
ಗುರುಬ್ರಹ್ಮ ಗುರುವಿಷ್ಣು ಗುರುದೇವೋ ಮಹೇಶ್ವರಃ|
ಗುರುಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ||
ಗುರುಗಳನ್ನು ದೇವರ ಸ್ಥಾನದಲ್ಲಿರಿಸಿ, ಭಕ್ತಿ ಗೌರವದಿಂದ ಕಾಣುವರು. ಸುಸಂಸ್ಕೃತ ಸಮಾಜದಲ್ಲಿ ಗುರುಗಳನ್ನು ಪವಿತ್ರವಾದಂತಹ ಸ್ಥಾನದಲ್ಲಿರಿಸಿ, ಭಕ್ತಿ ಗೌರವದಿಂದ ಪೂಜಿಸಿ, ರಾಷ್ಟ್ರ ನಿರ್ಮಾಪಕನ ಜವಾಬ್ದಾರಿಗೆ ಯೋಗ್ಯರೆಂದು ಪರಿಗಣಿಸುತ್ತಾರೆ.ಗುರುಗಳು ಅಥವಾ ಶಿಕ್ಷಕರ ವೃತ್ತಿ,ಸುಲಭವಾಗಿ ಸಿಗುತ್ತದೆ ಎಂಬ ಅಭಿಪ್ರಾಯ ಜನ ಮಾನಸದಲ್ಲಿದ್ದರೂ,ಶಿಕ್ಷಕರಾಗಿ ವೃತ್ತಿಯನ್ನು ಪ್ರಾರಂಭಿಸಿದಾಗ, ಶಿಕ್ಷಕರ ಜವಾಬ್ದಾರಿ ಎಷ್ಟೆಂಬುದನ್ನು ಪ್ರತಿಯೊಬ್ಬ ಶಿಕ್ಷಕನು ಅರಿಯಲೇ ಬೇಕಾದ ಅನಿವಾರ್ಯತೆ ಇದೆ
ಒಂದು ದೇಶದ ಭವಿಷ್ಯ ತರಗತಿಯ ಕೋಣೆಯಲ್ಲಿ ರೂಪಿಸಲ್ಪಡುತ್ತದೆ ಎಂದಾದರೆ ಆ ತರಗತಿಯ ನಾಯಕತ್ವವನ್ನು ವಹಿಸುವವ ಶಿಕ್ಷಕನಿರುತ್ತಾನೆ. ಹಾಗಾದರೆ ಒಂದು ದೇಶದ ಭವಿಷ್ಯವನ್ನೇ ನಿರ್ಮಾಣ ಮಾಡುವವರು ಶಿಕ್ಷಕರು ಎಂದಾದ ಮೇಲೆ, ಆ ಶಿಕ್ಷಕನ ಜವಾಬ್ದಾರಿ ಎಷ್ಟು ಹಿರಿದಾದದ್ದು! ಹಾಗಾಗಿ ಶಿಕ್ಷಕ ವೃತ್ತಿಯಲ್ಲಿರುವ ಎಲ್ಲರೂ ತಮ್ಮ ತಮ್ಮ ಜವಾಬ್ದಾರಿಯನ್ನು ಅರಿತು, ವೃತ್ತಿ ಧರ್ಮದಲ್ಲಿ ನಡೆಯುತ್ತಿದ್ದೇವೆಯೇ ಎಂದು ಆತ್ಮ ವಿಮರ್ಶೆ ಮಾಡುವಂತಹ ಸಮಯವಾಗಲಿ ಈ ಶಿಕ್ಷಕರ ದಿನಾಚರಣೆ.
ಮುಗ್ಧ ಮಕ್ಕಳ ಮನಸ್ಸಲ್ಲಿ ಅರಿವನ್ನು ಬಿತ್ತಿ, ವಿದ್ಯಾರ್ಥಿಗಳ ಭವಿಷ್ಯಕಕ್ಕೆ ಬೆಳಕನ್ನು ಚೆಲ್ಲಿ,ಸುಂದರ ನಾಡನ್ನು ಕಟ್ಟುವ ಅದ್ಭುತ ಶಿಲ್ಪಿಗಳು ಶಿಕ್ಷಕರು.ಒಬ್ಬ ಉತ್ತಮ ಶಿಕ್ಷಕನು ತನ್ನ ಇಡೀ ಜೀವನದಲ್ಲಿ ವಿದ್ಯಾರ್ಥಿಗಳ ಹಿತಚಿಂತನೆಯನ್ನು ಮಾಡುತ್ತಾನೆ. ಆತ ತನ್ನ ವಿದ್ಯಾರ್ಥಿಗಳ ಯಶಸ್ಸಿನಿಂದ ತುಂಬಾ ಸಂತೋಷಪಡುತ್ತಾನೆ. ತನ್ನ ದೇಶಕ್ಕೆ ಉತ್ತಮ ಭವಿಷ್ಯದ ಪೀಳಿಗೆಯನ್ನು ಒದಗಿಸುವವನು ಶ್ರೇಷ್ಠ ಶಿಕ್ಷಕನಾಗುತ್ತಾನೆ.ವಿದ್ಯಾರ್ಥಿಗಳನ್ನು ಸರಿಯಾಗಿ ತಿದ್ದಿ-ತೀಡಿ ಸಮಾಜದ ಉತ್ತಮ ಪ್ರಜೆಗಳನ್ನಾಗಿ ಮಾಡುವಂತಹ ಜವಾಬ್ದಾರಿ ಶಿಕ್ಷಕರಿಗಿದೆ .ಸಮರ್ಥನಾದ ಶಿಕ್ಷಕ ರಾಷ್ಟ್ರ ರಕ್ಷಣೆಗೆ ಬೇಕಾಗುವ ಪ್ರಜೆಗಳನ್ನು ಸೃಷ್ಟಿಸಿ,ರಾಷ್ಟ್ರ ನಿರ್ಮಾಪಕನ ಪಾತ್ರವನ್ನು ನಿರ್ವಹಿಸಬೇಕಾದ ಜವಾಬ್ದಾರಿ ಶಿಕ್ಷಕರ ಮೇಲಿದೆ.
ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ತಂದೆ ತಾಯಿಗಳ ನಂತರದ ಪಾತ್ರವನ್ನು ಶಾಲೆಯಲ್ಲಿ ಶಿಕ್ಷಕರು ವಹಿಸುವರು.”ತಂದೆಯಂತೆ ಮಗ,ಗುರುವಿನಂತೆ ಶಿಷ್ಯ ” ಎಂಬ ಮಾತಿನಂತೆ ಪ್ರತಿಯೊಬ್ಬ ಶಿಕ್ಷಕನು ತನ್ನ ವೃತ್ತಿ ಧರ್ಮದಲ್ಲಿ, ಬದ್ಧತೆಯಿಂದ, ತನ್ನ ಪಾತ್ರವನ್ನು ಸಮರ್ಥವಾಗಿ ನಿರ್ವಹಿಸಬೇಕಾದರೆ, ತಾನೇ ಒಂದು ಮಾದರಿಯಾಗಿ ವಿದ್ಯಾರ್ಥಿಗಳ ಮುಂದೆ ನಿಲ್ಲಬೇಕಾಗುತ್ತದೆ. ತಾನು ಪಾಠ ಮಾಡಿ ತಿಳಿಸುವುದಕ್ಕಿಂತ, ನಡೆದು ತೋರಿಸಿ, ನಡೆಯಂತೆ ನುಡಿದು ,ವಿದ್ಯಾರ್ಥಿಗಳು ಅನುಸರಿಸುವಂತೆ ಆತನು ಮಾಡಬೇಕಾಗಿದೆ.
ಸ್ವಾಮಿ ವಿವೇಕಾನಂದರು ಹೇಳುವಂತೆ,ಶಿಕ್ಷಣವೆಂದರೆ ‘ಮಾನವೀಯತೆಯ ವಿಕಾಸ’. ಮನುಷ್ಯರಲ್ಲಿ ಪರಿಪೂರ್ಣತೆಯನ್ನು ಹಿಗ್ಗಿಸುವುದೇ ಶಿಕ್ಷಣ. ಮನುಷ್ಯನ ವ್ಯಕ್ತಿತ್ವ ಶಿಕ್ಷಣದಿಂದ ಬಯಲಿಗೆ ಬರುತ್ತದೆ “ಎಂದು ಹೇಳುತ್ತಿದ್ದ ಅವರ ‘ಭಾರತದ ಎಲ್ಲ ಸಮಸ್ಯೆಗಳಿಗೂ ಶಿಕ್ಷಣ ಒಂದೇ ಪರಿಹಾರ’ ಎಂಬ ಮಾತಿನ ಅರ್ಥ ದೇಶದ ಭವಿಷ್ಯ ವಿದ್ಯಾರ್ಥಿಗಳಿಗೆ ಕೊಡುವ ಶಿಕ್ಷಣದ ಗುಣಮಟ್ಟದ ಮೇಲೆ ನಿರ್ಧರಿತವಾಗುತ್ತದೆ ಎಂದಲ್ಲವೇ.?
“ಶಿಕ್ಷಣವೆಂದರೆ ವ್ಯಕ್ತಿತ್ವ ನಿರ್ಮಾಣವಾಗಿದೆ, ವ್ಯಕ್ತಿತ್ವ ನಿರ್ಮಾಣದ ಮೂಲಕ ಸಚ್ಚಾರಿತ್ರ್ಯ ನಿರ್ಮಾಣವೂ ಹೌದು. ಉತ್ತಮ ಚಾರಿತ್ರ್ಯ ನಿರ್ಮಾಣದಿಂದ ಮಾತ್ರವೇ ರಾಷ್ಟ್ರನಿರ್ಮಾಣ” ಎಂಬ ಸ್ವಾಮಿ ವಿವೇಕಾನಂದರ ಅಭಿಪ್ರಾಯವು ಶಿಕ್ಷಣದಿಂದ ಪ್ರಥಮವಾಗಿ ವಿದ್ಯಾರ್ಥಿಯ ಅಭ್ಯುದಯ,ತದನಂತರ ಸಮಾಜ, ರಾಷ್ಟ್ರ ಹಾಗೂ ಅಂತಿಮವಾಗಿ ವಿಶ್ವದ ಶ್ರೇಯಸ್ಸಿಗೆ ಪ್ರೇರಕವಾಗುತ್ತದೆ ಎಂಬುದು ಸಾರ್ವಕಾಲಿಕ ಸತ್ಯ.
ಪ್ರತಿ ವಿದ್ಯಾರ್ಥಿಯಲ್ಲಿರುವ ಅನನ್ಯ ಸಾಮರ್ಥ್ಯವನ್ನು, ಆತನು ಉಪಯೋಗಿಸಿ ಬದುಕಿನಲ್ಲಿ ಸಾಧನೆ ಮಾಡಲು ನೆರವಾಗುವುದೇ ಶಿಕ್ಷಣದ,ಶಿಕ್ಷಕರ ಗುರಿಯಾಗಬೇಕು. ಶಿಕ್ಷಣವು ಮಕ್ಕಳ ಗುರಿಯನ್ನು ರೂಪಿಸುವಂತೆ ಮಾಡುವ ಸಾಮರ್ಥ್ಯವನ್ನು ಹೊಂದಿದೆ. ಶಿಕ್ಷಣ ದೂರಾಲೋಚನೆ ಮತ್ತು ಬುದ್ಧಿವಂತಿಕೆಯನ್ನು ಬೆಳೆಸುತ್ತದೆ. ನೈತಿಕ ಮೌಲ್ಯಗಳಿಲ್ಲದ ಶಿಕ್ಷಣ ಅತ್ಯಂತ ಅಪಾಯಕಾರಿ ಆದ್ದರಿಂದ ಉತ್ತಮ ನಡತೆಯ ಬೆಳವಣಿಗೆಯು ಶಿಕ್ಷಣದ ಗುರಿಯಾಗಬೇಕು .ಇಂತಹ ಶಿಕ್ಷಣ ನೀಡುವಲ್ಲಿ ಶಿಕ್ಷಕರು
ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಉತ್ತಮ ಶಿಕ್ಷಕ ಎಂದರೆ ಇಡೀ ದೇಶದ ಆರೋಗ್ಯಕರ ಬೆಳವಣಿಗೆಯನ್ನು ಖಾತ್ರಿಪಡಿಸುವವನು ಮತ್ತು ಅವನು ಸಾಧಿಸಬಹುದಾದ ಗುರಿಗಳನ್ನು ಅವನ ಮುಂದೆ ಇರಿಸಿ, ಅವನ ನಿರೀಕ್ಷೆಗಳ ಮೇಲೆ ದೃಢವಾಗಿ ಉಳಿಸುತ್ತಾ, ಅದನ್ನು ಸಾಧಿಸಿ ತೋರಿಸುವನು.ಸೂಕ್ಷ್ಮ ಮನಸ್ಸಿನ ಸಂವೇದನಾಶೀಲ ಶಿಕ್ಷಕನು ತಾನು ಸಂಪಾದಿಸಿಕೊಂಡ ಜ್ಞಾನವನ್ನು ವಿದ್ಯಾರ್ಥಿಗಳ ಎದುರು ಪ್ರದರ್ಶಿಸುವ ಬದಲು ವಿದ್ಯಾರ್ಥಿಯ ತಿಳುವಳಿಕೆಯ ಮಟ್ಟಕ್ಕೆ ಇಳಿದು, ವಿದ್ಯಾರ್ಥಿಯ ಆತ್ಮ ವಿಶ್ವಾಸವನ್ನು ಹೆಚ್ಚಿಸಿ, ವಿದ್ಯಾರ್ಥಿಗಳಲ್ಲಿ ಆಸಕ್ತಿಯನ್ನು ಕೆರಳಿಸಿ, ಅರಳಿಸುತ್ತಾನೆ. ಸಂಕೀರ್ಣ ವಿಷಯಗಳ ಸರಳೀಕರಣ ಮಾಡುವುದು ಶಿಕ್ಷಕನಲ್ಲಿ ಇರಬೇಕಾದ ಬಹುಮುಖ್ಯ ಸಾಮಾರ್ಥ್ಯವಾಗಿದೆ.
ಶಿಕ್ಷಕರು ತಮ್ಮ ವೃತ್ತಿಯನ್ನು ಪ್ರೀತಿಸಬೇಕು.ಎಷ್ಟೇ ಕಷ್ಟವಾದರೂ ಸರಿ,ವೃತ್ತಿ ಧರ್ಮವನ್ನು ಬಿಡದೆ, ನಿಷ್ಪಕ್ಷಪಾತದಿಂದ, ನಿಷ್ಕಲ್ಮಶ ಮನಸ್ಸಿನಿಂದ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ಮಿಡಿಯುವ ಮನಸ್ಸಿನಿಂದ, ವಿದ್ಯಾರ್ಥಿಗಳ ನಾಡಿಮಿಡಿತವನ್ನು ತಿಳಿದು,ನುಡಿದಂತೆ ನಡೆದು ,ಪ್ರಭಾವಿ ಶಿಕ್ಷಕನಾಗಿ ವಿದ್ಯಾರ್ಥಿಗಳ ಕಣ್ಣೆದುರು ನಿಲ್ಲುವಂತವನಾಗಬೇಕು.ಅಂತಹ ಶಿಕ್ಷಕನು ರಾಷ್ಟ್ರ ನಿರ್ಮಾಪಕನಾಗುತ್ತಾನೆ ಎಂಬುದನ್ನು ಗಟ್ಟಿಯಾಗಿ ಹೇಳಬೇಕಾದ ಅಗತ್ಯವಿಲ್ಲ.ಶಿಕ್ಷಕ ಸಮರ್ಥನಾಗಿದ್ದರೆ ಮಾತ್ರ ,ರಾಷ್ಟ್ರರಕ್ಷಕನಾಗಲು ಸಾಧ್ಯ,ಸಮರ್ಥ ಶಿಕ್ಷಕ ರಾಷ್ಟ್ರ ನಿರ್ಮಾಪಕ ಎಂಬುವುದು ಎಷ್ಟು ಸತ್ಯವೋ ಅಸಮರ್ಥ ಶಿಕ್ಷಕನಿಂದ ರಾಷ್ಟ್ರದ ಅಧಃಪತನ ಎಂಬುವುದು ಅಷ್ಟೇ ಸತ್ಯ.
ಶಿಕ್ಷಕ ವೃತ್ತಿಯ ಸವಾಲುಗಳು
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ವೃತ್ತಿಗೂ ಅದರದ್ದೇ ಆದ ಸವಾಲು ಸಮಸ್ಯೆಗಳು ಇರುತ್ತವೆ. ಹಾಗೆಯೇ ಶಿಕ್ಷಕ ವೃತ್ತಿಯಲ್ಲಿ ಇಂದು ಶಿಕ್ಷಕರು ಹಲವಾರು ಸಮಸ್ಯೆ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂದು ವಿದ್ಯಾಸಂಸ್ಥೆಯಲ್ಲಿ ಶಿಕ್ಷಕರು ಒತ್ತಡದಲ್ಲಿಯೇ ತಮ್ಮ ಕರ್ತವ್ಯವನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಇದೆ. ಅತಿಯಾದ ಕೆಲಸದ ಒತ್ತಡ ಹಾಗೂ ಸಮಯದ ಒತ್ತಡದಿಂದ ಶಿಕ್ಷಕರು ತಮ್ಮ ಆರೋಗ್ಯವನ್ನು ಕಳೆದುಕೊಳ್ಳುತ್ತಿದ್ದಾರೆ.ಅಗತ್ಯವಾಗಿ ಇರಬೇಕಾದ ಅಹಲ್ಲಾದಕರ ವಾತಾವರಣ ಇಲ್ಲದೆ,ಸದಾ ಒತ್ತಡ ಗೊಂದಲದಲ್ಲಿ ತಮ್ಮ ಪಾಠ ಪ್ರವಚನದ ಜೊತೆಗೆ ಇನ್ನುಳಿದ ಕೆಲವೊಂದು ಕಾರ್ಯಗಳನ್ನು ನಿರ್ವಹಿಸಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ.
ನೈತಿಕತೆವಿದ್ಯಾರ್ಥಿಗಳಿಗೆ ನೈತಿಕ ನೆಲೆಯಿಂದ ಪಾಠವನ್ನು ಹೇಳಿಕೊಡಬೇಕಾದ ಶಿಕ್ಷಕರಲ್ಲಿ ಎಲ್ಲೋ ಅಲ್ಲೊಬ್ಬರು ಇನ್ನೊಬ್ಬರು ನೈತಿಕತೆಗೆ ದೋಹ ಬಗೆದಾಗ ಇಡೀ ಶಿಕ್ಷಕ ಸಮಾಜವೇ ಅದಕ್ಕೆ ನೈತಿಕ ಹೊಣೆಯನ್ನು ಹೊರಬೇಕಾಗುತ್ತದೆ.ಸಮಾಜ ಇಡೀ ಶಿಕ್ಷಕ ಸಮುದಾಯದ ಮೇಲೆ ಬೊಟ್ಟು ಮಾಡಿ ತೋರಿಸುತ್ತದೆ.
ವಿದ್ಯಾರ್ಥಿಗಳು ದಾರಿ ತಪ್ಪುತ್ತಿದ್ದಾರೆಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳು ದಾರಿ ತಪ್ಪುತ್ತಿರುವಾಗ ಒಬ್ಬ ಶ್ರೇಷ್ಠ ಶಿಕ್ಷಕನೂ ಸಹ ಅಸಹಾಯಕನಾಗಿ ನೋಡುತ್ತಾ ನಿಲ್ಲಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತಪ್ಪು ಮಾಡಿದಾಗ ಶಿಕ್ಷಕರು ಪ್ರೀತಿಯಿಂದ ಹೇಳಬೇಕೆ ವಿನಹ, ಗದರಿಸಿ, ಬೆದರಿಸಿ, ಶಿಕ್ಷೆಕೊಟ್ಟು ಸರಿದಾರಿಗೆ ತರುವಂತಹ ಸಮಯದಲ್ಲಿ ಕೆಲವೊಮ್ಮೆ ಶಿಕ್ಷಕನಾದವನು ಕಾನೂನಿನ ಪ್ರಕಾರ ಸವಾಲನ್ನು ಎದುರಿಸುವಂತಹ ಪರಿಸ್ಥಿತಿ ಎದುರಾಗುವುದರಿಂದ ಅಸಹಾಯಕನಾದ ಶಿಕ್ಷಕನು ತನ್ನ ಸ್ಥಾನದ ಭದ್ರತೆಯಿಂದ ಮೌನ ವಹಿಸಲೇ ಬೇಕಾಗುತ್ತದೆ.
ಇಂದು ಸಾಮಾಜಿಕ ಜಾಲತಾಣಕ್ಕೆ ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ತೆರೆದುಕೊಳ್ಳುವುದರಿಂದ, ವಿದ್ಯಾರ್ಥಿಗಳ ಮನಸ್ಸು ದುಷ್ಟಗಳ ಕಡೆಗೆ ಸೆಳೆಯಲ್ಪಟ್ಟು, ಅಭ್ಯಾಸದಿಂದ ಹಿಂದೆ ಉಳಿಯುವ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಅಭ್ಯಾಸದ ಕಡೆಗೆ ಸೆಳೆದುಕೊಂಡು,ವಿದ್ಯಾರ್ಥಿಗಳು ಮೈಗೂಡಿಸಿಕೊಂಡ ದುಶ್ಚಟಗಳನ್ನು ಬಿಡಿಸುವ ಮಹತ್ತರವಾದ ಜವಾಬ್ದಾರಿ ಶಿಕ್ಷಕರ ಮೇಲಿರುವುದರಿಂದ,ಶಿಕ್ಷಕ ವೃತ್ತಿ ಎನ್ನುವುದು ಸವಾಲೇ ಆಗಿದೆ
ವಿದ್ಯಾರ್ಥಿಗಳ ವೈಯಕ್ತಿಕ ಸಮಸ್ಯೆಗಳು
ಇಂದಿನ ಸ್ಪರ್ಧಾತ್ಮಕ ಯುಗ ,ಒತ್ತಡದ ಸಮಯದಲ್ಲಿ ವಿದ್ಯಾರ್ಥಿಗಳು ವೈಯಕ್ತಿಕವಾಗಿಯೂ ಸಹ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಕೆಲಸದ ಒತ್ತಡದಿಂದ ತಂದೆ ತಾಯಿ ಶಾಲೆಗೆ ಹೋಗುವ ತಮ್ಮ ಮಕ್ಕಳ ಮೇಲೆ ಗಮನಹರಿಸದೆ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ಅಂತಹ ವಿದ್ಯಾರ್ಥಿಗಳ ಬಗ್ಗೆ ಶಿಕ್ಷಕರ ಗಮನಕ್ಕೆ ಬಂದಾಗ, ಹೆತ್ತವರ ಅಥವಾ ಪೋಷಕರ ಮನವೊಲಿಸಿ, ಅಂತಹ ವಿದ್ಯಾರ್ಥಿಗಳು ತಮ್ಮ ಉಜ್ವಲ ಭವಿಷ್ಯವನ್ನು ಕಾಣುವಂತೆ ಮಾರ್ಗದರ್ಶನ ಮಾಡುವ ಜವಾಬ್ದಾರಿ ಶಿಕ್ಷಕರು ವಹಿಸಿಕೊಳ್ಳುವ ಅನಿವಾರ್ಯತೆ ಸೃಷ್ಟಿಯಾಗಿದೆ.
“ಮನೆಯ ಮೊದಲ ಪಾಠಶಾಲೆ ,ಮಾತೆ ಮೊದಲ ಗುರು” ಎಂಬಂತೆ ಮಕ್ಕಳಿಗೆ ಮನೆಯಲ್ಲಿ ಸಿಗಬೇಕಾದ ಉತ್ತಮ ಸಂಸ್ಕಾರ ಸಿಗದೇ ಇದ್ದಾಗ ,ವಿದ್ಯಾರ್ಥಿಗಳು ಶಾಲೆಯನ್ನು ಸೇರಿದಾಗ ಶಾಲೆಯಲ್ಲಿ ಶಿಕ್ಷಕರಿಗೆ ಸಂಸ್ಕಾರದ ಪಾಠ ಮಾಡುವುದು ಬಹಳ ಕಷ್ಟವೇ ಸರಿ .ಇದಕ್ಕೆ ಹೆತ್ತವರ ಸಹಕಾರವೂ ಬೇಕಾಗುತ್ತದೆ. ಆದರೆ ಇಂದು ಕೆಲವು ಹೆತ್ತವರ ಮನಸ್ಥಿತಿ ತಮ್ಮ ಮಕ್ಕಳಿಗೆ ಗದರಿಸಬಾರದು ಬೆದರಿಸಬಾರದು ಅದು ಅವಹೇಳನವಾಗುತ್ತದೆ ಎಂಬಂತಿರುತ್ತದೆ. ಆದರೆ ಅಂತಹ ಮಕ್ಕಳಲ್ಲಿ ಶಿಕ್ಷಕರು ಸಂಸ್ಕಾರ ಮೂಡಿಸಬೇಕು ಎನ್ನುವ ಅಪೇಕ್ಷೆ ಅವರು ಶಿಕ್ಷಕರಿಂದ ಮಾಡುತ್ತಾರೆ ಎಷ್ಟೋ ಸಂದರ್ಭದಲ್ಲಿ ಮಕ್ಕಳು ತಪ್ಪು ಮಾಡಿದಾಗ ಮನೆಯಲ್ಲಿ ಹೆತ್ತವರೆ ಅವರಿಗೆ ಬೆಂಬಲಿಗರಾಗಿ ನಿಂತಾಗ, ಬದ್ಧತೆಯಿಂದ ಕೆಲಸ ಮಾಡುವ ಶಿಕ್ಷಕನೂ ಸಹ ಮೌನ ವಹಿಸಬೇಕಾಗುತ್ತದೆ. ಇಂತಹ ಸಂದರ್ಭದಲ್ಲಿ ಮಕ್ಕಳು ತಪ್ಪು ದಾರಿಯನ್ನು ಹಿಡಿಯುವುದು ಸಹಜ.
ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲೂ ಸಹ ನಮ್ಮ ದೇಶದ ಪರಿಸ್ಥಿತಿಯನ್ನು ಅವಲೋಕಿಸಿದಾಗ ನಮಗೆ ತಿಳಿಯುತ್ತದೆ ನಮ್ಮ ದೇಶದಲ್ಲಿ ಶಿಕ್ಷಣದ ಗುಣಮಟ್ಟ ಹಾಗೂ ಶಿಕ್ಷಕರ ಸಾಮರ್ಥ್ಯ ಎಷ್ಟಿದೆ ಎಂಬುವುದು.ಒಂದು ಕಡೆಯಲ್ಲಿ ಸಮಾಜ ಘಾತುಕ ಶಕ್ತಿ ವಿಜೃಂಭಿಸುತ್ತಿದ್ದರೂ,ಮತ್ತೊಂದು ಕಡೆಯಲ್ಲಿ ಸಮಾಜ ನಿರ್ಮಾಣದ ಕೆಚ್ಚು ಕೆಡವಿನಿಂತು, ಸಮಾಜ ಘಾತುಕ ಶಕ್ತಿಯನ್ನು ಮೆಟ್ಟಿ ,ಸಮಾಜ ನಿರ್ಮಾಣದತ್ತ ಸಾಗುತ್ತಿದೆ.ಅಂದರೆ ಶಿಕ್ಷರಾದವರೂ ನಿರಾಶೆಪಡುವ ಅಗತ್ಯವಿಲ್ಲ.ಭರವಸೆಯ ಹೊಂಗಿರಣವೂ ಅಲ್ಲಲ್ಲಿ ಬೆಳಕು ಬೀರುತ್ತಿದೆ ಎಂಬುವುದೇ ಶಿಕ್ಷಕರಾದವರಿಗೆ ಸಮಾಧಾನ.
ಆತ್ಮವಲೋಕನ ಇರಲಿ
ವೃತ್ತಿಗಳಲ್ಲಿ ಶ್ರೇಷ್ಠವಾದ ವೃತ್ತಿ ಎಂದರೆ ಶಿಕ್ಷಕ ವೃತ್ತಿ ಎನ್ನುವುದು ಸಾರ್ವಜನಿಕವಾಗಿ ಒಪ್ಪ ತಕ್ಕಂತಹ ವಿಚಾರ. ಏಕೆಂದರೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಜವಾಬ್ದಾರಿ ಅದು ಸಣ್ಣದಲ್ಲ. ದೇಶ ಕಟ್ಟುವ ಪ್ರಜೆಗಳನ್ನು ಸುಸಂಸ್ಕೃತವಾಗಿ ರೂಪಿಸಿ ಬೆಳೆಸಬೇಕಾದ ಶಿಕ್ಷಕ ವೃತ್ತಿಯಲ್ಲಿರುವವರು ಆಗಾಗ ಆತ್ಮಾವಲೋಕನ ಮಾಡಿಕೊಳ್ಳಬೇಕಾಗುತ್ತದೆ.ಒಬ್ಬ ವೈದ್ಯ ಸಣ್ಣ ತಪ್ಪು ಮಾಡಿದರೂ ಒಂದು ಜೀವ ಹೋಗುತ್ತದೆ. ಒಬ್ಬ ಕೊಲೆಗಾರ ಕ್ಷುಲ್ಲಕ ಕಾರಣಕ್ಕೆ ಕೊಲೆ ಮಾಡಿದರೂ ಜೀವ ಹೋಗುತ್ತದೆ.
ಅದಕ್ಕೆ ಪರೋಕ್ಷವಾಗಿ ಕಾರಣರು ಅಂತಹ ವೈದ್ಯರನ್ನು ಕೊಲೆಗಾರರನ್ನು ನಿರ್ಮಿಸಿದ ಶಿಕ್ಷಕರೇ ಎಂದು ಸಮಾಜ ಶಿಕ್ಷಕರನ್ನು ಬೊಟ್ಟು ಮಾಡಿ ತೋರಿಸುತ್ತದೆ. ಇಂತಹ ಸಂಕ್ರಮಣ ಕಾಲದಲ್ಲಿ ಶಿಕ್ಷಕರಾದವರು ತಮ್ಮ ವೃತ್ತಿ ಬದ್ಧತೆಯ ಮೇಲೆ, ನೈತಿಕ ಶುದ್ಧತೆಯ ಮೇಲೆ ಸಾಮಾಜಿಕ ಜಾಗೃತಿಯ ಮೇಲೆ ಗಮನವನ್ನು ಹರಿಸಿ, ವಿದ್ಯಾರ್ಥಿಗಳ ಮುಂದೆ ಆದರ್ಶ ಶಿಕ್ಷಕರಾಗಿ ನಿಲ್ಲಬೇಕಾದ ಅನಿವಾರ್ಯತೆ ಇದೆ. ಆದರೆ ಬೇಸರದ ಸಂಗತಿ ಎಂದರೆ ಇತ್ತೀಚೆಗೆ
ನೈತಿಕತೆಯ ಪಾಠ ಹೇಳಬೇಕಾದ ಶಿಕ್ಷಕರೇ ದಾರಿ ತಪ್ಪುತ್ತಿರುವುದು ಖೇದಕರ. ಈ ನಿಟ್ಟಿನಲ್ಲಿ ಶಿಕ್ಷಕ ವೃತ್ತಿಯಲ್ಲಿದ್ದವರು ಆತ್ಮಾವಲೋಕನ ಮಾಡಿಕೊಂಡು ಸಮಾಜದಲ್ಲಿ ಶಿಕ್ಷಕ ವೃತ್ತಿಯ ಧರ್ಮವನ್ನು ಅರಿತುಕೊಂಡು ಬದ್ಧತೆಯಲ್ಲಿ ಕರ್ಮವೆಸಗಬೇಕಾದ ಅನಿವಾರ್ಯತೆ ಇದೆ.
ಸಮರ್ಥ ಶಿಕ್ಷಕರು
ಇಂದು ನಮ್ಮ ದೇಶದಲ್ಲಿ ಎಷ್ಟು ಮಂದಿ ಸಮರ್ಥ ಶಿಕ್ಷಕರಿಗೆ ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವ ಒಂದು ಅವಕಾಶ ಸಿಗುತ್ತಿದೆ? ಅದರ ಆಧಾರದ ಮೇಲೆ ನಾವು ನಮ್ಮ ಪ್ರಗತಿಯನ್ನು ವಿಶ್ಲೇಷಿಸಬಹುದು “ಯಥಾರಾಜ ತಥಾ ಪ್ರಜಾ”ಎಂಬುವುದು ಕೂಡ ರಾಷ್ಟ್ರದ ಭವಿಷ್ಯದ ಮೇಲೆ ಪ್ರಭಾವ ಬೀರುವುದರಿಂದ,ಶಿಕ್ಷಕರಾದವರಿಗೆ ಬಹಳಷ್ಟು ಜವಾಬ್ದಾರಿ ಇದೆ. ಶಿಕ್ಷಕ ವೃತ್ತಿಯ ಪಾವಿತ್ರ್ಯತೆಯನ್ನು ಅರಿತು, ವೃತ್ತಿ ಧರ್ಮವನ್ನು ಪಾಲಿಸಿಕೊಂಡು, ನಿಸ್ವಾರ್ಥಿಗಳಾಗಿ ಸದಾ ವಿದ್ಯಾರ್ಥಿಗಳ ಹಿತವನ್ನೇ ಬಯಸಿ, ತಾವು ಪಡೆದ ಸಂಬಳದಲ್ಲಿ ಒಂದಿಷ್ಟನ್ನು ವಿದ್ಯಾರ್ಥಿಗಳ ಒಳಿತಿಗಾಗಿ ವಿನಿಯೋಗಿಸಿ, ಕರ್ತವ್ಯ ಬದ್ಧತೆಯಿಂದ ದುಡಿಯುವ ಅದೆಷ್ಟೋ ಪ್ರಾಮಾಣಿಕ ಶಿಕ್ಷಕರು “ಎಲೆ ಮರೆಯ ಕಾಯಿ”ಯಂತೆ ಇದ್ದಾರೆ. ಅವರೂ ಸಹ ಸಮಾಜದಲ್ಲಿ ಮುನ್ನೆಲೆಗೆ ಬರಲಿ. ಇತರ ಶಿಕ್ಷಕರಿಗೆ ಸ್ಫೂರ್ತಿಯಾಗಲಿ. ವಿದ್ಯಾರ್ಥಿಗಳಿಗೆ ಮಾದರಿಯಾಗಲಿ. ಸಮರ್ಥ ಶಿಕ್ಷಕನಾಗಿ,ರಾಷ್ಟ್ರ ನಿರ್ಮಾಪಕನಾಗಿ, ರಕ್ಷಕನಾಗಿ ಸಂತೃಪ್ತಿ ಕಾಣಬೇಕಾದರೆ ಶಿಕ್ಷಕರು ಎಚ್ಚರದಿಂದ ಕಾರ್ಯನಿರ್ವಹಿಸಬೇಕಾಗಿದೆ. ಪ್ರಸ್ತುತ ಸಮಾಜದ ಸಂಕ್ರಮಣ ಕಾಲದಲ್ಲಿ ಶಿಕ್ಷಕರಾದ ನಾವು ಎಚ್ಚೆತ್ತು, ಇಂದಿನ ವಿದ್ಯಾರ್ಥಿಗಳು ಮುಂದಿನ ಪ್ರಜೆಗಳು ಸರಿಯಾದ ದಾರಿಯಲ್ಲಿ ನಡೆಯುವಂತೆ ಮಾರ್ಗದರ್ಶನ ನೀಡಿದರೆ ನಮ್ಮ ಶಿಕ್ಷಕ ವೃತ್ತಿ ಸಾರ್ಥಕ್ಯ ಪಡೆಯುತ್ತದೆ.ಶಿಕ್ಷಕರ ದಿನಾಚರಣೆಯ ಈ ಶುಭ ಸಂದರ್ಭದಲ್ಲಿ ನಾವೆಲ್ಲ ಆಶಾವಾದಿಗಳಾಗಿ, ಸಕಾರಾತ್ಮಕ ದೃಷ್ಟಿಯಿಂದ,ನಮ್ಮ ನಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿ,ವೃತ್ತಿಧರ್ಮ ಮೆರೆಯೋಣ,ಸಂತೃಪ್ತಿ ಪಡೆಯೋಣ.
ಡಾ.ಸುಮತಿ ಪಿ