
ಬೆಂಗಳೂರು: ದೇಶದಾದ್ಯಂತ ಇಂದು 77ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದೇಶದ ಜನತೆಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯುತ್ತಿರುವ ವೈಭವಯುತ ಗಣರಾಜ್ಯೋತ್ಸವ ಪೆರೇಡ್‌ಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಅಧ್ಯಕ್ಷತೆ ವಹಿಸಿದ್ದು, ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟಾ ಹಾಗೂ ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯೆನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದಾರೆ.
ಪ್ರಧಾನಿ ಮೋದಿ ಅವರು ತಮ್ಮ X ಖಾತೆಯ ಮೂಲಕ ಗಣರಾಜ್ಯೋತ್ಸವವು ದೇಶದ ಗೌರವ ಮತ್ತು ಹೆಮ್ಮೆಯ ಸಂಕೇತವಾಗಿದ್ದು, ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಪ್ರಭುತ್ವ ಮೌಲ್ಯಗಳನ್ನು ಮತ್ತಷ್ಟು ಬಲಪಡಿಸೋಣ ಎಂದು ಸಂದೇಶ ನೀಡಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ನಾಗರಿಕರ ಜೀವನ ಸಂತೋಷ, ಶಾಂತಿ ಮತ್ತು ಸಾಮರಸ್ಯದಿಂದ ತುಂಬಿರಲಿ ಎಂದು ಹಾರೈಸಿದರು.
ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಾಡಿನ ಜನತೆಗೆ ಹಾರ್ದಿಕ ಶುಭಾಶಯಗಳನ್ನು ಸಲ್ಲಿಸಿ, ಸಂವಿಧಾನದ ಮಹತ್ವ ಹಾಗೂ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ನ್ಯಾಯದ ಆಶಯಗಳನ್ನು ಸ್ಮರಿಸಿದರು. ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವು ಸಮಾನ ಸಮಾಜ ನಿರ್ಮಾಣಕ್ಕೆ ಮಾರ್ಗದರ್ಶಿಯಾಗಿದೆ ಎಂದು ಅವರು ಹೇಳಿದರು.



















