24.8 C
Udupi
Tuesday, February 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 61

ಭರತೇಶ್ ಶೆಟ್ಟಿ ,ಎಕ್ಕಾರ್

ದ್ರೋಣಾಚಾರ್ಯರ ಸಮರ್ಥ ಗುರುತ್ವದಲ್ಲಿ ಪ್ರ ಚಂದ್ರವಂಶದ ಯುವರಾಜ ಕುಮಾರರು ಪ್ರವೀಣರಾಗಿ ತೇಜಸ್ಸಿನಿಂದ ಕಂಗೊಳಿಸುತ್ತಿದ್ದರು. ಸಕಲ ಅಭ್ಯಾಸ ಪೂರ್ಣಗೊಂಡಿದೆ. ಇನ್ನು ಪರೀಕ್ಷೆ ಮಾತ್ರ ಬಾಕಿ ಇದೆ. ಹಸ್ತಿನೆಯ ಸಿಂಹಾಸನದಿಂದ ಒಪ್ಪಿಗೆ ಪಡೆದು ಪರೀಕ್ಷಾರಂಗದ ಸಿದ್ಧತೆ ದ್ರೋಣ ಹಾಗೂ ಕೃಪಾಚಾರ್ಯರ ನೇತೃತ್ವದಲ್ಲಿ ನಡೆಯತೊಡಗಿತು. ಹಲವು ವಿದ್ಯೆಗಳ ಅಧ್ಯಯನದ ಆಳ ಅಳೆಯಬೇಕಾಗಿದ್ದರಿಂದ ಕೆಲ ದಿನ ಸಾಗುವ ಈ ವಿದ್ಯಾ ಪ್ರದರ್ಶನ ವೀಕ್ಷಣೆಗೆ ವಿಸ್ತಾರವಾದ ನೆರಳ ಮಂಟಪ ರಚಿಸಿದರು. ಹಸ್ತಿನೆಯ ರಾಜಕುಮಾರರ ಪರೀಕ್ಷಾ ರಂಗದ ಪ್ರದರ್ಶನದ ವೈಭವಕ್ಕೆ ವಾದ್ಯ, ವೀಣೆ, ವೇಣು, ಮೃದಂಗ, ಶಂಖ ಭೇರಿಗಳ ವಾದನವೂ, ಧೃತರಾಷ್ಟ್ರ ಭೀಷ್ಮ, ವಿದುರ, ಶಕುನಿ, ಶಲ್ಯಾದಿ ರಾಜ ಪ್ರಮುಖರಿಗೆ ಉಚಿತಾಸನಗಳೂ, ರಾಣಿಯರಿಗೆ ಪ್ರತ್ಯೇಕ ವ್ಯವಸ್ಥೆ, ಸಮಸ್ಥ ವೀಕ್ಷಕರಿಗೂ ಆಸನದ ವ್ಯವಸ್ಥೆ, ಊಟೋಪಚಾರಕ್ಕೆ ಪಾಕಶಾಲೆ, ಹೀಗೆ ಸಮರ ಕಲಾ ಪ್ರದರ್ಶನಕ್ಕೆ ಕ್ರೀಡಾಂಗಣ ಸುಸಜ್ಜಿತವಾಗಿ ನಿರ್ಮಿಸಲ್ಪಟ್ಟಿತ್ತು.

ಸುಮೂಹೂರ್ತದಲ್ಲಿ ಶಸ್ತ್ರೋಪಕರಣಗಳು, ಗದೆ, ಬಿಲ್ಲು, ಬಾಣ, ಖಡ್ಗ, ಈಟಿ, ಗುರಾಣಿ, ರಕ್ಷಾ ಕವಚಗಳಿಗೆ ಪೂಜೆ ನಡೆದು ವಿದ್ಯಾ ಪರೀಕ್ಷೆ ಆರಂಭವಾಯಿತು. ಧರ್ಮರಾಜ – ದುರ್ಯೋಧನರು ಸಹೋದರರ ಸಹಿತರಾಗಿ – ರಥಯುದ್ದ, ವ್ಯೂಹ ರಚನೆ, ಗಜ ಸೇನೆ, ತುರಗ ಸೈನ್ಯ, ಇತ್ಯಾದಿ ನಿಯಂತ್ರಣ, ಆದೇಶ ಕ್ರಮ ಪ್ರದರ್ಶಿಸಿ ಗದೆ, ಈಟಿ, ಖಡ್ಗ ಹೀಗೆ ಒಬ್ಬರಾದ ಬಳಿಕ ಒಬ್ಬರಂತೆ ಪ್ರದರ್ಶನಗೈಯುತ್ತಿದ್ದರು.

ರಾಜಪುತ್ರರು ಒಂದಾದ ನಂತರ ತಮ್ಮ ಪ್ರಾವಿಣ್ಯತೆಯ ಪ್ರದರ್ಶನ ನೀಡುತ್ತಾ ಸಾಗುತ್ತಿದ್ದಂತೆ ಗುರುಗಳ ಮೌಲ್ಯಮಾಪನವೂ ನಿರಂತರವಾಗಿತ್ತು. ಸೂಕ್ಷ್ಮವಾಗಿ ಕತ್ತಿ ಗುರಾಣಿ ಹಿಡಿದ ಲಾಘವ, ಸೌಷ್ಠವ, ಸೊಗಸು, ಸ್ಥೈರ್ಯ, ಹಿಡಿತ ಮುಂತಾದ ಯುದ್ದಕ್ರಮಗಳ ಪಕ್ವತೆ ಪರಿಶೀಲಿಸುತ್ತಿದ್ದರು. ಖಡ್ಗದ ವರಸೆ, ಚಲನೆ, ಗತಿ, ರಕ್ಷಣಾ ತಡೆ ಇತ್ಯಾದಿ… ಈಟಿಯ ಎಸೆತ, ಬಲ, ನಿಖರತೆ ಹೀಗೆ ಸರ್ವರೀತಿಯಲ್ಲಿ ತಂತ್ರ, ಪರಿಣತಿ, ಅನುಷ್ಟಾನಗಳೂ ಗಣಿಸಲ್ಪಡುತ್ತಿದ್ದವು.

ದ್ವಂದ್ವ ಪರಿಕ್ರಮ ಆರಂಭವಾಗಿ ಗದಾಯುದ್ದ – ಮಲ್ಲಯುದ್ದ ಪ್ರದರ್ಶನ ಆರಂಭವಾದಾಗ ಭೀಮ ದುರ್ಯೋಧನರು ಹೂಂಕರಿಸುತ್ತಾ ಕಾದಾಡಿದರು. ಕಣ್ಣರಳಿಸಿ, ಘರ್ಜಿಸಿ, ಗದೆಯ ಘರ್ಷಣೆ ಕಿಡಿಕಾರಿದರೆ, ಘಾತಗಳಿಂದ ಎದ್ದು ಬಿದ್ದು ಹೊಡೆದಾಡುತ್ತಾ ಕಾದಾಟ ಸಾಗುತ್ತಿದ್ದಾಗ ನಿಲ್ಲಿಸಲು ಆದೇಶ ನೀಡಿದರೂ ಕೇಳದೆ ಗೂಳಿಗಳಂತೆ ಸೆಣಸಾಡುವ ಭೀಮ ದುರ್ಯೋಧನರನ್ನು ಅಶ್ವತ್ಥಾಮ – ಕೃಪರು ಮಧ್ಯೆ ಪ್ರವೇಶಿಸಿ ತಡೆದು, ಮುಂದಿನ ವಿದ್ಯಾ ಪರೀಕ್ಷೆಗೆ ಅವಕಾಶ ಒದಗಿಸಿದರು. ಭೀಮ ದುಶ್ಯಾಸನರ ಮಲ್ಲಯುದ್ದವೂ ಹೀಗೆ ಭೀಕರತೆ ತಳೆದು ಪೈಪೋಟಿಯ ಪ್ರದರ್ಶನವಾಯಿತು.

ನಕುಲ ಸಹದೇವರ ಕತ್ತಿ ಕಾಳಗವೂ ಉನ್ನತ ಮಟ್ಟದಲ್ಲಿ ಮೆರೆಯಿತು. ಧೃತರಾಷ್ಟ್ರ ಪುತ್ರರಿಂದಲೂ ಸಮರಕಲೆಯ ಪ್ರದರ್ಶನ ಪಾಂಡಿತ್ಯಪೂರ್ಣವಾಗಿ ಪ್ರದರ್ಶಿಸಲ್ಪಟ್ಟಿತು.

ಅರ್ಜುನನೂ ಈವರೆಗಿನ ಎಲ್ಲಾ ಪ್ರದರ್ಶನಗಳಲ್ಲೂ ಅದ್ಬುತ ಪ್ರದರ್ಶನ ನೀಡುತ್ತಾ ಬಂದು, ಬಿಲ್ವಿದ್ಯೆಯ ಪ್ರದರ್ಶನದ ಹೊತ್ತಿನಲ್ಲಿ ಅತ್ಯಮೋಘ ಪ್ರಸ್ತುತಿ ನೀಡುತ್ತಾ ಶರ ಸಂಧಾನ, ಪ್ರಯೋಗ, ಮಂತ್ರಾಸ್ತ್ರ ಪ್ರಯೋಗ, ಉಪಸಂಹಾರ, ಲಕ್ಷ್ಯ ಭೇದನ, ಏಕ ಶರ – ಅನಂತ ಶರವಾಗುವ, ಬಹುಸರಳುಗಳು ಏಕ ಗುರಿ ಭೇದಿಸುವ ಕಲೆ.. ಹೀಗೆ ವಿದ್ಯಾ ಪ್ರಾಪ್ತಿಯ ಮಟ್ಟ ತೋರಿಸುತ್ತಿದ್ದ. ಮಂತ್ರಾಸ್ತ್ರ ಗಳ ಪ್ರಯೋಗ ಬಂದಾಗ ಆಗ್ನೇಯ ಅಸ್ತ್ರದಿಂದ ಅಗ್ನಿ ಜ್ವಾಲೆ ಹಬ್ಬಿಸಿ, ವರುಣಾಸ್ತ್ರದಿಂದ ನಂದಿಸಿದನು. ವರುಣಾಸ್ತ್ರ ಪ್ರಯೋಗದಿಂದ ತುಂಬಿದ ಜಲವನ್ನು ವಾಯುವ್ಯಾಸ್ತ್ರ ದಿಂದ ಹಾರಿಸಿದನು. ಪರ್ವತಾಸ್ತ್ರ ಪ್ರಯೋಗದಿಂದ ವಾಯುಗಮನವನ್ನು ತಡೆದನು.
ಪರ್ಜನ್ಯಾಸ್ತ್ರದಿಂದ ಮಳೆ ಸುರಿಸಿ ಉಪಸಂಹರಿಸಿದನು. ಮೂಕವಿಸ್ಮಿತರಾಗಿ ಭಲೇ ಭಲೇ ಎಂಬ ಉದ್ಗಾರ ಎಲ್ಲೆಡೆಯಿಂದ ಕೇಳುತ್ತಿತ್ತು. ಹೀಗೆ ನಾನಾ ವಿಶೇಷ ಪ್ರಯೋಗಗೈದು “ಧನುರ್ಧರ ಶ್ರೇಷ್ಟ” ಎಂಬ ಹೊಗಳಿಕೆ ಗಣ್ಯರಿಂದಲೂ, ಗುರು ದ್ರೋಣ, ಭೀಷ್ಮ, ವಿದುರಾದಿಗಳಿಂದಲೂ ಉದ್ಘೋಷಿಸಲ್ಪಟ್ಟಿತು. ತುಂಬಿದ ಸಭೆಯೂ ಅನುಮೋದಿಸುತಿತ್ತು.

ಅದೇ ಸಮಯದಲ್ಲಿ ಅಲ್ಲಿಗೆ ಬಂದು ಮುಟ್ಟಿದ ಕರ್ಣ ಧನುಷ್ಟಂಕಾರ ಮಾಡಿ, ವಿದ್ಯಾ ಪ್ರದರ್ಶನ ನಡೆಯುತ್ತಿದ್ದ ಕ್ರೀಡಾಂಗಣ ಪ್ರವೇಶಿಸಿದ. ಗುರು ದ್ರೋಣ, ಕೃಪಾಚಾರ್ಯರಿಗೆ ವಂದಿಸಿ, ರಾಜಮರ್ಯಾದೆಯ ಪೀಠಸ್ಥರೆಲ್ಲರಿಗೂ ನಮಿಸಿ ನಿಂತನು. ಅರ್ಜುನನತ್ತ ಮುಖ ಮಾಡಿ, “ನಿನ್ನನ್ನು ನೀನು ತಾನೇ ಶ್ರೇಷ್ಟ ಎಂದು ಭಾವಿಸಿಕೊಳ್ಳಬೇಡ. ನಿನಗಿಂತಲೂ ಉತ್ತಮ ಮಟ್ಟದ ಧನುರ್ವಿದ್ಯೆ ತಾನೂ ತೋರಿಸಬಲ್ಲೆ” ಎಂದು ಹೇಳಿದ. ಕರ್ಣನ ಮುಖದ ತೇಜಸ್ಸು ಪ್ರತಿ ಸೂರ್ಯನಂತೆ ಹೊಳೆಯುತ್ತಿತ್ತು. ತುಂಬಿದ ಸಭೆಗೂ ನಮಿಸಿ ಗುರುದ್ರೋಣರಲ್ಲಿ ತನಗೂ ಪ್ರದರ್ಶನಕ್ಕೆ ಅವಕಾಶ ನೀಡಬೇಕೆಂದು ಕೇಳಿದ. ಪ್ರದರ್ಶನ ಯಾರೂ ನೀಡಬಹುದು ಎಂದು ಮುಕ್ತ ಅವಕಾಶ ನೀಡಿದರು ಗುರುಗಳು. ಅರ್ಜುನ ತೋರಿದ ಸಾಧನೆಗಳ ವಿದ್ಯಾ ವಿಶೇಷಗಳನ್ನು ತಾನೂ ಪ್ರದರ್ಶಿಸಿ ಶಹಬ್ಭಾಸ್ ಅನಿಸಿಕೊಂಡ. ಆದರೆ ಅರ್ಜುನಿಂದಾದ ಕೆಲವೊಂದು ಸೂಕ್ಷ್ಮಗಳು, ಅಂತರ್ಧಾನಾಸ್ತ್ರ ಪ್ರಯೋಗಗಳು ಕರ್ಣನಿಂದ ಆಗಲಿಲ್ಲ. ಆದರೂ ದುರ್ಯೋಧನನಿಗಂತೂ ಅತೀವ ಸಂತೋಷವಾಯಿತು. ಅರ್ಜುನನಿಗೆ ಸ್ಪರ್ಧೆ ನೀಡಬಲ್ಲ ವೀರನೊಬ್ಬ ಇದ್ದಾನಲ್ಲ ಎಂಬ ವಿಚಾರವೇ ಅತಿಶಯವಾದ ಪರಮಾನಂದ ಉಕ್ಕೇರುವಂತೆ ಮಾಡಿತು. ಓಡಿಬಂದು ಕರ್ಣನನ್ನು ಸೆಳೆದು ತಬ್ಬಿಕೊಂಡ. ಕರ್ಣಾ ನಿನ್ನ ಸಾಹಸಕ್ಕೆ ಮೆಚ್ಚಿದ್ದೇನೆ. ನನ್ನ ಸರ್ವಸ್ವವನ್ನೂ ನಿನ್ನ ಸ್ನೇಹಕ್ಕಾಗಿ ಅರ್ಪಿಸುತ್ತಿದ್ದೇನೆ. ನನಗೆ ನೀನು ಮಿತ್ರ ಎಂದಾಗ ಕರ್ಣನಿಗೂ ಅತೀವ ಆನಂದವಾಯಿತು. ಸುಯೋಧನಾ ನಿನ್ನ ಅಚಲ ನಿರ್ಮಲವಾದ ಸ್ನೇಹವೇ ಸಾಕು ನನಗೆ ಎಂದನು. ಅರ್ಜುನನೊಡನೆ ದ್ವಂದ್ವ ಯುದ್ದಕ್ಕೆ ಅವಕಾಶ ಬೇಕೆಂದು ಕೇಳಿಕೊಂಡ.

ಇದೆಲ್ಲವನ್ನೂ ನೋಡುತ್ತಿದ್ದ ಅರ್ಜುನನಿಗೆ ಸಹಿಸಲಾಗದಷ್ಟು ಕೋಪ ಬಂತು. ಘರ್ಜನೆ ಮಾಡಿ “ಕರೆಯದೇ ಬಂದು ಅನಪೇಕ್ಷಿತ ವರ್ತನೆ ತೋರುತ್ತಿರುವ ನಿನ್ನನ್ನು ಹೇಳದೆಯೇ ಯಮಲೋಕ್ಕೆ ಕಳುಹಿಸುತ್ತೇನೆ.. ಬಾ ಮುಂದೆ” ಎಂದನು. “ಬಾಯಿಯಲ್ಲಿ ಹೇಳಿದರೆ ಸಾಲದು, ವೀರನಾದರೆ ಮಾಡಿ ತೋರಿಸು” ಎಂಬ ಸವಾಲೆಸೆದು ಕರ್ಣನೂ ಅಬ್ಬರಿಸಿದನು.

ಪಾಂಡವರು ಅರ್ಜುನನ್ನೂ ಕೌರವರು ಕರ್ಣನನ್ನೂ ಹರಸಿ ಕಳುಹಿಸಿದರು. ಈ ದ್ವಂದ್ವ ಯುದ್ದಾರಂಭವಾಗುವ ಕಾಲಕ್ಕೆ ಹಸ್ತಿನೆಯ ರಾಜಕುಮಾರರು ಸ್ಪಷ್ಟ ಇಭ್ಭಾಗವಾಗಿ ಪಾಂಡವರು – ಕೌರವರು ಎಂಬ ಇತ್ತಂಡಗಳಾಗಿ ವೈರ ಭಾವ ತಳೆದು ಪ್ರತ್ಯೇಕವಾಗಿಯೇ ಬಿಟ್ಟರು. ಭೀಷ್ಮ ವಿದುರರಿಗೆ ಈ ಬೆಳವಣಿಗೆ ಅನಾಹುತದ ಆರಂಭ ಎಂಬ ಸೂಚನೆ ಮನವರಿಕೆಯಾಯಿತು. ರಾಜಮಾತೆ ಸತ್ಯವತಿದೇವಿಯನ್ನು ವ್ಯಾಸಭಗವಾನರು ಕರೆದೊಯ್ಯಲು ಬಂದು ಹೇಳಿದ ಕಾರಣ ಈಗ ಪ್ರತ್ಯಕ್ಷ ಗೋಚರಿಸುತ್ತಿತ್ತು.

ಕರ್ಣ – ಅರ್ಜುನರು ದ್ವಂದ್ವ ಯುದ್ದಕ್ಕೆ ಸಿದ್ಧರಾದ ಕ್ಷಣ ಕಂಡು ಬೆವತು ಹೋದಳು ಕುಂತಿ. ಇಳಿದ ಬೆವರಿನ ಜೊತೆ ಅವಳ ಜಂಘಾಬಲವೂ ಕುಸಿದು ಮೂರ್ಚಿತಳಾಗಿ ಬಿದ್ದೇ ಬಿಟ್ಟಳು.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page