ಕಲಬುರಗಿಯಲ್ಲಿ 45°C ದಾಖಲೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಉತ್ತರ ಕರ್ನಾಟಕ ಭಾಗಗಳಲ್ಲಿ ಉಷ್ಣಾಂಶ ಗರಿಷ್ಠ ಮಟ್ಟಕ್ಕೆ ಏರಿದೆ. ಕಲಬುರಗಿಯಲ್ಲಿ 45 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, 12 ಜಿಲ್ಲೆಗಳಿಗೆ ನಾಲ್ಕು ದಿನಗಳ ಕಾಲ ಹೀಟ್‌ವೇವ್ ಎಚ್ಚರಿಕೆ ನೀಡಲಾಗಿದೆ.
ಹವಾಮಾನ ಇಲಾಖೆ ಪ್ರಕಾರ, ಏಪ್ರಿಲ್ 19ರವರೆಗೆ ಉತ್ತರ ಒಳನಾಡು ಪ್ರದೇಶಗಳಲ್ಲಿ ಬಿಸಿಗಾಳಿ ಮುಂದುವರಿಯಲಿದೆ. ಬೀದರ್, ಕಲಬುರಗಿ, ರಾಯಚೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಬೆಂಗಳೂರಿನಲ್ಲಿಯೂ ತಾಪಮಾನ 38–39 ಡಿಗ್ರಿಗೆ ಏರಬಹುದೆಂದು ತಿಳಿಸಲಾಗಿದ್ದು ಕರಾವಳಿ ಭಾಗಗಳಲ್ಲೂ ಉಷ್ಣಾಂಶ ಹೆಚ್ಚುವ ಸಾಧ್ಯತೆ ಇದೆ. ತೀವ್ರ ಬಿಸಿಲಿನ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಆರೆಂಜ್ ಅಲರ್ಟ್ ಜಾರಿಯಲ್ಲಿದ್ದು, ಮಧ್ಯಾಹ್ನ ಸಮಯದಲ್ಲಿ ಹೊರಗೆ ಹೋಗದಂತೆ ಸಾರ್ವಜನಿಕರಿಗೆ ಸೂಚಿಸಲಾಗಿದೆ. ಆರೋಗ್ಯದ ದೃಷ್ಟಿಯಿಂದ ಹೆಚ್ಚಿನ ಜಾಗ್ರತೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.





















































































