
ನವದೆಹಲಿ: ಕೇಂದ್ರದ ಭಾರಿ ಉದ್ದಿಮೆಗಳ ಸಚಿವ ಎಚ್.ಡಿ.ಕುಮಾರಸ್ವಾಮಿ ವಾಹನಗಳ ಬಿಡಿಭಾಗಗಳ ಉತ್ಪಾದಕರ ಸಂಘದ ವಾರ್ಷಿಕ ಸಮ್ಮೇಳನದಲ್ಲಿ ಪಾಲ್ಗೊಂಡು ಮಾತನಾಡಿದ್ದು ಈ ವೇಳೆ ಎಲೆಕ್ಟ್ರಿಕ್ ವಾಹನಗಳಿಗೆ ನೀಡುವ ಸಬ್ಸಿಡಿಯನ್ನು ಇನ್ನೂ ಒಂದೆರಡು ತಿಂಗಳ ಕಾಲ ಮುಂದುವರೆಸಲಾಗುತ್ತದೆ ಎಂದು ಹೇಳಿದ್ದಾರೆ.
ಎಲೆಕ್ಟ್ರಿಕ್ ಸ್ಕೂಟರ್, ಎಲೆಕ್ಟ್ರಿಕ್ ಆಟೋ ಹಾಗೂ ಎಲೆಕ್ಟ್ರಿಕ್ ವಾಣಿಜ್ಯ ಆಟೋಗಳಿಗೆ ಕೇಂದ್ರ ಸರ್ಕಾರವು ಇಎಂಪಿಎಸ್ ಎಂಬ ಯೋಜನೆ ಅಡಿಯಲ್ಲಿ ಕ್ರಮವಾಗಿ 10,000 ರೂ.25,000 ರೂ. ಹಾಗೂ 50,000 ರೂ. ಸಬ್ಸಿಡಿ ನೀಡುತ್ತದೆ. ಅದು ಸೆ.30ಕ್ಕೆ ಅಂತ್ಯಗೊಳ್ಳಬೇಕಿತ್ತು. ಆದರೆ ಅದನ್ನು ಫೇಮ್ 3 ಯೋಜನೆಯ ರೂಪರೇಷೆ ಅಂತಿಮಗೊಂಡು ಜಾರಿಗೆ ಬರುವವರೆಗೆ ಅಂದರೆ ಬಹುತೇಕ ಒಂದೆರಡು ತಿಂಗಳ ಕಾಲ ಮುಂದುವರೆಯಲಿದೆ ಎಂದು ಕುಮಾರಸ್ವಾಮಿ ತಿಳಿಸಿದ್ದಾರೆ.
ಹೀಗಾಗಿ ಈ ತಿಂಗಳು ಅಂತ್ಯಗೊಳ್ಳಬೇಕಿದ್ದ ಸಬ್ಸಿಡಿ ಯೋಜನೆ ಮುಂದುವರೆಯಲಿದ್ದು, ಎಲೆಕ್ಟ್ರಿಕ್ ವಾಹನಗಳ ಮಾರಾಟಗಾರರು ಹಾಗೂ ಗ್ರಾಹಕರು ನಿರಾಳರಾಗಿದ್ದಾರೆ.













