
ನವದೆಹಲಿ: ಹರ್ಯಾಣದ ರೋಹ್ಟಕರ್ ನಲ್ಲಿ ಸಂಜು ಅಲಿಯಾಸ್ ಸಲೀಂ ಎಂಬಾತನು ಪ್ರೀತಿಯ ನಾಟಕವಾಡಿ ಪಶ್ಚಿಮ ದೆಹಲಿಯ ನಾಂಗ್ಲೋಯ್ ನಿವಾಸಿಯಾಗಿರುವ ಸೋನಿ (20 ವರ್ಷ) ಎಂಬವರನ್ನು ಗರ್ಭಿಣಿಯಾಗುವಂತೆ ಮಾಡಿ ಇದೀಗ ಪ್ರೇಯಸಿ ಮದುವೆಯಾಗುವಂತೆ ಒತ್ತಾಯ ಮಾಡಿದ್ದಕ್ಕೆ ಪ್ರೇಯಸಿಯನ್ನೇ ಹತ್ಯೆಗೈದು ನಿರ್ಜನ ಪ್ರದೇಶದಲ್ಲಿ ಹೂತು ಹಾಕಿರುವ ಭಯಾನಕ ಘಟನೆಯೊಂದು ನಡೆದಿದೆ.
ಪ್ರಕರಣದ ಹಿನ್ನೆಲೆ:
ಸೋನಿ ಇನ್ಸ್ಟಾ ಗ್ರಾಮ್ ನಲ್ಲಿ ರೀಲ್ಸ್ ಗಳನ್ನು ಮಾಡಿ ಅಪ್ ಲೋಡ್ ಮಾಡುತ್ತಿದ್ದಳು. ಅಲ್ಲದೆ ಇನ್ಸ್ಟಾಗ್ರಾಮ್ ನಲ್ಲಿ 6 ಸಾವಿರಕ್ಕೂ ಅಧಿಕ ಫಾಲೋವರ್ಸ್ ಗಳನ್ನು ಹೊಂದಿದ್ದು ಇದನ್ನು ಗಮನಿಸಿದ ಸಲೀಂ ಹೇಗಾದರೂ ಸೋನಿಯ ಸ್ನೇಹ ಬೆಳೆಸಿಕೊಳ್ಳಬೇಕು ಅಂದುಕೊಂಡಿದ್ದ. ಅದರಂತೆ ಆಕೆಗೆ ನಿರಂತರ ಸಂದೇಶಗಳನ್ನು ಕಳುಹಿಸಿ ಬಳಿಕ ಪರಿಚಯವಾದ ಸಲೀಂ ತನ್ನ ಹೆಸರನ್ನು ಸೋನಿ ಬಳಿ ಸಂಜು ಎಂದು ಹೇಳಿಕೊಂಡಿದ್ದ, ಹೀಗೆ ದಿನಕಳೆದಂತೆ ಪರಿಚಯ ಪ್ರೀತಿಗೆ ತಿರುಗಿ ಇದೀಗ ಆಕೆ ಏಳು ತಿಂಗಳ ಗರ್ಭಿಣಿ. ಈ ವಿಚಾರ ಮನೆಯಲ್ಲಿ ಗೊತ್ತಾದರೆ ಎಂದು ಹೆದರಿದ ಸೋನಿ ಸಂಜು ಬಳಿ ಮದುವೆಯಾಗುವಂತೆ ಒತ್ತಾಯಿಸುತ್ತಿದ್ದಳು. ಅದಕ್ಕೆ ಆತ ಮೊದಲು ಮಗುವನ್ನು ತೆಗಿಸು ಆಮೇಲೆ ಮದುವೆ ನೋಡೋಣ ಎಂದು ಹೇಳಿದ್ದನಂತೆ. ಇದರಿಂದ ಗಾಬರಿಗೊಂಡ ಸೋನಿ ಮನೆಯವರಲ್ಲಿ ಸಂಜು ನನ್ನು ಪ್ರೀತಿಸುತ್ತಿದ್ದು ಆತನನ್ನೇ ಮದುವೆಯಾಗುತ್ತೇನೆ ಎಂದು ಹೇಳಿಕೊಂಡಿದ್ದಾಳೆ.ಇದಕ್ಕೆ ಪೋಷಕರು ಒಪ್ಪಲಿಲ್ಲ.


ಇತ್ತ ಪೋಷಕರ ಮಾತಿನಿಂದ ಭಯಗೊಂಡ ಸೋನಿ ಮತ್ತೆ ಸಂಜು ಬಳಿ ಹೋಗಿ ಮದುವೆಯ ಪ್ರಸ್ತಾಪ ಮಾಡಿದ್ದಾಳೆ ಆಗಲೂ ಸಂಜು(ಸಲೀಂ) ಗರ್ಭಪಾತ ಮಾಡಿಸುವಂತೆ ಹೇಳಿಕೊಂಡಿದ್ದಾನೆ. ಆದರೆ ಸೋನಿ ಇದಕ್ಕೆ ಒಪ್ಪದೇ ಇದ್ದಾಗ ಮನೆಗೆ ಬಂದ ಸೋನಿ ಮನೆಯಲ್ಲಿ ಒಂದಿಷ್ಟು ಬಟ್ಟೆಗಳನ್ನು ಹಿಡಿದುಕೊಂಡು ಸಂಜು(ಸಲೀಂ) ಮನೆಗೆ ಬಂದಿದ್ದಾಳೆ. ಆಗಲೂ ಮದುವೆ ವಿಚಾರ ಪ್ರಸ್ತಾಪ ಮಾಡಿದ್ದಾಳೆ. ಅದಕ್ಕೆ ಸಂಜು ತನ್ನ ಇಬ್ಬರು ಸ್ನೇಹಿತರನ್ನು ಕರೆಸಿ ಹರ್ಯಾಣಕ್ಕೆ ತೆರಳುವ ನಿರ್ಧಾರಕ್ಕೆ ಬಂದಿದ್ದಾನೆ. ಅದರಂತೆ ಕಾರಿನಲ್ಲಿ ಹರ್ಯಾಣಕ್ಕೆ ತೆರಳುವ ದಾರಿ ಮಧ್ಯೆ ಸಂಜು (ಸಲೀಂ) ಸೋನಿಯ ಕತ್ತು ಹಿಸುಕಿ ಹತ್ಯೆಗೈದಿದ್ದಾನೆ. ಬಳಿಕ ಹರಿಯಾಣದ ರೋಹ್ಟಕ್ ನ ನಿರ್ಜನ ಪ್ರದೇಶದಲ್ಲಿ ಹೂತು ಹಾಕಿದ್ದಾನೆ.
ಸೋನಿ ಪೋಷಕರು ಮಗಳು ಮನೆಗೆ ಬಂದಿಲ್ಲ ಎಂದು ಸಂಜು (ಸಲೀಂ)ಗೆ ಕರೆ ಮಾಡಿದಾಗ ಆತ ಸಿಟ್ಟಿನಲ್ಲಿ ಸೋನಿ ಪೋಷಕರಿಗೆ ಗದರಿದ್ದಾನೆ, ಇದರಿಂದ ಅನುಮಾನಗೊಂಡ ಪೋಷಕರು ಪೊಲೀಸ್ ಠಾಣೆಯಲ್ಲಿ ಸೋನಿ ನಾಪತ್ತೆಯಾಗಿರುವ ಕುರಿತು ದೂರು ನೀಡಿದ್ದಾರೆ. ಇತ್ತ ತನಿಖೆ ಕೈಗೆತ್ತಿಕೊಂಡ ಪೊಲೀಸರು ಪೋಷಕರ ಬಳಿ ಯಾರ ಮೇಲಾದರೂ ಅನುಮಾನ ಇದೆಯೇ ಎಂದು ಕೇಳಿದಾಗ ಸಂಜು ವಿಚಾರ ಹೇಳಿದ್ದಾರೆ. ಅದರಂತೆ ಸಂಜುನನ್ನು ಕೂಲಂಕುಷವಾಗಿ ವಿಚಾರಣೆ ನಡೆಸಿದ ವೇಳೆ ಪೊಲೀಸರ ಬಳಿ ತನ್ನ ತಪ್ಪು ಒಪ್ಪಿಕೊಂಡಿದ್ದಾನೆ. ಅಷ್ಟು ಮಾತ್ರವಲ್ಲದೆ ತನ್ನ ಹೆಸರು ಸಂಜು ಅಲ್ಲ ಬದಲಿಗೆ ಸಲೀಂ ಎಂದು ಹೇಳಿಕೊಂಡಿದ್ದಾನೆ.
ಸದ್ಯ ಪ್ರಕರಣಕ್ಕೆ ಸಂಬಂಧಿಸಿ ಸಂಜು ಅಲಿಯಾಸ್ ಸಲೀಂ ಮತ್ತು ಇನ್ನೋರ್ವ ಆರೋಪಿಯನ್ನು ಬಂಧಿಸಿದ್ದು ಮೂರನೇ ಆರೋಪಿಗಾಗಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.







