
ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ರಾಜ್ಯ ಪಠ್ಯಕ್ರಮದ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ ಪ್ರೌಢಶಾಲೆ ಗಳಿಗೆ 2025-26 ನೇ ಸಾಲಿನ ಶೈಕ್ಷಣಿಕ ವರ್ಷದ ಅವಧಿ ಮತ್ತು ರಜಾದಿನಗಳ ವೇಳಾಪಟ್ಟಿಯನ್ನು ಬಿಡುಗಡೆಗೊಳಿಸಿದೆ.
ಮೇ 29 ರಿಂದ ಶಾಲೆಗಳು ಪುನರಾರಂಭಗೊಳ್ಳಲಿದ್ದು ಸೆಪ್ಟೆಂಬರ್ 19 ರವರೆಗೆ ಮೊದಲ ಅವಧಿ ಹಾಗೂ ಅ. 8 ರಿಂದ 2026ರ ಏ.10ರವರೆಗೆ ಎರಡನೇ ಅವಧಿಯಲ್ಲಿ ಶಾಲೆಗಳು ಕರ್ತವ್ಯ ನಿರ್ವಹಿಸಲಿದ್ದು ಸಪ್ಟೆಂಬರ್ 20 ರಿಂದ ಅಕ್ಟೋಬರ್ 7 ರವರೆಗೆ ದಸರಾ ರಜೆ ಮತ್ತು 2026ರ ಏಪ್ರಿಲ್ 11ರಿಂದ ಮೇ 28 ರವರಿಗೆ ಬೇಸಿಗೆ ರಜೆ ಇರಲಿದೆ.
ಒಟ್ಟು 365 ದಿನಗಳಲ್ಲಿ 123 ದಿನ ರಜೆ ಇರಲಿದ್ದು ಉಳಿದ 242 ದಿನಗಳಲ್ಲಿ ಪರೀಕ್ಷೆ ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ 26 ದಿನಗಳನ್ನು ನಿಗದಿ ಮಾಡಿದರೆ, 22 ದಿನಗಳನ್ನು ಪಠ್ಯೇತರ ಚಟುವಟಿಕೆಗಳ ಹಾಗೂ ಸ್ಪರ್ಧೆಗಳ ನಿರ್ವಹಣಾ ಕಾರ್ಯಕ್ಕಾಗಿ ಮೀಸಲಿಡಲಾಗಿದೆ. ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನ, ಶಾಲಾ ಸ್ಥಳೀಯ ರಜೆಗಳಿಗೆ 4 ದಿನ ಮತ್ತು ಬೋಧನಾ ಕಲಿಕಾ ಪ್ರಕ್ರಿಯೆ ಉಳಿಯುವ ಕರ್ತವ್ಯಕ್ಕೆ 178 ದಿನಗಳನ್ನು ನಿಗದಿ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಶಾಲಾ ಶಿಕ್ಷಣ ಇಲಾಖೆ ಆಯುಕ್ತರು ಇದೇ ವರ್ಷದ ಏಪ್ರಿಲ್ 8ರಂದು ಪ್ರಾಥಮಿಕ ಶಾಲೆಗಳಲ್ಲಿ ಮತ್ತು ಪ್ರೌಢಶಾಲೆಗಳಲ್ಲಿ ಏಪ್ರಿಲ್ 9ರಂದು ಸಮುದಾಯದತ್ತ ಶಾಲೆ ಕರೆದು ಫಲಿತಾಂಶ ಪ್ರಕಟಿಸಬೇಕು ಹಾಗೂ ಏಪ್ರಿಲ್ 14ರಂದು ಡಾ. ಬಿಆರ್ ಅಂಬೇಡ್ಕರ್ ಜಯಂತಿಯನ್ನು ಎಲ್ಲಾ ಶಾಲೆಗಳಲ್ಲಿಯೂ ಆಚರಿಸಬೇಕು ಎಂದು ಸೂಚನೆ ನೀಡಿದ್ದಾರೆ.