
ಬೆಂಗಳೂರು: ಇಂದು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿರುವ ನ್ಯಾಯ ಪೀಠವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ನಿವೇಶನಗಳನ್ನು ಸಿಎಂ ಸಿದ್ದರಾಮಯ್ಯ ಪತ್ನಿಗೆ ಕಾನೂನುಬಾಹಿರವಾಗಿ ಕೊಟ್ಟಿದ್ದ 14 ಸೈಟ್ಗಳ ತನಿಖೆಯನ್ನ ಸಿಬಿಐಗೆ ವಹಿಸಬೇಕೇ ಬೇಡವೇ ಎನ್ನುವ ಬಗ್ಗೆ ಬೆಳಗ್ಗೆ 10.30 ಕ್ಕೆ ತೀರ್ಪು ಪ್ರಕಟಿಸಲಿದ್ದು ಇತ್ತ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣ ತೀರ್ಪು ಸಹ ಇಂದೇ ಪ್ರಕಟವಾಗಲಿದೆ.
ಸ್ನೇಹಮಯಿ ಕೃಷ್ಣ ಪರ ವಾದ ಮಂಡಿಸಿರುವ ವಕೀಲ ಮಣಿಂದರ್ ಸಿಂಗ್, ಸಿಬಿಐ ತನಿಖೆ ಯಾಕೆ ಅಗತ್ಯ ಎನ್ನುವುದರ ಬಗ್ಗೆ ಉಲ್ಲೇಖ ಮಾಡಿದ್ದು 3 ಲಕ್ಷ 26 ಸಾವಿರ ಮೊತ್ತದ ಜಮೀನು ಸ್ವಾಧೀನಕ್ಕೆ ಬದಲಾಗಿ ದುಬಾರಿ ನಿವೇಶನ ಹಂಚಿಕೆ ಮಾಡಲಾಗಿದೆ. ಅಸ್ತಿತ್ವದಲ್ಲೇ ಇಲ್ಲದ ಜಮೀನು ಭೂಪರಿವರ್ತನೆ ಮಾಡಲಾಗಿದೆ. ಕ್ಯಾಬಿನೆಟ್ ಟಿಪ್ಪಣಿ, ಮುಖ್ಯ ಕಾರ್ಯದರ್ಶಿ ಟಿಪ್ಪಣಿಯೂ ಸಿಎಂ ಪತ್ನಿಗೆ ಅನುಕೂಲವಾಗುವಂತೆ ಮಾಡಲಾಗಿದೆ. ಮುಖ್ಯಮಂತ್ರಿ ರಕ್ಷಣೆಗೆ ಇಡೀ ಸಚಿವ ಸಂಪುಟವೇ ಒಟ್ಟಾಗಿರುವಾಗ ಸ್ಥಳೀಯ ಪೊಲೀಸರಿಂದ ಸ್ವತಂತ್ರ ತನಿಖೆ ಸಾಧ್ಯವಿಲ್ಲ. ಹೀಗಾಗಿ ಈ ಪ್ರಕರಣದಲ್ಲಿ ನ್ಯಾಯ ಎತ್ತಿಹಿಡಿಯಲು ಸಿಬಿಐ ತನಿಖೆ ಅನಿವಾರ್ಯವಿದ್ದು, ಸ್ವತಂತ್ರ ನ್ಯಾಯಸಮ್ಮತ ತನಿಖೆಯಾಗಬೇಕಿದೆ ಎಂದು ವಾದ ಮಂಡಿಸಿದ್ದಾರೆ.
ಇನ್ನು ಬಿ.ಎಸ್. ಯಡಿಯೂರಪ್ಪ ಅವರ ಪೋಕ್ಸೋ ಪ್ರಕರಣದಲ್ಲಿ ಅವರ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್ ಹಾಗೂ ಸರ್ಕಾರದ ಪರ ಹಿರಿಯ ವಕೀಲ ಪ್ರೋ. ರವಿವರ್ಮ ಕುಮಾರ್ ವಾದ ಮಂಡಿಸಿದ್ದು ಈವರೆಗೆ ಖುದ್ದು ಹಾಜರಾತಿಯಿಂದ ಬಿಎಸ್‌ವೈಗೆ ಕೋರ್ಟ್ ವಿನಾಯಿತಿ ನೀಡಿತ್ತು. ಅಲ್ಲದೇ ಬಂಧನದಿಂದಲೂ ಮಧ್ಯಂತರ ರಕ್ಷಣೆ ಸಹ ನೀಡಿತ್ತು. ಆದ್ರೆ ಇಂದು ನ್ಯಾಯಾಲಯವು ಏನು ತೀರ್ಪು ನೀಡಲಿದೆ ಎಂದು ಎಲ್ಲರೂ ಕಾತುರತೆಯಿಂದ ಕಾಯುತ್ತಿದ್ದಾರೆ.





















