
ಕಾರ್ಕಳ: ಕಾರ್ಕಳದ ಶ್ರೀ ಭುವನೇಂದ್ರ ಕಾಲೇಜಿನ ಐ. ಕ್ಯೂ. ಎ. ಸಿ. ಯ ಸಹಯೋಗ ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾ ವತಿಯಿಂದ ಪ್ರಥಮ ಪದವಿಯ ಎಲ್ಲ ವಿಭಾಗದ ವಿದ್ಯಾರ್ಥಿಗಳಿಗೆ ಆರೋಗ್ಯ ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ತರಬೇತುದಾರರಾಗಿ ಆಗಮಿಸಿದ್ದ ಡಾ. ಟಿ. ಎಂ. ಎ. ಪೈ ರೋಟರಿ ಆಸ್ಪತ್ರೆ ಇಲ್ಲಿನ ಮಕ್ಕಳ ತಜ್ಞರಾದ ಡಾ.ಜಯಶ್ರೀ ಸತೀಶ್ ರಾವ್ ಮಾತನಾಡಿ, ಮನೆಯ ಊಟವೇ ನಮ್ಮ ದೊಡ್ಡ ಶಕ್ತಿಯಾಗಿದೆ. ದೇಹಕ್ಕೆ ಬೇಕಾದ ಎಲ್ಲ ಪೌಷ್ಠಿಕಾಂಶದ ಅವಶ್ಯಕತೆಯನ್ನು ಊಟಕ್ಕೆ ಸಂಬಂಧಿಸಿದ ಪದಾರ್ಥಗಳೇ ಒದಗಿಸಿಕೊಡುವುದರಿಂದ ಅದನ್ನೇ ವಿದ್ಯಾರ್ಥಿಗಳು ಮಾಡಬೇಕಾದ ಅನಿವಾರ್ಯತೆಯನ್ನು ಸೃಷ್ಟಿಸಿಕೊಳ್ಳಬೇಕು.
ಆಹಾರದ ಜೊತೆಗೆ ನೀರು ಕುಡಿಯುವ ಕಡೆಗೂ ಹೆಚ್ಚಿನ ಗಮನ ಹರಿಸಬೇಕು. ವಿದ್ಯಾರ್ಥಿಗಳಿಂದ ಹಿಡಿದು ದೊಡ್ಡವರವರೆಗೂ ಬದುಕಿನಲ್ಲಿ ಒಂದು ಶಿಸ್ತನ್ನು ಇಟ್ಟುಕೊಂಡಾಗ ಮಾತ್ರ ಏನಾದರೂ ಆಗಲು ಸಾಧ್ಯ. ವಿದ್ಯಾರ್ಥಿಗಳು ಯೋಗ ಮತ್ತು ಕ್ರಿಯಾಶೀಲತೆಯ ಬೇರೆ ಬೇರೆ ಚಟುವಟಿಕೆಗಳಿಗೆ ಗಮನ ಹರಿಸಬೇಕು. ನಾಳೆ ಮಾಡ್ತೇನೆ ಅನ್ನುವ ಉದಾಸೀನವನ್ನು ಬಿಡಬೇಕು. ಹೆಚ್ಚು ಕಾಳಜಿ ವಹಿಸಿ ಪ್ರೀತಿಯಿಂದ ನೋಡುವ ಹೆತ್ತವರಿಗೆ ಸದಾ ಕೃತಜ್ಞರಾಗಿರಬೇಕು ಎಂದು ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಪ್ರಾಚಾರ್ಯ ಡಾ.ಮಂಜುನಾಥ ಎ. ಕೋಟ್ಯಾನ್ ಮಾತನಾಡಿ, ದೈಹಿಕ ಆರೋಗ್ಯ ಮತ್ತು ಮಾನಸಿಕ ಆರೋಗ್ಯ ಈ ಎರಡೂ ಮನುಷ್ಯರಿಗೆ ಅಗತ್ಯವಾಗಿ ಬೇಕು. ಜಂಕ್ ಫುಡ್ ಗಳನ್ನು ಅಭ್ಯಾಸ ಮಾಡದೆ ಬದುಕುವುದನ್ನು ರೂಢಿಸಿಕೊಂಡಾಗ ಆರೋಗ್ಯ ಕೆಡುವುದಿಲ್ಲ. ಮಾಡಿದ ತಪ್ಪುಗಳನ್ನು ತಿದ್ದಿಕೊಂಡು ಸರಿಪಡಿಸುವ ರೂಢಿ ಇರಬೇಕು.. ವಿಶೇಷವಾಗಿ ಮೊಬೈಲ್ ಬಳಕೆಯನ್ನು ಎಷ್ಟು ಬೇಕೋ ಅಷ್ಟು ಮಾತ್ರ ಬಳಸುವ ಮನಸ್ಥಿತಿಯನ್ನು ವಿದ್ಯಾರ್ಥಿಗಳು ಹೊಂದಿರಬೇಕು. ಬದಲಾದ ಜೀವನಕ್ರಮ ಅನೇಕ ದುಷ್ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ. ಇಂತಹ ಕಾರ್ಯಕ್ರಮಗಳಿಂದ ನಿಮ್ಮಲ್ಲಿ ಪ್ರಜ್ಞಾವಂತಿಕೆ ಬೆಳೆಯುವಂತಾಗಲಿ ಎಂದರು.
ಐಕ್ಯೂಎಸಿ ಸಂಯೋಜಕರಾದ ಪ್ರೊ. ಲಕ್ಷ್ಮೀನಾರಾಯಣ ಕೆ. ಎಸ್. ಸ್ವಾಗತಿಸಿ, ರಾ. ಸೇ. ಯೋ. ಅಧಿಕಾರಿಯಾದ ಶಂಕರ್ ಕುಡ್ವ ಕಾರ್ಯಕ್ರಮ ನಿರೂಪಿಸಿ,ವಿದ್ಯಾರ್ಥಿ ಕ್ಷೇಮಪಾಲನಾ ಅಧಿಕಾರಿಯಾದ ಡಾ. ವಿಜಯಕುಮಾರಿ ಧನ್ಯವಾದ ಸಮರ್ಪಿಸಿದರು.





















































