
ಬೆಂಗಳೂರು: ರಾಜ್ಯ ಸರ್ಕಾರವು ಮುಡಾ ಪ್ರಕರಣದಿಂದ ತೀವ್ರ ಮುಜುಗರಕ್ಕೆ ಸಿಲುಕಿದ್ದು ಪ್ರಕರಣದ ತನಿಖೆ ಕೂಡ ತೀವ್ರಗೊಂಡಿದೆ. ವಿರೋಧ ಪಕ್ಷಗಳು ಸಿಎಂ ಸಿದ್ದರಾಮಯ್ಯ ರಾಜೀನಾಮಗೆ ಆಗ್ರಹಿಸುತ್ತಲಿದ್ದು ಈ ಮಧ್ಯೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ಕೆ.ಮರಿಗೌಡ ರಾಜೀನಾಮೆ ನೀಡಿದ್ದಾರೆ.
ಈ ವಿಚಾರವಾಗಿ ಇಂದು ಕಾವೇರಿ ನಿವಾಸದಲ್ಲಿ ಸಿಎಂ ಸಿದ್ದರಾಮಯ್ಯರನ್ನು ಮುಡಾ ಅಧ್ಯಕ್ಷ ಕೆ.ಮರಿಗೌಡ ಭೇಟಿ ಮಾಡಿದ್ದು ಆ ಮೂಲಕ ಮುಡಾ ಅಧ್ಯಕ್ಷ ಸ್ಥಾನಕ್ಕೆ ಮರಿಗೌಡ ರಾಜೀನಾಮೆ ಕೋಡುವುದು ಖಚಿತ ಎನ್ನಲಾಗಿತ್ತು. ಕೆಲ ಕಾಲ ಸಿದ್ದರಾಮಯ್ಯ ಜೊತೆ ಮಾತನಾಡಿರುವ ಮರಿಗೌಡ, ಬಳಿಕ ಸಿಎಂ ಸೂಚನೆ ಮೇರೆಗೆ ರಾಜೀನಾಮೆ ನೀಡಿದ್ದು, ಇಂದು ಅಧಿಕಾರಿಗಳಿಗೆ ರಾಜೀನಾಮೆ ಪತ್ರ ನೀಡಿದ್ದಾರೆ.
ರಾಜೀನಾಮೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮರಿಗೌಡ, ನಗರಾಭಿವೃದ್ಧಿ ಇಲಾಖೆ ಕಾರ್ಯದರ್ಶಿಗೆ ರಾಜೀನಾಮೆ ಕೊಟ್ಟಿದ್ದೇನೆ. ಸಿಎಂ ಅವರು ರಾಜೀನಾಮೆ ನೀಡಲು ಸೂಚನೆ ಕೊಟ್ಟಿದ್ದರು. ಅದಕ್ಕೆ ರಾಜೀನಾಮೆ ಕೊಟ್ಟಿದ್ದೇನೆ. ಮುಡಾ ತನಿಖೆ ನಡೆಯುತ್ತಿದೆ, ತನಿಖೆ ನಡೆಯಲಿ. ಅಕ್ರಮ ಆಗಿದೆಯಾ ಇಲ್ಲ ಅಂತ ನಾನು ಹೇಳುವುದಿಲ್ಲ. ಈಗ ತನಿಖೆ ನಡೆಯುತ್ತಿದೆ, ತನಿಖೆಯಿಂದ ಸತ್ಯ ಹೊರಬರುತ್ತೆ. ನನ್ನ ಆರೋಗ್ಯವು ಸರಿಯಿಲ್ಲ, ಹೀಗಾಗಿ ರಾಜೀನಾಮೆ ಕೊಟ್ಟಿದ್ದೇನೆ. ಮುಡಾ ವಿಚಾರದಲ್ಲೂ ಸಿಎಂ ಸಿದ್ದರಾಮಯ್ಯ ಒತ್ತಡ ಹಾಕಿಲ್ಲ ಎಂದು ಹೇಳಿದ್ದಾರೆ.













