27.3 C
Udupi
Friday, May 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 30

ಭರತೇಶ್ ಶೆಟ್ಟಿ , ಎಕ್ಕಾರ್

ಸಂಚಿಕೆ ೩೦ ಮಹಾಭಾರತ

ದುಶ್ಯಂತ ನೋಡುತ್ತಿದ್ದಂತೆಯೆ ಓಡಿ ಬಂದ ಜಿಂಕೆಯ ತಲೆ ನೇವರಿಸಿ ಸುಂದರಿ ಅಭಯ ವಾಕ್ಯ ಉಚ್ಚರಿಸಿದಳು. “ಹೆದರ ಬೇಡ ಇನ್ಯಾರೂ ನಿನ್ನನ್ನು ಹೊಡೆದು ನೋಯಿಸುವುದಿಲ್ಲ” ಇತ್ತ ರಾಜನಿಗೆ ಸೌಂದರ್ಯದ ಚಿಲುಮೆಯನ್ನು ನೋಡಿ ಮೊದಲು ಅಭಿಮಾನ, ಮತ್ತೆ ಮೋಹವೇ ಅಂಕುರಿಸಿತು. ಮಾತನಾಡಿಸುವ ಬಯಕೆಯೂ ಆಯಿತು. ರಾಜಾ ದುಶ್ಯಂತ ಮುಂದೊತ್ತಿ ಬಂದಾಗ ಆಶ್ರಮದಲ್ಲಿದ್ದ ಬಾಲಿಕೆಯರು ಸರಿದು ನಿಂತರು. ಪರಸ್ಪರ ಶಕುಂತಳೆ – ದುಶ್ಯಂತ ನೇರ ನೋಟಕರಾದರು. ಇವರ ಕಣ್ಣೋಟದ ಭಾವ ವ್ಯವಹಾರ ಆಶ್ರಮ ಸ್ತ್ರೀ ಯರಿಗೆ ಏನರ್ಥವಾಯಿತೋ..‌ ! “ಆಶ್ರಮ ಕುಲಪತಿಗಳಾದ ಕಣ್ವ ಮಹರ್ಷಿಗಳ ಸಾಕು ಮಗಳು ಶಕುಂತಳೆಯ ಪ್ರೀತಿಯ ಜಿಂಕೆಯಿದು. ಇದರ ಮೇಲೆ ನಮಗೆಲ್ಲರಿಗೂ ಅತೀವ ಪ್ರೀತಿ, ಅಕ್ಕರೆ” ಎಂದರು. ಕೇಳಿಸಿಕೊಂಡ ರಾಜ ತನ್ನ ಪರಿಚಯ ಹೇಳಲು ಮನಮಾಡಿ- “ನಾನು ಚಂದ್ರವಂಶದಲ್ಲಿ ಹುಟ್ಟಿದವನು. ಮಹಾರಾಹ ದುಶ್ಯಂತ ನಾನಾಗಿದ್ದೇನೆ. ಈ ಜಿಂಕೆ ಮರಿ ಕಣ್ವಾಶ್ರಮದ್ದೆಂದು ನನಗೆ ಗೊತ್ತಿರಲಿಲ್ಲ. ನನ್ನ ಅಪಚಾರವನ್ನು ಮನ್ನಿಸಬೇಕು” ಎಂದು ವಿನಂತಿಸಿದನು. ಹೀಗೆ ಪರಿಚಯ ಮಾಡಿಸಿಕೊಂಡಂತಾಯಿತು. ಹೆಣ್ಮಕ್ಕಳಲ್ಲವೇ, ಸ್ತ್ರೀ ಸಹಜ ಗುಣ ಭಯ, ನಾಚಿಕೆಯಿಂದ, ತುಸು ಹಿಂದಕ್ಕೆ ಸರಿಯುತ್ತಾ, “ರಾಜೇಂದ್ರ! ನಮ್ಮನ್ನು ಪೊರೆಯಬೇಕು… ಜಿಂಕೆಯ ಮೇಲಿನ ಪ್ರೀತಿಯಿಂದ, ಯಾರೋ ಬೇಟೆಗಾರರು ಬೆನ್ನಟ್ಟುತ್ತಿರಬೇಕೆಂದು ತಿಳಿದು, ಅದರ ರಕ್ಷಣೆಗಾಗಿ ಈ ಜಿಂಕೆ ಆಶ್ರಮದ್ದು, ಕೊಲ್ಲಬಾರದೆಂದು ಕೂಗಿ ಹೇಳಿದೆವು, ಅನ್ಯಥಾ ಭಾವಿಸದಿರಿ” ಎಂದು ಹೇಳಿ ಆಶ್ರಮದತ್ತ ಮುಖ ಮಾಡಿ ಒಳ ಸೇರಲು ಸಿದ್ದರಾಗಿ ಮುನ್ನಡೆದರು. ಶಕುಂತಳೆ ಜಿಂಕೆಯ ಬಳಿಯಿಂದೆದ್ದು ಒಳ ಹೋಗಲು ಹೆಜ್ಜೆಯೆತ್ತಿದರೆ, ಆಕೆಯ ಸೀರೆ ಮುಳ್ಳಿಗೆ ಸಿಲುಕಿ ಹಿಂದಕ್ಕೆ ಸೆಳೆಯಿತು. ಸೆಳೆತವೂ, ಮುಳಿನ ಮೊನೆ ಚುಚ್ಚಿದ ಹಿಡಿತವೂ ಆ ಕ್ಷಣಕ್ಕೆ ಏನು ಶಕುನ ಸೂಚಿಸಿತೋ! ಅದರ ಗೊಡವೆಗೆ ಹೋಗದೆ, ಸೀರೆ ಬಿಡಿಸುತ್ತಾ ರಾಜನನ್ನೊಮ್ಮೆ ನೋಡಿ, ಆಶ್ರಮ ಬಾಲಿಕೆಯರು ಹೋದತ್ತ ದಾಪುಗಾಲಿಕ್ಕಿ ಆಶ್ರಮದೊಳಗೆ ಸಾಗುತ್ತಿದ್ದಳು. ಆಗ ಅತ್ತಲಿಂದ ಒಳ ಹೋಗಿದ್ದ ಬಾಲಿಕೆಯರು ಕೂಗಿ ಹೇಳಿದರು “ಗುರು ಕಣ್ವ ಮಹರ್ಷಿಗಳು ಆಶ್ರಮದಲ್ಲಿಲ್ಲ. ಬಂದಿರುವವರು ಮಹಾರಾಜರು. ಆದರದ ಸ್ವಾಗತ ನೀಡುವುದು ಆಶ್ರಮ ಸಂಸ್ಕಾರ. ಮುಸ್ಸಂಜೆ ಬೇರೆ ಆಗಿದೆ, ಬೇಟೆಯಾಡಿ ದಣಿದು ಬಂದ ಅರಸನಿಗೆ ಯಥೋಚಿತ ಸತ್ಕಾರ ಮಾಡುವುದು ಈಗ ಗುರುಪುತ್ರಿ ಶಕುಂತಳೆಯ ಜವಾಬ್ದಾರಿ”. ಇದು ಸಂಸ್ಕಾರ ಸ್ಮರಣೆಯೋ, ಭಾವ ಸ್ಫುರಣೆಗೆ ಪ್ರೋತ್ಸಾಹವೋ ಎಂಬಂತ್ತಿತ್ತು. ಈ ಮಾತು ಕೇಳಿ ಶಕುಂತಳೆ ಜಾಗೃತಳಾದಳು. ಆದರೆ ಅದಕ್ಕಿಂತ ಹೆಚ್ಚಾಗಿ ನಾಚಿದಳು. ಒಪ್ಪಿಗೆಯ ಸೂಚಕವೆಂಬಂತೆ ತಲೆಯಾಡಿಸಿ ಸಮ್ಮತಿಸಿ, ರಾಜನನ್ನು ನೋಡಿ ಕಣ್ಣಲ್ಲೇ ಆಮಂತ್ರಿಸಿದಳು. ಮುಖ ಭಯದಿಂದ ಬಿಳುಪೇರಿ, ಸಂಕೋಚದಿಂದ ಕೆಂಪಡರಿ ಮತ್ತಷ್ಟು ವಿಭಿನ್ನ ಸೌಂದರ್ಯಯುತವಾಗಿ ಹೊಳೆಯುವಂತೆ ಮಾಡಿತ್ತು.

ಇತ್ತ ರಾಜನ ಬಯಕೆಯೂ, ನಡೆಯುತ್ತಿರುವ ಬೆಳವಣಿಗೆಯೂ ಒಂದಕ್ಕೊಂದು ತಾಳಮೇಳ ಪೂರಕವಾದಂತೆ ಸಾಗಿ ಮುನ್ನಡೆದನು. ಶಕುಂತಳೆ ಬಿಂದಿಗೆ ನೀರನ್ನಿತ್ತು ಕೈಕಾಲು ತೊಳೆಯುವ ವ್ಯವಸ್ಥೆ ಮಾಡಿದಳು. ದರ್ಭಾಸನವನ್ನಿತ್ತು ಅರಸನನ್ನು ಕುಳ್ಳಿರಿಸಿ ತೃಷೆಗೆ ದನದ ಹಾಲನ್ನಿತ್ತು ಸತ್ಕರಿಸಿದಳು. ಆಗ ಅಲ್ಲಿಗೆ ರಾಜ ಭಟರು ಅರಸನನ್ನು ಅರಸುತ್ತಾ ಬಂದರು. ಬಂದವರಿಗೆ ಸೇನಾ ಸಮೇತ ರಾಜ್ಯಕ್ಕೆ ಹಿಂದಿರುಗಲು ಆಜ್ಞೆಯಿತ್ತನು. ತಾನು ಇಂದು ಇಲ್ಲೇ ವಿಶ್ರಾಂತಿ ಪಡೆಯುವುದಾಗಿ ತಿಳಿಸಿದ ಮಹಾರಾಜ.

ಕತ್ತಲಾಗಿದ್ದರಿಂದ ಆಶ್ರಮ ಬಾಲಿಕೆಯರು ಅರಸನ ಊಟದ ವ್ಯವಸ್ಥೆ ಮಾಡಿ, ಫಲ ತಾಂಬೂಲ ನೀಡಿಯಾದ ಬಳಿಕ, ಆಶ್ರಮದ ಸನಿಹದಲ್ಲಿರುವ ಪ್ರತ್ಯೇಕ ಅತಿಥಿ ಕೊಠಡಿಗೆ ಕರೆದುಕೊಂಡು ಹೋಗಿ, ವಿಶ್ರಾಂತಿಯ ವ್ಯವಸ್ಥೆ ಮಾಡಿದರು. ಆಶ್ರಮ ಸ್ತ್ರೀಯರಲ್ಲಿ ಕಣ್ವ ಮಹರ್ಷಿಗಳ ಬಗ್ಗೆ ಕೇಳಿ, ಪತ್ನಿ ಸಮೇತರಾಗಿ ವರುಣ ಲೋಕಕ್ಕೆ ಯಾಗ ನಿಮಿತ್ತ ಹೋಗಿರುವ ವಿಚಾರ ತಿಳಿದನು. ಬೇಟೆಯ ದಣಿವೂ, ನೀರವ ಪ್ರಶಾಂತ ವಾತಾವರಣವೂ, ಸಾತ್ವಿಕ ಭೋಜನವೂ ಪೂರಕವಾಗಿ ಸುಖ ನಿದ್ರೆ ಪ್ರಾಪ್ತವಾಯಿತು. ಬ್ರಾಹ್ಮೀ ಮುಹೂರ್ತದಲ್ಲೆದ್ದು, ಆಶ್ರಮದ ಪುಷ್ಪೋದ್ಯಾನ ಸುತ್ತಾಡಿ, ಇಂಚರ ಗಾಯನದಲ್ಲಿ ಭಾಸ್ಕರನ ಸ್ವಾಗತವನ್ನು ಆಸ್ವಾದಿಸಿ, ನಿಸರ್ಗ ಸೌಂದರ್ಯದ ಸೊಬಗು ಸವಿದು ಆನಂದ ಪಟ್ಟನು. ಅರಸನ ಅರಮನೆಯ ಅಮೂಲ್ಯ ಆಸನ, ವಸನ, ಅಲಂಕಾರಗಳಿಗಿಂತ ಈ ಆಶ್ರಮದ ನೈಸರ್ಗಿಕ ಚೆಲುವು ಮುದ ನೀಡುತ್ತಿತ್ತು. ವಿಶ್ರಾಂತನಾಗಿ, ಪ್ರಶಾಂತ ಮನಸ್ಸಿನಿಂದ ಒಂದೆರಡು ದಿನಗಳು ಕಳೆದವು. ಆದರೆ ಶಕುಂತಳೆ ಕಾಣುತ್ತಿಲ್ಲ. ಆಕೆಯ ಕುರಿತಾಗಿ ವಿಶೇಷ ಆಕರ್ಷಣೆ, ಒಲವು, ಅಪೇಕ್ಷೆ ಮನದಲ್ಲಿ ಮೂಡಿ, ಉಂಟಾದ ಚಿಂತೆ ಕಳೆಯಲು ಆಶ್ರಮದಿಂದ ಹೊರಟು ನದೀ ತೀರದತ್ತ ಬಂದನು. ಅನತಿ ದೂರದಲ್ಲಿ ಶಕುಂತಳೆಯ ಜೊತೆ ಒಂದಿಬ್ಬರು ಆಶ್ರಮ ಬಾಲಿಕೆಯರನ್ನು ನೋಡಿದ. ನಿಧಾನವಾಗಿದ್ದ ಪಾದಗಳು ಶೀಘ್ರಗತಿ ಚಲನೆ ಪಡೆದು ಅತ್ತ ಸಾಗಿ ಆಕೆಯ ಬಳಿ ನಿಂತವು. ಆಕೆಯನ್ನು ನೋಡಿ, ತನ್ನ ಮನದಲ್ಲಿರುವ ಸರ್ವ ಭಾವನೆಗಳನ್ನೂ ಮೀರಿ ನಿಂತ ಗೌರವದಿಂದ ” ನಾಳೆ ನಾನು ರಾಜಧಾನಿಗೆ ಹೋಗಬೇಕು. ತಾವು ಹೊರಡಲು ಅಪ್ಪಣೆ ನೀಡಬೇಕು” ಎಂದು ಕೈ ಮುಗಿದು ಕೇಳಿಕೊಂಡನು. ಆಕೆಯ ಜೊತೆಗಿದ್ದ ಒಬ್ಬಳು ಕೇಳಿಯೇ ಬಿಟ್ಟಳು “ಇದೇನು ಮಹಾರಾಜರೇ? ಹೀಗೆ ಅಪ್ಪಣೆ ಕೇಳುತ್ತಿರುವಿರಿ? ಈಕೆಯಿನ್ನೂ ನಿಮ್ಮ ಮಹಾರಾಣಿ ಆಗಿಲ್ಲವಲ್ಲ? !!! ಕುತೂಹಲವೂ, ಹಾಸ್ಯವೂ, ಚೇಷ್ಟೆಯೂ ಜತೆಗೂಡಿ ಸಮ್ಮಿಶ್ರ ಭಾವದಿಂದ ಸಂಕೋಚವನ್ನೂ ಸೇರಿಸಿ ನಕ್ಕುಬಿಟ್ಟರು ಆ ಹೆಣ್ಮಕ್ಕಳು. ಶಕುಂತಳೆಗೆ ಇವರ ಈ ರೀತಿಯ ವರ್ತನೆ ಇರಿಸು ಮುರಿಸಾಗಿ, ಆಡಿದವಳ ಗಲ್ಲಕ್ಕೆ ಮೆಲ್ಲ- ಮೆತ್ತನೆಯ ಏಟೊಂದನ್ನು ಹೊಡೆದಳು. ಕೆಂಪಾಯಿತೇ ಎಂದು ತನ್ನ ಕೈ ಬೆರಳುಗಳನ್ನೊಮ್ಮೆ ನೋಡಿದಳು. ಅಷ್ಟೂ ಸುಕೋಮಲೆ. ಅಷ್ಟಕ್ಕೇ ಬಿಡದ ಪೆಟ್ಟು ತಿಂದವಳು..” ರಾಜೇಂದ್ರಾ… ಇದೆಂತಹ ಅನ್ಯಾಯ? ನಿಮ್ಮ ಸಮಕ್ಷದಲ್ಲೇ ಹೀಗಾದರೆ, ನೀವಿಲ್ಲದಿರುವಾಗ ಎಂತಹ ಶೋಷಣೆ ಒದಗೀತು ನಮಗೆ? ಹಾಗಾಗಿ ಅಪರಾಧಿಗೆ ಸೂಕ್ತ ಶಿಕ್ಷೆ ನೀಡಬೇಕು.” ಎಂದು ಛೇಡಿಸಿ ಶಕುಂತಳೆಯನ್ನು ನೋಡಿ ನಕ್ಕರು… ಕೂಡಲೆ ಇದ್ದ ಇನ್ನೋರ್ವಳ ಕೈ ಹಿಡಿದೆಳೆದು ಒಂದೇ ಸಮನೆ ಆಶ್ರಮದತ್ತ ಓಡಿದರು ಅವರಿಬ್ಬರು. ಶಕುಂತಳೆ ಅವರಿಬ್ಬರನ್ನು ಕೂಗಿ ಕರೆದು ನಿಲ್ಲಲು ಹೇಳಿದರೂ ನಿಲ್ಲಲಿಲ್ಲ… ಹಾಗೆಂದು ಅವರ ಬೆನ್ನಟ್ಟಿ ಓಡಲೂ ಇಲ್ಲ. ನೆಲವನ್ನೇ ನೋಡುತ್ತಾ, ತುದಿ ಸೆರಗನ್ನು ತಿರುವುತ್ತಾ ಅರಸನಿಂದ ತುಸು ಅಂತರದಲ್ಲಿ ನಿಂತಳು. ಬಳಿಬಂದ ದುಶ್ಯಂತ ” ಭಯವೇಕೆ” ಎಂದು ಕೇಳಿದನು… ಧೈರ್ಯ ತಾಳಿದ ಆಕೆಯೂ ಒಂದೊಂದು ಮಾತು ತಡವರಿಸುತ್ತಾ ನುಡಿದಳು. ಮೆಲು ಮಾತುಗಳಿಂದ ಸಲಿಗೆ ಸಂಪಾದಿಸಿ ಕೊಂಡ ರಾಜಾ ದುಶ್ಯಂತ. ನೇರವಾಗಿ ವಿಷಯ ಪ್ರಸ್ತಾಪಿಸಿ “ಶಕುಂತಳೆ ನೀನೇಕೆ ನನ್ನ ಸಾಮ್ರಾಜ್ಞಿ ಆಗಬಾರದು”? ಎಂದು ಕೇಳಿದನು. ನಿರಾಕರಿಸಲಾಗದೆ, ತನ್ನ ಆಶಯವೂ ಅದೇ ಆಗಿದ್ದರೂ, ಅಸಾಧ್ಯವೆಂದು ತಾನೇ ಕಲ್ಪಿಸಿದ್ದ ಉತ್ತರ ರೂಪದಲ್ಲಿ ” ಈ ಅನಾಥೆಗೆ ಆ ಭಾಗ್ಯವೆಲ್ಲಿದೆ”? ಎಂದಳು. ರಾಜ ತಡಮಾಡದೆ ” ನೀನು ಮನಸ್ಸು ಮಾಡಿದರೆ ನನ್ನ ಸರ್ವಸ್ವವೂ ನಿನ್ನದೆ. ನನ್ನ ರಾಣಿಯಾಗಿ…” ಎಂದು ನುಡಿಯುತ್ತಿರುವಾಗ, ತಕ್ಷಣ ಶಕುಂತಳೆ ಮಹಾರಾಣಿಯವರು …..ಎಂದು ದುಶ್ಯಂತನ ಪತ್ನಿ “ಲಾಕ್ಷಿ” ಯ ಬಗ್ಗೆ ಹೇಳ ಹೊರಟರೂ ತಿದ್ದಿ ಮಾತು ಬದಲಾಯಿಸಲು ಯತ್ನಿಸಿದಳು. ಆಕೆಯ ಮನಸ್ಥಿತಿ, ಸಂಸಾರದ ಬಗೆಗಿನ ಸಂಸ್ಕಾರದ ಪರಿಧಿಯನ್ನು ಅರಿತ ದುಶ್ಯಂತ…. “ಹೌದು ಮಹಾರಾಣಿ ಇದ್ದರೂ ನನ್ನ ಸಾಮ್ರಾಜ್ಯ “ಪ್ರತಿಷ್ಠಾನ ನಗರಿ”ಗೆ ನೀನೇ ಸಾಮ್ರಾಜ್ಞಿ. ನಿನ್ನ ಮಗನೇ ಮುಂದಿನ ಮಹಾರಾಜ” ಎಂದು ವಾಗ್ದಾನ ರೂಪದಲ್ಲಿ ನುಡಿದ.

ಶಕುಂತಳೆಗೂ ದುಶ್ಯಂತನ ಮೇಲೆ ಮೊದಲೇ ಪ್ರೇಮಾಂಕುರವಾಗಿತ್ತು. ಆದರೆ ಆತ ವಿವಾಹಿತನಾಗಿದ್ದರಿಂದ ಅಸಾಧ್ಯವೆಂದು ಅರಿತು ಭಾವನೆಗಳಿಗೆ ಅಣೆಕಟ್ಟು ಕಟ್ಟಿ ತಡೆ ಹಿಡಿದಿದ್ದಳು. ರಾಜನೇ ಕೇಳಿಕೊಂಡಾಗ ಒಮ್ಮೆಲೇ ಕಟ್ಟೆಯೊಡೆದು ಭೋರ್ಗರೆಯುತ್ತಾ ಭಾವನೆಗಳು ಧುಮ್ಮಿಕ್ಕಿ ಹರಿದವು. ಈ ಸಂತಸದ ಕ್ಷಣ, ಸುಮಂಗಲ ಮುಹೂರ್ತವಾಗಿ, ರಾಜಾ ದುಶ್ಯಂತ – ಶಕುಂತಳೆ ಗಾಂಧರ್ವ ವಿಧಿಯಲ್ಲಿ ನದಿಯ ಮಂಜುಳ ಗಾನದ ಗಟ್ಟಿ ಮೇಳ, ಶುಕ ಪಿಕಾದಿ ಖಗಗಳ ಇಂಚರ ರೂಪದಲ್ಲಿ ಮೂಡಿದ ಮಂತ್ರ ಘೋಷ, ಕಾಕತಾಳಿಯವಾಗಿ ಸುರಿದ ಮೇಘ ಹನಿರೂಪದ ಸೇಸೆಯಿಂದ ವಿಧಿಪೂರೈಸಿಕೊಂಡು ಮದುವೆಯಾದರು. ಸಾಮ್ರಾಜ್ಞಿಯ ಪದವಿ ನೀಡುವ ಮಾತನ್ನಾಡಿದ್ದ ರಾಜಾ ದುಶ್ಯಂತ ಅದಕ್ಕೆ ಪೂರಕ ಸಾಕ್ಷಿಯಾಗಿ ತನ್ನ ಪಟ್ಟದ ಮುದ್ರೆಯುಂಗುರವನ್ನು ಶಕುಂತಳೆಗೆ ತೊಡಿಸಿದ. ಸತಿ ಪತಿ ಭಾವದಿಂದ ಬಿಗಿದಪ್ಪಿ ಭಾವ ಪ್ರಕಟಿಸಿದರು.

ಹೀಗೆ ಆಶ್ರಮದಲ್ಲಿ ಕೆಲವು ಕಾಲ ಕಳೆಯುತ್ತಾ ಇರುತ್ತಿರಲು ನದೀ ತೀರ, ಪುಷ್ಪೋದ್ಯಾನ, ವನ ವಿಹಾರ ಹೀಗೆ ಅವಕಾಶ ಸೃಜಿಸಿ ಸ್ವಚ್ಛಂದವಾಗಿ ದಾಂಪತ್ಯ ಸುಖ ಅನುಭವಿಸುತ್ತಿದ್ದರು. ಫಲರೂಪವಾಗಿ ದುಶ್ಯಂತನ ಹನಿ ಶಕುಂತಳೆಯ ಗರ್ಭದ ಚಿಪ್ಪಿನೊಳಗೆ ಮುತ್ತಿನೋಪಾದಿಯಲ್ಲಿ ಬೆಳೆಯುತ್ತಿತ್ತು. ಪರಿಣಾಮ ಶಾರೀರಿಕ ಬದಲಾವಣೆ ಮೈತುಂಬಿ ತೇಜಸ್ಸು ಕಳೆದೋರಿತ್ತು. ದುಶ್ಯಂತ ರಾಜ್ಯ ಬಿಟ್ಟು ಆಶ್ರಮ ಸೇರಿ ಪ್ರೀತಿ ಪ್ರಣಯದಲ್ಲಿ ಕೆಲವು ತಿಂಗಳುಗಳೇ ಕಳೆದು ಹೋದರೂ ಕ್ಷಣದಂತೆ ಭಾಸವಾಗಿತ್ತು. ಒಂದು ದಿನ ರಾಜ ತನ್ನ ಕರ್ತವ್ಯ ಪ್ರಜ್ಞೆ ಮನದಲ್ಲಿ ಮೂಡಿತು. ರಾಜ್ಯದ ಸ್ಥಿತಿಗತಿಯ ಬಗ್ಗೆ ಆತಂಕವೂ, ತಕ್ಷಣ ಹೋಗಿ ಕಾರ್ಯೋನ್ಮುಖನಾಗಬೇಕೆಂಬ ಜಾಗೃತ ಭಾವ ಎಚ್ಚರಿಸಿದಂತಾಯಿತು. ಈ ಕುರಿತು ಪತ್ನಿ ಶಕುಂತಳೆಯಲ್ಲಿ ಹೇಳಿ, ಒಪ್ಪಿಸಬೇಕಾದರೆ ಒಂದೆರಡು ದಿನಗಳೇ ಕಳೆದು ಹೋದವು. ಕಣ್ವ ಮಹರ್ಷಿಗಳು ಬಂದಿದ್ದರೆ ಈಗಲೇ ಅನುಮತಿ ಪಡೆದು ನನ್ನ ಜೊತೆ ಕರೆದೊಯ್ಯುತ್ತಿದ್ದೆ. ಯಾಗ ಸಮಾಪ್ತಿಯಾಗಿ ಅವರು ಬಂದ ಕೂಡಲೇ ನಿನ್ನನ್ನು ವೈಭವಯುತವಾಗಿ ಪ್ರತಿಷ್ಠಾನ ನಗರಿಗೆ ಕರೆದುಕೊಂಡು ಹೋಗಿ ಚಂದ್ರ ವಂಶದ ಸಾಮ್ರಾಜ್ಞಿಯಾಗಿ ಮಾಡುತ್ತೇನೆ. ನಾನು ಮಹಾರಾಜನಾಗಿರುವುದರಿಂದ ನನಗೆ ರಾಜ್ಯದ ರಕ್ಷಣೆ, ನಿನಗೆ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಭವಿಷ್ಯದ ಯುವರಾಜನ ರಕ್ಷಣೆಯ ಹೊಣೆಯಿದೆ. ಈಗ ನನ್ನನ್ನು ಸಂತೋಷದಿಂದ ಬೀಳ್ಗೊಡು ಎಂದು ಸಂತೈಸಿದನು. ಕಳುಹಿಸಲು ಮನ ಒಪ್ಪದಿದ್ದರೂ ಹಾಗೇ ಮಾಡಬೇಕಾಯಿತು ಶಕುಂತಳೆ! ರಾಜಾ ದುಶ್ಯಂತ ಹೊರಟೇ ಬಿಟ್ಟನು…

ಮುಂದುವರಿಯುವುದು….

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page