28 C
Udupi
Monday, May 4, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ –

ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೭೨ ಮಹಾಭಾರತ

ಹೀಗೆ ಪೂತನಿಯ ವಿಷ ಹಾಲು, ರಕ್ತದ ಕಲ್ಮಶದಿಂದ ತೋಯ್ದ ಬಾಲಕೃಷ್ಣನಿಗೆ ಬಿಸಿನೀರು ಸ್ನಾನ ಮಾಡಿಸಿ, ಅರಶಿನ- ಕುಂಕುಮದೋಕುಳಿ, ಮಸಿಯಿಂದ ದೃಷ್ಟಿ ನಿವಾಳಿಸಿ ದೃಷ್ಟಿ ನಿವಾರಣಾ ಕ್ರಮಗಳನ್ನು ಮಾಡಿ, ಮೈಯೊರಸಿ ದೇವರಿಗೆ ದೀಪ ಹಚ್ಚಿ ಕೈ ಮುಗಿದು ಗಂಧ ಹಾಕಿ ಮಗನ ರಕ್ಷೆಗೆ ಪ್ರಾರ್ಥಿಸಿದಳು ಮಾತೆ ಯಶೋದೆ. ಆಕೆಯ ಮನದಲ್ಲಿ ಮಗುವಿನ ಬಗ್ಗೆ ಏನು ಕೇಡಾದೀತೋ ಎಂಬ ಭಯ ಪರ್ವತದಂತೆ ಬೆಳೆದೆತ್ತರಕ್ಕೆ ನಿಂತಿತ್ತು.

ನಂದ ಗೋಕುಲದ ಮಂದಿ ಬಡಿಗೆ ಕಟ್ಟಿ ನೂರಾರು ಮಂದಿ ಸೇರಿ, ಪೂತನಿಯ ಶರೀರವನ್ನು ಹೊತ್ತು ಕೊಂಡೊಯ್ದು ಊರ ಹೊರಗೆ ಹೂತು ಹಾಕಿದರು.

ಈ ಸಂದರ್ಭ ನಂದಗೋಪನು ಬಹಳಷ್ಟು ಯೋಚಿಸಿ ಬುದ್ದಿಯೋಡಿಸಿದನು. ಪೂತನಿಯ ಮರಣಕ್ಕೆ ಅನ್ಯ ಕಾರಣವನ್ನು ಸೃಷ್ಟಿಸಿ, ಅದನ್ನೇ ನಿಜವೆಂದು ಆರೋಪಿಸಿ ಕೃಷ್ಣನ ಹೆಸರು ಪ್ರಚಾರವಾಗದಂತೆ ಎಚ್ಚರವಹಿಸಿದ್ದನು. ಯಾರೂ ಈ ವಿಚಾರದಲ್ಲಿ ಚರ್ಚಿಸದ ಹಾಗೆ ಗಮನವಿಟ್ಟನು. ಇದಾಗಿ ಕೆಲ ದಿನಗಳಲ್ಲೇ ನಂದಗೋಕುಲದ ಮಕ್ಕಳು ಯಾರೂ ಸಾವನ್ನಪ್ಪಲಿಲ್ಲ. ಪೂತನಿಯ ಕೃತ್ಯವೇ ಮಕ್ಕಳ ಸಾವಿಗೆ ಕಾರಣ ಎಂಬುವುದು ಸ್ಪಷ್ಟವಾಯಿತು. ಹೀಗೆ ಮಾಡುವಲ್ಲಿ ಕಂಸನ ಕೈವಾಡದ ಬಗ್ಗೆಯೂ ನಂದಗೋಪ ಸಂಶಯ ತಳೆದಿದ್ದನು. ಆ ಬಳಿಕ ಮಕ್ಕಳ ವಿಚಾರದಲ್ಲಿ ವಿಶೇಷ ಎಚ್ಚರವಹಿಸತೊಡಗಿದನು.

ಕಾಲ ಚಕ್ರ ತಿರುಗುತ್ತಿತ್ತು. ಸಂವತ್ಸರ ಕಳೆದು ಕೃಷ್ಣ ನಡೆದಾಡತೊಡಗಿದ. ಕಂಸನ ಪಾಳಯದ ರಾಕ್ಷಸರಾದ ಶಕಟ, ಧೇನುಕ, ತೃಣಾವರ್ತ, ಪ್ರಲಂಬಾಸುರರು ತಮ್ಮ ಬಳಗ ಸಹಿತ ಮಾರು ವೇಷದಲ್ಲಿ ತಮ್ಮ ದೊರೆಯ ವೈರಿಯನ್ನು ಹುಡುಕುತ್ತಿದ್ದರು. ಅವರು ಕೃಷ್ಣನ ವಿಶೇಷತೆಗಳನ್ನು ಗಮನಿಸಿ, ಪರೀಕ್ಷಿಸಲು ಮಾಯಾರೂಪ ಧಾರಣೆ ಮಾಡಿದರು. ಶಕಟ ಮಕ್ಕಳು ಆಡುತ್ತಿದ್ದ ಬಂಡಿಗಳ ಮಧ್ಯೆ ತಾನೂ ಒಂದು ಬಂಡಿಯಾದ. ಆಡುತ್ತಾ ಕೃಷ್ಣ ಬಂಡಿ ಹತ್ತಿದಾಗ ಕೃಷ್ಣನ ಮೇಲೆ ಮಗುಚಿ ಬಿದ್ದು ಒತ್ತಿ ಕೊಲ್ಲಲು ಯತ್ನಿಸಿದ ಆ ರಕ್ಕಸ. ಕೃಷ್ಣ ಕೈ ಮುಷ್ಟಿ ಕಟ್ಟಿ ಗುದ್ದಿ, ಕಾಲಿನಿಂದ ಒದ್ದಾಗ ಬಂಡಿ ಪುಡಿಯಾಯ್ತು ರಾಕ್ಷಸ ಹತನಾದ. ಧೇನುಕಾಸುರನು ಗೋವುಗಳ ಮಧ್ಯೆ ಸೇರಿದ್ದನು. ಹಾಯ್ದು ಕೊಲ್ಲಲೆತ್ನಿಸಿದಾಗ ಆತನೂ ಕೃಷ್ಣ ಬಲಭದ್ರರ ಎದುರು ತನ್ನ ಪೌರುಷ ಮೆರೆಸಲಾಗದೆ ಮರಣಿಸಿದ. ತೃಣಾವರ್ತ ಎಂಬ ರಕ್ಕಸನು ಬಿರುಗಾಳಿಯಂತೆ ಬಂದು ಕೃಷ್ಣನನ್ನು ಹಾರಿಸಿ ಒಯ್ಯಲು ಯತ್ನಿಸಿ ಕೃಷ್ಣನ ಕೈಯಲ್ಲಿ ಸಾವನ್ನಪ್ಪಿದ. ಪ್ರಲಂಬಾಸುರ ಹೆಬ್ಬಾವಾಗಿ ಬಾಲಕೃಷ್ಣನನ್ನು ನುಂಗಲು ಬಂದರೆ, ಕೃಷ್ಣ ಹಾವಿನ ಕತ್ತನ್ನೊತ್ತಿ ಹಿಡಿದಾಗ ಬಿಡಿಸಲಾಗದೆ ಉಸಿರುಗಟ್ಟಿ ದೈತ್ಯ ರಾಕ್ಷಸ ನಿಜರೂಪ ತಾಳಿ ಬೊಬ್ಬಿರಿದು ಸತ್ತುಬಿದ್ದ. ಹೀಗೆ ನಂದ ಗೋಕುಲದಲ್ಲಿ ರಾಕ್ಷಸರ ಹೆಣ ಹೊತ್ತು ಊರ ಹೊರಗೆ ಹೂಳುವುದೇ ಒಂದು ಕೆಲಸ ಆಯಿತು ಗೋಪಾಲಕರಿಗೆ. ಕೃಷ್ಣನ ಅತಿಮಾನುಷ ಶಕ್ತಿಯ ಬಗ್ಗೆ ಜನ ವಿಸ್ಮಯಗೊಂಡು ಆಡಿ ಕೊಳ್ಳುತ್ತಾ ಹೊಗಳತೊಡಗಿದರು. ವಿಚಾರವಂತನಾದ ನಂದಗೋಪ ಅವರ ಮಧ್ಯೆ ಬಂದು, ತನ್ನ ಮನೆಗೆ ಏನೋ ದುಷ್ಟ ಶಕ್ತಿಗಳ ದೃಷ್ಟಿಯಾಗಿದೆ. ವಿಶೇಷ ಶಕ್ತಿಪ್ರದವಾಗಿರುವ ನಮ್ಮ ಮನೆ ದೇವರು ಆ ದುಷ್ಟರನ್ನು ನಿಗ್ರಹಿಸಿ ನನ್ನ ಮಗುವನ್ನೂ ನಮ್ಮನ್ನೂ ರಕ್ಷಣೆ ಮಾಡುತ್ತಿರುವ ವಿಚಾರದ ಕಥೆ ಹೇಳಿ, ವಿಶೇಷ ಪೂಜೆ ನಡೆಸಿ ದೇವರಿಗೆ ಕೃತಜ್ಞತಾ ಭಾವದ ಪೂಜೆ ಸಲ್ಲಿಸಿದನು. ಅನ್ನದಾನ, ಗೋದಾನ, ವಸ್ತ್ರದಾನಾದಿ ಸುಕೃತ ಕಾರ್ಯಕ್ರಮಗಳನ್ನೂ ಮಾಡಿಸಿದನು. ಕಾರಣ ಕೃಷ್ಣನ ಬಾಲಲೀಲೆಗಳು ಪ್ರಚಾರವಾದರೆ, ವಿಷಯ ಮಥುರೆಗೆ ತಲುಪಿದರೆ ಆಪತ್ತು ಕಟ್ಟಿಟ್ಟ ಬುತ್ತಿ ಎಂದರಿತಿದ್ದನು. ಹೀಗೆ ವ್ಯವಹರಿಸಿ ಜನರ ಚಿತ್ತವನ್ನು ದೇವರತ್ತ ತಿರುಗಿಸಿ ಪ್ರಕರಣಗಳಿಗೆ ಬೇರೆಯೇ ಕಾರಣ ಸೃಷ್ಟಿಸಿ ಹೀಗೆಲ್ಲ ರಾಕ್ಷಸರು ಸತ್ತು ಬೀಳುತ್ತಿರುವುದು ಮನೆದೇವರ ಶಕ್ತಿಯಿಂದ ಎಂಬ ಹೊಸ ತಿರುವು ನೀಡಿ ಮಾಡಿದನು. ಜನರೂ ಹೌದು ಎಂಬಂತೆ ನಂಬುವಂತಾಯಿತು.

ಹೀಗೆ ಕೃಷ್ಣ ಬೆಳೆಯುತ್ತಿದ್ದನು, ಎಲ್ಲರ ಆಕರ್ಷಣೆಯ ಕೇಂದ್ರವಾಗಿದ್ದನು. ಏನೋ ವಿಶೇಷ ಸೆಳೆತ, ನೋಡಿದರೆ ನೋಡುತ್ತಾ ಇರಬೇಕೆನ್ನುವ ಉತ್ಕಟ ಹಂಬಲ ಉತ್ಪಾದಿಸುತ್ತಿದ್ದನು. ಪೋಕರಿ ಮಕ್ಕಳಾಟಿಕೆ ಮಾಡಲೂ ತೊಡಗಿದ್ದ. ಬೆಣ್ಣೆ ಕದಿಯುವುದು, ಮಡಕೆ ಒಡೆಯುವುದು. ಕದ್ದ ಬೆಣ್ಣೆಯನ್ನು ಒಡನಾಡಿ ಮಕ್ಕಳಿಗೂ, ಹೊರತಂದು ಮರದ ಮೇಲಿನ ಮಂಗಗಳಿಗೂ, ಹಕ್ಕಿಗಳಿಗೂ ತಿನ್ನಿಸುವುದು ಇತ್ಯಾದಿ ಕೃತಿಗಳಿಂದ ದೂರುಗಳು ಯಶೋದೆಗೆ ನಿರಂತರವಾಗಿತ್ತು. ಹೀಗಿರಲು ಕೃಷ್ಣನನ್ನು ಹೊರ ಹೋಗ ಬಿಟ್ಟರೆ ಜನರ ದೃಷ್ಟಿ, ದುಷ್ಟ ಶಕ್ತಿಗಳ ಕಾಟ, ದೂರುಗಳ ಸರಮಾಲೆ ನಿರಂತರವಾಗುತ್ತದೆ. ಇದ್ಯಾವುದೂ ಆಗುವುದು ಬೇಡವೆಂದು ತಡೆಯಲು ಭಾರದ ಒರಲು ಕಲ್ಲಿಗೆ ( ಒರಲು = ಉರುಟಾದ ಉರುಳಿಸಿಕೊಂಡು ಹೋಗಬಹುದಾದ) ಕಟ್ಟಿ ಹಾಕಿದಳು. ಕೃಷ್ಣನನ್ನು ತಡೆಯುವ ಒರಲು ಆ ಕಲ್ಲಿಗಿರಲು ಸಾಧ್ಯ ಇದೆಯೇ? ಲೀಲಾಜಾಲವಾಗಿ ಎಳೆಯುತ್ತಾ ಕೃಷ್ಣ ಹೊರ ಬಂದನು. ನಡೆಯುತ್ತಿದ್ದಂತೆ ಹೊರಗಿದ್ದ ಜೋಡು ಮರಗಳ ಮಧ್ಯದಲ್ಲಿ ಸಾಗಿದ. ಒರಲು ಕಲ್ಲು ಮರಗಳ ಮಧ್ಯೆ ಸಿಕ್ಕಿ ಹಾಕಿಕೊಂಡಿತು. ಪರಿಣಾಮ ಕೃಷ್ಣನನ್ನು ತಡೆದು ನಿಲ್ಲಿಸಿತು.

ಮುಂದುವರಿಯುವುದು…

✍🏻ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page