
ನವದೆಹಲಿ: 9ನೇ ತರಗತಿಯಿಂದ ಮೂರನೇ ಭಾಷೆಯನ್ನು ಪರಿಚಯಿಸುವ ಪ್ರಸ್ತಾವನೆ ಕುರಿತು ಸುಪ್ರೀಂ ಕೋರ್ಟ್ ಗುರುವಾರ ಕಳವಳ ವ್ಯಕ್ತಪಡಿಸಿದೆ. ಈ ಹಂತದಲ್ಲಿ ಹೊಸ ಭಾಷೆ ಸೇರಿಸುವುದು ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡವನ್ನು ಹೆಚ್ಚಿಸಬಹುದು ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಹಾಗೂ ಆರ್. ಮಹಾದೇವನ್ ಅವರಿದ್ದ ಪೀಠ, ಹೊಸ ಭಾಷೆಯನ್ನು ಪರಿಚಯಿಸಬೇಕಾದರೆ 5 ಅಥವಾ 6ನೇ ತರಗತಿಯಿಂದಲೇ ಆರಂಭಿಸಬೇಕು ಎಂದು ತಿಳಿಸಿದೆ. 9ನೇ ತರಗತಿಯಲ್ಲಿ ಮೂರನೇ ಭಾಷೆ ಸೇರಿಸುವುದನ್ನು ತಪ್ಪಿಸುವಂತೆ ಕೇಂದ್ರ ಸರ್ಕಾರಕ್ಕೆ ಮೌಖಿಕ ಸಲಹೆ ನೀಡಿದೆ.
“9ನೇ ತರಗತಿ ಈಗಾಗಲೇ ವಿದ್ಯಾರ್ಥಿಗಳಿಗೆ ಒತ್ತಡದ ಹಂತವಾಗಿದೆ. ಈ ಸಂದರ್ಭದಲ್ಲಿ ಹೊಸ ಭಾಷೆ ಸೇರಿಸುವುದು ಸೂಕ್ತವಲ್ಲ. ಭಾಷೆ ಕಲಿಸಲು ಬಯಸಿದರೆ ಕೆಳ ತರಗತಿಗಳಲ್ಲೇ ಆರಂಭಿಸಿ,” ಎಂದು ನ್ಯಾಯಮೂರ್ತಿ ನಾಗರತ್ನ ಕೇಂದ್ರದ ಪರ ವಕೀಲರಿಗೆ ತಿಳಿಸಿದರು.
ತಮಿಳುನಾಡಿನ ಪ್ರತಿ ಜಿಲ್ಲೆಯಲ್ಲಿ ಜವಾಹರ್ ನವೋದಯ ವಿದ್ಯಾಲಯ (ಜೆಎನ್‌ವಿ) ಸ್ಥಾಪನೆಗೆ ಸಂಬಂಧಿಸಿದ ಮದ್ರಾಸ್ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತವಾಯಿತು.
ತ್ರಿಭಾಷಾ ನೀತಿಯನ್ನು ವಿರೋಧಿಸುತ್ತಿರುವ ತಮಿಳುನಾಡು, ಜೆಎನ್‌ವಿಗಳ ಸ್ಥಾಪನೆಗೂ ಆಕ್ಷೇಪ ವ್ಯಕ್ತಪಡಿಸುತ್ತಿದೆ. ಈ ಅರ್ಜಿಯು ನೇರವಾಗಿ ಸಿಬಿಎಸ್‌ಇ ಭಾಷಾ ನೀತಿಗೆ ಸಂಬಂಧಿಸದಿದ್ದರೂ, ಶಾಲೆಗಳಲ್ಲಿ ಮೂರನೇ ಭಾಷೆ ಪರಿಚಯಿಸುವ ಸೂಕ್ತ ಹಂತದ ಕುರಿತು ಸುಪ್ರೀಂ ಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.















































