28.1 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 27

ಭರತೇಶ್ ಶೆಟ್ಟಿ, ಎಕ್ಕಾರ್

ಬದುಕಿ ಬಂದ ಕಚ ಮೃತ ಸಂಜೀವಿನಿ ಮಂತ್ರ ಪಠಿಸಿ ಗುರುಗಳನ್ನು ಬದುಕಿಸಿದನು. ಹೀಗೆ ಮಹಾರುದ್ರನ ತಪಸ್ಸಿನಿಂದ ಪಡೆದ ಮಂತ್ರ ಕಚನ ಪಾಲಾಯಿತು.

ಕೆಲವು ದಿನಗಳು ಕಳೆದು ಕಚನು ವಿದ್ಯಾರ್ಜನೆ, ಬಂದ ಉದ್ದೇಶ ಮೃತ ಸಂಜೀವಿನಿ ಮಂತ್ರ ಪ್ರಾಪ್ತಿ ಆದ ಕಾರಣ ಮರಳಿ ಸ್ವರ್ಗ ಸೇರಲು ಗುರುಗಳಲ್ಲಿ ಆಶೀರ್ವಾದ ಮತ್ತು ಅನುಮತಿ ಕೇಳಿದನು. ಹಾಗೆಯೇ ಶುಕ್ರಾಚಾರ್ಯರು ಆಶೀರ್ವದಿಸಿ ನಿಷ್ಠಾವಂತ ಶಿಷ್ಯನನ್ನು ಬೀಳ್ಕೊಟ್ಟರು. ಹೊರಟು ಆಶ್ರಮದಿಂದ ಹೊರ ನಡೆಯುತ್ತಿದ್ದ ಕಚನನ್ನು ಹಿಂಬಾಲಿಸಿದ ದೇವಯಾನಿ, ನೀನು ಹೋಗಬಾರದೆಂದು ತಡೆದಳು. ಯಾಕೆಂದು ಕೇಳಿದಾಗ, ಹೆಣ್ಣೆಂಬ ಭಾವವನ್ನೂ ಮರೆತು, ಸಂಕೋಚ ಬಿಟ್ಟು ತನ್ನನ್ನು ಮದುವೆಯಾಗಬೇಕೆಂದು ಆದೇಶ, ವಿನಂತಿ ಹೀಗೆ ದ್ವಂದ್ವ ನಿಲುವುಗಳಿಂದ ಒತ್ತಾಯ ಮಾಡಿದಳು. ಕಚನು ಸ್ಪಷ್ಟ ದೃಷ್ಟಿ ಹೊಂದಿದ್ದರಿಂದ, ವಿಚಲಿತನಾಗದೆ, ಸಕಾರಣ ನೀಡಿ ತಿರಸ್ಕರಿಸಿದನು. ನೀನು ಗುರುಪುತ್ರಿಯಾದ ಕಾರಣ ನನಗೆ ತಂಗಿ ಸಮಾನ. ವಧಿಸಲ್ಪಟ್ಟಿದ್ದ ನನಗೆ ಈ ಹಿಂದೆ ಮರುಹುಟ್ಟು ನೀಡಿರುವ ನೆಲೆಯಲ್ಲೂ ನಿನ್ನ ಪಿತ ನನಗೂ ಪಿತೃ ಸಮಾನರು. ಇನ್ನೂ ಹೇಳಬೇಕಾದರೆ ನಿನ್ನ ತಂದೆಯ ಹೊಟ್ಟೆಯೊಳಗಿಂದ ಹೊರ ಬಂದ ನನಗೆ ನೀನು ಸಹೋದರಿ. ಈ ಎಲ್ಲಾ ಸತ್ಯಗಳನ್ನು ಅರಿತು ನಿನ್ನ ಅಣ್ಣನಾದ ನನ್ನನ್ನು ಹರಸಿ ಬೀಳ್ಗೊಡು, ತಡೆದು ನಿಲ್ಲಿಸಬೇಡ ಎಂದು ತಿಳಿ ಹೇಳಿದ. ಈ ಎಲ್ಲಾ ವಿಚಾರ ಕೇಳುತ್ತಿದ್ದಂತೆ ಕೋಪಾವೇಶ ತಳೆದ ದೇವಯಾನಿ, ಭಗ್ನ ಪ್ರೇಮಿಯಾಗಿ ಕಚನನ್ನು ಶಪಿಸಿಯೇ ಬಿಟ್ಟಳು – “ನನ್ನ ತಂದೆಯಿಂದ ಕಲಿತ ವಿದ್ಯೆ ನಿಶ್ಫಲವಾಗಲಿ”. ಈ ಶಾಪವಾಕ್ಯ ಕೇಳುತ್ತಿದ್ದಂತೆ ಕಚನೂ ಕುಪಿತನಾಗಿ, ದೇವಯಾನಿಗೆ – “ಉತ್ತಮ ಕುಲಜೆಯಾದ ನೀನು ನಿನಗಿಂತ ನೀಚ ಕುಲದವನಿಗೆ ಸತಿಯಾಗು” ಎಂದು ಶಪಿಸಿದ. ಆ ಶಾಪ ಫಲವೇ ರಾಜಾ ನಿನ್ನನ್ನು ದೇವಯಾನಿ ವರಿಸುವಂತಾಯಿತು ಎಂದು ಶರ್ಮಿಷ್ಠೆ ಯಯಾತಿಗೆ ವೃತ್ತಾಂತ ವಿವರಿಸಿದಳು.

ಈ ಶಾಪ ಪ್ರಕರಣವನ್ನು ಆಶ್ರಮದ ಬಳಿ ಹೋಗಿದ್ದ ನಾನು ಪ್ರತ್ಯಕ್ಷವಾಗಿ ಕಾಣುವಂತಾದದ್ದು ನನ್ನ ದೌರ್ಭಾಗ್ಯ. ದೇವತೆಗಳು ನಮ್ಮ ವೈರಿಗಳು. ಮೃತ ಸಂಜೀವಿನಿ ಮಂತ್ರ ದೇವ ಲೋಕದ ಕಚನ ಪಾಲಾಗಿದ್ದು ನಮ್ಮ ಆತಂಕಕ್ಕೂ ಕಾರಣವಾಗಿತ್ತು. ಆದರೆ ದೇವಯಾನಿಯ ಶಾಪದಿಂದ ಕಚನ ಪಾಲಾಗಿದ್ದ ಈ ವಿದ್ಯೆ ನಷ್ಟವಾದ ಸಂತೋಷದಿಂದ ನಾನು ನಕ್ಕುಬಿಟ್ಟೆ. ನನ್ನ ನಗುವಿನ ಸದ್ದು ದೇವಯಾನಿಗೆ ಕೇಳಿಸಿತು. ಆಕೆ ಈ ನಗುವಿನ ಕಾರಣ ಆಕೆಯ ಪ್ರೇಮ ವೈಫಲ್ಯಕ್ಕೆ ನನ್ನ ಅಪಹಾಸ್ಯವೆಂದು ಭಾವಿಸಲ್ಪಟ್ಟಿತು. ನಾನು ಕಚನಿಗಾದ ನಷ್ಟ- ನಮ್ಮವರ ಪಾಲಿಗೆ ಆದ ವಿಜಯ ಎಂದು ತಳೆದ ಭಾವ ನಗೆಯಾಗಿ ಹೊರಬಂದಿತ್ತು. ಅಲ್ಲಿಂದ ನನ್ನ ಮೇಲೆ ವೈರ ಸಾಧನೆಗೆ ಸಮಯ ಸಾಧಕಳಾಗಿದ್ದಳು. ಸೀರೆಯ ಪ್ರಕರಣ ಕೇವಲ ನೆಪ ಮಾತ್ರವಾಗಿ ಉದ್ದೇಶ ಪೂರೈಸಿತು. ತನ್ನ ಸೇಡು ತೀರಿಸಿಕೊಂಡಳು. ನಾನೂ ನಿಮ್ಮಂತಹ ರಾಜನಿಗೆ ರಾಣಿಯಾಗಬಲ್ಲ ಯೋಗ್ಯತೆ ಹೊಂದಿದ್ದರೂ ದಾಸಿಯಾಗಬೇಕಾಯಿತು
ಎಂದು ಉಟ್ಟ ಸೀರೆಯಿಂದ ಕಣ್ಣೀರು ಒರೆಸುತ್ತಾ ಹೇಳಿದಳು.

ಸ್ತ್ರೀ ಕುಲದ ಕಣ್ಣೀರೇ ಪುರುಷರನ್ನು ಸೋಲಿಸುವ ಮಂತ್ರಾಸ್ತ್ರವಲ್ಲವೇ?. ಮೊದಲೇ ಆಕೆಯ ಸರ್ವಾಂಗ ಸೌಂದರ್ಯಕ್ಕೆ ಮನಸೋತಿದ್ದ ರಾಜ, ಈಗ ರಾಜ್ಯ ರಕ್ಷಣೆಯ ಪ್ರಬುದ್ದತೆ, ತ್ಯಾಗ ಮನೋಭಾವದ ಅಂತಃಸತ್ವಕ್ಕೂ ಮನಸೋತು ಕಣ್ಣೀರು ಸುರಿಸುತ್ತಿದ್ದ ಶರ್ಮಿಷ್ಠೆಯನ್ನು ಬರಸೆಳೆದು ಬಿಗಿದಪ್ಪಿದ. ರಕ್ಷಣೆಯ ಭರವಸೆಯನ್ನೂ ನೀಡಿದ.

ಕೆಲ ದಿನಗಳು ಕಳೆಯಲು ಶರ್ಮಿಷ್ಠೆ ರಾಜಾ ಯಯಾತಿಯಿಂದ ಗರ್ಭಸ್ಥೆಯಾದಳು. ಇನ್ನು ಗುಟ್ಟು ಮಾಡಲಾಗುವುದೇ? ದೇವಯಾನಿ ಶರ್ಮಿಷ್ಠೆಯನ್ನು ಕರೆದು ಯಾರಿಂದ ಈ ಸ್ಥಿತಿ ಎಂದು ಕೇಳಿಯೇ ಬಿಟ್ಟಳು. ಶರ್ಮಿಷ್ಠೆ ಅರೆ ಗೊಂದಲಕ್ಕೀಡಾದರೂ ರಾಜ ಕುವರಿಯಲ್ಲವೇ ಸುಳ್ಳು ಅಲ್ಲದ, ಅರೆ ಸತ್ಯವನ್ನು ಹೇಳಿದಳು – ಓರ್ವ ಮಹಾತ್ಮನಿಂದಾಗಿ ಹೀಗಾಯಿತು. ಶರ್ಮಿಷ್ಠೆಯ ಈ ಮಾತನ್ನು ದೇವಯಾನಿ ನಂಬಿದಳೋ ಇಲ್ಲವೋ ಹೆಚ್ಚೇನೂ ತನಿಖೆಗೆ ಮುಂದಾಗಲಿಲ್ಲ.

ಹೀಗೆ ಕಾಲ ಸಾಗುತ್ತಿರಲು ದೇವಯಾನಿಗೆ ಎರಡು ಮಕ್ಕಳಾದರು. ‘ಯದು’ ಮತ್ತೆ ‘ತುರ್ವಸ’ ಹೆಸರಿನಿಂದ ಬೆಳೆಯುತ್ತಿದ್ದರೆ, ಇತ್ತ ಶರ್ಮಿಷ್ಠೆಗೂ ಮೂವರು ಮಕ್ಕಳು ಜನಿಸಿದರು. ‘ಅನು’, ‘ದ್ರುಹ್ಯು’ ಮತ್ತು ಕಿರಿಯ ಮಗ ‘ಪೂರು’. ಹೀಗೆ ಇಷ್ಟೆಲ್ಲಾ ಆದರೂ ಶರ್ಮಿಷ್ಠೆ – ಯಯಾತಿಯ ಸಂಬಂಧ ಪ್ರಕಟವಾಗಲಿಲ್ಲ. ದೇವಯಾನಿಯೂ ತನ್ನ ಮಕ್ಕಳ ಲಾಲನೆ ಪಾಲನೆಯಲ್ಲಿ ನಿರಾಳವಾಗಿದ್ದಳು. ಎಂದಾದರೊಂದು ದಿನ ಈ ಗುಟ್ಟು ರಟ್ಟಾಗಲಿದೆ ಎಂದು ತಿಳಿದಿದ್ದ ರಾಜಾ ಯಯಾತಿ ಕಳೆದಷ್ಟು ದಿನ ಕಳೆಯಲಿ ಎಂದು ಶರ್ಮಿಷ್ಠೆಯನ್ನು ಸಮಾಧಾನಿಸಿದ್ದ.

ಹೀಗಿರಲು ಮಕ್ಕಳು ಆಟವಾಡುತ್ತಿರಬೇಕಾದರೆ ದೇವಯಾನಿಯ ಮಕ್ಕಳು ಮತ್ತು ಶರ್ಮಿಷ್ಠೆಯ ಮಕ್ಕಳು ತಮ್ಮ ಅಪ್ಪ ಮಹಾರಾಜ ಎಂದು ಮಾತಾಡಿಕೊಳ್ಳುತ್ತ ಜಗಳವಾಡತೊಡಗಿದರು. ಅದು ವಿವಾದವಾಗಿ ಅವರವರ ತಾಯಂದಿರಿಗೆ ದೂರು ಬಂತು. ಈಗ ವಿಚಾರಣೆಗೆ ಕಟಕಟೆ ಸಿದ್ಧವಾಗಿತ್ತು.

ಮುಂದುವರಿಯುವುದು….

✍🏻 ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page