25.1 C
Udupi
Monday, February 16, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ – 60

ಭರತೇಶ್ ಶೆಟ್ಟಿ, ಎಕ್ಕಾರ್

ಹರಿದ ರಕ್ತ ಪರಶುರಾಮರ ಬೆನ್ನಿಗೆ ಸೋಕಿತು. ಏನೋ ಒಂದು ಪೂರ್ವಾಭಾಸವಾದಂತೆ ಎಚ್ಚೆತ್ತರು. ಎದ್ದು ಮೈಗಂಟಿದ ರಕ್ತ ಸ್ಪರ್ಶ ಮಾತ್ರದಿಂದಲೇ ಕ್ಷಾತ್ರ ಗುಣ ಗುರುತಿಸಿ, ಕರ್ಣನನ್ನು ನೋಡಿ ಏನಾಯಿತು? ಏನಿದು ಈ ರಕ್ತ ಎಂದು ಕೇಳಿದರು. ಗುರುಗಳೇ ನೀವು ಮಲಗಿದ್ದಾಗ ಒಂದು ಕೀಟ ನನ್ನ ತೊಡೆಗೆ ಕಚ್ಚಿ ಕೊರೆಯತೊಡಗಿತು. ಅತೀವ ನೋವು ನನಗಾದರೂ ನಿಮ್ಮ ಸುಖನಿದ್ರೆಗೆ ಭಂಗವಾಗಬಾರದೆಂದು ಅಲುಗದೆ ಸೈರಿಸಿದೆ ಎಂದನು. ಈ ಮಾತು ಕೇಳಿದ ಭಾರ್ಗವರು ಪಿತ ಜಮದಗ್ನಿ ಸದೃಶ ಕೋಪಾವಿಷ್ಟರಾದರು. ಓರ್ವ ಬ್ರಾಹ್ಮಣ ಕುಮಾರನಿಗೆ ಅಸಾಧ್ಯವಾಗಬಹುದಾದ ವೇದನೆಯ ಸಹಿಷ್ಣುತೆ ನಿನ್ನಲ್ಲಿ ಇದೆಯೆಂದಾದರೆ ನೀನು ಯಾರೆಂದು ಹೇಳು? ಖಂಡಿತ ಬ್ರಾಹ್ಮಣನಲ್ಲ! ಎಂದು ಬಲವಂತದಿಂದ ಕೇಳಿದರು. ನಿರುಪಾಯನಾದ ಕರ್ಣ ತಾನೊಬ್ಬ ಸೂತ ಪುತ್ರನೆಂದೂ ಅಧಿರಥನೆಂಬವನ ಮಗ. ವಿದ್ಯಾಕಾಂಕ್ಷಿಯಾಗಿ ಈ ರೀತಿ ವ್ಯವಹರಿಸಿದೆ ಎಂದು ಸತ್ಯ ಹೇಳಿ ಕ್ಷಮೆ ಕೇಳಿದ. ಕರ್ಣನ ಮೇಲೆ ಕ್ರುದ್ದರಾಗಿ “ಮೋಸದ ವೇಷ ಧರಿಸಿ ತನ್ನಿಂದ ಕಲಿತುಕೊಂಡ ವಿದ್ಯೆ ಅಗತ್ಯ ಕಾಲದಲ್ಲಿ ನಿಷ್ಫಲವಾಗಿ ಮರೆತು ಹೋಗಲಿ” ಎಂದು ಶಪಿಸಿದರು. ಕಣ್ಣೀರಧಾರೆ ಸುರಿಸಿ ಪರಿ ಪರಿಯಾಗಿ ಕ್ಷಮೆ ಬೇಡಿದನು. ಕರ್ಣನ ಸ್ಥಿತಿ ಕಂಡು, ಆತ ಈ ತನಕ ಆಚರಿಸಿದ ಗುರುಭಕ್ತಿ, ನಿಷ್ಠೆಗೆ ಒಲಿದು ಗುರು ಭಾರ್ಗವರೂ ಮರುಗಿದರು. ಪರಿಮಾರ್ಜನೆಯಾಗಿ ವಿಶ್ವಕರ್ಮ ನಿರ್ಮಿತ, ಇಂದ್ರನ ವಶದಲ್ಲಿದ್ದು, ಕಾಲಾಂತರದಲ್ಲಿ ತನ್ನ ವಶವಾಗಿರುವ ಕಾಲಪೃಷ್ಠ ವೆಂಬ ದಿವ್ಯ ಧನುಸ್ಸನ್ನು ಕರ್ಣನಿಗಿತ್ತು ಅದರ ಜೊತೆ ಸರ್ಪ ಮುಖಿ ಎಂಬ ಮಂತ್ರ ಶರವನ್ನೂ ನೀಡಿ ಈ ರೌದ್ರಾಸ್ತ್ರವನ್ನು ನಿತ್ಯವೂ ಪೂಜಿಸುತ್ತಾ ಬರುವಂತೆ ಸೂಚಿಸಿದರು. ನಾನಿತ್ತ ಶಾಪ ಹುಸಿಯಾಗದು. ಆದರೂ ಅಂತಹ ನಿರ್ಣಾಯಕ ಯುದ್ಧ ಸಂಘಟಿತವಾದಾಗ ಅಶ್ವ ಹೃದಯ ಬಲ್ಲ ಸಮರ್ಥ ಸಾರಥಿಯ ಸಾರಥ್ಯದೊಂದಿಗೆ ಈ ಧನು ಶರಗಳ ಪ್ರಭಾವದಿಂದ ಒಂದು ಪೂರ್ತಿದಿನ ಅಜೇಯನಾಗು ಎಂಬ ವರದಾನವನ್ನೂ ನೀಡಿದರು. ಹೀಗೆ ಗುರು ಪರಶುರಾಮರ ಆಶ್ರಮದಲ್ಲಿ ಸಕಲ ಶಸ್ತ್ರ ಶಾಸ್ತ್ರ ವಿದ್ಯಾ ಪಾರಂಗತನಾಗಿ ಶಾಪ – ಅನುಗ್ರಹ ಪ್ರಾಪ್ತಿ ಮಾಡಿಕೊಂಡನು ಕರ್ಣ.

ವಿದ್ಯಾರ್ಜನೆ ಪೂರೈಸಿ ಆಶ್ರಮ ತೊರೆದು ತನ್ನ ಮನೆ ಸೇರಿ ಮಾತಾ ಪಿತರನ್ನು ಕಾಣಲು ಹಸ್ತಿನೆಯತ್ತ ತುರಗಾರೂಢನಾಗಿ (ಕುದುರೆಯೇರಿ) ತಾನು ಸಾಧಿಸಿದ ಖಡ್ಗ ವಿದ್ಯೆಯ ಸಾಧಕ ಮನನ ಮಾಡುತ್ತಾ ಕತ್ತಿ ತಿರುವುತ್ತಾ ಸಾಗುತ್ತಿರಬೇಕಾದರೆ, ಕೈ ಜಾರಿದ ಖಡ್ಗ ಗಾಳಿಯಲ್ಲಿ ಹಾರಿತು.

ಹಾರಿದ ಖಡ್ಗ ತಿರುಗುತ್ತಾ ಮೇಯುತ್ತಿದ್ದ ಧೇನುವೊಂದರ ಶಿರವನ್ನು ಕತ್ತರಿಸಿಯೇ ಬಿಟ್ಟಿತು. ಅಯ್ಯೋ ವಿಧಿಯೇ ಏನಿದು ಅನಾಹುತ. ಗೋ ಹತ್ಯಾ ದೋಷ ಪರೋಕ್ಷವಾಗಿ ತನ್ನಿಂದಾಯಿತೇ? ಎಂದು ಮರುಗಿ, ಕೊರಗಿ, ದುಃಖಿಸಿದನು. ವಿಚಾರಿಸುತ್ತಾ ದನದ ವಾರಸುದಾರ ಯಾರೆಂದು ತಿಳಿದಾಗ, ಅದು ಋಷಿ ಆಶ್ರಮದ ಹೋಮ ಧೇನುವೆಂದು ತಿಳಿದನು. ಓಡೋಡಿ ಬಂದು ತನ್ನಿಂದ ಅರಿಯದೇ ಆದ ಅಪರಾಧಕ್ಕೆ ಕ್ಷಮೆ ಕೇಳಿ ಬದಲಿ ದನಗಳನ್ನು ನೀಡುವ ವಿಚಾರ ಬಿನ್ನವಿಸಿ ಬೇಡಿ ಕೊಂಡನು. ಆದರೆ ಮುನಿವರ ಧೇನುವಿನ ರುಧಿರದಿಂದ ಕೆಸರಾದ ಭೂಮಿಯನ್ನು ನೋಡಿ ಕ್ರುದ್ದರಾಗಿ “ಆಪತ್ಕಾಲದಲ್ಲಿ ರುಧಿರ ಕೆಸರಿನ ಭೂಮಿಯೇ ನಿನ್ನ ರಥದ ಚಕ್ರವನ್ನು ಕಚ್ಚಿ ಹಿಡಿದು ನಿನ್ನ ಅಂತ್ಯಕ್ಕೆ ಕಾರಣವಾಗಲಿ” ಎಂದು ಶಪಿಸಿದರು.

ಅಯ್ಯೋ ನನ್ನ ಹಣೆಬರಹವೇ! ಪರಿಸ್ಥಿತಿ ನನ್ನ ಜೀವನದಲ್ಲಿ ಎಂತಹ ಸನ್ನಿವೇಶಗಳನ್ನು ತಂದೊಡ್ಡುತ್ತಿದೆ. ಘಟಿತ ಘಟನೆಗಳಿಂದ ಶಾಪವನ್ನು ಪ್ರಾಪ್ತಿ ಮಾಡಿಕೊಳ್ಳುವ ದುರಾದೃಷ್ಟವೇ ನನ್ನದಾಗುತ್ತಿದೆಯಲ್ಲಾ ಎಂದು ಮರುಗಿದ ಕರ್ಣ.

ಮುಂದುವರಿಯುವುದು…

✍🏻 ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page