ಹೆಸರಿನ ಹಿನ್ನೆಲೆ ಮತ್ತು ಪೂರ್ವಕಥೆ, ಉಪಾಸನೆ ಮತ್ತು ಮಹತ್ವ
ಪ್ರಜ್ವಲಾ ಶೆಣೈ,ಕಾರ್ಕಳ

ಮನೆಮನಗಳಲ್ಲಿ ನವ ಉಲ್ಲಾಸವನ್ನು ನೀಡಿ ನವ ಚೈತನ್ಯವನ್ನು ತುಂಬುವ ಒಂಭತ್ತು ದಿನಗಳ ಮಹಾ ಹಬ್ಬವೇ ನವರಾತ್ರಿ ಹಬ್ಬ. ಅದರಲ್ಲೂ ನವರಾತ್ರಿಯ ಎಂಟನೇ ದಿನವನ್ನು ದುರ್ಗಾಷ್ಟಮಿ ಎಂದು ಕರೆಯಲಾಗುತ್ತದೆ. ಈ ದಿನದಂದು ದುರ್ಗೆಯ ಶಾಂತ ಹಾಗೂ ಸೌಮ್ಯರೂಪವಾದ ಮಹಾಗೌರಿ ದೇವಿ ಅವತಾರವನ್ನು ಶ್ರದ್ಧಾ ಭಕ್ತಿಯಿಂದ ಪೂಜಿಸಲಾಗುತ್ತದೆ.
ನವರಾತ್ರಿಯ ಎಂಟನೇ ದಿನ ಮಹಾಗೌರಿ ಅವತಾರ
ಶರದೃತುವಿನ ಆಶ್ವೀಜ ಮಾಸದ ಶುಕ್ಲ ಪಕ್ಷದ ಅಷ್ಟಮಿ ತಿಥಿಯಂದು ದುರ್ಗೆಯ ಎಂಟನೇ ಅವತಾರವಾದ ಮಹಾಗೌರಿಯನ್ನು ಆರಾಧಿಸಲಾಗುತ್ತದೆ. ಮಹಾಗೌರಿಯನ್ನು ಆದಿಶಕ್ತಿಯ ಪ್ರತಿರೂಪ ಎನ್ನಲಾಗಿದೆ. ಶಾಂತ ಸ್ವರೂಪಿಯಾದ ಈಕೆ ಗೂಳಿಯ ಮೇಲೆ ವಿರಾಜಮಾನಳಾಗಿರುವುದರಿಂದ ವೃಷಾರೂಢೆ ಎಂದೂ ಕರೆಯಲಾಗುತ್ತದೆ. ಶ್ವೇತ ವಸ್ತ್ರಧಾರಣಿಯಾಗಿರುವ ಗೌರಿ ದೇವಿಯ ಮುಖದಲ್ಲಿ ಚಂದ್ರನ ತೇಜಸ್ಸು ಲಾಸ್ಯವಾಡುತ್ತಿರುತ್ತದೆ. ಮಹಾಗೌರಿಯನ್ನು ನಾಲ್ಕು ಕೈಗಳಿಂದ ಚಿತ್ರಿಸಲಾಗಿದ್ದು ಅವಳು ತನ್ನ ಎರಡು ಕೈಗಳಲ್ಲಿ ತ್ರಿಶೂಲ ,ಡಮರುಗವನ್ನು ಹಿಡಿದಿದ್ದು,ಇತರ ಎರಡು ಕೈಗಳಲ್ಲಿ ವರದಮುದ್ರೆ ಮತ್ತು ಅಭಯ ಮುದ್ರೆಯನ್ನು ಹಿಡಿದಿರುವಳು.
ಮಹಾಗೌರಿ ಹೆಸರಿನ ಹಿನ್ನೆಲೆ ಮತ್ತು ಪೂರ್ವಕಥೆ
ಮಹಾಗೌರಿ ಪದವು ಮಹಾ ಮತ್ತು ಗೌರಿ ಎಂಬ ಎರಡು ಪದಗಳ ಸಮ್ಮಿಲನವಾಗಿದೆ.ಆಕೆಯ ದೇಹ ಹಾಲಿನಂತೆ ಹೆಚ್ಚು ಬಿಳುಪಾಗಿರುವುದರಿಂದ ಮಹಾ ಗೌರಿ ಎಂಬ ಹೆಸರು ಬಂತು. ಗೌರಿ ಎಂದರೆ ಆಕೆಯು ಗಿರಿ ಅಥವಾ ಪರ್ವತಗಳ ಮಗಳೆಂದು ಅರ್ಥ.
ಮಹಾಗೌರಿ ಅವತಾರವು ಪಾರ್ವತಿಯ ಎಂಟನೆಯ ಅವತಾರ. ಪಾರ್ವತಿಯು ಮಹಾಗೌರಿಯಾಗಿ ಹೇಗೆ ಅವತಾರ ಎತ್ತಿದಳು ಎನ್ನುವುದಕ್ಕೆ ಇಲ್ಲೊಂದು ಪೂರ್ವಕಥೆ ಇದೆ. ದಂತಕಥೆಯ ಪ್ರಕಾರ ಪಾರ್ವತಿ ದೇವಿಯು ಮನುಷ್ಯಜನ್ಮ ಎತ್ತಿ ಭೂಮಿಯಲ್ಲಿ ಜನಿಸಿದಳು. ಆದರೆ ನಾರದ ಮಹರ್ಷಿಗಳು ಆಕೆಯ ಪೂರ್ವ ಜನ್ಮದ ವೃತ್ತಾಂತವನ್ನೆಲ್ಲ ಹೇಳಿದಾಗ ತಾನು ಹಿಂದಿನ ಜನ್ಮದಲ್ಲಿ ಪರಶಿವನ ಪತ್ನಿಯಾಗಿದ್ದೆ ಎಂಬ ವಿಚಾರ ಪಾರ್ವತಿಗೆ ತಿಳಿಯಿತು. ಈ ಜನ್ಮದಲ್ಲೂ ಪರಶಿವನನ್ನೇ ವರಿಸಬೇಕು ಎಂದು ಹಠಕ್ಕೆ ಬಿದ್ದಳು. ಕಠಿಣ ತಪಸ್ಸಿನಿಂದ ಮಾತ್ರ ಇದು ಸಾಧ್ಯ ಎಂಬ ನಾರದ ಮುನಿಗಳ ಮಾತಿನಂತೆ ಪಾರ್ವತಿ ಬಿಸಿಲು, ಮಳೆ ,ಗಾಳಿ,ಲೆಕ್ಕಿಸದೆ ಸಾವಿರಾರು ವರ್ಷ ಅಲ್ಪ ಆಹಾರ ಸೇವಿಸಿ ಕಠಿಣ ತಪಸ್ಸು ಮಾಡುವಳು. ದೇವಿಯ ಕಠಿಣ ತಪಸ್ಸಿಗೆ ಮೆಚ್ಚಿ ಶಿವನು
ಪ್ರತ್ಯಕ್ಷನಾಗುವನು. ಬಿಸಿಲಿನಿಂದ ಆಕೆಯ ದೇಹವು ಸಂಪೂರ್ಣ ಕಪ್ಪಾಗಿತ್ತು. ಶಿವನು ಗಂಗೆಯನ್ನು ಹರಿಸಿ ಆಕೆಯ ದೇಹ ಕಾಂತಿಯುತ ಹಾಗೂ ಹೊಳೆಯುವಂತೆ ಮಾಡಿದನು. ಆನಂತರ ಪಾರ್ವತಿಯ ಹೊಸ ರೂಪವನ್ನು ಮಹಾಗೌರಿ ಎಂದು ಕರೆಯಲಾಯಿತು.
ಮಹಾಗೌರಿ ಉಪಾಸನೆ ಮತ್ತು ಮಹತ್ವ
ಯಾ ದೇವಿ ಸರ್ವ ಭೂತೇಷು
ಮಾ ಮಹಾಗೌರಿ ರೂಪೇಣ ಸಂಸ್ಥಿತಾ
ನಮಸ್ತಸೈ ನಮಸ್ತಸೈ ನಮಸ್ತಸೈ ನಮೋ ನಮಃ
ಎಂಬ ಮಂತ್ರದಿಂದ ದೇವಿ ಗೌರಿಯನ್ನು ಪ್ರಾರ್ಥಿಸಲಾಗುತ್ತದೆ . ಗಣಪತಿಯ ಪ್ರಾರ್ಥನೆಯೊಂದಿಗೆ ಪೂಜೆ ಆರಂಭಿಸಿ. ಷೋಡಶೋಪಚಾರಗಳಿಂದ ದೇವಿಯನ್ನು ಸಂತೃಪ್ತ ಗೊಳಿಸಲಾಗುತ್ತದೆ. ಯಾರು ಮಹಾಗೌರಿಯನ್ನು ಪೂಜಿಸುತ್ತಾರೋ ಅವರು ಸಕಲ ಸುಖ ಸಂಪತ್ತನ್ನು ಪಡೆಯುವರು ಎಂದು ಪುರಾಣಗಳಲ್ಲಿ ಉಲ್ಲೇಖಿಸಲಾಗಿದೆ. ಕೆಲವೆಡೆ ಒಂಬತ್ತು ಸಣ್ಣ ಮಡಿಕೆಗಳನ್ನು ಸ್ಥಾಪಿಸಿ ದೇವಿಯ ಒಂಭತ್ತು ಶಕ್ತಿಯನ್ನು ಆವಾಹನೆ ಮಾಡಿ ಒಂಭತ್ತು ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಕನ್ಯಾ ಪೂಜೆಯನ್ನು ಸಹ ಮಾಡಲಾಗುತ್ತದೆ. ಕುಮಾರಿ ಪೂಜೆ ಮಾಡಲು ಒಂಭತ್ತು ಅವಿವಾಹಿತ ಯುವತಿಯರನ್ನು ಮನೆಗೆ ಸ್ವಾಗತಿಸುವರು. ಅವರನ್ನು ದುರ್ಗೆಯ ದೈವಿಕ ಅಭಿವ್ಯಕ್ತಿ ಎಂದು ಪರಿಗಣಿಸಲಾಗುತ್ತದೆ.ಕನ್ನಿಕಾ ಪೂಜೆ ಶ್ರೇಷ್ಠ ಎನ್ನಲಾಗಿದೆ.ಮಹಾ ಗೌರಿ ಶುದ್ಧತೆ ಮತ್ತು ಪ್ರಶಾಂತತೆಯನ್ನು ಸೂಚಿಸುವ ದೇವತೆ. ಈಕೆಯ ಪೂಜೆಯಿಂದ ಅದೃಷ್ಟವು ಪ್ರಾಪ್ತಿಯಾಗುತ್ತದೆ ಎನ್ನುವ ನಂಬಿಕೆ ಇದೆ. ಮನಸ್ಸಿನಲ್ಲಿರುವ ಗೊಂದಲ ನಿವಾರಣೆ ಮಾಡಿ ಯಶಸ್ವಿ ಜೀವನ ಸಾಗಿಸಲು ಮಹಾಗೌರಿ ನೆರವಾಗುವಳು. ತೆಂಗಿನಕಾಯಿ ಮತ್ತು ತೆಂಗಿನಕಾಯಿಯಿಂದ ಮಾಡಿದ ಸಿಹಿಯನ್ನು ದೇವಿಗೆ ನೈವೇದ್ಯ ರೂಪದಲ್ಲಿ ಅರ್ಪಿಸಲಾಗುತ್ತದೆ. ಮಹಾಗೌರಿಯನ್ನು ಪೂಜಿಸುವುದರಿಂದ ಭಕ್ತರ ಬದುಕಿನಲ್ಲಿ ಬರುವ ಎಲ್ಲ ಸಂಕಷ್ಟಗಳನ್ನು ತಾಯಿ ಪರಿಹರಿಸಿ ದೂರ ಮಾಡುತ್ತಾಳೆ ಎನ್ನುವ ನಂಬಿಕೆ ಇದೆ.
ಸರ್ವೇ ಜನಾಃ ಸುಖಿನೋ ಭವಂತು













