
ಮಂಡ್ಯ: ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ನಾಗಮಂಗಲದಲ್ಲಿ ನಡೆದ ಕೋಮು ಗಲಭೆಯಲ್ಲಿ ಕಿಡಿಗೇಡಿಗಳು ಹಚ್ಚಿದ ಬೆಂಕಿ ಮತ್ತು ಪೆಟ್ರೋಲ್ ಬಾಂಬ್ನಿಂದ ಹಲವು ಅಂಗಡಿಗಳು, ಸರಕುಗಳು ಸುಟ್ಟು ಭಸ್ಮವಾಗಿ ಒಟ್ಟು 2.66 ಕೋಟಿ ಮೌಲ್ಯದ ಆಸ್ತಿ ನಾಶವಾಗಿದೆ.
ಪಟ್ಟಣದಾದ್ಯಂತ 26 ಅಂಗಡಿಗಳಿಗೆ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದು 1 ಕೋಟಿ 47 ಲಕ್ಷ ಮೌಲ್ಯದ ಕಟ್ಟಡಗಳು ಸುಟ್ಟು ಭಸ್ಮವಾಗಿವೆ. 1 ಕೋಟಿ 18 ಲಕ್ಷ ಮೌಲ್ಯದ ಸರಕು ಬೆಂಕಿ ಕೆನ್ನಾಲಿಗೆಯಲ್ಲಿ ಸುಟ್ಟು ಕರಕಲಾಗಿದ್ದು ಹಾನಿಗೊಳಗಾದ ಸಂತ್ರಸ್ತರಿಗೆ ಸರ್ಕಾರ ಪರಿಹಾರ ನೀಡುವ ಭರವಸೆ ನೀಡಿದೆ. ವರದಿ ತಯಾರು ಮಾಡಲು ಎಸಿ ನೇತೃತ್ವದಲ್ಲಿ ಏಳು ಅಧಿಕಾರ ತಂಡ ರಚನೆ ಮಾಡಲಾಗಿದ್ದು ಇದೀಗ ನಷ್ಟದ ಮೌಲ್ಯಮಾಪನ ಮಾಡಿ ವರದಿ ಸಿದ್ದಪಡಿಸಿ, ಸರ್ಕಾರಕ್ಕೆ ಸಲ್ಲಿಕೆ ಮಾಡಿದ್ದೇವೆ ಎಂದು ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ ಮಾಹಿತಿ ನೀಡಿದರು. ದುಷ್ಕರ್ಮಿಗಳ ಕ್ರೌರ್ಯದಿಂದ, ವ್ಯಾಪಾರಸ್ಥರ ಬದುಕು ಬೀದಿ ಪಾಲಾಗಿದೆ.













