28.9 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 23

ಭರತೇಶ್ ಶೆಟ್ಟಿ, ಎಕ್ಕಾರ್

ಹೀಗೆ ಕಾಲ ಸಾಗುತ್ತಿತ್ತು. ಪುರೂರವ ತನ್ನ ತಂದೆ ಸುದ್ಯುಮ್ನ ಬಳಿಕ ಸಿಂಹಾಸನವೇರಿ, ದಕ್ಷ ರಾಜನಾಗಿ ಸುಪ್ರಸಿದ್ದನಾಗಿದ್ದ. ರಾಜ್ಯಭಾರ, ಪ್ರಜಾರಕ್ಷಣೆ, ಧರ್ಮ ಕಾರ್ಯ, ಸುಜನರ ಪಾಲನೆ ಮಾಡುತ್ತಾ ಸಮೃದ್ಧ – ಸಂತುಷ್ಟ ರಾಜ್ಯ, ಪ್ರಜಾ ಪರಿವಾರ ಸಮೇತ ಶತ್ರುಭಯವಿಲ್ಲದೆ ವಿಕ್ರಮಿ, ರಾಜಕಾರಣಿ, ಧರ್ಮಿಷ್ಟನಾಗಿ ಮೆರೆಯುತ್ತಿದ್ದ.

ಇತ್ತ ದೇವಲೋಕದ ಊರ್ವಶಿ “ಮಿತ್ರ” ಎಂಬ ಆದಿತ್ಯನೊಡನೆ ವಿಹಾರಕ್ಕೆ ಹೊರಟಿದ್ದಳು. ಆ ಸಮಯ ವರುಣನೂ ಊರ್ವಶಿಯನ್ನು ಬಯಸಿ ಬಳಿ ಕರೆದನು. ಆದರೆ ಊರ್ವಶಿ ತನ್ನ ವಿವಶತೆಯನ್ನು ಹೇಳಿ ನನ್ನ ಮನಸ್ಸು ನಿನ್ನ ಕೋರಿಕೆಯನ್ನು ಒಪ್ಪಿ ಬಯಸಿದೆ.. ಆದರೆ ಶರೀರ ಮಿತ್ರನ ವಶದಲ್ಲಿದೆಯೆಂದು ಹೇಳಿ ಹೊರಟಳು. ಇದರಿಂದ ಕ್ರುದ್ಧನಾದ ವರುಣ ಊರ್ವಶಿಯನ್ನು ಶಪಿಸಿದ “ನೀನು ಭೂಲೋಕದಲ್ಲಿ ಮನುಷ್ಯನಿಗೆ ರಾಣಿಯಾಗಿ ಹೋಗು” ಎಂದು. ಈ ಶಾಪ ವೃತ್ತಾಂತ ತಿಳಿದ ಇಂದ್ರ ಊರ್ವಶಿಯ ರಕ್ಷೆಗೆ ಅನುಗ್ರಹ ವರವನ್ನಿತ್ತ “ನೀನು ದಿವ್ಯ ಶರೀರದಿಂದಲೇ ಭೂಲೋಕ ಜೀವನದ ಶಾಪ ಅನುಭವಿಸಿ ಸಂತತಿ ಪಡೆದು ಮರಳಿ ಬಾ”. ಒಂದೆಡೆ ವರುಣನಿತ್ತ ಶಾಪ ಮರುಕ ತಂದರೂ, ನೇರವಾಗಿ ದಿವ್ಯ ಶರೀರ ಸಮೇತ ಶಾಪ ಅನುಭವಿಸಿ ಮರಳಿ ಬರುವ ಅವಕಾಶ ಒದಗಿಸಿದ ಇಂದ್ರನಿತ್ತ ವರ ತುಸು ಸಮಾಧಾನ ತಂದಿತ್ತು ಊರ್ವಶಿಗೆ.

ದೇವಲೋಕದ ಇಂದ್ರಾದಿ ಸುಮನಸರ, ಪುಣ್ಯ ಬಲದಿಂದ ದಿವ್ಯ ಶರೀರ ಹೊಂದಿ ಸ್ವರ್ಗಕ್ಕೆ ಬರುವ ಪುಣ್ಯಾತ್ಮರ ಸೇವೆ ಮಾಡುತ್ತಾ ಸುಖ ನೀಡುವ ಕಾಯಕದಲ್ಲಿದ್ದವಳು ಊರ್ವಶಿ. ನಿತ್ಯ ಕನ್ಯತ್ವದ, ಚಿರ ಯೌವನದ, ದಿವ್ಯ ಕಾಂತಿಯುತ ಶರೀರವುಳ್ಳ ತಾನು ಭೂಲೋಕದ ಕ್ಷುಲ್ಲಕ ಮನುಷ್ಯನ ಪತ್ನಿಯಾಗಿ ಸಂತಾನ ಪಡೆಯುವುದೇ! ಅಸಹ್ಯ ಎಂಬಂತೆ ಭಾಸವಾಗಿ ದುಃಖ ಆಕೆಗೆ ಆವರಿಸಿತು. ಆದರೂ ಧೃತಿಗೆಡದೆ ಕುಲೋತ್ತಮನಾದವ, ಸೌಂದರ್ಯ ರೂಪಿನ, ಸುಗುಣವಂತ ತನ್ನ ಶಾಪ ವಿಮೋಚನೆಗೆ ಒದಗಿ ಸಿಗುವಂತಾಗಲಿ ಎಂದು ಪ್ರಾರ್ಥಿಸುತ್ತಾ ಭೂಮಿಗಿಳಿದಳು.

ಪುರೂರವ ವನ ವಿಹಾರಕ್ಕಾಗಿ ಬಂದವನು ಕಾಡಿನಲ್ಲಿ ವಿಹರಿಸುತ್ತಿದ್ದ. ಮುಂದೆ ಸಾಗುತ್ತಿದ್ದಂತೆ ವನ ಮಧ್ಯದಲ್ಲಿ ಅಪ್ರತಿಮ ಸುಂದರಿಯನ್ನು ಕಂಡು ಎಂದೂ ಕಾಣದ, ಕಲ್ಪಿಸಲೂ ಅಸಾಧ್ಯವಾದ ರೂಪ ರಾಶಿಯನ್ನು ನೋಡಿ, ತನ್ನ ಕಣ್ಣನ್ನೇ ನಂಬಲಾಗದೆ, ಮೈಮರೆತು, ತೆರೆದ ಕಣ್ಣು ಮುಚ್ಚದೆ, ಬಿಟ್ಟ ಶ್ವಾಸ ಸೆಳೆಯಲು ಮರೆತವನಾಗಿ, ಪಾದಗಳು ಸ್ತಂಭನಗೊಂಡು, ಹೆಚ್ಚೇಕೆ ಆ ಸೌಂದರ್ಯದ ಗಣಿಯ ಸವಿಯ ನೋಡುತ್ತಾ ಹೃದಯವೂ ತನ್ನ ಬಡಿತ ನಿಲ್ಲಿಸಿ ನೋಡತೊಡಗಿದೆಯೋ ಎಂಬಷ್ಟರ ಮಟ್ಟಕ್ಕೆ ಪುರೂರವ ವಿಚಲಿತನಾಗಿದ್ದ. ಅತ್ತ ಊರ್ವಶಿಯೂ ಇವನಾರು ಮನುಷ್ಯನೋ ಇಲ್ಲಾ ವಿಹಾರಿಯಾಗಿ ಭೂಮಿಗೆ ಬಂದ ದೇವತೆಯೋ ಎಂಬ ದ್ವಂದ್ವಕ್ಕೆ ಸಿಲುಕಿ ಪುರೂರವನ್ನು ದಿಟ್ಟಿಸಿ ನೋಡ ತೊಡಗಿದ್ದಾಳೆ. ವಾಸ್ತವ ಮರೆತ ನಾಲ್ಕು ಕಂಗಳು ಮೌನ ಮಂಥನದಲ್ಲಿ ತೊಡಗಿದ್ದವು. ಸಾವರಿಸಿಕೊಂಡ ಊರ್ವಶಿ ಈ ವಿಭಾಗದಲ್ಲಿ ಪುರುಷರನ್ನು ನಿಭಾಯಿಸಿ ನೈಪುಣ್ಯತೆ ಪಡೆದವಳಲ್ಲವೇ? ಗಲಿಬಿಲಿಗೊಳ್ಳದೆ ತನ್ನ ಗಾಂಭಿರ್ಯದಿಂದ ಮೂಡಿದ್ದ ಕಾತರವನ್ನು ಮುಚ್ಚಿ, ಕಣ್ಣೋಟವನ್ನು ಚಲಿಸಿ ತಿರುಗಿದಳು. ಅರಿಯದೆ ಇಬ್ಬರಲ್ಲೂ ಏನೋ ಸಂಕೋಚ, ಮೌನ, ಉಮ್ಮಳಿಸುವ ಭಾವ ತರಂಗಗಳು ತಲ್ಲಣಗೊಳಿಸಿ ಸಂಚಲನ ಮೂಡಿಸಿದ್ದವು. ಪುರೂರವನಂತೂ ಸಂಪೂರ್ಣ ಅನಿಯಂತ್ರಿತ ಸ್ಥಿತಿಯ ಉತ್ತುಂಗವೇರಿದ್ದ. ಊರ್ವಶಿ ತನ್ನ ಜೀವನಾನುಭವದ ಹಿಡಿತದಿಂದಾಗಿ ಇಲ್ಲಿ ಉತ್ಪತ್ತಿಯಾದ ಬೇಕು ಎಂಬ ತುಡಿತವನ್ನು ಹಿಡಿದಿಟ್ಟು, ಎದುರಿನಿಂದ ಬೇಡಿಕೆ ಬರಲಿ, ಬಂದು ಬೇಡಲಿ, ಮತ್ತೆ ಆಡಿಸಿ, ಕಾಡಿಸಿ ನೋಡೋಣ ಎಂಬ ಪ್ರಬುದ್ಧತೆಯ ಬದ್ದತೆ ತೋರಿ ನಿಂದಳು. ತಾಳಲಾರದೆ, ಪುರೂರವ ಮೌನ ಮುರಿದು ಔಪಚಾರಿಕವಾಗಿ ಪರಿಚಯ ಕೇಳಿದ. ಊರ್ವಶಿಯ ನಾದಮಯ ಸ್ವರದಲ್ಲಿ ಆಕೆ ತಾನು ಯಾರೆಂದು ತಿಳಿಸಿದಳು. ಕೇಳಿಸಿಕೊಂಡ ಪುರೂರವ “ದೇವ ನಾರಿಯರ ಚೆಲುವಿನ ವರ್ಣನೆ ಕೇಳಿ ತಿಳಿದಿದ್ದೆ, ಇಂದು ನೋಡುವ ಭಾಗ್ಯ ಸಿಕ್ಕಿತು. ಆಹಾ ಇಂತಹಾ ಚೆಲುವೆ ಜಗದೊಳಗೆ, ಅದೂ ಕಣ್ಣೆದುರು ಸೌಂದರ್ಯ ರಾಶಿಯೇ ಮೂರ್ತ ಸ್ವರೂಪವಾಗಿ ಬಂದಿದೆ. ಇದಕ್ಕಿಂತ ಮಿಗಿಲಾದ ರೂಪ ಎನ್ನುವುದೇ ಇರಲಾರದು” ಎಂದು ವರ್ಣಿಸುತ್ತಾ ಯಾರಿಗೂ ಈವರೆಗೆ ಸೋಲದ ಅಜೇಯ ರಾಜ, ಈ ಸೊಬಗಿನ ರೂಪ ಲಾವಣ್ಯಕ್ಕೆ ಸೋತು ಶರಣಾಗಿದ್ದ. ತನ್ನನ್ನೂ, ತನ್ನ ಸ್ವಾಭಿಮಾನವನ್ನೂ ಮರೆತ ಪುರೂರವ ತಾನು‌ಮನಸೋತಿರುವ ಊರ್ವಶಿ ತನ್ನನ್ನು ವರಿಸಬೇಕೆಂದು ಅಂಗಲಾಚಿ ಬೇಡಿಕೊಂಡನು. ತಾನು ಮಹಾರಾಜನೆಂದೂ ಊರ್ವಶಿಯನ್ನು ಮಹಾರಾಣಿಯಾಗಿ ಸ್ವರ್ಗ ಸುಖಕ್ಕೆ ಯಾವ ವಿಧದ ಕೊರತೆಯಾಗದ ರೀತಿ ಸುಪ್ಪತ್ತಿಗೆಯಲ್ಲಿ ಸಲಹುವೆನೆಂದೂ, ಸೇವೆ ಮಾಡುವೆನೆಂದೂ ಪರಿ ಪರಿಯಾಗಿ ವಿನಂತಿಸಿದ. ಶಾಪ ನಿರ್ವಾಹಕ್ಕೆ ದಾರಿ ಬೇಕಿತ್ತು ಊರ್ವಶಿಗೆ. ಪುರೂರವ ಹೇಗೂ ತನ್ನ ಮನಗೆದ್ದು ದಿವ್ಯಾತ್ಮರಿಗೆ ಸರಿ ಸಮಾನನಾಗಿ ಗೋಚರಿಸುತ್ತಿದ್ದಾನೆ. ಏನೋ ನನ್ನ ಪುಣ್ಯವೋ, ಭಾಗ್ಯವೋ! ಶಾಪವಲ್ಲದಿದ್ದರೂ ಈತನ ಸುಖ ಬಯಸುತ್ತಿದ್ದೇನೋ ಏನೋ! ಎಂಬ ಹಾಗೆ ತರ್ಕಿಸುವಷ್ಟು ಊರ್ವಶಿಯೂ ಪುರೂರವನಿಗೆ ವಶವರ್ತಿಯಾಗಿದ್ದಳು. ತನ್ನ ವೃತ್ತಿಯ ಪ್ರವೃತ್ತಿಯಿಂದ ಊರ್ವಶಿಯ ಮನದೊಳಗೆ ಈ ರೀತಿಯ ಭಾವ ತುಮುಲಗಳು ಸಾಗುತ್ತಿತ್ತು. ಆದರೂ ತೋರಗೊಡದೆ ತನ್ನ ಶ್ರೇಷ್ಟತೆಯ ಸ್ಥಾಪನೆಗಾಗಿ ಮದುವೆಗೆ ಬೇಗ ಒಪ್ಪಿಕೊಳ್ಳಲಿಲ್ಲ. ಮತ್ತಷ್ಟು ಪ್ರೇಮ ನಿವೇದನೆಗೆ ಅವಕಾಶ ಕಲ್ಪಿಸಿ ಕೊಟ್ಟಳು. ಪುರೂರವ ಅಂಗಲಾಚಿ ಬೇಡಿಕೊಂಡಾಗ, ಕೊನೆಗೆ ಶರತ್ತು ಬದ್ಧವಾಗಿ ವರಿಸಲು ಸಮ್ಮತಿಸಿದಳು. ಮಹಾರಾಣಿಯಾಗಿ ತನ್ನನ್ನು ನಡೆಸಿಕೊಳ್ಳಬೇಕು. ಸಂತಾನ ಪ್ರಾಪ್ತವಾಗುವವರೆಗೆ ನಾನು ನಿನ್ನೊಂದಿಗೆ ಖಂಡಿತಾ ಇರುತ್ತೇನೆ. ಅದರೆ ರತಿಕೇಳಿಯ ಗೌಪ್ಯತೆಯ ಸಮಯವಲ್ಲದೆ ವಿವಸ್ತ್ರನಾಗಿ ನನ್ನನ್ನು ಸಂಧಿಸಕೂಡದು. ಒಂದೊಮ್ಮೆಗೆ ಹಾಗೆ ಆದರೆ ನಾನು ಬಿಟ್ಟು ಹೋಗುತ್ತೇನೆ ಎಂದಳು.

ಇಷ್ಟು ಮಾತ್ರವೇ? ಖಂಡಿತಾ ನಡೆಸಿಕೊಡುತ್ತೇನೆಂದು ಸಂಭ್ರಮಿಸಿದ. ರಾಜ ಪುರೂರವ ಶರತ್ತನ್ನು ಒಪ್ಪಿ, ಊರ್ವಶಿಯೊಂದಿಗೆ ವನ ವಿಹಾರಗೈದು, ರಮಿಸಿ ತನ್ನ ರಾಜ್ಯಕ್ಕೆ ಕರೆತಂದು ಅಭಿಷಿಕ್ತ ರಾಣಿಯಾಗಿ ವರಿಸಿ ಮೆರೆಸಿದ. ಸುಖದ ಸುಪ್ಪತ್ತಿಗೆಯಲ್ಲಿ ಕಾಪಾಡುತ್ತಿದ್ದ. ರಾಜ್ಯದ ಪಾಲನೆ ಮಂತ್ರಿಗೊಪ್ಪಿಸಿದ, ರಕ್ಷಣೆಯನ್ನು ಸೇನಾಧಿಪತಿಗೆ ವಹಿಸಿ ಕೊಟ್ಟನು. ತಾನು ಊರ್ವಶಿಯ ಜೊತೆ ಅಂತಃಪುರ ವಿಲಾಸಿಯಾದನು. ಕಾಲ ಸಾಗುತ್ತಿರಲು ಊರ್ವಶಿ ಗರ್ಭ ಧರಿಸಿದಳು, ಕೆಲ ಮಾಸಗಳು ಸಂದು ಸುಪುತ್ರೋತ್ಸವಕ್ಕೆ ಕಾರಣಳಾದಳು.
ಕಾಲ ಸಾಗುತ್ತಿದೆ, ಪುರೂರವ ಊರ್ವಶಿಯರ ಪುತ್ರ ಬೆಳೆಯುತ್ತಿದ್ದಾನೆ. ಸ್ವರ್ಗವೇ ಧರೆಗಿಳಿದ ಭಾವ ಪುರೂರವನಿಗೆ. ಸಂವತ್ಸರಗಳು ಕ್ಷಣಗಳಂತೆ ಕಳೆದು ಸಾಗಿದುದು ಗೊತ್ತಾಗಲೇ ಇಲ್ಲ ರಾಜ ಪುರೂರವನಿಗೆ.

ಇತ್ತ ಇಂದ್ರ ಈ ಬೆಳವಣಿಗೆಗಳ ವಿಚಾರ ತಿಳಿದು, ಇನ್ನು ಊರ್ವಶಿ ಶಾಪ ಮುಕ್ತಳಾಗಿ ಬರುವ ಸಮಯ ಸನ್ನಿಹಿತವಾಗಿದೆ. ಆ ದಾರಿಯ ವ್ಯವಸ್ಥೆಗಾಗಿ ದೇವದೂತರನ್ನು ಆಜ್ಞಾಪಿಸಿ ಕಳುಹಿದ. ಹೀಗೆ ಆಜ್ಞಾನುವರ್ತಿಗಳಾಗಿ ಬಂದ ದೇವದೂತರು ರಾತ್ರಿಯ ಹೊತ್ತು ಊರ್ವಶಿ ಪ್ರೀತಿಯಲ್ಲಿ ಸಾಕಿ ಸಲಹುತ್ತಿದ್ದ ಜಿಂಕೆ ಮರಿಯನ್ನು ಅಪಹರಿಸುವ ಯತ್ನ ಮಾಡಿದರು. ಅಪರಿಚಿತರ ಸೆಳೆತಕ್ಕೆ ಅರಚಿದ ಜಿಂಕೆ ಮರಿಯ ರೋಧನ ಊರ್ವಶಿ ಪುರೂರವರ ಅಂತಃಪುರಕ್ಕೂ ಕೇಳಿತು. ಊರ್ವಶಿ ಕಳ್ಳರು ಕಳ್ಳರು ಎಂದು ಬೊಬ್ಬಿಟ್ಟಳು. ತಟ್ಟನೆ ಎದ್ದು ನೋಡಲು ಪುರೂರವ ಓಡಿ ಬಂದನು.

ಮುಂದುವರಿಯುವುದು…..

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page