28.1 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 28

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೮ ಮಹಾಭಾರತ

ಕೆಲವೊಮ್ಮೆ ಮಕ್ಕಳ ಹಠ, ಜಗಳ ಅತಿರೇಕಕ್ಕೆ ತಲುಪಿದಾಗ ಹಿರಿಯರ ಸ್ಥಿತಿ ಅತಂತ್ರವಾಗುತ್ತದೆ ಎನ್ನುವುದಕ್ಕೆ ಇದೂ ಒಂದು ಸಾಕ್ಷ್ಯ. ಶರ್ಮಿಷ್ಠೆ ಯಯಾತಿಯ ಸಂಬಂಧ, ನಡೆದಿರುವ ವೃತ್ತಾಂತ ಬಯಲಾಯಿತು. ಗುಟ್ಟಿನ ಸಂಬಂಧ ಇಲ್ಲಿಯವರೆಗೆ ಸದ್ದಿಲ್ಲದೆ ಸಾಗಿದರೂ ಈಗ ಹುಟ್ಟಿದ ಮಕ್ಕಳು ಗುಟ್ಟಿನ ಗೂಡನ್ನು ಒಡೆದರು.

ಇತ್ತ ದೇವಯಾನಿಗೆ ತಾನೇ ಬೆಸೆದ ದ್ವೇಷದ ಬಲೆಯನ್ನು ತಿರುಗು ಬಾಣವಾಗಿಸಿ ಶರ್ಮಿಷ್ಠೆ ನನ್ನನ್ನೇ ಸೆರೆಹಿಡಿದಳಲ್ಲ? ಎಂದು ಶರ್ಮಿಷ್ಠೆಯ ಮೇಲೆ ಆಕ್ರೋಷ, ಅಸಹನೆ, ಕ್ರೋಧ, ಆವೇಶ, ದುಃಖ ಹೀಗೆ ನಾನಾ ಭಾವದಿಂದ ಉದ್ವೇಗಗೊಂಡವು. ವಾಸ್ತವ ಸತ್ಯವನ್ನು ಜೀರ್ಣಿಸಿ ಒಪ್ಪಿಕೊಳ್ಳಲಾಗದೆ, ತಂದೆ ಶುಕ್ರಾಚಾರ್ಯರಿಗೆ ದೂರನ್ನಿತ್ತಳು. ದೈತ್ಯ ಗುರು ಶುಕ್ರಾಚಾರ್ಯರು ಪ್ರಕರಣವನ್ನು ಅವಲೋಕಿಸಿ, ಕರೆದು ವಿಚಾರಿಸಿದರು. ಕೋಪಾವಿಷ್ಟರಾದ ಶುಕ್ರಾಚಾರ್ಯರು ಯಯಾತಿಗೆ ಶಾಪವನ್ನಿತ್ತರು ” ನಿನ್ನ ಯೌವನದ ಕಾಮನೆಗಳೇ ಈ ಬೆಳವಣಿಗೆಗೆ ಕಾರಣ. ಈ ಕೂಡಲೇ ನಿನಗೆ ಅಕಾಲ ವೃದ್ಧಾಪ್ಯ ಆವರಿಸಲಿ”. ಶಾಪ ಉಕ್ತಿಯಂತೆ ರಾಜಾ ಯಯಾತಿ ಯುವಕನಾಗಿದ್ದವ ಹಣ್ಣು ಹಣ್ಣು ಮುದುಕನಾಗಿ ಬಿಟ್ಟ. ಪರಿ ಪರಿಯಾಗಿ ಶುಕ್ರಾಚಾರ್ಯರಲ್ಲಿ ಕರುಣೆದೋರುವಂತೆ ಬೇಡಿದ, ಅತ್ತು ಗೋಗರೆದ. ಇತ್ತ ದೇವಯಾನಿಗೂ ತನ್ನ ಪತಿಯ ಮುದಿ ದೇಹವನ್ನು, ನಡುಗುವ ಕೈಕಾಲು, ಸುಕ್ಕುಗಟ್ಟಿ ಜೋತುಬಿದ್ದ ಚರ್ಮವನ್ನು ನೋಡಿ ಮನಕರಗಿತು. ಅಪ್ಪನಲ್ಲಿ ಈ ಶಾಪಕ್ಕೆ ಪರಿಮಾರ್ಜನೆಯ ದಾರಿ ತೋರಬೇಕೆಂದು ಬೇಡಿಕೊಂಡಳು. ಆದರೆ ಕಾಲ ಮಿಂಚಿ ಹೋಗಿತ್ತು. ಶಾಪವಾಕ್ಯ ಹಿಂಪಡೆಯಲಾದೀತೇ? ತರ್ಕಿಸಿ ಶುಕ್ರಾಚಾರ್ಯರು ಒಂದು ದಾರಿ ತೋರಿದರು. ಯಯಾತಿಗೆ ಮಕ್ಕಳಲ್ಲಿ ಯಾರಾದರೂ ಅವರ ಯೌವ್ವನವನ್ನು ನಿನಗೆ ನೀಡಲು ಸಿದ್ಧರಿದ್ದರೆ, ನಿನ್ನ ಮುಪ್ಪು ಅವರಿಗೆ ವರ್ಗಾಯಿಸಬಹುದು. ನಿನಗೆ ಯೌವ್ವನ ಸಾಕೆಣಿಸಿದಾಗ ಮರಳಿ ನಿನ್ನ ಮುಪ್ಪು ಪಡೆದುಕೊಳ್ಳಬಹುದು ಎಂದು ಅನುಗ್ರಹಿಸಿದರು.

ಯಯಾತಿ ದೇವಯಾನಿಯಲ್ಲಿ ಹುಟ್ಟಿದ ಪುತ್ರರನ್ನು ಕರೆದು ಬೇಡಿದ. ಅವರು ಎಳೆ ಪ್ರಾಯದಲ್ಲಿ ವೃದ್ದರಾಗಲು ಒಪ್ಪಲಿಲ್ಲ. ಶರ್ಮಿಷ್ಠೆಯಲ್ಲಿ ತನಗೆ ಹುಟ್ಟಿದ ಮಕ್ಕಳನ್ನೂ ಕೇಳಿದ. ಮೊದಲ ಇಬ್ಬರು ಸಿದ್ದರಾಗಲಿಲ್ಲ. ಆದರೆ ಕಿರಿಯವ ಪೂರು ತನ್ನ ಯೌವನವನ್ನು ಅಪ್ಪನ ಮುಪ್ಪಿಗೆ ವರ್ಗಾಯಿಸಲು ಸಮ್ಮತಿಸಿದ. ದೇವಯಾನಿಗೂ ಪೂರುವಿನ ಮೇಲೆ ಅಭಿಮಾನ ಮೂಡಿತು.ವಶರ್ಮಿಷ್ಠೆ – ಯಯಾತಿಗೂ ಬಹಳ ಸಂತಸವಾಯಿತು. ಯಯಾತಿ ಮರಳಿ ಯುವಕನಾದ, ಪೂರು ಮುದುಕನಾದ.

ಈ ಪ್ರಕರಣದಲ್ಲಿ ತನ್ನ ಮಕ್ಕಳ ಅಂತರಂಗದ ಭಾವ ಅರಿತ ಯಯಾತಿ ತನ್ನ ಯೌವ್ವನ ನೀಡಿದ ಪೂರುವಿಗೆ ಯಯಾತಿಯ ಬಳಿಕ ಸಾಮ್ರಾಜ್ಯದ ಪೂರ್ಣ ಅಧಿಕಾರ ಹಾಗೆಯೇ ಪೂರುವಿನ ವಂಶ ಪೀಳಿಗೆ ಸಂತತಿ – ಸಂತತಿ ಸಹಿತವಾಗಿ ಸುದೀರ್ಘವಾಗಿ ಈ ಸಾಮ್ರಾಜ್ಯದ ಮಹಾರಾಜರಾಗುವ ರಾಜಯೋಗ ಅನುಗ್ರಹಿಸಿದ. ಒಂದರ್ಥದಲ್ಲಿ ವರವೇ ಅಲ್ಲವೇ? ತನ್ನ ಆಶಯ ಈಡೇರಿಸದ ನಾಲ್ಕೂ ಮಕ್ಕಳಿಗೆ ಅವರವರ ಸಂತತಿ ಸಹಿತವಾಗಿ ಸಿಂಹಾಸನವೇರಲು ಬಾಹಿರರೆಂದು ಆಜ್ಞೆ ಮಾಡಿದ. ಅದು ಒಂದು ರೀತಿಯ ಪರೋಕ್ಷ ಶಾಪವೇ ಆಯಿತು. ಆ ನಾಲ್ಕೂ ಮಕ್ಕಳಿಗೆ ತನ್ನ ರಾಜ್ಯದ ನಾಲ್ಕು ಮೂಲೆಗಳಲ್ಲಿರುವ ಒಂದೊಂದು ರಾಜ್ಯಗಳ ಅಧಿಕಾರ ನೀಡಿ ಅವರನ್ನು ಅಧಿರಾಜರನ್ನಾಗಿ ನೇಮಿಸಿದ. ಅವರು ಪೂರುವಿನ ವಂಶಸ್ಥ ರಾಜರಿಗೆ ಜನ್ಮ ಜನ್ಮಾಂತರದವರೆಗೂ ಶಾಶ್ವತ ಅಧೀನ ಸಾಮಂತರಾಗಬೇಕಾಯಿತು.

ಶರ್ಮಿಷ್ಠೆ ತನ್ನ ಹುಟ್ಟಿನಿಂದ ರಾಜಕುಮಾರಿ. ತನಗೆ ಹುಟ್ಟಿದ ಮಗನಿಂದ ರಾಜ ಮಾತೆಯಾದಳು. ದಾಸ್ಯದ ಸಂಕೋಲೆ ಕಳಚಲ್ಪಟ್ಟಿತು. ದೇವಯಾನಿ ತನ್ನ ತಪ್ಪು ನಡೆಯ ಬದುಕಿಗೆ ಪಶ್ಚಾತ್ತಾಪ ಪಟ್ಟು ಶರ್ಮಿಷ್ಠೆಯ ಕ್ಷಮೆ ಕೇಳಿ ಮಹಾರಾಣಿಯಾಗಿ ಉಳಿದಳು.

ಕಾಲಾಂತರದಲ್ಲಿ ಯಯಾತಿ ಯೌವ್ವನವನ್ನು ಮಗನಿಗೆ ಮರಳಿಸಿ ಪೂರವಿನಲ್ಲಿ ನಿಕ್ಷೇಪಿಸಲ್ಪಟ್ಟಿದ್ದ ತನ್ನ ಮುಪ್ಪನ್ನು ಮರಳಿ ಪಡೆದನು.

ಪೂರು ಮಹಾರಾಜನಾದ. ಕೋಸಲ ದೇಶದ ರಾಜಕುವರಿಯನ್ನು ವರಿಸಿ ತನ್ನ ವಂಶ ಬೆಳೆಸಿದ. ಹೀಗೆ ಹಲವಾರು ತಲೆಮಾರುಗಳು ಪೂರುವಿನ ಸಂತತಿಯಲ್ಲಿ ಹುಟ್ಟಿದವರು ಮಹಾರಾಜರಾಗಿ ಆಳಿ ಅಳಿದರು. ಹೀಗೆ ಮುಂದುವರಿಯುತ್ತಿರಲು, ಈ ವಂಶದಲ್ಲೇ ಹುಟ್ಟಿದ ‘ಇಲಲಾ’ ಎಂಬ ರಾಜನು ‘ರಥಂತರಿ’ ಎಂಬವಳನ್ನು ಮದುವೆಯಾಗಿ, ದುಶ್ಯಂತ, ಶೂರ, ಭೀಮ, ಪ್ರವಸು, ವಸು ಎಂಬ ಐದು ಮಕ್ಕಳನ್ನು ಪಡೆದನು. ಕಾಲಚಕ್ರ ತಿರುಗಲು ಹಿರಿಯ ಮಗ ದುಶ್ಯಂತ ಬೆಳೆದು ಜ್ಞಾನ, ಶೌರ್ಯ, ವಿಕ್ರಮ, ನ್ಯಾಯ, ನೀತಿ ಶಾಸ್ತ್ರ ಸಂಪನ್ನನಾಗಿ ಬೆಳೆದು ಪಟ್ಟಾಭಿಷಿಕ್ತನಾಗಿ ರಾಜನಾದ. ಈತ ‘ಲಾಕ್ಷಿ’ ಎಂಬ ರಾಜಕುಮಾರಿಯನ್ನು ವರಿಸಿದ್ದನಾದರೂ, ಮಕ್ಕಳಿರಲಿಲ್ಲ.

ಇತ್ತ ಕೌಶಿಕ ಮುನಿ (ವಿಶ್ವಾಮಿತ್ರರು) ವಸಿಷ್ಟರ ಮೇಲಿನ ಕೋಪ, ಬ್ರಹ್ಮದಂಡದ ಶಕ್ತಿಯೆದುರು ತನ್ನ ಸಾಧನೆಯ ಶಕ್ತಿ ಸಾಗದಿದ್ದಾಗ ಬ್ರಹ್ಮ ಜ್ಞಾನ ಸಂಪಾದನೆಗೆ ಮನಮಾಡಿ ತಪೋ ನಿರತರಾಗಿದ್ದರು. ಅವರ ತಪಸ್ಸಿನ ತೀವ್ರ ಪ್ರಭಾವದಿಂದ ಸೂಸಿದ ಉರಿ ಬೇಗೆಯಿಂದ ಭುವಿಯೇ ಬಿಸಿಯೇರಿತ್ತು. ಇದನ್ನರಿತ ದೇವತೆಗಳು ಮೇನಕೆಯನ್ನು ಕರೆ ತಪಸ್ಸು ಭಂಗಗೊಳಿಸಲು ನಿಯೋಜಿಸಿ ಕಳುಹಿಸಿದರು. ದೇವಾಂಗನೆ ಮೇನಕೆ ಸುಕೋಮಲೆ, ಸುರ ಸುಂದರಿ. ತನ್ನ ಸ್ವ ಅನುಭವದ ನಡೆಗಳನ್ನು ಬಳಸಿ ತಪೋ ಭಂಗಕ್ಕೆ ಯತ್ನಿಸಿ ವಿಫಲಳಾದಳು. ಇಂದ್ರನಿಗೆ ಮೇನಕೆಯ ವೈಫಲ್ಯ ವಿಚಾರ ತಿಳಿದು, ಸಹಾಯಕ್ಕಾಗಿ ಮನ್ಮಥನನ್ನು ಕಳುಹಿಸಿದ. ಮನ್ಮಥ ಇಂದ್ರನ ಆಣತಿಯಂತೆ ಬಂದು ತನ್ನ ಕಬ್ಬಿಲ್ಲ ವಾಘೆಯಿಂದ ಅಶೋಕ, ಚೂತ, ಅರವಿಂದ, ನಮಮಲ್ಲಿಕಾ, ನೀಲೋತ್ಫಲಗಳೆಂಬ ಪಂಚ ಶರಗಳನ್ನು ಪ್ರಕೃತಿ, ಖಗ ಮೃಗ, ಸುಗಂಧ ಗಾಳಿ, ಮೇನಕೆ ಹಾಗೆಯೇ ಕೌಶಿಕ ಮುನಿ (ವಿಶ್ವಾಮಿತ್ರ)ಗಳ ಮೇಲೆ ಪ್ರಯೋಗಿಸಿದ. ಪೃಕೃತಿ ಕಂಗೊಳಿಸಿತು ಹೂ ಬಿಟ್ಟವು ಮರ, ಬಳ್ಳಿ ತರುಲತೆಗಳು. ಪಕ್ಷಿ ಪ್ರಾಣಿಗಳು ಜೋಡಿ ಜೋಡಿಯಾಗಿ ವಿಹರಿಸಲಾರಂಭಿಸಿ ಇಂಚರಗಾನ ಮೇಳೈಸಿತು. ಹೂವಿನ ಸುಗಂಧ ಹೊತ್ತು ತಂಪು ಮಂದಗಾಳಿ ಬೀಸ ತೊಡಗಿತು. ಇತ್ತ ಮೇನಕೆಗೂ ಮನ್ಮಥನ ಬಾಣ ಪರಿಣಮಿಸಿ ಏನೇನೋ ಬೇಕು ಬೇಕೆಂಬ ಕಾತರ ಹದ್ದು ಮೀರುತ್ತಿತ್ತು. ಅಂತರ್ಮುಖನಾಗಿ ಉರಿ ಸೂಸುತ್ತಿದ್ದ ವಿಶ್ವಾಮಿತ್ರರೂ ಶಾಂತರಾಗತೊಡಗಿ, ಮುಚ್ಚಿದ ಕಂಗಳು ತೆರೆಯಲ್ಪಟ್ಟವು. ಸುಗಂಧದ ತಂಗಾಳಿ, ನೀರವ ಪ್ರಶಾಂತ ತಪೋ ಭೂಮಿಯ ಸ್ಥಿತಿ ಬದಲಾಗಿ ಶುಕ ಪಿಕಗಳ ಇನಿಧನಿ, ಕಲರವದಿಂದ ಸುಶ್ರಾವ್ಯವಾಗಿತ್ತು. ನಿರಾಹಾರ ತಪಸ್ಸಿನಿಂದ ಸುಪ್ತವಾಗಿದ್ದ ಮನಸ್ಸು, ಕೃಶವಾಗಿದ್ದ ಶರೀರದೊಳಗೆ ಅಮೋಘ ಸಂಚಲನೆ ಮೂಡುತ್ತಿದೆ. ಕೇಂದ್ರೀಕೃತ ಮನಸ್ಸು ವಿಚಲಿತವಾಗಿ ಪ್ರಾಕೃತಿಕ ಸೊಬಗಿಗೆ ಮನಸೋತಿದೆ. ಏಕಾಗ್ರಚಿತ್ತದ ತಪಸ್ಸು ದಿಕ್ಕು ಕವಲೊಡೆದು ಏನನ್ನೋ ಅರಸುತ್ತಿದೆ. ಎದ್ದು ನಿಂತು ನೋಡಿದರೆ ತಂಗಾಳಿಗೆ ಬಳುಕುವ ಬಳ್ಳಿ, ಕೋಮಲ ಸೌಗಂಧಿ ಸುಮದಂತೆ ಕಂಗೊಳಿಸುವ ಮೇನಕೆ ಗೋಚರಿಸಿದಳು….

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page