
ನವದೆಹಲಿ: ಮಹಾಕುಂಭ ಮೇಳದಲ್ಲಿ ನಡೆದ ಕಾಲ್ತುಳಿತದಿಂದಾಗಿ ಸಂಭವಿಸಿದ ಅಪಾರ ಸಾವು ನೋವುಗಳ ಪ್ರಕರಣದಲ್ಲಿ ರಾಜಕೀಯ ವಾಕ್ ಸಮರ ನಡೆಯುತ್ತಿದ್ದು ಅದೇನೆಂದರೆ ಮಂಗಳವಾರ ಲೋಕಸಭೆಯಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ವಂದನೆ ಸಲ್ಲಿಸುವ ನಿರ್ಣಯದ ಮೇಲೆ ಮಾತನಾಡಿದ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್, ‘ಸರ್ಕಾರ ಡಿಜಿಟಲ್ ಕುಂಭ ಮೇಳ ನಡೆ ಸುವುದಾಗಿ ಹೇಳಿತ್ತು. ಆದರೆ ಸತ್ತವರ ಸಂಖ್ಯೆ ಕೂಡ ಮುಚ್ಚಿಡುತ್ತಿದೆ. ಕಾಲ್ತುಳಿತಕ್ಕೆ ಬಲಿಯಾದವರ ಶವಗಳನ್ನು ಜೆಸಿಬಿ ಮತ್ತು ಟ್ರ್ಯಾಕ್ಟರ್ ಬಳಸಿ ಸರ್ಕಾರ ತೆರವು ಮಾಡಿದೆ. ದೇವರ ಆಶೀರ್ವಾದ ಪಡೆಯಲು ಬಂದವರು ತಮ್ಮ ಬಂಧುಮಿತ್ರರು ಜೀವಕಳೆದುಕೊಂಡಿದ್ದನ್ನು ನೋಡಿಕೊಂಡು ತೆರಳುವಂತಾಯಿತು’ ಎಂದು ಆರೋಪಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ‘ಸನಾತನ ಧರ್ಮವನ್ನು ವಿರೋಧಿಸುವ ಮಲ್ಲಿಕಾರ್ಜುನ ಖರ್ಗೆ, ಅಖಿಲೇಶ್ ಮೊದಲಾದವರು ಕುಂಭಮೇಳದಲ್ಲಿ ಇನ್ನಷ್ಟು ದೊಡ್ಡ ದುರಂತ ಬಯಸಿದ್ದರು. ಸಾವಿನ ವಿಷಯದಲ್ಲಿ ವಿಪಕ್ಷ ನಾಯಕರು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ’ ಎಂದು ಕಿಡಿಕಾರಿದ್ದಾರೆ.
ಇನ್ನು ಶಿವಸೇನೆ ನಾಯಕ ಸಂಜಯ್ ರಾವುತ್ ನಮ್ಮ ಕಣ್ಣಾರೆ ನೋಡಿದ ಅಂಕಿ-ಅಂಶ ಪ್ರಕಾರ ಕಾಲ್ತುಳಿತದಲ್ಲಿ 2 ಸಾವಿರ ಜನ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಪಕ್ಷೇತರ ಸಂಸದ ಪಪ್ಪು ಯಾದವ್ ಕುಂಭಮೇಳ ಕಾಲ್ತುಳಿತ ವೇಳೆ ಸುಮಾರು 300 ರಿಂದ 600 ಶವಗಳನ್ನು ಹೊರತೆಗೆಯಲಾಗಿತ್ತು ಎಂದಿದ್ದಾರೆ.





















