
ರಾಘವನಿಗೆ ಮಗಳೆಂದರೆ ಪಂಚಪ್ರಾಣ. ಯಶೋಧಳಿಗು ಮಗಳು ದಿನವೆಲ್ಲಾ ಕಣ್ಣ ಸುತ್ತಲೂ ಕಾಣುವಂತಿರಬೇಕು.ಹೊಲಗದ್ದೆಗಳ ಕೆಲಸದೊಳಗೆ ಸದಾ ಉತ್ಸಾಹದಿಂದ ಮುಂದುವರಿಯುತ್ತಿರುವ ಕುಟುಂಬವನ್ನು ನಗುವಿನ ಸಂಭ್ರಮದಲ್ಲಿ ದಿನ ದಿನವೂ ತೇಲಾಡಿಸುತ್ತಿದ್ದವಳು ಅವರಿಬ್ಬರ ಮುದ್ದಿನ ಮಗಳು ಮಂಗಳ.ಆಕೆಗಿನ್ನೂ ಹದಿನೆಂಟರ ಹರೆಯ ಊರಿನಲ್ಲೆ ಎಲ್ಲರ ಕಣ್ಣನ್ನೆ ಕುಕ್ಕಿಸುವಂತ ಅಪ್ಸರೆ ಅವಳು.ಆದರೆ ಓದು ತಲೆಗೆ ಹತ್ತದ ಕಾರಣ ಅರ್ಧಕ್ಕೆ ನಿಲ್ಲಿಸಿದ ಮಂಗಳ ಮನೆಗದ್ದೆ ಕೆಲಸದಲ್ಲೂ ಎತ್ತಿದ ಕೈ…
ರಾಘವ ಎಂದಿನಂತೆ ಬೆಳಿಗ್ಗೆ ಬೇಗ ಎದ್ದವನೆ ಗದ್ದೆಯ ಕೆಲಸಕ್ಕೆ ಹೊರಟೇಬಿಟ್ಟ.ನಂದಿನಿಯ ಅಂಬಾ ಅನ್ನುವ ಕರೆ ಕೇಳುತ್ತಿದ್ದಂತೆಯೆ ಮಂಗಳಳ ನಿದ್ದೆ ದೂರವಾಗಿ ಎದ್ದವಳೆ ಹಾಲು ಕರೆದು ತನ್ನ ತಾಯಿಯ ಜೊತೆ ಬೆಳಗ್ಗಿನ ಎಲ್ಲಾ ಕೆಲಸಕ್ಕೂ ಬೇಗನೆ ಹಾಜರಾಗುತ್ತಿದ್ದಳು.ಊರಿಗೂರೆ ಮಂಗಳಳ ಗುಣನಡತೆಯನ್ನು ಕಂಡು ಕೊಂಡಾಡುತ್ತಿತ್ತು.ಅದು ಹತ್ತರ ಸಮಯ ಮಂಗಳ ತನ್ನ ತಂದೆಗೆ ಚಾ ತಿಂಡಿ ತೆಗೆದುಕೊಂಡು ದಾರಿಯಲ್ಲಿ ಬರುತ್ತಿದ್ದಳು.ಕಾಲತುದಿಗೆ ತಾಗುತ್ತಿರುವ ನೀಲವಾದ ಕೂದಲು ಮುದ್ದಾದ ಮುಖ.ಹಳ್ಳಿಯಲ್ಲಿ ಹುಟ್ಟಿದರೂ ಸೌಂದರ್ಯದಲ್ಲಿ ಯಾರನ್ನೂ ಮೀರಿಸುವಂತಿದ್ದಳು ಮಂಗಳ…
ಅದೇ ಊರಿನಲ್ಲಿದ್ದ ಜಮಿನ್ದಾರ್ ಸುಂದರರಾಯರ ಒಬ್ಬಳೆ ಮಗಳು ಸೌಂಧರ್ಯ.ಆಸ್ತಿ ಅಂತಸ್ತಿನಲಿ ಸುಂದರರಾಯರನ್ನು ಮೀರಿಸುವವರು ಆ ಊರಿನಲ್ಲಿ ಯಾರು ಇರಲಿಲ್ಲ.ಹೆಸರು ಸೌಂಧರ್ಯವಾಗಿದ್ದರು ಹೆಸರಿಗೆ ತಕ್ಕಷ್ಟು ಸುಂದರಿಯಾಗಿರಲಿಲ್ಲ ಅವಳು.ಸುಂದರರಾಯರ ಒಬ್ಬಳೆ ಮಗಳನ್ನು ನೋಡಲು ಪೇಟೆಯಿಂದ ಗಂಡುಬರುವ ದಿನವದು..
ಮಂಗಳ ನಡೆಯುತ್ತಾ ಹೊಲದಕಡೆ ಮುಂದುವರಿಯುತ್ತಿದ್ದಳು.ಆ ವರೆಗೂ ಆ ಊರಿನಲ್ಲೆ ಕಾಣದ ಅಪರೂಪದ ಕಾರೊಂದು ಆ ದಾರಿಯಾಗಿ ಬರುತ್ತಿತ್ತು…….
(ಮುಂದುವರಿಯುವುದು)













