
ನವದೆಹಲಿ: ಸೋಮವಾರ ಆಡಳಿತಾರೂಢ ಎನ್‌ಡಿಎ ಸರ್ಕಾರದ ಮಹತ್ವಾಕಾಂಕ್ಷೆಯ ‘ಒಂದು ದೇಶ ಒಂದು ಚುನಾವಣೆ’ ಕುರಿತ ಸಂವಿಧಾನ ತಿದ್ದುಪಡಿ ಮಸೂದೆ ಸಂಸತ್ತಿನಲ್ಲಿ ಮಂಡನೆಗೆ ಸಿದ್ಧತೆಗಳು ನಡೆದಿದ್ದು 5 ವರ್ಷಕ್ಕೂ ಮುನ್ನವೇ ಚುನಾಯಿತ ಸರ್ಕಾರ ಬಿದ್ದರೆ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ ಎಂಬ ಮಹತ್ವದ ಅಂಶಗಳು ಇದರಲ್ಲಿದೆ.
5 ವರ್ಷಕ್ಕೂ ಮೊದಲೇ ಸರ್ಕಾರ ಬಿದ್ದರೆ ಸರ್ಕಾರ ಅಪೂರ್ಣವಾಗುತ್ತದೆ. ಉಳಿದ ಅವಧಿಗೆ ಸರ್ಕಾರ ಇಲ್ಲದೇ ರಾಷ್ಟ್ರಪತಿ ಆಳ್ವಿಕೆ ಹೇರಿ ಆಡಳಿತ ನಡೆಸುತ್ತೀರಾ ಎಂಬ ವಿಪಕ್ಷಗಳ ಪ್ರಶ್ನೆಗೆ ಹೀಗೆ ಉತ್ತರಿಸಿದೆ.
ದೇಶದಲ್ಲಿ ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲದಲ್ಲಿ ಚುನಾವಣೆ ನಡೆಸಲು ಅವಕಾಶ ನೀಡುವುದು ಅಗತ್ಯ. ಈ ಮೂಲಕ ಸರ್ಕಾರದ ಬೊಕ್ಕಸಕ್ಕೆ ಪದೇ ಪದೇ ಚುನಾವಣೆ ನಡೆಯುವುದರಿಂದ ಆಗುವ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕಬಹುದು ಎಂದು ಮಸೂದೆ ಹೇಳಿದೆ. ಈ ವಿಧೇಯಕವು ಸಂವಿಧಾನಕ್ಕೆ ಹೊಸ ಅನುಚ್ಛೇದ ಸೇರ್ಪಡೆಗೊಳಿಸುವುದಲ್ಲದೆ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲದಲ್ಲಿ ಚುನಾವಣೆ ನಡೆಸುವ ರೀತಿಯಲ್ಲಿ ಮೂರು ಅನುಚ್ಛೇದಗಳ ತಿದ್ದುಪಡಿಗೆ ಅವಕಾಶ ಮಾಡಿಕೊಡುತ್ತದೆ. ಒಂದು ವೇಳೆ ಅವಧಿಗೆ ಮುನ್ನವೇ ಸರ್ಕಾರ ಪತನಗೊಂಡರೆ ಅಂಥ ಪರಿಸ್ಥಿತಿಯಲ್ಲಿ 5 ವರ್ಷಗಳ ಅಧಿಕಾರಾವಧಿಯಲ್ಲಿ ಬಾಕಿ ಉಳಿದ ಅವಧಿಗಷ್ಟೇ ಚುನಾವಣೆ ನಡೆಯಲಿದೆ. ಅಂದರೆ (ಉದಾಹರಣೆಗೆ) ಸರ್ಕಾರ ಮೂರೇ ವರ್ಷಕ್ಕೆ ಪತನಗೊಂಡರೆ ಮುಂದಿನ ಎರಡು ವರ್ಷಕ್ಕಷ್ಟೇ ಮರು ಚುನಾವಣೆ ನಡೆಯಲಿದೆ. ಹೊಸ ಸರ್ಕಾರ 3 ವರ್ಷ ಪೂರೈಸಿದ ನಂತರ ಮತ್ತೆ ವಿಧಾನಸಭೆ/ಲೋಕಸಭೆ ಚುನಾವಣೆ ಒಟ್ಟಿಗೇ ನಡೆಯಲಿವೆ.