32.6 C
Udupi
Thursday, May 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 95

ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೯೫ ಮಹಾಭಾರತ

ಶಕುನಿ ಮಹಾ ತಂತ್ರಗಾರ. ಕಣಿಕ ಸೂಚಿಸಿದ ರಾಜತಾಂತ್ರಿಕ ನಡೆಯ ದಾರಿಯನ್ನು ಸೂಕ್ಷ್ಮಾತಿ ಸೂಕ್ಷ್ಮವಾಗಿ ಅರ್ಥೈಸಿ, ಆ ವಿಧಾನವನ್ನೇ ಪಂಚಾಂಗವಾಗಿಸಿ ಭವ್ಯ ಸೌಧದ ಕಲ್ಪನೆ ರೂಪಿಸುತ್ತಾನೆ. ವಾರಣಾವತದಲ್ಲಿ ನಡೆಯುವ ಉತ್ಸವಕ್ಕಾಗಿ ವಿಶಿಷ್ಟ ರೀತಿಯ ಭವನವೊಂದನ್ನು ನಿರ್ಮಿಸುವ ಜವಾಬ್ದಾರಿಯನ್ನು ಪುರೋಚನನಿಗೆ ನೀಡುತ್ತಾನೆ. “ಹೇ ಮಿತ್ರ ಪುರೋಚನಾ, ನಿನ್ನ ಸಕಲ ಜ್ಞಾನವನ್ನು ವಿನಿಯೋಗಿಸಿ ನಿಪುಣತೆಯಿಂದ ಭವನದ ನಿರ್ಮಾಣವಾಗಬೇಕು. ಅದಕ್ಕೆ ಉಪಯೋಗಿಸುವ ವಸ್ತುಗಳು ಬೆಂಕಿ ತಾಗಿದ ಕೂಡಲೇ ಹೊತ್ತಿ ಉರಿಯುವಂತಹ ಜ್ವಲನಶೀಲ ಗುಣ ಹೊಂದಿರಬೇಕು. ಮಾತ್ರವಲ್ಲ ಅರಗು, ಸಜ್ಜರಸ, ಆಜ್ಯ ಮೊದಲಾದ ವಸ್ತುಗಳ ಲೇಪದಿಂದ ಸಾರಣೆಗೊಂಡಿರಬೇಕು. ಈ ಭವನ ಸಂಪೂರ್ಣ ನಿರ್ಮಾಣವಾದ ಬಳಿಕ ಪಾಂಡವರನ್ನು ಸರ್ವ ಪ್ರಯತ್ನದಿಂದ ಓಲೈಸಿ ಆ ಭವನದಲ್ಲಿ ವಾಸ ಮಾಡುವಂತೆ ಪ್ರೇರೇಪಿಸಬೇಕು. ಹಾಗೆ ಮಾಡಿದ ಬಳಿಕ ಅತಿ ಗೌಪ್ಯವಾಗಿ ಅಪರಾತ್ರಿ ಪಾಂಡವರಿಗೆ ಯಾವುದೇ ಸೂಚನೆ, ಸಂಶಯ ಬಾರದ ರೀತಿ ಅಗ್ನಿ ಸ್ಪರ್ಶ ಮಾಡಿ ಆ ಭವನದೊಳಗೆ ಪಾಂಡವರನ್ನು ಸುಟ್ಟು ಭಸ್ಮಗೊಳಿಸಿಬಿಡಬೇಕು. ಪುರೋಚನ ನೀನು ಇಂತಹ ಭವನ ನಿರ್ಮಾಣ ಮಾಡಿಸಿ, ಯೋಜಿತ ಕಾರ್ಯ ಸಾಧನೆಗಾಗಿ ಪಾಂಡವರ ಸೇವಕನಾಗಿ ಅಲ್ಲೇ ಇದ್ದು ಸಮಯ ಸಾಧಿಸಿ, ಭವನಕ್ಕೆ ಅಗ್ನಿ ಸ್ಪರ್ಶ ಮಾಡುವ ಜವಾಬ್ದಾರಿಯೂ ನಿನ್ನದು. ಇಷ್ಟು ಉಪಕಾರ ಮಾಡಿದೆ ಎಂದಾದರೆ ನಿನಗೇನು ಬೇಕೋ ಅದನ್ನೆಲ್ಲಾ ಕೊಟ್ಟು ಸನ್ಮಾನಿಸುತ್ತೇವೆ. ಶ್ರೀಮಂತ ಜೀವನ, ನಿ‌ನ್ನ ನಂತರ ತಲೆಮಾರುಗಳಿಗೂ ಕರಗಿಸಲಾಗದ ಸಂಪತ್ತಿಗೆ ಒಡೆಯ ನೀನಾಗಬಹುದು. ಆದರೆ ಈ ವಿಚಾರ ಅತಿ ರಹಸ್ಯವೂ ಅಷ್ಟೇ ಶೀಘ್ರವಾಗಿಯೂ ನಡೆಯಬೇಕು.” ಎಂದು ಹೇಳಿ ಹೇರಳ ಧನ ಕನಕಾದಿ ಸಂಪತ್ತನ್ನು ನೀಡಿ ಪುರೋಚನನಿಗೆ ಆಜ್ಞೆಯಿತ್ತು ಕಳುಹಿಸಿದರು.

ಇಂತಹ ಪೂರ್ವ ತಯಾರಿಯ ಯೋಜನೆ ರೂಪಿಸಿದ ಬಳಿಕ, ಶಕುನಿ ದುರ್ಯೋಧನ, ದುಶ್ಯಾಸನಾದಿಗಳನ್ನು ಕರೆದುಕೊಂಡು ಮಹಾರಾಜ ಧೃತರಾಷ್ಟ್ರ ಮತ್ತು ಗಾಂಧಾರಿಯನ್ನು ಏಕಾಂತದಲ್ಲಿ ಸಂದಿಸಿದರು. ದುರ್ಯೋಧನ ಸವಿನಯದಿಂದ ವಿಚಾರಗಳನ್ನು ಹೇಳುತ್ತಾ ಹೇಳುತ್ತಾ ಪಾಂಡವರ ಬಗ್ಗೆ ಕಪೋಲ ಕಲ್ಪಿತ ಕಥೆಗಳನ್ನು ಕಟ್ಟುತ್ತಾ, ಅವರನ್ನು ಹೀಗೆಯೇ ಮುಂದುವರಿಯಗೊಟ್ಟರೆ ನಿಮ್ಮ ಮಕ್ಕಳಾದ ನಮ್ಮನ್ನು ಬೀದಿಗೆ ತಂದು ನಿಲ್ಲಿಸುತ್ತಾರೆ. ಮಾತ್ರವಲ್ಲ ನಿಮ್ಮನ್ನೂ ವೃದ್ದಾಪ್ಯದ ಈ ಜೀವನ ಸಂಧ್ಯಾಕಾಲದಲ್ಲಿ ಪದಚ್ಯುತಿಗೊಳಿಸಿ ವಾನಪ್ರಸ್ಥಾಶ್ರಮ ಜೀವನಕ್ಕೆ ಕಳುಹಿಸುವುದು ನಿಸ್ಸಂಶಯ ಎಂಬಂತೆ ಬಿಂಬಿಸಿ ನಂಬುವಂತೆ ಮಾಡಿದರು. ಆರಂಭದಲ್ಲಿ ಮಕ್ಕಳಿಗೆ ತಿಳಿ ಹೇಳುವ ಪ್ರಯತ್ನ ಧೃತರಾಷ್ಟ್ರ ಮಾಡಿದನು. ಪಾಂಡವರು ನನಗೆ ಮಕ್ಕಳೇ ಆಗಿದ್ದಾರೆ. ನನ್ನ ತಮ್ಮ ಪಾಂಡು ಚಕ್ರವರ್ತಿಯ ಮಕ್ಕಳು – ಅವರ ಶ್ರೇಯಸ್ಸಿಗೆ ಶ್ರಮಿಸಬೇಕಾದದ್ದು ನನ್ನ ಪಾಲಿಗೆ ಶ್ರೇಯಸ್ಕರ ಎಂದು ಹೇಳಿದನಾದರೂ, ಯಾವಾಗ ತನ್ನ ಬುಡಕ್ಕೇ ಕೊಡಲಿಯೇಟು ಬೀಳಲಿದೆ ಎಂಬ ವಿಚಾರ ಹೇಳಲ್ಪಟ್ಟಾಗ, ಅದರ ಹಿನ್ನೆಲೆಗೆ ಪೂರಕ ಕೃತಕ ಘಟನೆಗಳನ್ನು ಕಲ್ಪಿಸಿ ನಂಬುವಂತೆ ಶಕುನಿ ನಿರೂಪಿಸಿ ಹೇಳುತ್ತಾ ಹೋದನು. “ಭೀಷ್ಮ, ದ್ರೋಣ, ಕೃಪ, ವಿದುರಾದಿಗಳು ಈಗಾಗಲೇ ಪಾಂಡವರ ಕೈ ವಶರಾಗಿದ್ದಾರೆ. ಪ್ರಜಾ ಜನರೂ ಪಾಂಡವರನ್ನೇ ಮೆಚ್ಚಿ ನೆಚ್ಚಿಕೊಂಡಿದ್ದಾರೆ. ಹೀಗೆಯೇ ಮುಂದುವರಿದರೆ ಕೇವಲ ಔಪಚಾರಿಕ ಪದಚ್ಯುತಿಯಷ್ಟೇ ನಿಮ್ಮ ಪಾಲಿಗೆ ಉಳಿಯುವುದು. ಆಸ್ಥಾನದಲ್ಲಿ ಸರ್ವರ ಅಭಿಪ್ರಾಯದಂತೆ ರಾಜ ಪ್ರತಿನಿಧಿಯಾದ ನೀವಿನ್ನು ವಿಶ್ರಾಂತ ಜೀವನ ಆನಂದಿಸಿ ಎಂಬ ಸಲಹೆ, ಪೂರ್ಣಕಾಲಿಕ ಮಹಾರಾಜ ಸ್ಥಾನಕ್ಕೆ ಯೋಗ್ಯನಾಗಿ ಸದ್ಯ ಯುವರಾಜನಾಗಿರುವ ಧರ್ಮರಾಯ ಬೆಳೆದಿದ್ದಾನೆ ಎಂಬ ಅಭಿಪ್ರಾಯ ಮಂಡನೆಯಾಗುತ್ತದೆ. ಉಳಿದ ಸಭಾಸದರು ಅನುಮೋದಿಸಿದರೆ ಬಳಿಕ ನೀವು ಗಾಂಧಾರಿಯ ಜೊತೆ ವಾನಪ್ರಸ್ಥಕ್ಕೇ ಹೋಗಬೇಕಲ್ಲದೆ ಇನ್ನೇನು ಉಳಿಯಲಿದೆ?” ಎಂದು ಶಕುನಿ ಕೇಳುತ್ತಾನೆ.

ಹೌದಲ್ಲವೇ ಎಂಬ ಭಾವ ತಳೆದ ಕಣ್ಣು ಕಾಣದ ಧೃತರಾಷ್ಟ್ರ ನಂಬಿಯೇ ಬಿಟ್ಟ. ರಾಜ ಧೃತರಾಷ್ಟ್ರನನ್ನು ಉದ್ದೇಶಿಸಿ ಶಕುನಿ ಮಾಮ ಮಾತು ಮುಂದುವರೆಸಿದ. “ಮಹಾರಾಜಾ ಆಪತ್ತು ಬಂದ ಮೇಲೆ ಯೋಚಿಸಿ ಫಲವಿಲ್ಲ. ಬರದಂತೆ ತಡೆಯುವುದೇ ಜಾಣ್ಮೆ. ಹಾಗಾಗಿ ಪಾಂಡವರು ತಟಸ್ಥ ಪ್ರದೇಶದಲ್ಲಿ ನಮ್ಮ ಮಂತ್ರಿ ಮಾಗಧರ ಸಂಪರ್ಕದಿಂದ ಅಂತರದಲ್ಲಿ ಬದುಕುವಂತೆ ಮಾಡಬೇಕು. ಅದಕ್ಕಾಗಿ ಮೊದಲು ಅವರನ್ನು ಇಲ್ಲಿಂದ ಓಡಿಸಬೇಕು. ಸಕಲ ಸೌಕರ್ಯ ಒದಗಿಸಿ ಯಾವ ಅಪವಾದವೂ ಬಾರದಂತೆ ವ್ಯವಸ್ಥೆ ಮಾಡಿ ಅವರಿಗೆ ಉಪಕಾರವಾಗುವಂತೆ, ನಮಗೆ ಸಮಸ್ಯೆ ಬಾರದಂತೆ ಯೋಜನೆ ರೂಪುಗೊಳ್ಳಬೇಕು. ಆಗ ನಿಮ್ಮ ತಮ್ಮನ ಮಕ್ಕಳಿಗೂ ಶ್ರೇಯಸ್ಸೂ, ನಮಗೆ ನಿರಾತಂಕವೂ ಆಗುತ್ತದೆ.” ಎಂಬ ಸಲಹೆಯನ್ನೂ ಶಕುನಿ ನೀಡಿದನು.

ಕಿವಿಯೂದಿದ ಈ ಮಾತುಗಳಿಂದ ಮೆತ್ತಗಾದ ಧೃತರಾಷ್ಟ್ರ ಪರಿಹಾರ ದಾರಿ ಏನು? ಹೇಗೆ ಎಂಬ ಪ್ರಶ್ನೆ ಕೇಳಿದಾಗ, ಶಕುನಿಯೂ ದುರ್ಯೋಧನನೂ – ಅದಕ್ಕೇನೂ ಚಿಂತಿಸಬೇಡಿ ಪೂರ್ಣ ಜವಾಬ್ದಾರಿ ವಹಿಸಿ ಯೋಜನೆ ಸಿದ್ಧಪಡಿಸುತ್ತೇವೆ. ಪಾಂಡವರಿಗಾಗಿ ನೂತನ ಭವನ ನಿರ್ಮಿಸಿ ಅಲ್ಲಿಗೆ ಸಾಗ ಹಾಕುವ ಎಂಬ ಉಪಾಯ ಹೇಳಿದರು. ಎಲ್ಲಾ ವಿಚಾರಗಳನ್ನು ಆಲಿಸುತ್ತಿದ್ದ ಗಾಂಧಾರಿಗೂ ತನ್ನ ಮಕ್ಕಳ ಭವಿಷ್ಯಕ್ಕಾಗಿ ಇದು ಸೂಕ್ತ ದಾರಿಯೇ ಹೌದು ಎಂಬಂತೆ ಭಾಸವಾಯಿತು. ಇದರಿಂದ ಯಾರಿಗೂ ತೊಂದರೆಯಿಲ್ಲ. ಪರಿಣಾಮದಲ್ಲಿ ಕ್ಷೇಮವೇ ಆಗಲಿದೆ ಎಂದು ತಿಳಿದು ಆಕೆಯೂ ರಾಜ ಮಾತೆಯ ಒಪ್ಪಿಗೆಯ ಮುದ್ರೆಯೊತ್ತಿದಳು. ಭವನ ನಿರ್ಮಾಣಕ್ಕೆ ಬೇಕಾದ ಧನಸಂಪತ್ತು ಖಜಾನೆಯಿಂದ ವಿನಿಯೋಗಿಸಲು ಅನುಮತಿಯೂ ಸಿಕ್ಕಿತು.

ಪ್ರಸಕ್ತ ಬೆಳವಣಿಗೆಗಳು, ಕೌರವರ ಕೃತಕ ಅತಿ ವಿನಯ ವಿದುರನಿಗೆ ಸಂಶಯವಾಗಿ ಕಾಣ ತೊಡಗಿತು. ಸೂಕ್ಷ್ಮಮತಿಯಾದ ವಿದುರ ಕೌರವರ ಗುಣಗ್ರಾಹಿಯಾಗಿ ಇವರೇನೋ ಸಾಮ್ರಾಜ್ಯಕ್ಕೆ ಆಪತ್ತು ತಂದೊಡ್ಡಬಲ್ಲ ಮಾರಕ ಬುದ್ದಿ ಹೊಂದಿದ್ದಾರೆ ಎಂಬಂತೆ ತರ್ಕಿಸಿದ. ಪರಿಣಾಮ ಆಸ್ಥಾನದ ಕಲಾಪದ ವೇಳೆ ಧೃತರಾಷ್ಟ್ರ ಪುತ್ರರ ಬಗ್ಗೆ ಗಮನ ಇಡಬೇಕು. ಅವರ ವರ್ತನೆ, ನಡೆ ಸರಿಯಿಲ್ಲ ಎಂದೂ, ಪಾಂಡವರು ಸಮರ್ಥರಾಗುತ್ತಿದ್ದಾರೆ. ಸದ್ಗುಣ ಸಂಪನ್ನರೂ, ವ್ಯವಹಾರ ಚತುರರೂ, ಧರ್ಮ ನಿಷ್ಟರೂ, ಪ್ರಜಾ ಚಿಂತಕರೂ, ನ್ಯಾಯ ಮಾರ್ಗಿಗಳೂ ಆಗಿ ಬೆಳೆಯುತ್ತಿದ್ದಾರೆ ಎಂಬ ತನ್ನ ಅಭಿಪ್ರಾಯ ಮಂಡಿಸಿದ. ಇದನ್ನು ಕೇಳಿದ ಧೃತರಾಷ್ಟ್ರನಿಗೆ ತನ್ನ ಮಕ್ಕಳು ಹೇಳಿದ ವಿಚಾರ ಶತ ಪ್ರತಿಶತ ಸತ್ಯ. ಪರೋಕ್ಷ ಸಂಚು ನಡೆಯುತ್ತಿರುವುದು ನಿಜ ಎಂದೇ ಭ್ರಮೆಯಾಯಿತು. ವಿದುರನ ವಿಮರ್ಶೆ ನಿಜವಾಗಿದ್ದರೂ, ಮಹಾರಾಜ ಆತನ ಜೊತೆ ಪ್ರಾಜ್ಞನಂತೆ ಸಂವಾದದಲ್ಲಿ ತೊಡಗಿ ವಾದ ವಿವಾದವಾಗುವ ಮಟ್ಟಕ್ಕೆ ಅದು ಬೆಳೆದುಬಿಟ್ಟಿತು.

ಇತ್ತ ವಾರಣಾವತದ ಅರಗಿನ ಅರಮನೆಯೂ ಸಿದ್ದವಾಯಿತು. ಧೃತರಾಷ್ಟ್ರ ಶಕುನಿಯ ಕೈಗೊಂಬೆಯಾಗಿ ಬಿಟ್ಟಿದ್ದ. ಭೀಷ್ಮ, ವಿದುರಾದಿಗಳು ತನ್ನ ವಿರೋಧಿಗಳೇ ಹೌದು ಎಂಬ ಭಾವ ದೈಹಿಕ ಕುರುಡನಾದ ಧೃತರಾಷ್ಟ್ರನ ಬುದ್ದಿಗೂ ಅಂಧತ್ವ ಹಬ್ಬಿಸಿತು. ಕುಟಿಲ ತಂತ್ರಗಾರ ಶಕುನಿ ತನ್ನ ಯೋಜನೆ ಯಶಸ್ಸು ಕಾಣುತ್ತಿರುವುದನ್ನು ಕಂಡು ಸಂತಸಪಡತೊಡಗಿದ. ವಾರಣಾವತದಲ್ಲಿ ಉತ್ಸವವೊಂದನ್ನು ಆಯೋಜಿಸಿ ಆ ಭಾಗದ ಪ್ರಜಾ ಜನರಿಗೆ ಬೇಕಾದ ವ್ಯವಸ್ಥೆ ಒದಗಿಸುವ ಜವಾಬ್ದಾರಿ ವಹಿಸಿ ಯುವರಾಜ ಮತ್ತು ಆತನ ಸಹೋದರರನ್ನು ಅತ್ತ ಕಳುಹಿಸುವ ಆದೇಶ ಮಾಡುವಂತೆ ಧೃತರಾಷ್ಟ್ರನಿಗೆ ಸೂಚಿಸಿ ಪೂರ್ಣ ವಿಚಾರ ಮಂಡನೆಗೆ ಉಪಾಯ ವಿವರಿಸಿ ಹೇಳಿದ.

ಧೃತರಾಷ್ಟ್ರನೂ ಹಾಗೇ ಮುಂದುವರಿದು ಆಸ್ಥಾನದಲ್ಲಿ ಈ ವಿಷಯ ಪ್ರಸ್ತಾಪಿಸಿದ. “ನಮ್ಮ ಸಾಮ್ರಾಜ್ಯ ವಿಸ್ತಾರವಾಗಿದೆ. ಸಮಸ್ತ ಪ್ರಜೆಗಳ ಅಗತ್ಯಗಳನ್ನು ಪೂರೈಸುವುದು ನಮ್ಮ ಕರ್ತವ್ಯ. ಹಾಗಾಗಿ ವಾರಣಾವತದಲ್ಲಿ ಒಂದು ಉತ್ಸವ ಏರ್ಪಡಿಸಿ ಆ ಭಾಗದ ಪ್ರಜೆಗಳಿಗೆ ಅನುಕೂಲತೆ ಕಲ್ಪಿಸಿಕೊಡಬೇಕು. ನಮ್ಮ ಯುವರಾಜ ಧರ್ಮರಾಯ ಈ ವ್ಯವಸ್ಥೆಯ ಜವಾಬ್ದಾರಿ ವಹಿಸಿಕೊಂಡು ಸಹೋದರರೊಡನೆ ಅಲ್ಲೇ ಕೆಲ ಕಾಲ ಇದ್ದು ಜನರ ಜೊತೆ ಬೆರೆತು ಜನಾನುರಾಗಿಯಾಗಿ ಅಲ್ಲಿಗೆ ಬೇಕಾದ ಸಮೃದ್ಧಕಾರಕ ಕೆಲಸಗಳನ್ನು ಮಾಡಿಸಬೇಕು. ಮಹಾರಾಜನಾಗಿದ್ದರೂ ಕುರುಡನಾಗಿರುವ ಕಾರಣ ಪ್ರಜಾ ಜನರಿರುವಲ್ಲಿಗೆ ಪ್ರವಾಸ ಮಾಡಲು, ತೀರ್ಥಯಾತ್ರೆ ಮಾಡಲು ನಾನು ಅಸಮರ್ಥನೇ ಆಗಿದ್ದೇನೆ. ನನ್ನ ಮಗನಾದ ದುರ್ಯೋಧನನಿಗೆ ಹೀಗೆ ಮಾಡುವಂತೆ ಸೂಚಿಸಿದರೆ ತಾನು ಯುವರಾಜನಲ್ಲ ಹಾಗಾಗಿ ಈ ಕಾರ್ಯ ತನಗೆ ಸೂಕ್ತವಲ್ಲ ಎಂಬ ಅಭಿಪ್ರಾಯ ವ್ಯಕ್ತ ಪಡಿಸಿದ್ದಾನೆ. ಒಂದರ್ಥದಲ್ಲಿ ಆತನ ವಾದವೂ ಸರಿಯೇ ಆಗಿದೆ. ಆದ್ದರಿಂದ ಕಂದ ಧರ್ಮರಾಯ ನೀನು ಕೆಲ ಸಮಯ ಈ ಕಾರ್ಯದಲ್ಲಿ ತೊಡಗಬೇಕು. ಇದರಿಂದ ನಿನಗೂ ಪ್ರಜೆಗಳ ಬೇಕು ಬೇಡಗಳ ವಿಚಾರವೂ, ಮುಂದೆ ರಾಜನಾಗಿ ಕಾರ್ಯವೆಸಗಲು ಅನುಭವವೂ ಪ್ರಾಪ್ತವಾಗಲಿದೆ. ಜನರ ಮಧ್ಯೆ ಇರುವ ಅಭಿಪ್ರಾಯವನ್ನೂ ತಿಳಿದು ಮುನ್ನಡೆಯಲು ಸದವಕಾಶ ಒದಗಿದಂತಾಗುತ್ತದೆ. ಇದಕ್ಕೆ ಬೇಕಾದ ಸಕಲ ಸವಲತ್ತುಗಳನ್ನು ಪೂರೈಸಲು ನಾವಿದ್ದೇವೆ” ಎಂಬ ಆಶ್ವಾಸನೆ ನೀಡಿದ. ಧರ್ಮರಾಯ ಮಹಾರಾಜರ ಆದೇಶವನ್ನು ಶಿರಸಾವಹಿಸಿ ಒಪ್ಪಿಕೊಂಡನು.

ವಿದುರನಿಗೇಕೋ ಈ ಯೋಚನೆ ಅಸ್ವಾಭಾವಿಕ ಎಂಬಂತೆ ಕಂಡಿತು. ಕಾರಣ ಭೀಷ್ಮಾಚಾರ್ಯರು ಸದಾ ರಾಜ್ಯ ಪ್ರವಾಸಗೈಯುತ್ತಾ, ವಿಷಯ ಸಂಗ್ರಹಿಸುತ್ತಿದ್ದಾರೆ. ಸೂಕ್ತ ರಾಜ ಪ್ರತಿನಿಧಿಗಳು ಸಾಮ್ರಾಜ್ಯದಾದ್ಯಂತ ನಿಯುಕ್ತರಾಗಿದ್ದು ಕಾರ್ಯಗತರಾಗಿದ್ದಾರೆ. ಕಾಲಕಾಲಕ್ಕೆ ಪರಿಶೀಲನೆಯೂ ಆಗುತ್ತಿದೆ. ಹೀಗಿರುವಾಗ ಇದರಲ್ಲೇನೋ ಅನ್ಯ ಉದ್ದೇಶವಿದೆ ಎಂಬ ಶಂಕೆ ವಿದುರನ ಮನದಲ್ಲಿ ಉದ್ಭವಿಸಿತು. ಏಕಾಂತದಲ್ಲಿ ಭೀಷ್ಮಾಚಾರ್ಯರ ಜೊತೆ ಉತ್ಸವದ ಅಗತ್ಯತೆಯ ಕುರಿತು ಸಮಾಲೋಚನೆ ಮಾಡಬೇಕೆಂದು ತೀರ್ಮಾನಿಸಿದ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page