
ಮೂಡಾ ಪ್ರಕರಣ ಸಂಬಂಧಿಸಿದಂತೆ, ಪತ್ನಿ ಸೈಟ್ ವಾಪಸ್ ನೀಡಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ , ನನ್ನ ಹೆಂಡತಿ ಸ್ವತಂತ್ರವಾಗಿ ಸೈಟ್ ವಾಪಸ್ ನೀಡುವ ತೀರ್ಮಾನ ಕೈಗೊಂಡಿದ್ದಾರೆ. ಅವರ ಸಹೋದರ ನೀಡಿದ ಜಮೀನು ಅದು. ಆದರೆ ಈಗ ವಿವಾದದಿಂದ ಮನನೊಂದು ನನಗೆ ರಾಜಕೀಯ ತೇಜೋವಧೆ ಆಗುತ್ತಿದೆ ಹಾಗಾಗಿ ಸೈಟ್ ಬೇಡವೇ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಸಿಎಂ ತಿಳಿಸಿದ್ದಾರೆ.
ಮುಡಾ ಕೇಸ್ ನಲ್ಲಿ ನನ್ನ ಪಾತ್ರ ಏನು ಇಲ್ಲ. ಕಾನೂನು ಏನಾದರೂ ಕ್ರಮ ಕೈಗೊಳ್ಳಲಿ. ಯಾವ ಆಧಾರದಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ ಎಂದು ತಿಳಿದಿಲ್ಲ. ಈ ಪ್ರಕರಣದಲ್ಲಿ ಹಣಕಾಸು ವರ್ಗಾವಣೆ ಆಗಿಲ್ಲ. ಬಿಜೆಪಿಗರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು. ತಪ್ಪೇ ಮಾಡಿಲ್ಲ ಎಂದಾದರೆ ರಾಜೀನಾಮೆ ಕೊಡುವ ಪ್ರಶ್ನೆ ಎಲ್ಲಿದೆ ಎಂದಿದ್ದಾರೆ. ನಾನು ಆತ್ಮಸಾಕ್ಷಿಯಾಗಿ ನಡೆದುಕೊಂಡಿದ್ದೇನೆ. ಆದ್ದರಿಂದ ರಾಜೀನಾಮೆ ಕೊಡುವ ಪ್ರಶ್ನೆಯೇ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.













