
ವಯನಾಡು: ಭೂಕುಸಿತದಿಂದ ತತ್ತರಿಸುತ್ತಿರುವ ವಯನಾಡು ಸ್ಮಶಾನದಂತಾಗಿದ್ದು ಕಳೆದ ನಾಲ್ಕು ದಿನಗಳಿಂದ ಸಮರೋಪಾದಿಯಲ್ಲಿ ರಕ್ಷಣಾಕಾರ್ಯಗಳು ನಡೆಯುತ್ತಿದೆ. ಇದೀಗ ರಕ್ಷಣಾ ಕಾರ್ಯಾಚರಣೆಗೆ ಮತ್ತಷ್ಟು ಚುರುಕುಗೊಳಿಸಲಾಗಿದ್ದು ಭಾರತೀಯ ಸೇನೆಯ ರೇಡಾರ್ ಥರ್ಮಲ್ ಇಮೇಜ್‌ನಲ್ಲಿ ಅವಶೇಷಗಳಡಿ ಉಸಿರಾಟದ ಸಿಗ್ನಲ್ ಪತ್ತೆಯಾಗಿದೆ. ಹೀಗಾಗಿ ಸಿಗ್ನಲ್ ಪತ್ತೆಯಾದ ಕಡೆಯಲ್ಲಿ ಭಾರತೀಯ ಸೇನೆ, ಎನ್‌ಡಿಆರ್‌ಎಫ್ ಹಾಗೂ ಇತರ ರಕ್ಷಣಾ ತಂಡಗಳು ಕಾರ್ಯಾಚರಣೆ ತ್ವರಿತಗೊಳಿಸಿದೆ.
ಕೆಲವು ಮನೆಗಳ ಭಾಗದಲ್ಲಿ ಈಗಲೂ ಉಸಿರಾಡುತ್ತಿರುವ ಸಿಗ್ನಲ್ ಪತ್ತೆಯಾಗಿದ್ದು ಹೀಗಾಗಿ ಮನೆಗಳ ಅಡಿಯಲ್ಲಿ ಹಲವರು ಸಿಲುಕಿದ್ದಾರೆ. ಭೂಕುಸಿತದಲ್ಲಿ ಅವಶೇಷ, ಕಲ್ಲು ಬಂಡೆಗಳಲ್ಲಿ ಹಲವರು ಸಿಲುಕಿದ್ದಾರೆ. ರೇಡಾರ್‌ನಲ್ಲಿ ನಾಡಿ ಮಿಡಿತದ ಸಿಗ್ನಲ್ ಸಿಕ್ಕಿದೆ. ಹೀಗಾಗಿ ಕಾರ್ಯಾಚರಣೆ ಮೂಲಕ ಸುರಕ್ಷಿತವಾಗಿ ಹೊರತೆಗೆಯುವ ಪ್ರಯತ್ನ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇದೀಗ ಈ ಭಾಗಕ್ಕೆ ಆಗಮಿಸಿರುವ ಜನರನ್ನು ಸುರಕ್ಷತಾ ಕಾರಣಗಳಿಗಾಗಿ ದೂರ ಸರಿಸಲಾಗಿದೆ. ಇದೇ ವೇಳೆ ಪಕ್ಕದ ಬೆಟ್ಟಗಳಲ್ಲೂ ಶೋಧ ಕಾರ್ಯ ನಡೆಯುತ್ತಿದೆ. ಪ್ರಾಣ ಉಳಿಸಿಕೊಳ್ಳಲು ಬೆಟ್ಟ ಹತ್ತಿರುವ ಸಾಧ್ಯತೆ ಇರುವ ಕಾರಣ ಕಾಡುಗಳಲ್ಲೂ ಶೋಧ ಕಾರ್ಯ ನಡೆಸಲಾಗುತ್ತಿದೆ.











