
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್ ಕೆಪಿಸಿಸಿ ಭಾರತ ಜೋಡೋ ಭವನದಲ್ಲಿ ಶನಿವಾರ ನಡೆದ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ್ದು ಈ ವೇಳೆ ಮಹಿಳಾ ಮೀಸಲಾತಿ ಜಾರಿಯಾದರೆ ಮುಂಬರುವ 2028ರ ವಿಧಾನಸಭಾ ಚುನಾವಣೆಯಲ್ಲಿ 224 ಕ್ಷೇತ್ರಗಳ ಪೈಕಿ 74 ಕ್ಷೇತ್ರಗಳಲ್ಲಿ ಮಹಿಳೆಯರೇ ಅಭ್ಯರ್ಥಿಗಳಾಗುತ್ತಾರೆ. ಹೀಗಾಗಿ ಮಹಿಳಾ ಕಾಂಗ್ರೆಸ್ ವತಿಯಿಂದ ಮಹಿಳಾ ಅಭ್ಯರ್ಥಿಗಳನ್ನು ತಯಾರು ಮಾಡಬೇಕು ಎಂದು ಕರೆ ನೀಡಿದ್ದಾರೆ.
ಅಂತಾರಾಷ್ಟ್ರೀಯ ಮಹಿಳಾ ದಿನದ ಶುಭಾಶಯ ಕೋರಿ ಮಾತನಾಡಿದ ಅವರು ನೆಹರೂ ಅವರು ಒಂದು ಮಾತು ಹೇಳಿದ್ದಾರೆ. ಜನರನ್ನು ಜಾಗೃತರನ್ನಾಗಿ ಮಾಡಬೇಕಾದರೆ ಮಹಿಳೆಯರು ಜಾಗೃತರಾಗಿರಬೇಕು. ಆಕೆ ನಡೆದರೆ ಕುಟುಂಬ ನಡೆದಂತೆ, ಕುಟುಂಬ ನಡೆದರೆ ಗ್ರಾಮ ನಡೆದಂತೆ, ಸಮಾಜ ಹಾಗೂ ದೇಶ ನಡೆಯುತ್ತದೆ ಎಂದು ಹೇಳಿದ್ದಾರೆ.
ಮಹಿಳೆಯರಿಗಾಗಿ ನಮ್ಮ ಪಕ್ಷ ಇಷ್ಟು ಕಾರ್ಯಕ್ರಮ ನೀಡಿದೆ. ಈಗ ನೀವೆಲ್ಲರೂ ಸೇರಿ ನಮ್ಮ ಪಕ್ಷಕ್ಕೆ ಏನು ಮಾಡುತ್ತೀರಿ ಎಂದು ಅಧ್ಯಕ್ಷನಾಗಿ ಕೇಳುತ್ತೇನೆ. ನೀವು ಕಾಂಗ್ರೆಸ್ ಪಕ್ಷದ ಸದಸ್ಯರಾಗಿ ಪಕ್ಷಕ್ಕೆ ಏನು ಕೊಡುಗೆ ನೀಡುತ್ತೀರಿ ಎಂಬುದು ಮುಖ್ಯ. ಸೌಮ್ಯ ರೆಡ್ಡಿ ಸೇರಿದಂತೆ ನಾನು ಎಲ್ಲರಿಗೂ ಹೇಳುವುದು ಒಂದೇ. ರಾಣಿ ಸತೀಶ್ ಅವರ ಕಾಲದಿಂದ ಇಲ್ಲಿಯವರೆಗೂ ಮಹಿಳಾ ಕಾಂಗ್ರೆಸ್ ಬಗ್ಗೆ ನನಗೆ ತೃಪ್ತಿ ಇಲ್ಲ. ನೀವು ನಿಮ್ಮ ಒತ್ತಡಗಳ ಮಧ್ಯೆ ಪಕ್ಷ ಸಂಘಟನೆಗೆ ನನ್ನ ನಿರೀಕ್ಷೆ ಮಟ್ಟದಲ್ಲಿ ಕೆಲಸ ಮಾಡಲು ಆಗಿಲ್ಲ. ಇದಕ್ಕಾಗಿ ನನಗೆ ಬೇಸರವಿಲ್ಲ. ಇಂದು ಕೂಡ ಅವಕಾಶಗಳು ನಿಮ್ಮ ಮನೆ ಬಾಗಿಲ ಮುಂದಿದೆ. ಪ್ರತಿ ಗೃಹಲಕ್ಷ್ಮಿ ಫಲಾನುಭವಿಗಳಿಂದ 50 ಜನ ಕಾಂಗ್ರೆಸ್ ಸದಸ್ಯರನ್ನಾಗಿ ಮಾಡಿಸಿ ಸಾಕು. ಪ್ರತಿ ವಿಧಾನಸಭೆಯಲ್ಲಿ ಕ್ಷೇತ್ರ ಅಥವಾ ತಾಲೂಕು ಮಟ್ಟದಲ್ಲಿ ಯಾರು ಅತಿ ಹೆಚ್ಚು ಮಹಿಳೆಯರನ್ನು ಪಕ್ಷದ ಸದಸ್ಯೆಯರನ್ನಾಗಿ ಮಾಡುತ್ತೀರೋ ಅವರಿಗೆ ತಾಲೂಕು ಮಟ್ಟದಲ್ಲಾದರೂ ನಿರ್ದೇಶಕ ಹುದ್ದೆ ನೀಡಲಾಗುವುದು. ಇದು ನನ್ನ ವಾಗ್ದಾನ, ಬದ್ಧತೆ ಎಂದು ಹೇಳಿದರು.