ಭಾಗ – 608
ಭರತೇಶ್ ಶೆಟ್ಟಿ, ಎಕ್ಕಾರು

“ಚಂದ್ರಹಾಸ ನೀನು ನಮ್ಮ ಸಾಮಂತ ಯುವರಾಜನಾಗಿ ನಮ್ಮ ಅಧೀನನೇ ಆಗಿದ್ದರೂ, ನಿನ್ನ ಯೋಗ್ಯತೆ, ವರ್ಚಸ್ಸು, ತೇಜಸ್ಸು, ಸಾಮರ್ಥ್ಯ ಎಲ್ಲಕ್ಕಿಂತ ಮಿಗಿಲಾದ ದೈವ ಬಲ ನಿನಗಿರುವುದನ್ನು ರಾಜಪುರೋಹಿತರಾದ ಗಾಲವರಿಂದ ತಿಳಿದುಕೊಂಡಿದ್ದೇನೆ. ನಿನಗಿರುವ ರಾಜಯೋಗ, ರಾಜಲಕ್ಷಣಗಳನ್ನು ಗಮನಿಸಿ ಚಿಂತನೆ ಮಾಡಿರುವ ಗಾಲವರು ಸೂಕ್ತ ಸಮಯದಲ್ಲಿ ನನಗೆ ನಿರ್ದೇಶನವಿತ್ತಿದ್ದಾರೆ. ಅವರ ಮಾತು ನನಗೂ ಸಹಮತ ಎನಿಸಿದೆ. ಕುಂತಳದೇಶದ ಮಹಾರಾಜ ನಾನಾದರೂ, ನನ್ನ ನಂತರ ಉತ್ತರಾಧಿಕಾರ ವಹಿಸಿಕೊಳ್ಳಲು ನನಗೆ ಪುತ್ರ ಸಂತಾನವಿಲ್ಲ. ಇರುವುದು ಒಬ್ಬಳೇ ಮಗಳು ಚಂಪಕಮಾಲಿನಿ. ನನ್ನ ಮಗಳಿಗೆ ಅನುರೂಪನೂ, ಗುಣ ಸಂಪನ್ನನೂ, ಶ್ರೀಹರಿಯ ಶ್ರೇಷ್ಟ ಭಕ್ತನೂ ಆಗಿರುವ ನಿನಗಿತ್ತು ಮದುವೆ ಮಾಡಿ ಕೊಡಬೇಕೆಂದು ತೀರ್ಮಾನಿಸಿದ್ದೇನೆ. ಅದರ ಜೊತೆಗೆ ಕುಂತಳದೇಶದ ಪಟ್ಟವನ್ನೂ ನಿನಗೊಪ್ಪಿಸುವ ತೀರ್ಮಾನ ಮಾಡಿದ್ದೇನೆ. ಇದೇ ಕಾರಣದಿಂದ ನಿನ್ನನ್ನು ಕರೆಸಿಕೊಂಡಿದ್ದೇನೆ” ಎಂದು ರಾಜಾ ಕುಂತಳೇಶ ತನ್ನ ಮನದಿಂಗಿತವನ್ನು ಹೇಳಿಕೊಂಡನು.
ಚಂದ್ರಹಾಸನಿಗೆ ಎಲ್ಲವೂ ವಿಚಿತ್ರವಾಗಿ ಕಾಣಿಸುತ್ತಿದೆ. ಸಾಮಂತರಾಜನ ಮಗನಾದ ನಾನು ಓಲೆದೂತನಾಗಿ ಬಂದು ಅನಿರೀಕ್ಷಿತವಾಗಿ ಮಂತ್ರಿವರ್ಯರ ಮಗಳ ಗಂಡನಾದೆ. ಈಗ ಇನ್ನೂ ಒಂದು ಹಂತ ಮೇಲೇರಿ ಮಹಾರಾಜರ ಮಗಳನ್ನು ಮದುವೆಯಾಗಲು, ರಾಜ್ಯಾಧಿಕಾರ ಸ್ವೀಕರಿಸುವಂತಾಗುತ್ತಿರುವುದು ಕನಸಿನಂತೆ ಭಾಸವಾಗುತ್ತಿದೆ. ಹೇ ಹರಿಯೇ ಎಲ್ಲವೂ ನಿನ್ನಿಚ್ಚೆ. ನನ್ನನ್ನು ಹೇಗೆಲ್ಲಾ ಆಡಿಸಬೇಕೆಂದು ನೀನು ಬಯಸಿರುವೆಯೋ ಹಾಗೆಯೇ ಆಗಲಿ ಎಂದು ಯೋಚಿಸಿ, ಸರ್ವ ವಿಚಾರಗಳನ್ನೂ ಭಗವಂತ ನಾರಾಯಣನಿಗೆ ಸಮರ್ಪಿಸಿ ಒಪ್ಪಿಕೊಂಡನು.
ಕುಂತಳದ ಅರಮನೆಯಲ್ಲಿ ರಾಜ ಪುರೋಹಿತ ಗಾಲವರ ಪೌರೋಹಿತ್ಯದಲ್ಲಿ ಚಂದ್ರಹಾಸನಿಗೂ ರಾಜಕುಮಾರಿ ಚಂಪಕಮಾಲಿನಿಗೂ ವಿವಾಹ ನೆರವೇರಿತು. ಮಹಾರಾಜ ಕುಂತಳೇಶ ನೂತನ ವಧು ವರರನ್ನು ಆಶೀರ್ವದಿಸಿದ. ಚಂದ್ರಹಾಸನನ್ನು ಕರೆದು ಪಟ್ಟದ ಉಂಗುರ, ರಾಜಮುದ್ರೆ, ಧರ್ಮದಂಡ, ಕಿರೀಟ, ಪಟ್ಟದ ಖಡ್ಗವನ್ನು ನೀಡಿ ಕುಂತಳದೇಶದ ರಾಜನೆಂದು ಘೋಷಿಸಿದ. ವಧುವರರಾಗಿ ರಾಜೋಚಿತ ಉಡುಗೆ ತೊಡುಗೆ ಭೂಷಣಾದಿಗಳಿಂದ ಸರ್ವಾಲಂಕೃತರಾದ ಚಂದ್ರಹಾಸ ಮತ್ತು ಚಂಪಕಮಾಲಿನಿಯನ್ನು ಪಟ್ಟದಾನೆಯ ಮೇಲೆ ಕುಳ್ಳಿರಿಸಿ ಮೆರವಣಿಗೆಯನ್ನೂ ಹೊರಡಿಸಿದರು. ಕುಂತಳದ ಅರಮನೆಯಲ್ಲಿ ಸಂಭ್ರಮವೇ ಸಂಭ್ರಮ. ನಾಳೆಯಿಂದ ಔತನಕೂಟ, ಚಂದ್ರಹಾಸನಿಗೆ ವಿಧಿಪೂರ್ವಕ ಪಟ್ಟಾಭಿಷೇಕದ ಕುರಿತಾಗಿಯೂ ಘೋಷಣೆಯಾಯಿತು.
ಪಟ್ಟದಾನೆಯ ಮೇಲೆ ಕುಳಿತ ವಧು ವರರ ಮೆರವಣಿಗೆ, ಆಸ್ಥಾನ ಕಲಾವಿದರ ಕಲಾ ಪ್ರದರ್ಶನ, ವಾದ್ಯಮೇಳಗಳು, ಜಯಘೋಷಗಳು ಸೇರಿ ಅದ್ದೂರಿಯಿಂದ ರಾಜ ಬೀದಿ ಪುರದೆಲ್ಲೆಡೆ ಒಂದು ಸಾಗುತ್ತಿದೆ.
ಈ ಸಡಗರ ಸಂಭ್ರಮದ ಧ್ವನಿ ಕೇಳಿಸಿಕೊಂಡ ದುಷ್ಟಬುದ್ಧಿಗೆ ವಿಚಿತ್ರವಾಯಿತು. ನಮ್ಮ ರಾಜ್ಯದಲ್ಲಿ ನನಗೆ ತಿಳಿಯದೆ ಸಮಾರಂಭವೇ? ಇಷ್ಟೊಂದು ಸಡಗರವೇ? ಏನಿರಬಹುದು? ಮಂತ್ರೀಶನಾದ ನಾನೇ ಇಲ್ಲದೆ ಏನೂ ನಡೆಯಲು ಸಾಧ್ಯವಿಲ್ಲ. ಹಾಗಿದ್ದೂ ಕೇಳಿಬರುತ್ತಿರುವ ಧ್ವನಿ ಸುಳ್ಳಲ್ಲ ಎಂದು ಖಚಿತ ಪಡಿಸಿಕೊಂಡನು. ಎತ್ತಲೋ ಇದ್ದ ದುಷ್ಟಬುದ್ಧಿ ಮೆರವಣಿಗೆ ಸಾಗುತ್ತಿರುವಲ್ಲಿಗೆ ಧಾವಿಸಿ ಬಂದನು. ಬಂದು ನೋಡಿದರೆ ಪಟ್ಟದಾನೆಯ ಮೇಲೆ ಯಾರೋ ಕುಳಿತಿದ್ದಾರೆ. ಇನ್ನೂ ಸಮೀಪಕ್ಕೆ ಬಂದು ನೋಡಿದರೆ ತನ್ನ ಮಗಳ ಗಂಡ ಅಳಿಯನೂ, ರಾಜಕುಮಾರಿಯೂ ಆಸೀನರಾಗಿದ್ದಾರೆ. ಅರೆ! ಇದು ಹೇಗೆ ಸಾಧ್ಯ? ಎಂದು ಗೊಂದಲಕ್ಕೊಳಗಾಗಿ ತರ್ಕಿಸುತ್ತಾ, ಪಟ್ಟದಾನೆಯ ಬಳಿ ಬಂದನು ದುಷ್ಟಬುದ್ಧಿ.
ತನ್ನ ಅಳಿಯನಾದ ಚಂದ್ರಹಾಸನನ್ನು ಕೂಗಿ “ದೇವಸ್ಥಾನಕ್ಕೆ ನೀನು ಹೋಗಲಿಲ್ಲವೇ? ದೇವರ ಪೂಜೆ ಮಾಡಿಸಲಿಲ್ಲವೇ?” ಎಂದು ಪ್ರಶ್ನಿಸಿದನು. ಚಂದ್ರಹಾಸನು ತನ್ನ ಮಾವನಿಗೆ ಕರಜೋಡಿಸಿ ವಂದಿಸಿದನು. ನಡೆದ ವೃತ್ತಾಂತವನ್ನು ವಿವರಿಸಿ ಹೇಳಿದ ಚಂದ್ರಹಾಸ “ರಾಜಾಜ್ಞೆಯಂತೆ ನಾನು ಇತ್ತ ಬರಲೇಬೇಕಾಯಿತು” ಎಂದನು.
ದುಷ್ಟಬುದ್ಧಿಗೆ ತನ್ನ ಕಣ್ಣುಗಳನ್ನೇ ನಂಬದಾಗಿ ಹೋಗಿದ್ದಾನೆ. ಕೂಡಲೆ ಮಗನ ನೆನಪಾಗಿ “ಚಂದ್ರಹಾಸಾ! ನನ್ನ ಮಗ ಮದನನೆಲ್ಲಿ?” ಎಂದು ಮರುಪ್ರಶ್ನಿಸಿದ. ಈಗ ದುಷ್ಟಬುದ್ಧಿಗೆ ಆಕಾಶವೇ ಕಳಚಿ ಮೈಮೇಲೆ ಬಿದ್ದಂತಾಯಿತು…
ಮುಂದುವರಿಯುವುದು…

























































