27.6 C
Udupi
Wednesday, March 19, 2025
spot_img
spot_img
HomeBlog2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ..!

2ನೇ ಬಾರಿಗೆ ಟಿ20 ವಿಶ್ವಕಪ್ ಗೆದ್ದ ಟೀಂ ಇಂಡಿಯಾ ..!

ಅಭಿನಂದನೆ ಸಲ್ಲಿಸಿದ ಪ್ರಧಾನಿ, ವಿಮಾನ ನಿಲ್ದಾಣದಲ್ಲಿ ಪಂದ್ಯ ವೀಕ್ಷಿಸಿದ ಸಿಎಂ ಸಿದ್ದರಾಮಯ್ಯ

ಬರೋಬ್ಬರಿ 11 ವರ್ಷಗಳ ನಂತರ 140 ಕೋಟಿ ಭಾರತೀಯರ ಕನಸು ನನಸಾಗಿದೆ. 9ನೇ ಆವೃತ್ತಿಯ ಟಿ20 ವಿಶ್ವಕಪ್​ನ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್​​ಗಳಿಂದ ಮಣಿಸಿದ ಟೀಂ ಇಂಡಿಯಾ ದಾಖಲೆಯ 2ನೇ ಬಾರಿಗೆ ಟಿ20 ವಿಶ್ವಕಪ್ ಎತ್ತಿಹಿಡಿದಿದೆ. ಈ ಮೂಲಕ 17 ವರ್ಷಗಳ ನಂತರ ಮತ್ತೊಮ್ಮೆ ಟಿ20 ಚಾಂಪಿಯನ್ ಆಗುವಲ್ಲಿ ಯಶಸ್ವಿಯಾಗಿದೆ.
ಭಾರತ ಕ್ರಿಕೆಟ್ ತಂಡಕ್ಕೆ ಎಲ್ಲಾ ವಲಯಗಳಿಂದ ಅಭಿನಂದನೆಗಳ ಮಹಾಪೂರ್ವವೇ ಹರಿದು ಬಂದಿದೆ. ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ರಾಜಕೀಯ ವಲಯದಲ್ಲೂ ಅಭಿನಂದನೆಯನ್ನು ಸಲ್ಲಿಸಿದರು.

ವಿಮಾನ ನಿಲ್ದಾಣದಲ್ಲೇ ಕ್ರಿಕೆಟ್ ಪಂದ್ಯ ವೀಕ್ಷಿಸಿದ ಸಿಎಂ,

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಕ್ರಿಕೆಟ್ ಪಂದ್ಯಾವಳಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ವಿಮಾನ ಏರುವ ಮುನ್ನ ಸಿಎಂ ಸಿದ್ದರಾಮಯ್ಯ ಕುತೂಹಲದಿಂದ ಕ್ರಿಕೆಟ್ ವೀಕ್ಷಿಸಿದರು.

ವಾಸ್ತವವಾಗಿ 2007 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್​ನ ಚೊಚ್ಚಲ ಆವೃತ್ತಿಯಲ್ಲಿ ಟೀಂ ಇಂಡಿಯಾ ಎಂಎಸ್ ಧೋನಿ ನಾಯಕಯತ್ವದಲ್ಲಿ ಟಿ20 ವಿಶ್ವಕಪ್ ಗೆದ್ದುಕೊಂಡಿತ್ತು. ಆ ಬಳಿಕ ತಂಡ 2016 ರಲ್ಲಿ ಮತ್ತೊಮ್ಮೆ ಫೈನಲ್​ಗೇರಿತ್ತಾದರೂ, ಚಾಂಪಿಯನ್ ಆಗುವಲ್ಲಿ ಎಡವಿತ್ತು. ಆದರೆ ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಅಜೇಯ ತಂಡವಾಗಿ ಫೈನಲ್​ಗೆ ಕಾಲಿಟ್ಟಿದ್ದ ಟೀಂ ಇಂಡಿಯಾ ಟಿ20 ವಿಶ್ವಕಪ್ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇದರೊಂದಿಗೆ ತಂಡದ ಮುಖ್ಯ ಕೋಚ್ ರಾಹುಲ್ ದ್ರಾವಿಡ್​ಗೆ ಗೆಲುವಿನ ಬೀಳ್ಕೊಡುಗೆ ನೀಡಿದೆ.

ಭಾರತಕ್ಕೆ ವೇಗದ ಆರಂಭ
ಬ್ರಿಡ್ಜ್‌ಟೌನ್‌ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಈ ಬಾರಿಯ ವಿಶ್ವಕಪ್‌ನಲ್ಲಿ ಕಳೆದ 7 ಇನ್ನಿಂಗ್ಸ್‌ಗಳಲ್ಲಿ ವಿಫಲರಾಗಿದ್ದ ಕೊಹ್ಲಿ ಮೊದಲ ಓವರ್‌ನಲ್ಲಿಯೇ 3 ಬೌಂಡರಿ ಬಾರಿಸುವ ಮೂಲಕ ವೇಗದ ಆರಂಭ ಪಡೆದರು. ಇಂದು ದೊಡ್ಡ ಸ್ಕೋರ್ ಖಚಿತ ಎಂಬಂತೆ ತೋರುತ್ತಿದ್ದರೂ ಮುಂದಿನ ಓವರ್‌ನಲ್ಲಿ ಕೇಶವ್ ಮಹಾರಾಜ್ ಅವರು ಮೊದಲು ರೋಹಿತ್ ಮತ್ತು ನಂತರ ರಿಷಬ್ ಪಂತ್ ಅವರ ವಿಕೆಟ್ ಕಬಳಿಸುವ ಮೂಲಕ ಟೀಂ ಇಂಡಿಯಾಕ್ಕೆ ದೊಡ್ಡ ಹೊಡೆತ ನೀಡಿದರು. ಕಗಿಸೊ ರಬಾಡ ಐದನೇ ಓವರ್‌ನಲ್ಲಿ ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ದೊಡ್ಡ ಹೊಡೆತ ನೀಡಿದರು. ಹೀಗಾಗಿ ಟೀಂ ಇಂಡಿಯಾ ಕೇವಲ 34 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿತ್ತು.

ಫೈನಲ್ ಪಂದ್ಯದಲ್ಲಿ ಮಿಂಚಿದ ಕೊಹ್ಲಿ
ಆರಂಭದಲ್ಲೇ ಆಘಾತಕ್ಕೊಳಗಾದ ಟೀಂ ಇಂಡಿಯಾದ ಇನ್ನಿಂಗ್ಸ್​ಗೆ ಚೇತರಿಕೆ ನೀಡಿದ್ದು, ಬ್ಯಾಟಿಂಗ್​ನಲ್ಲಿ ಬಡ್ತಿ ಪಡೆದು ಬಂದ ಅಕ್ಷರ್ ಪಟೇಲ್. ವೇಗದ ಆರಂಭದ ನಂತರ ಕೊಹ್ಲಿ ಒಂದು ತುದಿಯಿಂದ ಮುನ್ನಡೆ ಕಾಯ್ದುಕೊಂಡರೆ, ಅಕ್ಷರ್ ಪಟೇಲ್ ನಡುನಡುವೆ ಬೌಂಡರಿ ಬಾರಿಸಿ ತಂಡದ ಸ್ಕೋರ್ ಬೋರ್ಡ್​ ಹೆಚ್ಚಿಸಿದರು. ಇವರಿಬ್ಬರ ನಡುವೆ ನಾಲ್ಕನೇ ವಿಕೆಟ್‌ಗೆ 72 ರನ್‌ಗಳ ಜೊತೆಯಾಟವಿತ್ತು. ಆದರೆ ಅಕ್ಷರ್ ಪಟೇಲ್ 31 ಎಸತೆಗಳಲ್ಲಿ 47 ಬಾರಿಸಿ ರನೌಟ್ ಆದ ಕಾರಣ ಈ ಜೊತೆಯಾಟ ಮುರಿದುಬಿತ್ತು. ಇದಾದ ನಂತರ ಕೊಹ್ಲಿ ಮತ್ತು ಶಿವಂ ದುಬೆ ಕೂಡ 57 ರನ್​ಗಳ ಜೊತೆಯಾಟ ನೀಡಿದರು. ಈ ಸಮಯದಲ್ಲಿ, ಕೊಹ್ಲಿ ನಿಧಾನಗತಿಯ ಅರ್ಧಶತಕವನ್ನು ಪೂರ್ಣಗೊಳಿಸಿದರು. ಆದರೆ ಕೊನೆಯ ಓವರ್‌ಗಳಲ್ಲಿ ಹೊಡಿಬಡಿ ಆಟಕ್ಕೆ ಮುಂದಾದ ಕೊಹ್ಲಿ, ತಂಡ 176 ರನ್‌ ಕಲೆಹಾಕುವಲ್ಲಿ ಪ್ರಮುಖ ಪಾತ್ರವಹಿಸಿದರು. ಅಂತಿಮವಾಗಿ ಕೊಹ್ಲಿ 59 ಎಸೆತಗಳಲ್ಲಿ 6 ಬೌಂಟರಿ ಹಾಗೂ 2 ಸಿಕ್ಸರ್ ಸಹಿತ 76 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು.

ಆಫ್ರಿಕಾಗೂ ಕಳಪೆ ಆರಂಭ
ಗೆಲುವಿನ ಗುರಿ ಬೆನ್ನಟ್ಟಿದ ದಕ್ಷಿಣ ಆಫ್ರಿಕಾಗೂ ಉತ್ತಮ ಆರಂಭ ಸಿಗಲಿಲ್ಲ. ಎರಡನೇ ಓವರ್‌ನಲ್ಲಿಯೇ ಜಸ್ಪ್ರೀತ್ ಬುಮ್ರಾ ಅವರ ಅಚ್ಚರಿಯ ಔಟ್‌ಸ್ವಿಂಗ್‌ನಲ್ಲಿ ರೀಜಾ ಹೆಂಡ್ರಿಕ್ಸ್ ಬೌಲ್ಡ್ ಆದರು. ದಕ್ಷಿಣ ಆಫ್ರಿಕಾದ ನಾಯಕ ಏಡನ್ ಮಾರ್ಕ್ರಾಮ್ ಕೂಡ ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಾಗದೆ ಅರ್ಷದೀಪ್ ಸಿಂಗ್ ಬೌಲಿಂಗ್​ನಲ್ಲಿ ಪೆವಿಲಿಯನ್‌ ಸೇರಿಕೊಂಡರು. ಆರಂಭದಲ್ಲೇ 2 ವಿಕೆಟ್ ಬಿದ್ದಿದ್ದರಿಂದ ಟೀಂ ಇಂಡಿಯಾಗೆ ಉತ್ತಮ ಆರಂಭ ಸಿಕ್ಕಿತ್ತು. ಆದರೆ ಇಲ್ಲಿ ಕ್ವಿಂಟನ್ ಡಿ ಕಾಕ್ ಮತ್ತು ಟ್ರಿಸ್ಟಾನ್ ಸ್ಟಬ್ಸ್ ತಂಡದ ಇನ್ನಿಂಗ್ಸ್ ಕೈಗೆತ್ತಿಕೊಂಡು ಪ್ರತಿದಾಳಿ ನಡೆಸಿ ತಂಡವನ್ನು 9 ನೇ ಓವರ್‌ ಅಂತ್ಯಕ್ಕೆ 70 ರನ್‌ಗಳ ಗಡಿ ದಾಟಿಸಿದರು. ಆದರೆ ಇಲ್ಲಿ ಅಕ್ಷರ್ ಪಟೇಲ್, ಸ್ಟಬ್ಸ್ ಅವರ ಸ್ಫೋಟಕ ಇನ್ನಿಂಗ್ಸ್ ಅಂತ್ಯಗೊಳಿಸುವ ಮೂಲಕ ತಂಡಕ್ಕೆ ಮೂರನೇ ಯಶಸ್ಸು ತಂದುಕೊಟ್ಟರು.

ಕ್ಲಾಸೆನ್ ಸ್ಫೋಟಕ ಬ್ಯಾಟಿಂಗ್
ಇದಾದ ಬಳಿಕ ಕ್ಲಾಸನ್ ಮತ್ತು ಡಿ ಕಾಕ್ ಜೊತೆಯಾಟ ನಡೆಸಿ ತಂಡವನ್ನು 100 ರನ್‌ಗಳ ಗಡಿ ದಾಟಿಸಿದರು. ಈ ಜೊತೆಯಾಟವು ಅಪಾಯಕಾರಿಯಾಗುವಂತೆ ತೋರುತ್ತಿತ್ತು. ಆದರೆ ಅರ್ಷದೀಪ್, ಡಿ ಕಾಕ್ ವಿಕೆಟ್ ಪಡೆಯುವ ಮೂಲಕ ಟೀಂ ಇಂಡಿಯಾಕ್ಕೆ 4ನೇ ಯಶಸ್ಸು ನೀಡಿದರು. ಇದಾದ ನಂತರ ತಂಡಕ್ಕೆ ನಿಜವಾದ ಸವಾಲು ಎದುರಾಯಿತು. ಏಕೆಂದರೆ ಸ್ಫೋಟಕ ದಾಂಡಿಕ ಹೆನ್ರಿಚ್ ಕ್ಲಾಸೆನ್, ಟೀಂ ಇಂಡಿಯಾ ಪರ ವಾಲಿದ್ದ ತಂಡವನ್ನು ತಮ್ಮತ್ತ ತಿರುಗಿಸಿಕೊಂಡರು. ಅವರು ಕುಲ್ದೀಪ್ ಯಾದವ್ ಅವರ ಓವರ್‌ನಲ್ಲಿ 14 ರನ್ ಬಾರಿಸಿದರೆ, ನಂತರದ ಓವರ್‌ನಲ್ಲಿ ಅಕ್ಷರ್ ಪಟೇಲ್ ಮೇಲೆ 2 ಸಿಕ್ಸರ್ ಮತ್ತು 2 ಬೌಂಡರಿಗಳನ್ನು ಹೊಡೆಯುವ ಮೂಲಕ 24 ರನ್ ಕಲೆಹಾಕಿದರು.

ಪಂದ್ಯದ ದಿಕ್ಕು ಬದಲಿಸಿದ ಹಾರ್ದಿಕ್

ಹೀಗಾಗಿ ಕೇವಲ 23 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಕ್ಲಾಸನ್, ದಕ್ಷಿಣ ಆಫ್ರಿಕಾಕ್ಕೆ ಗೆಲುವು ಖಚಿತ ಎನಿಸುವಂತೆ ಮಾಡಿದರು. ಆದರೆ ಹಾರ್ದಿಕ್ ದಾಳಿಗಿಳಿದ 17ನೇ ಓವರ್​ ಇಡೀ ಪಂದ್ಯದ ದಿಕ್ಕನೇ ಬದಲಿಸಿತು. ಈ ಹಂತದಲ್ಲಿ ಆಫ್ರಿಕಾ ಗೆಲುವಿಗೆ 24 ಎಸೆತಗಳಲ್ಲಿ 26 ರನ್‌ಗಳ ಅಗತ್ಯವಿತ್ತು. ಈ ವೇಳೆ ಹಾರ್ದಿಕ್ 17ನೇ ಓವರ್‌ನ ಮೊದಲ ಎಸೆತದಲ್ಲಿ ಕ್ಲಾಸನ್ ವಿಕೆಟ್ ಪಡೆದು, ಆ ಓವರ್​ನಲ್ಲಿ ಕೇವಲ 4 ರನ್ ನೀಡುವ ಮೂಲಕ ಆಫ್ರಿಕಾ ತಂಡದ ಸಂಕಷ್ಟ ಹೆಚ್ಚಿಸಿದರು. ನಂತರ ಮುಂದಿನ ಓವರ್​ನಲ್ಲಿ ಬುಮ್ರಾ ಕೇವಲ 2 ರನ್ ನೀಡಿ ಮಾರ್ಕೊ ಯಾನ್ಸನ್​ರನ್ನು ಬೌಲ್ಡ್ ಮಾಡಿ ಟೀಂ ಇಂಡಿಯಾವನ್ನು ಗೆಲುವಿನ ಹತ್ತಿರಕ್ಕೆ ತಂದರು. ಕೊನೆಯ 2 ಓವರ್‌ಗಳಲ್ಲಿ ದಕ್ಷಿಣ ಆಫ್ರಿಕಾಕ್ಕೆ 20 ರನ್ ಅಗತ್ಯವಿತ್ತು. 19ನೇ ಓವರ್‌ ಬೌಲ್ ಮಾಡಿದ ಅರ್ಷದೀಪ್ ಕೇವಲ 4 ರನ್ ನೀಡಿದರು. ಕೊನೆಯ ಓವರ್‌ನಲ್ಲಿ 16 ರನ್‌ಗಳ ಅಗತ್ಯವಿತ್ತು. 20ನೇ ಓವರ್ ಬೌಲ್ ಮಾಡುವ ಜವಬ್ದಾರಿ ಹೊತ್ತ ಹಾರ್ದಿಕ್ ಮೊದಲ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ವಿಕೆಟ್ ಪಡೆಯುವ ಮೂಲಕ ಗೆಲುವಿನ ಮುದ್ರೆಯೊತ್ತಿದರು. ಈ ಓವರ್​ನಲ್ಲಿ ಹಾರ್ದಿಕ್ ಕೇವಲ 8 ರನ್ ನೀಡಿ ಟೀಂ ಇಂಡಿಯಾಗೆ ಜಯ ತಂದುಕೊಟ್ಟರು.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page