ಭಾಗ 87
ಭರತೇಶ್ ಶೆಟ್ಟಿ, ಎಕ್ಕಾರ್

ವಿಜಯ ಪ್ರಾಪ್ತಿಯ ಸಂತೋಷದಿಂದ ಬೀಗಿದ ಜರಾಸಂಧ ಅಳಿದುಳಿದ ಮಿತ ಸೈನ್ಯದೊಂದಿಗೆ ಮಥುರಾ ಪಟ್ಟಣ ಪ್ರವೇಶಿಸುವ ಮನ ಮಾಡಿದನು. ಕುತೂಹಲ ಕಾರಣವಾಗಿ ಮಥುರಾ ಪಟ್ಟಣದ ಮೂಲೆ ಮೂಲೆ ತಡಕಾಡಿದರೂ ಯಾರೂ ಇಲ್ಲ, ಏನೂ ಇಲ್ಲ. ಏನಾಗಿರಬಹುದೆಂದುಬ ತರ್ಕಿಸಿದ! ಏನೋ ಮೋಸ ನಡೆದಿದೆ ಎಂಬ ಹಾಗೆ ಭಾಸವಾಯಿತು. ಯಾಕೆಂದರೆ ಅಲ್ಲಿ ಯಾರೂ ಇಲ್ಲ, ಏನೂ ಉಳಿದಿಲ್ಲ. ಕನಿಷ್ಟ ಒಂದು ಗೋವು ಕೂಡಾ ತಿರುಗಾಡುತ್ತಿಲ್ಲ. ಏನೇ ಇರಲಿ ಮತ್ತೆ ನೋಡೋಣ ಎಂದು ಮರಳಿ ತನ್ನ ರಾಜಧಾನಿ ಸೇರಿದ.
ಇತ್ತ ದ್ವಾರಕೆ ವಿಶ್ವಕರ್ಮನ ಸಂಪೂರ್ಣ ಕರ ಕೌಶಲದಿಂದ ದಿವ್ಯ ನಗರಿಯಾಗಿ ರೂಪುಗೊಂಡಿದೆ. ನಗರದ ರಕ್ಷಣೆಗೆ ಒಂದೆಡೆ ಸಮುದ್ರ – ಮತ್ತೊಂದೆಡೆ ಪರ್ವತ ಶ್ರೇಣಿಗಳು. ಇವೆರಡರ ಮಧ್ಯ ವಿಸ್ತಾರವಾದ ಸುಸಜ್ಜಿತ ದ್ವಾರಕ ನಗರಿ ಸ್ವರ್ಗ ಸದೃಶವಾಗಿದೆ. ಕೋಟೆ, ರಾಜ ಬೀದಿ, ಉದ್ಯಾನವನ, ನಗರ ರಕ್ಷಕರ ಮನೆಗಳೂ ನಿರ್ಮಾಣವಾಗಿದ್ದವು. ಅರಮನೆ, ಅಂತಃಪುರ, ಅತಿಥಿಗೃಹ, ಕ್ರೀಡಾಮಂಟಪ, ಸಚಿವ ನಿಕೇತನ, ಆಯುಧಶಾಲೆ, ಬಂಧುಗೃಹ, ಗೋಶಾಲೆ, ಗಜಶಾಲೆ, ಅಶ್ವಶಾಲೆ, ಸೈನಿಕರ ನಿವಾಸ, ರಂಗ ಮಂದಿರ, ದೇವ ಮಂದಿರ, ವೈದ್ಯ ಮಂದಿರ, ವಿದ್ಯಾ ಮಂದಿರ, ಓಲಗಸಾಲೆ, ಗುರುಕುಲ, ಕುಸ್ತಿ ಮಂಟಪ, ಗರಡಿ, ಕುಲದೇವತಾ ಗುಡಿ, ಗೋಪುರ, ಪ್ರಾಂಗಣ, ಹೂದೋಟ, ಉಪವನ, ರಕ್ಷಿತಾರಣ್ಯ, ಬಯಲು… ಹೇಳಿ ಮುಗಿದೀತೆ? ಏನುಂಟು ಏನಿಲ್ಲ? ದ್ವಾರಕಾ ನಗರಿ ಅದ್ಬುತ ಶಿಲ್ಪಕಲೆ, ಕೆತ್ತನೆ ತುಂಬಿದ ಸೊಬಗಿನಿಂದ ಸಮೃದ್ಧವಾಗಿತ್ತು. ಬಲರಾಮ ಕೃಷ್ಣರು ಯಾದವ ಸಮಸ್ತರೂ ಸೇರಿ ಆಚಾರ್ಯ ಗಾರ್ಗ್ಯರ ಮುಖೇನ ವಿಧಿವತ್ತಾಗಿ ನಗರ ಪ್ರವೇಶ ಪೂಜೆಗಳು ನೆರವೇರಿ ವಿದ್ಯುಕ್ತವಾಗಿ ಸಂಪನ್ನಗೊಂಡಿತು. ದೇವಾನು ದೇವತೆಗಳೂ ಹರಸಿ ಪುಷ್ಪವೃಷ್ಟಿಗರೆದರು. ಅದ್ಬುತ ನಗರ ಸೃಜಿಸಿದ ವಿಶ್ವಕರ್ಮನಿಗೆ ಸನ್ಮಾನ ಬಹುಮಾನಗಳು ಅರ್ಪಿತವಾದವು.
ಹೀಗೆ ದ್ವಾರಕೆಯಲ್ಲಿ ಸಮೃದ್ಧ ಯಾದವ ರಾಜ್ಯ ಸ್ಥಾಪನೆಯಾಯಿತು. ಕೃಷ್ಣನೇ ನೂತನ ರಾಜನಾಗಬೇಕೆಂಬ ಅಪೇಕ್ಷೆ ವ್ಯಕ್ತವಾದರೂ ಉಗ್ರಸೇನನಿಗೆ ಮತ್ತೆ ದ್ವಾರಕಾಧೀಶನಾಗುವ ಭಾಗ್ಯ ಶ್ರೀ ಕೃಷ್ಣನಿಂದ ಒದಗಿಸಲ್ಪಟ್ಟಿತು. ಅಕ್ರೂರ ಮಂತ್ರಿಯಾಗಿ, ಉದ್ಧವ ಸಲಹೆಗಾರ, ಬಲರಾಮ ದಂಡಾಧಿಕಾರಿ ಹೀಗೆ ಹಲವು ಪ್ರಮುಖರು ಸೇರಿ ಸಚಿವ ಮಂಡಲವೂ ರಚನೆಯಾಯಿತು.
ಈ ದ್ವಾರಕಾ ನಗರ ನಿರ್ಮಾಣವಾದ “ಕುಶಸ್ಥಲಿ “ ಪ್ರದೇಶ ಹಿಂದೆ ತ್ರೇತಾಯುಗದಲ್ಲಿ ಸೂರ್ಯವಂಶಜ ರಾಮಚಂದ್ರಮನ ಪುತ್ರ ಕುಶನಿಂದ ಪಾಲಿತವಾಗಿ ಹೆಸರು ಪಡೆದಿತ್ತು. ನಂತರ ಆತನ ವಂಶದ ಪೀಳಿಗೆಯ “ಕಕುದ್ಮಿ” ಎಂಬ ರಾಜ ಆಳುತ್ತಿದ್ದ. ತನ್ನ ಮಗಳು ಪ್ರಾಯ ಪ್ರಬುದ್ದೆಯಾದರೂ ಮದುವೆಯಾಗದೇ ಉಳಿದ ಚಿಂತೆಯಿಂದ ವ್ಯಥಿತನಾಗಿದ್ದ. ಸರ್ವ ಪ್ರಯತ್ನಗಳೂ ವಿಫಲವಾದ ಕಾರಣ ವಿರಕ್ತನಾಗಿ ಮಂತ್ರಿಗೆ ರಾಜ್ಯಾಧಿಕಾರ ವಹಿಸಿ ತಾನು ಮಗಳ ಜೊತೆ ಕಾನನ ಸೇರಿ ತಪಸ್ಸನ್ನಾಚರಿಸತೊಡಗಿದ್ದ. ಈತನ ತಪಃಶಕ್ತಿಯ ಪುಣ್ಯಬಲದಿಂದ ಮಗಳ ಸಹಿತ ಸಶರೀರಿಯಾಗಿ ಸತ್ಯಲೋಕ ಸೇರುವ ಭಾಗ್ಯ ಒದಗಿತು. ಹೀಗೆ ಕಕುದ್ಮಿಯ ಮಗಳು ರೇವತಿಯೊಂದಿಗೆ ದಿವ್ಯ ಶರೀರ ಪ್ರಾಪ್ತಿಯಾಗಿ ಬ್ರಹ್ಮ ದೇವರ ಸತ್ಯಲೋಕ ಸೇರಿದರು. ಆ ಸಂದರ್ಭ ಸತ್ಯಲೋಕದಲ್ಲಿ ಧರ್ಮಜಿಜ್ಞಾಸೆಯ ವಿಮರ್ಷೆಯಲ್ಲಿ ಬ್ರಹ್ಮದೇವರೂ, ಬ್ರಹ್ಮರ್ಷಿಗಳೂ ನಿರತರಾಗಿದ್ದರು. ಕೆಲಕಾಲ ಕಳೆದು ಧರ್ಮ ಕಾರ್ಯ ಮುಗಿದ ಬಳಿಕ ಕಾಯುತ್ತಿದ್ದ ಕಕುದ್ಮಿ, ರೇವತಿಯರನ್ನು ನೋಡಿ ಹಿರಣ್ಯಗರ್ಭ ಬ್ರಹ್ಮ ದೇವ, ಅರೆ ! ಮಹಾತ್ಮ ಬಹು ಹೊತ್ತು ಕಾದಿರೆ? ಧರ್ಮ ಜಿಜ್ಞಾಸೆ ನಿರತನಾಗಿ ವ್ಯಸ್ತನಾಗಿದ್ದೆ ಎಂದು ಹೇಳಿದರು. ಬಳಿಕ ಇವರು ಬಯಸಿ ಬಂದ ಕಾರ್ಯವೇನೆಂದು ಕೇಳಿದರು. ಉತ್ತರಿಸಿದ ರೇವತಿಯ ಪಿತ ರೈವತಕ (ಕಕುದ್ಮಿ) ” ದೇವಾ! ನನ್ನ ಮಗಳಿಗೆ ಮದುವೆಯ ಪ್ರಾಯ ದಾಟಿದರೂ, ರಾಜಕುಮಾರಿಯಾಗಿದ್ದರೂ ಮದುವೆಯಾಗದೆ ಉಳಿದು ಹೋದಳು. ಹಾಗಾಗಿ ವಿಧಿಬರಹ ಬರೆದ ನಿನ್ನ ಕುರಿತೇ ಕಠಿನ ತಪಸ್ಸನ್ನಾಚರಿಸಿ ಇಲ್ಲಿ ಬಂದಿದ್ದೇವೆ”. ಎಂದನು.
ಬ್ರಹ್ಮದೇವರು ವಿವೇಚಿಸಿ “ಅಯ್ಯಾ ಮಹಾರಾಜಾ, ನೀನು ಸತ್ಯಲೋಕದಲ್ಲಿ ದಿನವೊಂದನ್ನು ಕಳೆದೆ. ಭೂಲೋಕದಲ್ಲಿ ಈ ಕಾಲಮಾನ ಯುಗ ಯುಗಗಳೇ ಪರಿವರ್ತನೆಯಾಗಿ ಹೋಗುವಷ್ಟಾಗಿದೆ. ನೂರಾರು ತಲೆಮಾರುಗಳೇ ಆಗಿ ಹೋಗಿವೆ. ರಾಜ – ರಾಜ್ಯ – ವಂಶಗಳೂ ಅಳಿದು, ಹೊಸ ವಂಶಗಳು ಬೆಳೆದು ಆಳುತ್ತಿವೆ. ನೀನು ನೋಡಿದ ಭೂಲೋಕ ಈಗ ಬದಲಾಗಿದೆ. ಇರಲಿ, ನೀವು ಸತ್ಯಲೋಕದಲ್ಲಿದ್ದ ಕಾರಣ ಆ ಕಾಲಗಮನ ನಿಮಗೆ ಅನ್ವಯವಾಗಿಲ್ಲ. ನಿನ್ನದ್ದಾಗಿದ್ದ ಕುಶಸ್ಥಲಿ ಈಗ ದ್ವಾರಕೆಯಾಗಿದೆ. ಅಲ್ಲಿ ಈಗ ಬಲರಾಮನೆಂಬ ರಾಜಕುಮಾರನಿದ್ದಾನೆ. ನಿನ್ನ ಮಗಳಿಗೆ ಆತನೇ ಪತಿ. ಹೋಗು ಮಗಳ ಮದುವೆ ಮಾಡುವಂತವನಾಗು” ಎಂದು ಅನುಗ್ರಹಿಸಿ ಕಳುಹಿಸಿದರು.
ದ್ವಾರಕೆಗೆ ಬಂದರೆ ಅದ್ಬುತ ನಗರವಾಗಿದೆ. ಬ್ರಹ್ಮ ದೇವರ ಮಾತಿನಂತೆ ಕಣ್ಣುಗಳು ನಂಬದ ರೀತಿ ಸಮೃದ್ಧವಾಗಿದೆ. ನೇರವಾಗಿ ಬಂದ ಕಾರ್ಯ ಪೂರೈಸುವುದಕ್ಕಾಗಿ ಆಸ್ಥಾನ ಪ್ರವೇಶಿಸಿ, ಸತ್ಯ ವಿಷಯ, ಸತ್ಯಲೋಕದಲ್ಲಿ ನಡೆದ ವಿಚಾರ, ಬಲರಾಮನಿಗೆ ತನ್ನ ಮಗಳು ರೇವತಿ ಸತಿಯಾಗುವವಳು ಎಂಬ ಸಂಗತಿ ಬಿನ್ನವಿಸಿದ. ಯುಗಾಂತರದ ಪ್ರಾಯ ವ್ಯತ್ಯಾಸದ ಹೆಣ್ಣನ್ನು ವರಿಸಲು ಬಲರಾಮ ಒಪ್ಪಲಿಲ್ಲ. ಆಗ ವಸುದೇವ, ಆಚಾರ್ಯ ಗಾರ್ಗ್ಯರು, ಕೃಷ್ಣ, ಅಕ್ರೂರ, ಉದ್ಧವಾದಿಗಳು ಬಲರಾಮನ್ನು ಸಂತೈಸಿ ಮದುವೆಗೆ ಒಪ್ಪಿಸಿದರು.
ಬಲರಾಮ – ರೇವತಿಯರ ಮದುವೆ ವಿಜ್ರಂಬಣೆಯಿಂದ ನೆರವೇರಿತು. ನಗರಲಂಕಾರ, ಪೂಜೆ, ಪುರಸ್ಕಾರ, ಧಾರ್ಮಿಕ ಕಾರ್ಯಕ್ರಮ, ಸಾಂಸ್ಕೃತಿಕ ಪ್ರದರ್ಶನ, ಮೆರವಣಿಗೆ ಹೀಗೆ ವೈಭವಯುತವಾಗಿ ವಿವಾಹ ಮಹೋತ್ಸವವಾಯಿತು. ರೇವತಿ ಬಲರಾಮರು ಸತಿ ಪತಿಗಳಾದರು. ಕೆಲಕಾಲ ಕಳೆದು ರೇವತ ತಪೋನಿರತನಾಗುವ ಮನಮಾಡಿ ಹೊರಟು ಹೋದನು. ನೂತನ ದಂಪತಿಗಳು ಅನ್ಯೋನ್ಯ ದಾಂಪತ್ಯ ಜೀವನ ಸಾಗಿಸುತ್ತಿದ್ದರು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್





















