31.9 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 79

ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೭೯ ಮಹಾಭಾರತ

ಮುಂದೆ ಸಾಗುವಾಗ ‘ವಾಯಕ’ ನು (ಮುಖಾಲಂಕಾರ ಮಾಡುವವನು) ಆನಂದದಿಂದ ಸತ್ಕರಿಸಿ ಬಲರಾಮ ಕೃಷ್ಣರಿಗೆ ಚಿತ್ರ ವರ್ಣಗಳಿಂದ ಅಲಂಕರಿಸಿದನು. ಅಲ್ಲಿಂದ ಮುಂದೆ ‘ಸುದಾಮ’ನೆಂಬ ಮಾಲಾಕಾರನು ಸುಗಂಧ ಪುಷ್ಪಮಾಲೆಗಳನ್ನರ್ಪಿಸಿ ಪೂಜಿಸಿದನು. ಇವರಿಬ್ಬರನ್ನೂ ಅನುಗ್ರಹಿಸಿ ನಂದ ಪುತ್ರರು ಹೊರಟರು.

ಹೀಗೆ ಸಾಗುವಾಗ ಅರೆದಿಟ್ಟ ಶ್ರೀ ಗಂಧವನ್ನು ಹಿಡಿದು ಡೊಂಕು ಡೊಂಕಾದ ಶರೀರದ ಕುಬ್ಜೆ ಎದುರಾದಳು. ಆಕೆ ತಾನು ಕಂಸನ ಅರಮನೆಯ ಪರಿಚಾರಕಿ ಎಂದು ಪರಿಚಯ ಹೇಳಿ ಕೃಷ್ಣ ಬಲರಾಮರಿಗೆ ಗಂಧದ ತಟ್ಟೆ ಒಪ್ಪಿಸಿದಳು. ಭಕ್ತಿಯಿಂದ ನಮಿಸಿದಳು. ಕೃಷ್ಣ ಬಲರಾಮರು ಚಂದನವನ್ನು ಪೂಸಿಕೊಂಡು ನಿಂತರು. ಕುಬ್ಜೆಗೆ ಏನನ್ನಿಸಿತೋ ಏನೋ! ಬಾಗಿದ ತ್ರಿವಕ್ರ ಶರೀರವನ್ನು ಇನ್ನೂ ಬಗ್ಗಿಸಿ ಕೃಷ್ಣ ರಾಮರ ಪಾದಕ್ಕೆ ನಮಿಸುವ ಯತ್ನ ಮಾಡಿದಾಗ, ಕೃಷ್ಣ ಆಕೆಯ ಪಾದಗಳನ್ನು ತುಳಿದು ಒತ್ತಿ ಭುಜವನ್ನು ಹಿಡಿದು ಎತ್ತಿ ನಿಲ್ಲಿಸಿದ. ಆಕೆಯ ಶರೀರವನ್ನು ಭಗವಂತ ಶ್ರೀ ಕೃಷ್ಣ ಎತ್ತಿ ನಿಲ್ಲಿಸುವಾಗ ಲಟ ಲಟನೆ ಸದ್ದು ಮಾಡಿತು ಅಸ್ತಿ ಸಮೂಹ. ಆ ಕ್ಷಣವೇ ಆಕೆಯ ಶರೀರದ ವಕ್ರತೆ ಸರಳವಾಗಿ ನೇರ ನಿಲ್ಲುವಂತಾಯಿತು. ಲಾವಣ್ಯ ಮೈದುಂಬಿತು. ತನ್ನ ಶರೀರದ ಅಂಕು ಡೊಂಕು ವಕ್ರತೆಗಳು ಸರಿಯಾಗಿ ಚೆಲುವಿಕೆಯಾದಳು. ಸಂತುಷ್ಟಳಾಗಿ ಭಕ್ತಿಯಿಂದ ಕೃಪೆದೋರಿದ ದೇವರಿಗೆ ವಂದಿಸಿದಳು. ತನ್ನ ಮನೆಗೆ ಬಂದು ಆತಿಥ್ಯ ಸ್ವೀಕರಿಸಲು ಬೇಡಿಕೊಂಡಳು. ಭಗವಂತ ಭಕ್ತರ ಆಸೆ ನಿರಾಕರಿಸುವನೇ? ಅಸಂಗನಾದ ದೇವನಿಗೆ ಭಕ್ತರ ಮನೋ ಮಂದಿರವೇ ಶರಣ್ಯವಲ್ಲವೇ? ಮಥುರೆಯಿಂದ ಹಿಂದೆ ಬರುವಾಗ ಬರುವೆವೆಂಬ ವಾಗ್ದಾನ ನೀಡಿ ಅರಮನೆಯತ್ತ ಸಾಗಿದರು.

ಬಿಲ್ಲ ಹಬ್ಬದ ಧನುಸ್ಸು ಇಟ್ಟ ಮಂದಿರದತ್ತ ಬಂದರು. ಪೂಜಿಸಿಟ್ಟ ಧನುಸ್ಸನ್ನು ನೋಡುವಾಗ ಕೃಷ್ಣನಿಗೆ ಅರೆಕ್ಷಣ ರಾಮಾವತಾರದ ಸ್ಮರಣೆಯಾಯಿತು. ಬಿಲ್ಲನ್ನೆತ್ತಿ ಹೆದೆಯೇರಿಸಿ ಅದರ ನಾಣನ್ನು ಬಿಗಿಯಲು ಮುಂದಾದಾಗ ರಕ್ಷಕರು ತಡೆಯಲು ಬಂದರು. ಅವರ ಆಕ್ರಮಣವನ್ನು ಅತಿಕ್ರಮಿಸಿ ಧನುವನ್ನೆತ್ತಿ ಬಾಗಿಸಿ ಪ್ರತ್ಯಂಚ ಬಿಗಿಯಹೋದರೆ ಧನುರ್ಭಂಗವಾಯಿತು. ಲಟಾರನೆ ಮುರಿದ ಶಬ್ದ ಭೂ ನಭೋ ಅಂತರದಲ್ಲಿ ಪ್ರತಿಧ್ವನಿಸಿತು. ಈ ಭೀಕರ ಬರ ಸಿಡಿಲು ಬಡಿದಂತಹ ಶಬ್ದ ಕೇಳಿದ ಕಂಸನಿಗೋ ಮೊದಲೆ ಆವರಿಸಿದ್ದ ಭಯವೂ ಸೇರಿ, ಮೃತ್ಯುವಿನ ಕರೆಯೆಂಬಂತೆ ಭಾಸವಾಯಿತು. ಮಥುರಾ ಪಟ್ಟಣವೇ ಒಂದೊಮ್ಮೆಗೆ ನಡುಗಿತು. ಕಂಸನ ರಕ್ಷಾ ಸೈನ್ಯ ಕೃಷ್ಣ ಬಲರಾಮರ ಮೇಲೆ ಪ್ರಹಾರಕ್ಕೆ ಮುಂದಾಯಿತು. ಮುರಿದ ಬಿಲ್ಲಿನ ತುಂಡುಗಳನ್ನೇ ಆಯುಧವಾಗಿಸಿ ಕಂಸನ ಸೈನ್ಯವನ್ನು ಬಡಿದು ಹಿಮ್ಮೆಟ್ಟಿಸಿದರು. ಕೈಸಾಗದ ಸೈನ್ಯ ಸೋತು ಹಿಂದೋಡಿತು, ಕೆಲವರು ಮೃತರಾದರು.

ಇಷ್ಟಾಗುವಾಗ ಮುಸ್ಸಂಜೆಯಾಗಿತ್ತು. ಮಂದಿರದಿಂದ ಹೊರಬಂದ ಕೃಷ್ಣ ಬಲರಾಮರನ್ನು ಪುರ ಜನರು ಸತ್ಕರಿಸಿ ಸ್ವಾಗತಿಸುತ್ತಾ ಕರೆದೊಯ್ದರು. ಭಕ್ತಿಯ ಪುರಜನರಿತ್ತ ಕ್ಷೀರಾನ್ನ ಸ್ವೀಕರಿಸಿ, ಅವರಲ್ಲಿ ಮಾತನಾಡುತ್ತಾ ಬಹು ಹೊತ್ತು ಕಳೆದರು. ಜನರೋ ಕೃಷ್ಣನ ಯಶೋಗಾಥೆಯ ಗುಣ ಗಾನ ನಿರತರಾಗಿದ್ದರು. ಬಳಿಕ ಕೃಷ್ಣ ರಾಮರು ವಿಶ್ರಾಂತರಾದರು.

ಇತ್ತ ಅರಮನೆಯಲ್ಲಿ ಕಂಸನಿಗೆ ಕಣ್ಮುಚ್ಚಿದರೂ ನಿದ್ರೆ ಬರುತ್ತಿಲ್ಲ. ಅಶರೀರವಾಣಿ ಕರ್ಣಗಳಲ್ಲಿ ಪ್ರತಿಧ್ವನಿಸತೊಡಗಿತು. ಮಾಯೆಯು ಎಚ್ಚರಿಸಿದ ನುಡಿಗಳು ಮತ್ತೆ ಮತ್ತೆ ಕೇಳತೊಡಗಿತು. ಕತ್ತಲೆಯಿಂದ ಭಯಗೊಂಡು ಸಾಲು ದೀಪಗಳನ್ನು ಹಚ್ಚಿಸಿದ. ಬೆಳಕು ಪ್ರಜ್ವಲವಾಯಿತು. ಚತುರ್ದಶಿಯ ದಿನವಿಂದು. ಬಿಲ್ಲನ್ನು ಮುರಿದು, ರಕ್ಷಣೆಗಿರಿಸಿದ್ದ ಸೈನ್ಯವನ್ನು ಕೃಷ್ಣ ತರಿದ ವಿಚಾರ ತಿಳಿದು ನಡುಗಿದ. ಭಯಭೀತ ಕಂಸ ಕಂಪಿಸುತ್ತಾ, ವಿಲವಿಲನೆ ಒದ್ದಾಡುತ್ತಾ ಪಲ್ಲಂಗದಲ್ಲಿ ಒರಗಿದಾಗ ನಿದ್ದೆಯ ಜೋಂಪು ಹತ್ತಿತು. ಹೇಗೋ ಪ್ರಯಾಸದಿಂದ ನಿದ್ರೆಯ ನಶೆಯೀರಿದೆಯಷ್ಟೇ! ಭಯಾನಕವಾದ ಘೋರ ಕನಸು. ದೀಪಗಳನ್ನು ನೋಡಿದರೆ ಒಂದಿದ್ದ ಜ್ವಾಲೆಗಳು ಎರಡಾಗಿದೆ. ಜ್ವಾಲೆಯ ಮಧ್ಯೆ ನಗುವ ಕೃಷ್ಣ ಕಾಣುತ್ತಿದ್ದಾನೆ‌. ಭಯಂಕರ ದೃಶ್ಯ, ಯಾವುದೋ ವಿಕಾರ ರೂಪ ಬಳಿ ಬರುತ್ತಿದೆ. ಭೂತ ಪ್ರೇತಗಳು ಸುತ್ತುವರಿದು ಕುಣಿಯುತ್ತಿವೆ. ಕಿರುಚಿ ಮಂಚದಿಂದ ಕೆಳಗುರುಳಿ ಬಿದ್ದಾಗ ಕಾಲು ತಾಗಿ ದರ್ಪಣ ಕೆಳಬಿತ್ತು. ಒಡೆದ ದರ್ಪಣದ ಕಣಕಣದಲ್ಲೂ ಕೃಷ್ಣನ ಬಿಂಬ ಕಾಣುತ್ತಿದೆ. ಬಗ್ಗಿ ನೋಡಿದರೆ ತನ್ನ ರುಂಡವೇ ಇಲ್ಲದ ಶರೀರ ಮಾತ್ರ ಕಾಣಿಸುತ್ತಿದೆ. ಬೆಚ್ಚಿ ಬಿದ್ದ ಕಂಸ ಹೆದರಿ, ಬಸವಳಿದು, ಬಳಲಿದನು. ಭೀತನಾಗಿ ಮುಸುಕನ್ನೆಳೆದು ಅಡಗುವ ಪ್ರಯತ್ನ ಮಾಡಲು ಹೋದರೆ, ಸತ್ತ ಹೆಣಗಳನ್ನು ತಾನು ಭಕ್ಷಿಸುವಂತೆ, ಮೈ ಕೈಗೆ ಎಣ್ಣೆ ಲೇಪಿಸಿ ಕತ್ತೆಯ ಮೇಲೆ ಕುಳಿತು ದಕ್ಷಿಣ ದಿಕ್ಕಿಗೆ ಹೋದಂತೆಯೂ, ಎತ್ತರದ ಪರ್ವತ ಶೃಂಗದಿಂದ ಪ್ರಪಾತಕ್ಕೆ ಬಿದ್ದಂತೆಯೂ ಅನುಭವವಾಗಿ ಚೀರಾಡಿ ಕಿರುಚಿದನು. ಕೃಷ್ಣನ ಲೀಲಾಮಾನುಷ ದೃಶ್ಯಾವಳಿಗಳೂ, ತಾನು ಕಳುಹಿದ ರಾಕ್ಷಸರ ವಧಾ ದೃಶ್ಯಗಳೂ, ತಾನು ಗೈದ ಶಿಶು ಹತ್ಯೆಗಳೂ ಕಣ್ಮುಂದೆ ಹಾದು ಹೋದವು. ಎತ್ತ ದಿಟ್ಟಿ ಹರಿಸಿದರೂ ಕೃಷ್ಣನೇ ಕಾಣತೊಡಗಿದ. ಕ್ರುದ್ದನಾಗಿ ಕೃಷ್ಣನ್ನು ಹಿಡಿದು ಹಿಸುಕಲು ಓಡಿದರೆ ಕೃಷ್ಣ ಸಿಗುವನೇ? ಓಡಿದ ವೇಗದಿಂದ ದಡಾರನೆ ಗೋಡೆಗೆ ಅಪ್ಪಳಿಸಿ ಬಿದ್ದನು. ಅಸಹನೀಯ ನೋವಾಗಿ ಅತ್ತೇ ಬಿಟ್ಟನು ಜಗಜಟ್ಟಿ ಪಟು ಕಂಸ. ನಗುವ ಕೃಷ್ಣರನ್ನು ಕಂಡು ಕೋಪಾವಿಷ್ಟನಾಗಿ ಬೆನ್ನಟ್ಟಿ ಓಡಿದ. ಹಿಡಿಯಲಾಗಲಿಲ್ಲ. ಸುತ್ತು ಸುತ್ತು ಓಡಿ ಓಡಿ ತಲೆಸುತ್ತು ಬಂದು ಕುಸಿದು ಬಿದ್ದನು. ಎದ್ದು ತೆವಳುತ್ತಾ, ನಿಸ್ತೇಜನಾಗುತ್ತಾ ಮಂಚವೇರಿ ಬಿದ್ದುಕೊಂಡನು. ಎಚ್ಚರವಾದಾಗ ಬೆಳಕು ಹರಿದಿತ್ತು.

ಎದ್ದು ಪ್ರಾತಃ ವಿಧಿ ಪೂರೈಸಿ, ತನ್ನ ಕೊನೆಯ ಆಸೆಯೋ ಎಂಬಂತೆ ಸರ್ವಾಭರಣ ಅಲಂಕಾರ ಭೂಷಿತನಾಗಿ ಸಿದ್ಧನಾದನು. ಭಯಗೊಂಡಿದ್ದ ಮಹೀಂದ್ರ ರಕ್ಷಣೆಗೆ ಅಂಗ ರಕ್ಷಕರನ್ನೂ, ರಾಜ ಭಟರನ್ನೂ, ಜಟ್ಟಿಗಳನ್ನೂ ಕೂಡಿಕೊಂಡು ಹೊರ ಬಂದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page