
ಬೆಂಗಳೂರು: ದೀಪಾವಳಿ ಹಬ್ಬವು ಈಗಾಗಲೇ ಮುಗಿದಿದ್ದು ಆದರೆ ಬೆಂಗಳೂರಿನ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪಟಾಕಿ ಜೊತೆ ಹುಡುಗಾಟವಾಡಲು ಹೋಗಿ ಯುವಕನೊಬ್ಬ ಪ್ರಾಣ ಕಳೆದುಕೊಂಡಿರುವ ಘಟನೆ ನಡೆದಿದೆ.
ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ವೈರಲ್ ಆಗಿದ್ದು ಇದರಲ್ಲಿ ಅಕ್ಟೋಬರ್ 31 ರಂದು ನವೀನ್, ದಿನಕರ್, ಸತ್ಯವೇಲು, ಕಾರ್ತಿಕ್, ಸತೀಶ್, ಸಂತೋಷ್ ಎಂಬ ಆರು ಮಂದಿ ಡಬ್ಬದೊಳಗೆ ಪಟಾಕಿ ಹಚ್ಚಿ ಅದರ ಮೇಲೆ ಕೂರುತ್ತಿಯಾ ಎಂದು ಶಬರೀಶ್ (32) ಎಂಬಾತನಿಗೆ ಸವಾಲು ಹಾಕಿದ್ದಾರೆ. ಈ ಸವಾಲು ಸ್ವೀಕರಿಸಿದರೆ ಆಟೋ ಕೊಡಿಸುವುದಾಗಿ ಯುವಕರು ಶಬರೀಶನಿಗೆ ಆಮಿಷ ಒಡ್ಡಿದ್ದು ಇದಕ್ಕೆ ಒಪ್ಪಿದ ಶಬರೀಶ ಪಟಾಕಿ ಡಬ್ಬದ ಮೇಲೆ ಕೂತಿದ್ದಾನೆ. ಪಟಾಕಿ ಹೊತ್ತಿಕೊಳ್ಳುತ್ತಿದ್ದಂತೆ ಯುವಕರೆಲ್ಲ ಓಡಿಹೋಗಿದ್ದು ಶಬರೀಶನ ಹಿಂಬದಿ ಮತ್ತು ಗುಪ್ತಾಂಗಗಳಿಗೆ ತೀವ್ರ ಗಾಯವಾದ ಪರಿಣಾಮ ಆತ ಮೇಲಕ್ಕೆ ಏಳಲಾರದೆ ನರಳಾಡುತ್ತಿರುವುದನ್ನು ವಿಡಿಯೋದಲ್ಲಿ ಗಮನಿಸಬಹುದಾಗಿದೆ.
ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಈ ಕುರಿತು ಮಾತನಾಡಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಜನರನ್ನು ಬಂಧಿಸಿ ತನಿಖೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.






















































