
ನವದೆಹಲಿ: ಇಂದು ದೆಹಲಿ ನೂತನ ಸಿಎಂ ಆಗಿ ಆಮ್ ಆದ್ಮಿ ಪಕ್ಷದ ಅತಿಶಿ ಸಿಂಗ್ ಇಂದು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಲೆಫ್ಟಿನೆಂಟ್ ಗವರ್ನರ್ ನಿವಾಸವಾದ ರಾಜಭವನದಲ್ಲಿ ಸೆ.21ರಂದು ಶನಿವಾರ ಸಂಜೆ 4:30ಕ್ಕೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಅತಿಶಿಯವರೊಂದಿಗೆ ಆಮ್ ಆದ್ಮಿ ಪಕ್ಷದ ಐವರು ಶಾಸಕರು ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಬಿಜೆಪಿಯ ಸುಷ್ಮಾ ಸ್ವರಾಜ್ ಕಾಂಗ್ರೆಸ್ನ ಶೈಲಾ ದೀಕ್ಷಿತ್ ಬಳಿಕ ಎಎಪಿಯ ಅತಿಶಿ ದೆಹಲಿಯ ಮೂರನೇ ಮಹಿಳಾ ಮುಖ್ಯಮಂತ್ರಿ ಹಾಗೂ ದೆಹಲಿಯ ಅತಿ ಕಿರಿಯ ಮುಖ್ಯಮಂತ್ರಿಯಾಗಲಿದ್ದಾರೆ.
ಹಿಂದಿನ ಅರವಿಂದ್ ಕೇಜ್ರಿವಾಲ್ ಸರ್ಕಾರದಲ್ಲಿ ಸಚಿವರಾಗಿದ್ದ ಎಎಪಿ ನಾಯಕರಾದ ಗೋಪಾಲ್ ರಾಯ್, ಕೈಲಾಶ್ ಗೆಹ್ಲೋಟ್, ಸೌರಭ್ ಭಾರದ್ವಾಜ್ ಮತ್ತು ಇಮ್ರಾನ್ ಹುಸೇನ್ ಅವರು ಸಚಿವರಾಗಿ ಮುಂದುವರೆಯಲಿದ್ದು, ಪಕ್ಷದ ಇಬ್ಬರು ಶಾಸಕರನ್ನು ಸಹ ಹೊಸ ಕ್ಯಾಬಿನೆಟ್ಗೆ ಸೇರಿಸಿಕೊಳ್ಳಲಾಗುವುದು. ಶಾಸಕ ಮುಖೇಶ್ ಅಹ್ಲಾವತ್ ಅವರು ಹೊಸದಾಗಿ ಅತಿಶಿ ಅವರ ಸಂಪುಟದ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅರವಿಂದ್ ಕೇಜ್ರಿವಾಲ್ ಮಂಗಳವಾರ ಹುದ್ದೆಗೆ ರಾಜೀನಾಮೆ ನೀಡಿದ್ದು ಇಂದು ಅತಿಶಿ ಅಧಿಕಾರ ಸ್ವೀಕರಿಸಲಿದ್ದಾರೆ.































































































































