33.4 C
Udupi
Wednesday, May 6, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 76

ಭರತೇಶ್ ಶೆಟ್ಟಿ, ಎಕ್ಕಾರ್

ಶ್ರೀಕೃಷ್ಣನು ದೇವೇಂದ್ರದತ್ತ ಕೊಳಲನೂದಲು ಆರಂಭಿಸುವಾಗ, ಆತನ ನುಣುಪಾದ ತುಟಿಯನ್ನು ಆಧರಿಸಿ, ಆತನ ಶರೀರದಿಂದ ಹೊರಬರುವ ಗಾಳಿ ಬಾನ್ಸುರಿಯ ಒಳಹೊಕ್ಕು, ಬೆರಳ ತುದಿಯ ನಿರ್ದೇಶನದಂತೆ ಕೊಳಲ ರಂಧ್ರಮನೆಯಿಂದ ಹೊರ ನುಸುಳುವ ವಾಯು ನಾದಮಯ ನಿನಾದ ಹೊಮ್ಮುವ ದನಿಯಾಗಿ, ಕರ್ಣಾನಂದಕರ ಮೋಹಕ ಮುರಳಿ ಗಾನವಾಗಿ ತನ್ಮಯಗೊಳಿಸುತ್ತಿತ್ತು. ಆಲಿಸುತ್ತಿದ್ದ ಗೋವುಗಳಿಗೂ, ಗೋಪಿಕೆಯರಿಗೂ ಮುರಳಿ ಮೋಹನನ ಗಾಯನ ಸುಧೆ ಮೈಮರೆಸಿ ತಮ್ಮ ಪೂರ್ವ ವೃತ್ತಾಂತ ನೆನಪಿಸಿತು. ಅರಿತು ಪುಳಕಿತರಾಗುವಷ್ಟರಲ್ಲಿ ನಾದವೂ ನಿಂತಿತು ಸ್ಮರಣೆಯೂ ಹಿಂದೆ ಜಾರಿತು. ಇಂದ್ರಾದಿ ಕಾಮಧೇನುಗಳು ಬಂದ ಕಾರ್ಯವಾದ ಕಾರಣ ನಿರ್ಗಮಿಸಿದರು. ಉಳಿದ ಗೋಪಾಲಕರು ಸಕುಟುಂಬ ಸಮೇತ ಮರಳಿ ಬೃಂದಾವನ ಸೇರಿದರು.

ಹೀಗಿರಲು ಬಲಭದ್ರ ಕೃಷ್ಣರು ನೈಮಿತ್ತಿಕ ಕರ್ಮಗಳನ್ನು ಪೂರೈಸಿ, ಗೋವುಗಳ ಪರಿಚಾರಕ ಕೆಲಸ, ಸೆಗಣಿ ತೆಗೆಯುವುದು, ಹಾಲು ಕರೆಯುವುದು, ಆಹಾರ ನೀಡುವುದು ಇತ್ಯಾದಿ ಕೆಲಸ ಮುಗಿಸಿ ಯಶೋದ ಮಾತೆಯ ಕೈತುತ್ತು ಸೇವಿಸಿ ದನಗಳ ಹಿಂಡನ್ನಟ್ಟಿಕೊಂಡು ಮೇಯಿಸಲು ಹೊರಡುತ್ತಿದ್ದರು. ಹೀಗೆ ದನಗಳು ಮೇಯುತ್ತಿರಬೇಕಾದರೆ ಕೃಷ್ಣ ಬಲರಾಮರು ಸೇರಿ ವೈವಿಧ್ಯ ವಿನೋದ, ಜ್ಞಾನ, ಕೌಶಲ್ಯ ಮುಂತಾದ ಸಕಾರಾತ್ಮಕ ವಿಚಾರಗಳನ್ನು ಗೊಲ್ಲರ ಮಕ್ಕಳಲ್ಲಿ ಅಂತರ್ಗತಗೊಳಿಸತೊಡಗಿದರು. ಮುರಳೀಗಾನ ಸುಧೆಯ ಪೂರ್ಣ ಸುಖಿಗಳಾಗಿ ಗೋವುಗಳೂ, ಗೋಪಾಲಕ – ಗೋಪಿಕೆಯರೂ ಮೈಮರೆಯುತ್ತಿದ್ದರು. ಬಾಲಕೃಷ್ಣ ಬೆಣ್ಣೆ ಕಳ್ಳನಾಗಿ ಮಿತ್ರರಿಗೆ ತಿನ್ನಿಸುವ ಆರೋಪ ಹೊತ್ತರೂ, ಪರಿಣಾಮ ಗೊಲ್ಲರ ಮಕ್ಕಳಿಗೆ ನಿರಂತರ ಪೌಷ್ಟಿಕ ಆಹಾರ ದೊರೆತು ಬಲಿಷ್ಟರಾದರು. ಕುಸ್ತಿ, ಮಲ್ಲಯುದ್ದ, ಶಾರೀರಿಕ ವ್ಯಾಯಾಮ ಕ್ರೀಡೆಗಳನ್ನು ಕಲಿಸುತ್ತಾ ಅವರನ್ನು ತರಬೇತಿ ಪಡೆದ ಕಟ್ಟಾಳುಗಳಾಗಿ ಮಾರ್ಪಾಡು ಮಾಡಿ ಗೊಲ್ಲರ ಸೈನ್ಯವಾಗಿ ಪರಿವರ್ತಿಸಿದ. ವಿಶೇಷ ಜ್ಞಾನ ಬೋಧಿಸಿ ಸಹ್ಯ – ಅಸಹ್ಯ ಶಾಸ್ತ್ರಗಳನ್ನು, ಧರ್ಮ – ಅಧರ್ಮ ನೀತಿಗಳನ್ನು, ಆಚಾರ – ವಿಚಾರ ಪಾಲನೆಗಳನ್ನು ಹೇಳುತ್ತಾ ಅವರಲ್ಲಿ ಸಂಸ್ಕಾರ ಜಾಣ್ಮೆ, ಉತ್ಸಾಹ, ಚೈತನ್ಯ ತುಂಬತೊಡಗಿದ. ಇದರ ಪ್ರಭಾವದಿಂದ ಗೊಲ್ಲರು ಅಶುಚಿ, ಅಭೋಜ್ಯ ಭೋಜನ, ನಿಶಿದ್ದ ಪದಾರ್ಥ ಸೇವನೆ ತೊರೆದು ಸಂಸ್ಕಾರವಂತರಾಗಿ ಬದಲಾದರು. ಜೀವನಕ್ರಮವೂ ಬದಲಾಗುತ್ತಾ ಅವರ ಸಾಮಾಜಿಕ ಜೀವನ ಔನ್ನತ್ಯ ಪಥ ಹಿಡಿಯಿತು.
ಹೀಗೆ ಗಂಡು ಮಕ್ಕಳು ಒಂದೆಡೆ ಸುಸಂಸ್ಕೃತರಾಗಿ ಮುಖ್ಯವಾಹಿನಿಯಲ್ಲಿ ಗೌರವ ಪಡೆಯುತ್ತಾ ಬೆಳೆಯ ತೊಡಗಿದರು. ವಿದ್ಯೆಯಿಂದ ವಿನಯ, ವಿನಯದಿಂದ ವಿವೇಕ -ವಿವೇಚನೆ ಪ್ರಾಪ್ತಗೊಳಿಸಿಕೊಂಡರು.

ಇತ್ತ ಗೋಪಿಕಾ ಸ್ತ್ರೀಯರು ತಮ್ಮ ಬಟ್ಟೆಗಳನ್ನು ಕಳಚಿಟ್ಟು ಜಲಕೇಳಿಯಾಡುತ್ತಾ ಆನಂದಿಸುತ್ತಿದ್ದರು. ಸ್ತ್ರೀ ಸಹಜ ನಾಚಿಕೆ ತುಸು ಕಡಿಮೆಯೇ ಇತ್ತೆನ್ನಬಹುದು. ಗಮನಿಸಿದ ಕೃಷ್ಣ ಅವರ ವಸನಗಳನ್ನು ಎತ್ತಿ ಗಂಟಾಗಿಸಿ ಮರವೇರಿ ಮುರಳಿಧರನಾಗಿ ಸುಶ್ರಾವ್ಯವಾಗಿ ದನಿ ಹೊಮ್ಮಿಸತೊಡಗಿದ. ಆಲಿಸಿದ ಗೋಪಿಕೆಯರು ಕೃಷ್ಣ ಬಂದಿರುವುದನ್ನು ತಿಳಿದು ಮೇಲೆ ಬಂದು ವಸ್ತ್ರಗಳಿಲ್ಲದೇ ಇರುವುದನ್ನು ಅರಿತು ಮರಳಿ ನೀರಿಗಿಳಿದು ನಿಂತು ವಸ್ತ್ರ ನೀಡುವಂತೆ ಬೇಡತೊಡಗಿದರು. ತುಸು ಹೊತ್ತು ಕಾಡಿಸಿ ಕಾಯಿಸಿ ಕೃಷ್ಣ ಹಿತವಾಗಿ ಮನಕ್ಕೆ ಅರ್ಥವಾಗುವಂತೆ ಸ್ತ್ರೀಸಹಜ ಗುಣಗಳೇನು, ದೇಹಾಭಿಮಾನ, ಮಾನ ರಕ್ಷಣೆ, ಅನಿವಾರ್ಯತೆ, ಹೆಣ್ಣಿನ ಘನತೆ ಇತ್ಯಾದಿ ಸೂಕ್ಷ್ಮಗಳನ್ನು ಅರಿವಾಗುವಂತೆ ವಿಸ್ತರಿಸಿ ಹೇಳಿ ವಸ್ತ್ರಗಳನ್ನು ನೀಡಿದ. ದೇವರ ಭಕ್ತರ ಸಂಬಂಧವಲ್ಲವೇ ! ಅವರೂ ಕೃಷ್ಣನ ಕುರಿತು ಅನನ್ಯ ಗೌರವ ತಳೆದರು. ಭಕ್ತಿಯಾಗಿ, ಅವ್ಯಾಜ ಪ್ರೇಮವಾಗಿ ಬೆಳೆದು ಅನವರತ ಕೃಷ್ಣನನ್ನು ಭಜಿಸುವ ಮಟ್ಟಕ್ಕೆ ಭಾವಗಳು ಬೆಸೆಯಲ್ಪಟ್ಟವು.

ಒಂದು ಹುಣ್ಣಿಮೆಯ ರಾತ್ರಿ ಬೆಳದಿಂಗಲು ಚೆಲ್ಲಿದ ರಾತ್ರಿ ತಮ್ಮ ಪತಿ ಮಕ್ಕಳೊಂದಿಗೆ ಮಲಗಿದ್ದ ಗೋಪಿಕೆಯರಿಗೆ ಕೃಷ್ಣನನ್ನು ಕಾಣುವ ಹಂಬಲ ಮೂಡಿತು. ಮಧ್ಯರಾತ್ರಿ ಈ ರೀತಿ ಮೂಡಿದ ಬಯಕೆ ಕ್ಷಣ ಕ್ಷಣಕ್ಕೂ ಹೆಚ್ಚುತ್ತಾ ಹೋಗುತ್ತಿದ್ದಂತೆ ಅವರ ಕಿವಿಗಳಿಗೆ ಬಾನ್ಸುರಿಯ ಮೆಲುಗಾಯನ ತೇಲಿ ಬಂದು ಕರ್ಣಗಳ ಮೂಲಕ ಮನಹೊಕ್ಕು, ಮಲಗಿ ಇದ್ದ ಹಾಗೆ ಎದ್ದು, ಗಂಡ ಮಕ್ಕಳ ಬಗ್ಗೆಯೂ ಭಯ ಯೋಚನೆ ಇರದೆ ಭಾವ ಪರವಶರಾಗಿ ದನಿಯ ಮೂಲವರಸಿ ಬಂದರೆ ಕೃಷ್ಣ ಬೃಂದಾವನದ ಬಳಿ ಬಂಡೆ ಕಲ್ಲಿನಲ್ಲಿ ಕುಳಿತು ಮಂದ ಶೃತಿಯಲ್ಲಿ ಮುರಳಿಯನೂದುತ್ತಿದ್ದಾನೆ.. ಗೋಪಿಕೆಯರಿಗೆ ಕೃಷ್ಣನನ್ನುಳಿದು ಏನೂ ಗೋಚರಿಸುತ್ತಿಲ್ಲ… ಭಕ್ತಿ ಪರವಶತೆಯ ಸುಖದಲ್ಲಿ ರಮಿಸಿದರು. ಹೊತ್ತು ಕಳೆದು ಬೆಳಕು ಮೂಡುತ್ತಿರಬೇಕಾದರೆ ವಾಸ್ತವ ಅರಿತು ಮುಖ ಮುಖ ನೋಡುವಾಗ ಎಲ್ಲಾ ಗೋಪಿಕೆಯರ ದಂಡೇ ಇದೆ. ಏನು? ಯಾಕೆ? ನೀವು ಇಲ್ಲಿ ಬಂದದ್ದು? ಎಂಬ ಪ್ರಶ್ನೆ ಪರಸ್ಪರ ಕೇಳುವಂತಹ ಸ್ಥಿತಿ ಅವರದ್ದಾಯಿತು. ಕಾಲ ವಿಳಂಬಿಸದೇ ಓಡಿ ಮನೆ ಸೇರಿ ನಿತ್ಯ ಕೆಲಸದಲ್ಲಿ ತೊಡಗಿದರು.

ಇದು ನಿತ್ಯ ನಿರಂತರವಾದಾಗ ಕೆಲವು ಮನೆಯಲ್ಲಿ ಗಂಡಂದಿರು ಎದ್ದು ರಾತ್ರಿ ಬೆಳಗಿನವರೆಗೆ ಮಡದಿಯರು ಎಲ್ಲಿ ಹೋಗುತ್ತಿದ್ದಾರೆ ಎಂಬ ಶಂಕೆ ವ್ಯಾಪಕವಾಗಿ ಒಬ್ಬರಿಂದೊಬ್ಬರು ಚರ್ಚಿಸಿ, ಕಂಡು ಹಿಡಿಯಬೇಕೆಂದು ತೀರ್ಮಾನಿಸಿದರು. ರಾತ್ರಿ ಗೋಪಿಕೆಯರು ಎದ್ದು ಹೊರಟಾಗ ಕಾದು ಕುಳಿತ ಗಂಡಂದಿರು ಹಿಂಬಾಲಿಸಿದರು. ಹೋಗಿ ಸೇರುವಷ್ಟರಲ್ಲಿ ಕೃಷ್ಣನ ಮುರಳಿಗಾನಕ್ಕೆ ಅವರೂ ಭಾವ ಪರವಶರಾದರು. ರಾಸಲೀಲೆಯ ಸಂಭ್ರಮ ಸುಖ ಜೀವರ – ದೇವರ ಸಂಬಂಧ ಆನಂದಿಸಿದರು. ಪರಸ್ಪರರಿಗೆ ಕೃಷ್ಣನಾಗಿ ಗೋಚರಿಸಿ ಎಲ್ಲರೂ ದೇವರ ಪೂರ್ಣ ಲೀಲಾ ವಿನೋದ ಆನಂದಿಸಿದರು.

ಹೀಗಿರಲು ಕೃಷ್ಣನ ಕುರಿತು ಅಪವಾದಗಳು, ಜಾರತ್ವದ ಆರೋಪ ಗುನುಗುಟ್ಟತೊಡಗಿತು. ನಂದಗೋಪನಿಗೂ ವಿಚಾರ ತಲುಪಿತು. ಆದರೂ ಆತ ಸುಮ್ಮನಿದ್ದು ನಕ್ಕುಬಿಟ್ಟ. ಕಾರಣ ಶ್ರೀ ಕೃಷ್ಣ ದೇವಸ್ವರೂಪಿಯೇ ಹೌದು. ಆತನನ್ನು ವಿಚಾರಿಸುವುದಾದರೂ ಹೇಗೆ? ಅದನ್ನು ಬಿಟ್ಟು ವಾಸ್ತವ ವಿಚಾರವಾದರೆ ಕೃಷ್ಣನಿಗೆ ಈಗ ಏಳು ವರ್ಷ ಪ್ರಾಯ. ಆತನಿಂದ ಯಾವ ಗರತಿ ಕೆಟ್ಟಾಳು? ಹೇಗೆ? ಸಾಧ್ಯವೇ? ಎಂದು ತರ್ಕಿಸತೊಡಗಿದ. ಆದರೂ ಕೌತುಕ ಪರಿಹಾರಕ್ಕಾಗಿ ಯಶೋದ ಸಹಿತ ವೃದ್ದ ಗೊಲ್ಲ ದಂಪತಿಗಳನ್ನು ಕೂಡಿಕೊಂಡು ರಾತ್ರಿ ಗೋಪಿಕೆಯರ ಗಮನದತ್ತ ನಿಗಾ ಇರಿಸಿ, ಹಿಂಬಾಲಿಸಿ ಅಡಗಿ ಕುಳಿತರು. ಗೋಪಿಕೆಯರ ಶುದ್ದ ಭಕ್ತಿಯ ಕರೆಗೆ, ಸ್ತುತಿಗೆ ಒಲಿದು ಮುರಳಿಯ ಗಾನ ಲಹರಿಯನ್ನೆಬ್ಬಿಸುತ್ತಾ ವ್ಯಕ್ತನಾದ ಕೃಷ್ಣ. ಎಲ್ಲಾ ಗೋಪಿಕೆಯರು ಕೃಷ್ಣನ ಪಾದಗಳಿಗೆ ಶಿರಸಾ ನಮಿಸುತ್ತಿದ್ದರು. ಒಬ್ಬೊಬ್ಬರನ್ನೆ ಹಿಡಿದೆಬ್ಬಿಸುತ್ತಿದ್ದ. ಕೃಷ್ಣ ಸ್ಪರ್ಶವಾಗುತ್ತಿದ್ದಂತೆ ಗೋಪಿಕೆಯರು ತೇಜಪೂರ್ಣ ಋಷಿಗಳಾಗತೊಡಗಿದರು. ಬೆಳಗಾಗುವವರೆಗೂ ಪೂಜಿಸುತ್ತಿದ್ದ ಮಹರ್ಷಿಗಳು ಹೊತ್ತು ಮೂಡುತ್ತಿದ್ದಂತೆ ಗೋಪಿಕೆಯರಾಗಿ ಮರಳುತ್ತಿದ್ದರು. ಮರೆಯಲ್ಲಿ ನಿಂತು ಎಲ್ಲಾ ದೃಶ್ಯಗಳನ್ನು ಪ್ರತ್ಯಕ್ಷ ಕಂಡ ನಂದಗೋಪ ಯಶೋದೆಯರು ಗೋವಳ ವೃದ್ದರೊಂದಿಗೆ ಮರಳಿ ಮನೆಗೆ ಬಂದರೆ ಕೃಷ್ಣ ಪರಮಾತ್ಮ ತನ್ನ ದೈನಂದಿನ ಕೆಲಸ ಹಟ್ಟಿಯಲ್ಲಿರುವ ಸೆಗಣಿ ಎತ್ತಿ ಶುಚಿಗೊಳಿಸುತ್ತಿದ್ದಾನೆ. ಭಗವಂತನ ಲೀಲೆ! ಆತನೂ ಜಗದ ಕೊಳಕು ತೊಡೆದು ನಿರ್ಮಲಗೊಳಿಸಲು ಬಂದವನಲ್ಲವೇ…

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page