯುಧಗಳನ್ನು ಬಿಸಾಡಿ ಎರಡೂ ಕೈಗಳನ್ನೆತ್ತಿ ಶರಣಾದರು. ಅನುಸಾಲ್ವನಿಗೂ ಅನ್ಯ ವಿಧಿಯಿಲ್ಲದೆ ತಾನೂ ಮಂಡಿಯೂರಿ ಕ್ಷಮಾಪ್ರಾರ್ಥಿಯಾಗಿ ಪ್ರಾಣ ಭಿಕ್ಷೆ ಬೇಡಿದನು. ಶರಣಾಗತ ವತ್ಸಲನಲ್ಲವೆ ಶ್ರೀಹರಿ! ಆಕ್ರಮಣಗೈದ ಅಪರಾಧಕ್ಕಾಗಿ ಅನುಸಾಲ್ವನನ್ನು ಸೇನಾ ಸಹಿತ ಬಂಧಿಸಲು ಅಪ್ಪಣೆ ನೀಡಿದನು. ಯಾದವ ವೀರರು ಅವರೆಲ್ಲರನ್ನೂ ಬಂಧಿಸಿದರು.

ಅನುಸಾಲ್ವನು ಮಾಡಿದ ತಪ್ಪನ್ನು ಒಪ್ಪಿ ಶ್ರೀಕೃಷ್ಣನಲ್ಲಿ ಕ್ಷಮಿಸಬೇಕೆಂದು ದೈನ್ಯನಾಗಿ ಬೇಡಿಕೊಳ್ಳುತ್ತಾ, ನೀನೇನು, ನಿನ್ನ ಸಾಮರ್ಥ್ಯವೇನು ಎಂಬ ಜ್ಞಾನವಿಲ್ಲದೆ ಈ ರೀತಿ ವ್ಯವಹರಿಸಿದೆ. ನಮ್ಮ ಈ ಕೃತ್ಯವನ್ನು ಮನ್ನಿಸಿ ಪೊರೆಯಬೇಕು. ನಿನ್ನ ಸೇವಕನಾಗಿ ಪಾದಸೇವೆ ಮಾಡುತ್ತಾ ಬದುಕುವ ಅವಕಾಶ ನೀಡಬೇಕು” ಎಂದು ಪ್ರಾರ್ಥಿಸಿದನು. ಆಗ ಶ್ರೀಕೃಷ್ಣ ಪರಮಾತ್ಮ “ಅಯ್ಯಾ ಅನುಸಾಲ್ವ! ನಿನಗೇಕೆ ನಮ್ಮಲ್ಲಿ ದ್ವೇಷವೊ ನನಗರಿಯದು. ನಾನೆಂದೂ ನಿಮಗೆ ಬಾಧೆ ನೀಡಿದವನಲ್ಲ. ಆದರೂ ನೀನು ನನ್ನ ಬಗ್ಗೆ ಹೆಜ್ಜೆ ಹೆಜ್ಜೆಗೂ ವೈರವನ್ನು ಸಾಧಿಸುವ ಯತ್ನ ನಿರತನಾಗಿದ್ದೆ. ಭಯ ಪಡಬೇಡ, ಶರಣಾಗತನಾಗಿರುವ ನಿನಗೆ ಯಾವ ಶಿಕ್ಷೆಯನ್ನಾಗಲಿ, ಅಥವಾ ಮೃತ್ಯು ದಂಡವನ್ನಾಗಲಿ ನಾನು ವಿಧಿಸಲಾರೆ. ಹಾಗೊಂದು ವೇಳೆ ನಿನ್ನನ್ನು ವಧಿಸ ಬೇಕೆಂಬ ಮನಸ್ಸಿದ್ದರೆ ಯುದ್ಧ ಕಾಲದಲ್ಲಿ ನೀನು ಸಾಯುವವನಿದ್ದೆ. ನಿನ್ನ ಶಕ್ತಿಯೇನು, ಅದ್ಬುತವಾದ ಸಾಮರ್ಥ್ಯವೆಷ್ಟು ಎಂದು ನನಗೆ ಚೆನ್ನಾಗಿ ತಿಳಿದಿದೆ. ಅದು ಸದ್ವಿನಿಯೋಗ ಆಗಲಿ ಎಂಬುವುದು ನನ್ನ ಆಶಯವಾಗಿದೆ. ಆ ಕಾರಣದಿಂದಲೆ ನಿನ್ನನ್ನು ವಧಿಸದೆ ಬಂಧಿಸಿದ್ದೇನೆ. ಹಸ್ತಿನಾವತಿಯ ಚಂದ್ರವಂಶೀಯರಾದ ಪಾಂಡವರು ಅಶ್ವಮೇಧ ಯಾಗದ ಸಂಕಲ್ಪ ಮಾಡಿದ್ದಾರೆ. ಸತ್ಪುರುಷನಾಗಿ ನೀನೂ ಅವರ ಜೊತೆಗಿದ್ದು ಧರ್ಮಕಾರ್ಯಕ್ಕೆ ಸಹಕಾರಿಯಾಗು” ಎಂದು ಅಭಯದಾನ ನೀಡಿದನು. ಅನುಸಾಲ್ವನು ಒಪ್ಪಿ “ಹೇ ಕೃಷ್ಣಾ! ನೀನೇನು ಅಪ್ಪಣೆ ನೀಡಿರುವೆಯೊ ಅಂತೆಯೆ ನಾನು ಪೂರ್ಣ ಮನಸ್ಕನಾಗಿ ಪಾಂಡವರ ಅಶ್ವಮೇಧ ಯಾಗದಲ್ಲಿ ಶಕ್ತಿ ಮೀರಿ ದುಡಿಯುತ್ತೇನೆ” ಎಂದು ಒಪ್ಪಿಕೊಂಡನು.

ಅನುಸಾಲ್ವನು ಧರ್ಮರಾಯನಿಗೆ ವಂದಿಸಿ ತನ್ನ ಪ್ರಬಲ ಸೇನೆಯನ್ನು, ತನ್ನದಾದ ಏನೇನು ಇವೆಯೊ ಅವೆಲ್ಲವನ್ನು ಧರ್ಮಕಾರ್ಯಕ್ಕೆ ಸಮರ್ಪಿಸಿದನು. ತಾನು ಈ ಅಶ್ವಮೇಧ ಯಾಗದಲ್ಲಿ ಸಕ್ರಿಯನಾಗಿ ಪೂರ್ಣ ಶಕ್ತಿಯಿಂದ ಶ್ರಮಿಸುತ್ತೇನೆ” ಎಂದು ಸಂಪ್ರೀತಿಯಿಂದ ನುಡಿದನು. ಧರ್ಮರಾಯನು ಅತಿ ಪ್ರೀತಿಯಿಂದ ಆತನನ್ನು ಬರ ಮಾಡಿಕೊಂಡು ಗೌರವಾದರಗಳಿಂದ ಸತ್ಕರಿಸಿ ಉಪಚರಿಸಿದನು.

ಇದೆಲ್ಲಾ ನಡೆದ ಬಳಿಕ ಯಾದವ ಸೇನೆ, ವೀರರು, ಶ್ರೀಕೃಷ್ಣ, ಆತನ ರಾಣಿಯರು, ತಂಗಿ ಸುಭದ್ರೆ, ಪಾಂಡವರ ಜೊತೆ ಪುರ ಪ್ರವೇಶ ಮಾಡಿದರು. ಎಲ್ಲರು ಅರಮನೆ ಸೇರಿ ಶುಚಿರ್ಭೂತರಾಗಿ ರಾಜೋಚಿತ ಸತ್ಕಾರಗಳನ್ನು ಸ್ವೀಕರಿಸಿ ವಿಶ್ರಾಂತರಾದರು. ಸುಭದ್ರೆಗೆ ತನ್ನ ಮಗ ವೀರ ಅಭಿಮನ್ಯು ಮಡಿದ ಬಳಿಕ ಬದುಕು ದುಸ್ತರವಾಗಿ ವೈರಾಗ್ಯ ಮನ ಮಾಡಿತ್ತು. ಆದರೆ ಈಗ ಹಸ್ತಿನೆಯ ಅರಮನೆಯಲ್ಲಿ ಉತ್ತರೆಯನ್ನು ತನ್ನ ಮುದ್ದು ಕುವರನ ಕಂದನಾದ ಪರೀಕ್ಷಿತನನ್ನು ಕಂಡಾಗ ಎಲ್ಲವೂ ಮರೆತು ಹೋಯಿತು. ಅಜ್ಜಿ ಮತ್ತು ಮೊಮ್ಮಗ ಬಹಳಷ್ಟು ಮುದ್ದು ಮಾಡುತ್ತಾ ಸಂಭ್ರಮಿಸತೊಡಗಿದರು. ಉತ್ತರೆಯ ಅಂತಃಪುರ ಶ್ರೀಕೃಷ್ಣನ ಅಷ್ಟ ಮಹಿಷಿಯರಿಂದ ತುಂಬಿ ಉತ್ತರೆಗೂ ಮಹದಾನಂದ ಮನ ಮಾಡಿ ಪತಿ ಅಭಿಮನ್ಯು ಮಡಿದ ದುಃಖ ತುಸು ಉಪಶಮನವಾಗುತ್ತಾ ಹಾಗೆ ಮರೆತು ಹೋದಂತೆ ಆಗುತ್ತಿದೆ. ಅಂತೂ ಎಲ್ಲರೂ ಹರ್ಷಚಿತ್ತರಾಗಿದ್ದಾರೆ ಎನ್ನಬಹುದು.

ಸಂಕಲ್ಪ ಮಾಡಿರುವ ಅಶ್ವಮೇಧ ಯಾಗ ಪ್ರಾರಂಭಕ್ಕೆ ಕಾಲ ಸನ್ನಿಹಿತವಾಗಿದೆ‌. ಪ್ರಕೃತಿಯೂ ಹರ್ಷೋಲ್ಲಾಸದಿಂದ ಪ್ರತಿಸ್ಪಂದನೆ ನೀಡುತ್ತಿರುವಂತೆ ವಸಂತ ಮಾಸದ ಸೊಬಗನ್ನು ಮೈತುಂಬಿಕೊಂಡು ಕಂಗೊಳಿಸುತ್ತಿದೆ. ಯಾಗ ಶಾಲೆ ಎಲ್ಲಿ ನಿರ್ಮಿಸುವುದು? ಪ್ರಶಸ್ತ ಸ್ಥಾನ ಯಾವುದು? ಎಂಬ ಸಮಾಲೋಚನೆ ನಡೆದು, ಸ್ಥಳ ಶೋಧನೆಯ ಕಾರ್ಯ ಆರಂಭಗೊಂಡಿತು. ಗಂಗಾ ತೀರದ ಪ್ರದೇಶ ಅತ್ಯುತ್ತಮ ಎಂಬ ಅಭಿಪ್ರಾಯ ಸಹಮತವಾಗಿ ನಿರ್ಣಯವಾಯಿತು‌. ಸುಮುಹೂರ್ತ ನಿರ್ಧಾರವಾಗಿ ಸ್ಥಳ ಶುದ್ಧಿ, ಯಾಗ ಶಾಲೆ, ಪೂರಕ ಯಾಗೋಪಕರಣಗಳು, ಯಾಗ ದ್ರವ್ಯಗಳು, ವಿಶ್ರಾಂತಿ ಗ್ರಹಗಳು, ಉಪಹಾರ ಕೇಂದ್ರಗಳು ವ್ಯವಸ್ಥಿತವಾಗಿ ಸಿದ್ಧವಾದವು. ಈ ಎಲ್ಲಾ ಕಾರ್ಯಗಳ ನಿರ್ವಹಣೆಗೆ ಬೇಕು ಬೇಕಾಗುವ ಜವಾಬ್ದಾರಿಗಳನ್ನು ಹಂಚಿಕೆ ಮಾಡಿ ತಂಡಗಳು ಕಾರ್ಯ ನಿರತವಾದವು. ಧೌಮ್ಯರ ನಿರ್ದೇಶನದಂತೆ ಬೇಕು ಬೇಕಾದ ಯಾಜ್ಞಿಗಳು, ವಿಪ್ರರು, ಗೋತ್ರಜ ಬ್ರಾಹ್ಮಣರು, ಋಷಿಗಳು, ತಪಸ್ವಿಗಳು ಹೀಗೆ ಎಲ್ಲರಿಗೂ ಗೌರವಪೂರ್ವಕ ನಿಮಂತ್ರಣ ನೀಡಿ ಕರೆತರುವ ಕಾರ್ಯ ಆಗತೊಡಗಿತು. ಈ ಸಮಯ ಭಗವಾನ್ ವ್ಯಾಸ ಮಹರ್ಷಿಗಳು ಅಲ್ಲಿಗೆ ಬಂದು ಸೇರಿಕೊಂಡರು. ಶ್ರೀಕೃಷ್ಣ ಪರಮಾತ್ಮ ಹಾಗು ಭಗವಾನ್ ವೇದವ್ಯಾಸರ ಮಾರ್ಗದರ್ಶನದಲ್ಲಿ ಯಾಗ ಸಿದ್ಧತೆಗೆ ಬೇಕಾಗುವ ಸಕಲ ಪೂರ್ವಭಾವಿ ತಯಾರಿಗಳು ಕ್ರಮವತ್ತಾಗಿ ನಡೆದವು.

ದಿವ್ಯವೂ ಸುಭಿಕ್ಷವೂ ಆದ ಸುಮುಹೂರ್ತದಲ್ಲಿ ಧರ್ಮರಾಜ ಸಪತ್ನೀಕನಾಗಿ ದ್ರೌಪದಿಯೊಂದಿಗೆ ಮತ್ತು ತನ್ನ ಸಹೋದರರೊಂದಿಗೆ ಗಂಗಾತೀರದ ಯಾಗ ಶಾಲೆಗೆ ಆಗಮಿಸಿದನು. ಆಹ್ವಾನಿತರಾಗಿದ್ದ ಋಷಿ ಮುನಿಗಳು, ತಪಸ್ವಿಗಳು, ಋತ್ವಿಜರೆಲ್ಲ ಬಂದು ಸೇರಿದ್ದಾರೆ. ಯಾಗದೀಕ್ಷೆಯ ಮುಹೂರ್ತ ನೋಡಿ ಗೊತ್ತು ಮಾಡಿಕೊಂಡು, ಗ್ರಹಪೂಜೆ, ಶಾಂತಿ ಹವನಗಳು, ಪುಣ್ಯಾಹ, ಬಲಿ ಆದಿ ಎಲ್ಲವೂ ವಿಧಿವತ್ತಾಗಿ ನೆರವೇರಿದವು. ಪ್ರಾಯಶ್ಚಿತ್ತ ಹೋಮಗಳು ಬಹಳಷ್ಟು ವಿಧಾನಗಳಿಂದ ನಡೆಸಲ್ಪಟ್ಟವು. ಪೂರಕವಾಗಿ ಹೇರಳ ದಾನ ಧರ್ಮಗಳೂ ನಿರಂತರ ನಡೆಯುತ್ತಾ ಇದ್ದವು. ಯಾಗಾರಂಭದ ಕ್ಷಣಗಣನೆ ಆರಂಭವಾಗಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page