
ಹೊಸದಿಲ್ಲಿ: ನ್ಯಾಯಾಲಯದ ಕಲಾಪಗಳ ಆಡಿಯೋ-ವಿಡಿಯೋ ರೆಕಾರ್ಡಿಂಗ್ಗಳನ್ನು ಸಂಬಂಧಪಟ್ಟ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ ಅಥವಾ ಅಪ್ಲೋಡ್ ಮಾಡುವುದನ್ನು ಸುಪ್ರೀಂ ಕೋರ್ಟ್ ನಿಷೇಧಿಸಿದೆ. ನಿಯಂತ್ರಣವಿಲ್ಲದ ವಿಡಿಯೋ ಪ್ರಸಾರವನ್ನು “ಚೀಲದಿಂದ ಹೊರಬಂದ ರಾಕ್ಷಸ” ಎಂದು ಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ ಅವರಿದ್ದ ಪೀಠ, ನ್ಯಾಯಾಲಯದ ಕಲಾಪಗಳ ನೇರಪ್ರಸಾರ ಮತ್ತು ವಿಡಿಯೋಗಳ ದುರುಪಯೋಗ ನಿಯಂತ್ರಣಕ್ಕೆ ಸಂಬಂಧಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ವೇಳೆ ಈ ಮಧ್ಯಂತರ ಆದೇಶ ನೀಡಿತು.
ಆದೇಶದ ಪ್ರಕಾರ, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಅಥವಾ ಸುಪ್ರೀಂ ಕೋರ್ಟ್ನ ಪ್ರಧಾನ ಕಾರ್ಯದರ್ಶಿಯ ಪೂರ್ವಾನುಮತಿ ಇಲ್ಲದೆ ನ್ಯಾಯಾಂಗ ಪ್ರಕ್ರಿಯೆಗಳ ಆಡಿಯೋ-ವಿಡಿಯೋಗಳನ್ನು ದಾಖಲಿಸುವುದು, ತಿದ್ದುಪಡಿ ಮಾಡುವುದು, ಪ್ರಸಾರ ಮಾಡುವುದು, ಪೋಸ್ಟ್, ಮರುಪೋಸ್ಟ್ ಅಥವಾ ಹಂಚಿಕೊಳ್ಳುವುದು ನಿಷಿದ್ಧವಾಗಿದೆ. ಆದರೆ, ಈ ಆದೇಶವು ನ್ಯಾಯಾಲಯದ ಕಾರ್ಯವೈಖರಿಯ ಸುದ್ದಿವರದಿಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ವಿಡಿಯೋ ರೆಕಾರ್ಡಿಂಗ್ಗಳ ಅಪ್ಲೋಡ್ ಮಾತ್ರ ನಿಯಂತ್ರಣಕ್ಕೆ ಒಳಪಟ್ಟಿದ್ದು, ಅಧಿಕೃತ ಅನುಮತಿ ಪಡೆದರೆ ಮಾತ್ರ ಲೈವ್ಸ್ಟ್ರೀಮಿಂಗ್ ಅಥವಾ ಆಡಿಯೋ-ವಿಶುವಲ್ ಪ್ರಸಾರಕ್ಕೆ ಅವಕಾಶವಿದೆ ಎಂದು ನ್ಯಾಯಮೂರ್ತಿ ಬಾಗ್ಚಿ ತಿಳಿಸಿದರು.
ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಮ್ನಲ್ಲಿ ವಕೀಲರ ವಾದಗಳ ತುಣುಕುಗಳು ವ್ಯಾಪಕವಾಗಿ ಹರಡುತ್ತಿರುವುದನ್ನು ಉಲ್ಲೇಖಿಸಿದ ಅವರು, “ಚೀಲದಿಂದ ಹೊರಗಿರುವ ರಾಕ್ಷಸನನ್ನು ನಾವು ತಡೆಯಲು ಸಾಧ್ಯವಿಲ್ಲ” ಎಂದು ಅಭಿಪ್ರಾಯಪಟ್ಟರು. ನ್ಯಾಯಾಲಯವು 24×7 ಮನರಂಜನಾ ವಾಹಿನಿಯಾಗಲು ಸಾಧ್ಯವಿಲ್ಲ ಎಂದೂ ಹೇಳಿದರು.
ವರ್ಚುವಲ್ ವಿಚಾರಣೆಗಳ ಲಿಂಕ್ಗಳನ್ನು ಅನಿಯಂತ್ರಿತವಾಗಿ ಹಂಚಿಕೊಳ್ಳುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಪ್ರವೇಶ ವ್ಯವಸ್ಥೆಗೆ ನಿಯಂತ್ರಣ ಅಗತ್ಯ ಎಂದು ಪೀಠ ಅಭಿಪ್ರಾಯಪಟ್ಟಿತು. ಮೆಟಾ, ಎಕ್ಸ್ ಸೇರಿದಂತೆ ಸಾಮಾಜಿಕ ಮಾಧ್ಯಮ ಮಧ್ಯವರ್ತಿಗಳಿಗೆ ಈ ಸಂಬಂಧ ನೋಟಿಸ್ ಜಾರಿಗೊಳಿಸಲಾಗಿದೆ.
ಹಿರಿಯ ವಕೀಲ ವಿಕಾಸ್ ಸಿಂಗ್, ನ್ಯಾಯಾಲಯದ ಕಲಾಪಗಳ ವೈರಲ್ ವಿಡಿಯೋಗಳು ನ್ಯಾಯಾಂಗದ ಘನತೆಗೆ ಧಕ್ಕೆ ತರುತ್ತಿವೆ ಎಂದು ವಾದಿಸಿದರು. ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಎಐ ತಂತ್ರಜ್ಞಾನ ಬಳಸಿ ನ್ಯಾಯಾಧೀಶರು ಅಥವಾ ವಕೀಲರ ಮಾತುಗಳನ್ನು ತಿರುಚಿ ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ಅಪಾಯವೂ ಇದೆ ಎಂದು ನ್ಯಾಯಾಲಯದ ಗಮನಕ್ಕೆ ತಂದರು.


















































