ವಿಡೀಯೊ ಕರೆಯಲ್ಲಿ ಅಂತ್ಯಕ್ರಿಯೆ ನೋಡಿದ ಪುತ್ರಿಯರು..!

ಸೋನಿಪತ್: ತಮ್ಮ ಮೂವರು ಪುತ್ರಿಯರಿಗೆ ಉತ್ತಮ ಶಿಕ್ಷಣ ನೀಡಿ ಜೀವನದಲ್ಲಿ ನೆಲೆಗೊಳಿಸಿದ್ದ ತಂದೆಯೊಬ್ಬರು ಹರಿಯಾಣದ ಸೋನಿಪತ್ನ ವೃದ್ಧಾಶ್ರಮದಲ್ಲಿ ನಿಧನರಾಗಿದ್ದಾರೆ. ಆದರೆ ಅವರ ಅಂತ್ಯಕ್ರಿಯೆಗೆ ಪುತ್ರಿಯರು ಯಾರೂ ಹಾಜರಾಗದೇ, ನೇಪಾಳ, ಉತ್ತರ ಪ್ರದೇಶ ಹಾಗೂ ಮುಂಬೈನಿಂದ ವಿಡಿಯೊ ಕರೆ ಮೂಲಕ ಅಂತಿಮ ವಿಧಿವಿಧಾನಗಳನ್ನು ವೀಕ್ಷಿಸಿದ ಘಟನೆ ನಡೆದಿದೆ.
ಮುಂಬೈ ಮೂಲದ ಮಾಜಿ ಜವಳಿ ವ್ಯಾಪಾರಿ ಶಿವಚರಣ್ ರಾಮ್ ರತನ್ ಗುಪ್ತಾ ಕಳೆದ ಒಂದೂವರೆ ವರ್ಷಗಳಿಂದ ಸೋನಿಪತ್ನ ಪಶ್ಚಿಮ ರಾಮ್ ನಗರದಲ್ಲಿರುವ ವೃದ್ಧಾಶ್ರಮದಲ್ಲಿ ವಾಸಿಸುತ್ತಿದ್ದರು. ಪತ್ನಿ ಮೀನಾ ಅವರ ನಿಧನದ ಬಳಿಕ ಅಲ್ಲೇ ನೆಲೆಸಿದ್ದ ಅವರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಮುಂಜಾನೆ ಮೃತಪಟ್ಟರು. ಬಳಿಕ ವೃದ್ಧಾಶ್ರಮದ ಆಡಳಿತ ಮಂಡಳಿ ಅವರ ಪುತ್ರಿಯರಿಗೆ ಮಾಹಿತಿ ನೀಡಿತು.
ಪುತ್ರಿಯರಿಗೆ ಸೋನಿಪತ್ಗೆ ಬರಲು ಸಾಧ್ಯವಾಗದ ಕಾರಣ, ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯರ ಸಹಕಾರದಿಂದ ಅಂತ್ಯಕ್ರಿಯೆ ನೆರವೇರಿಸಲಾಯಿತು. ಈ ವೇಳೆ ಪುತ್ರಿಯರು ವಿಡಿಯೊ ಕರೆ ಮೂಲಕ ಅಂತಿಮ ಸಂಸ್ಕಾರವನ್ನು ವೀಕ್ಷಿಸಿದರು. ಸುಮಾರು 20 ದಿನಗಳ ಹಿಂದೆಯೇ ಆರೋಗ್ಯ ಹದಗೆಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರೂ ಅವರು ಭೇಟಿ ನೀಡಿರಲಿಲ್ಲ ಎಂದು ವೃದ್ಧಾಶ್ರಮದ ಆಡಳಿತಾಧಿಕಾರಿ ಆನಂದ್ ಕುಮಾರ್ ತಿಳಿಸಿದ್ದಾರೆ.
ಹಿರಿಯ ಪುತ್ರಿ ಅನಿತಾ ಆನ್ಲೈನ್ ಮೂಲಕ ₹5,100 ಕಳುಹಿಸಿ ತಂದೆಯ ಅಂತ್ಯಕ್ರಿಯೆಯನ್ನು ವಿಧಿವತ್ತಾಗಿ ನೆರವೇರಿಸುವಂತೆ ಮನವಿ ಮಾಡಿದರು. ಅಂತ್ಯಕ್ರಿಯೆ ಬಳಿಕ ಅದರ ವಿಡಿಯೊ ಕಳುಹಿಸುವಂತೆ ಪುತ್ರಿಯರು ಕೇಳಿಕೊಂಡಿದ್ದು, ವಿಡಿಯೊ ಕರೆಯ ವೇಳೆ “ಇನ್ನೆಷ್ಟು ಸಮಯ ಆಗುತ್ತದೆ? ನಮಗೆ ಊಟ ಮಾಡಿ ಸ್ನಾನಕ್ಕೂ ಹೋಗಬೇಕಿದೆ” ಎಂದು ಹೇಳಿರುವುದು ಕೇಳಿಬಂದಿದೆ.
ಗುಪ್ತಾ ಅವರು ತಮ್ಮ ಮೂವರು ಪುತ್ರಿಯರಿಗೂ ಉತ್ತಮ ಶಿಕ್ಷಣ ನೀಡಿದ್ದು, ಅವರಲ್ಲಿ ಇಬ್ಬರು ಶಿಕ್ಷಕಿಯರಾಗಿದ್ದಾರೆ. ಬಳಿಕ ಕುಟುಂಬದ ಇಚ್ಛೆಯಂತೆ ಅವರ ನೇತ್ರದಾನವೂ ಮಾಡಲಾಗಿದ್ದು, ಅಸ್ಥಿಗಳನ್ನು ಗಂಗಾ ನದಿಯಲ್ಲಿ ವಿಸರ್ಜಿಸುವಂತೆ ವೃದ್ಧಾಶ್ರಮದವರಿಗೆ ತಿಳಿಸಲಾಗಿದೆ. ಕೊನೆಗೆ ವೃದ್ಧಾಶ್ರಮದ ಸಿಬ್ಬಂದಿ ಹಾಗೂ ಸ್ಥಳೀಯ ನಿವಾಸಿಗಳೇ ಎಲ್ಲಾ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿದರು.

























































