ಭಾಗ – 594
ಭರತೇಶ ಶೆಟ್ಟಿ, ಎಕ್ಕಾರು

ಚಂದ್ರಹಾಸನ ನೆರೆಹೊರೆಯವರು ಅಲ್ಲಿ ಸುತ್ತ ಮುತ್ತಲೆಲ್ಲಾ ಹುಡುಕಾಡಿ ಬಾಲಕ ಕಾಣದೇ ಹೋದಾಗ ತಮ್ಮ ಮನೆಯತ್ತ ಹೊರಟರು. ದೇವರೇ ಆ ಹುಡುಗ ಎಲ್ಲಿ ಹೋದ? ತುಂಟನಲ್ಲ ಆತ, ಎತ್ತ್ ಹೋದನೋ! ಎಂದು ಅವರವರೇ ಮಾತಾಡುತ್ತಾ, ದೇವರೇ ನೀನೇ ಕಾಪಾಡಬೇಕೆಂದು ಪ್ರಾರ್ಥಿಸುತ್ತಾ ಮನೆ ಸೇರಿದರು.
ಇತ್ತ ಕಾಡಿನ ಮಧ್ಯಕ್ಕೆ ಹೊತ್ತು ತಂದಿದ್ದ ಕಟುಕರು ಮಗುವನ್ನು ಕೆಳಗಿಳಿಸಿ ಒಬ್ಬಾತ ಹಿಡಿದಿಟ್ಟರೆ ಮತ್ತೋರ್ವ ತಲೆಗಡಿದು ಕೊಲ್ಲಲ್ಲು ಒರೆಯಿಂದ ಖಡ್ಗವನ್ನು ಹೊರಗೆಳೆದ. ಈ ಸಮಯ ಚಂದ್ರಹಾಸನ ಬಾಯಿಯನ್ನು ಒತ್ತಿ ಹಿಡಿದಿದ್ದ ಕಟುಕರ ಕೈ ಮುಕ್ತವಾಗಿದೆ. ಸಾಮಾನ್ಯವಾಗಿ ಇಂತಹ ಸಮಯ ಹೆದರಿದ ಬಾಲನೋರ್ವ ಜೋರಾಗಿ ಅತ್ತು ಕೂಗಾಡಬೇಕಲ್ಲವೇ? ಆದರೆ ಚಂದ್ರಹಾಸ “ನಾರಾಯಣ” “ನಾರಾಯಣ” ಎಂದು ನಾಮ ಜಪಿಸತೊಡಗಿದ. ಕಟುಕರಿಗೂ ಆಶ್ಚರ್ಯವಾಯಿತು, “ಹೆದರಿ ಅತ್ತು ಗೋಗರೆಯಬೇಕಿದ್ದ ಈ ಪೋರ ಎಷ್ಟು ನಿರಾತಂಕನಾಗಿದ್ದಾನೆ? ಆಹಾ ಏನು ಚೆಲುವು ಈ ಕಂದನದ್ದು. ಅದೇನೋ ಸೆಳೆತವಿದೆ. ಯಾಕಾಗಿ ನಮ್ಮ ಒಡೆಯರಾದ ಮಂತ್ರಿಗಳಿಗೆ ಈ ಮಗುವಿನ ಮೇಲೆ ಹಗೆಯಾಗಿದೆಯೋ? ಈ ಕೋಮಲ ಶರೀರದ ಕಾಂತಿಯಿಂದ ಕಂಗೊಳಿಸುವ ಈ ಮಗುವಿನ ತಲೆಗಡಿಯಲು ಕರುಣೆಯೇ ಇಲ್ಲದ ಕಟುಕರಾದ ನಮಗೇ ಮನಸ್ಸು ಬರುತ್ತಿಲ್ಲ. ಹಾಗಾದರೆ ಆಜ್ಞೆ ಮಾಡಿದ ಮಂತ್ರಿಗಳು ನಮಗಿಂತಲೂ ಕ್ರೂರ ಸ್ವಭಾವದವರೇ?” ಎಂದು ಒಬ್ಬಾತ ಹೇಳಿದ.
ಕೇಳಿಸಿಕೊಂಡ ಜತೆಗಾರ ಕಟುಕ “ಹೌದು ನೀನು ಹೇಳುತ್ತಿರುವುದು ಸತ್ಯ. ನನಗೂ ಹಾಗೆಯೇ ಅನಿಸುತ್ತಿದೆ. ಆದರೆ ಈ ಬಾಲಕನನ್ನು ಕಡಿದು ಕೊಲ್ಲಬೇಕು. ಕೊಲೆಯ ಕುರುಹಾಗಿ ಏನಾದರು ತರಬೇಕು ಎಂದು ಅಪ್ಪಣೆ ಮಾಡಿದ್ದಾರಲ್ಲಾ? ಏನು ಮಾಡಲಾದೀತು? ಕೊಲ್ಲದೆ ನಮಗೆ ಅನ್ಯ ಮಾರ್ಗವಿಲ್ಲವಲ್ಲಾ” ಎಂದು ಮರುಗಿದನು.
ಆಗ ಮೊದಲ ಕಟುಕನೂ “ಹೌದು ನಮಗೆ ಆಜ್ಞೆಯಾಗಿದೆ. ನಾವು ನಿಷ್ಠಾವಂತರು ಎಂಬ ವಿಶ್ವಾಸವೂ ನಮ್ಮ ಒಡೆಯನಿಗಿದೆ. ಅವರ ಆಜ್ಞೆಯಂತೆ ನಡೆದು ಕೊಳ್ಳದೇ ಹೋದರೆ ನಮಗೂ ಆಪತ್ತು ನಿಶ್ಚಿತ. ಹಾಗಾಗಿ ಕರುಣೆ ತೋರಿಸಿ ಈ ಬಾಲಕನನ್ನು ಬಿಟ್ಟರೆ ನಮಗೆ ಸಂಚಕಾರ. ತಲೆಗಡಿದು ಕೊಂದು ಬಿಡೋಣ. ಏನು ಆದೇಶವಿದೆಯೋ ಅದನ್ನಷ್ಟೇ ಪಾಲಿಸೋಣ” ಎಂದನು.
ಬಾಲಕ ಚಂದ್ರಹಾಸ ತನ್ನಷ್ಟಕ್ಕೆ ಕುಳಿತು ನಿರ್ಭೀತನಾಗಿ “ನಾರಾಯಣ” “ನಾರಾಯಣ” ಎನ್ನುತ್ತಲೇ ಇದ್ದಾನೆ. ತನಗೆ ಸಿಕ್ಕಿದ್ದ ಸಾಲಿಗ್ರಾಮ ಕಲ್ಲು ಈಗಲೂ ಬಾಯೊಳಗೇ ಇದೆ. ಅದರ ಪ್ರಭಾವದಿಂದಲೇ ನಾರಾಯಣ ನಾಮ ಸ್ಮರಣೆಯ ಪ್ರೇರಣೆ ಮುಗ್ಧ ಬಾಲಕನಿಗೆ ಆಗುತ್ತಿರಬೇಕು. ತನ್ನ ಸುತ್ತ ಏನಾಗುತ್ತಿದೆ, ಏನಾಗಬಹುದು ಒಂದೂ ಗೊತ್ತಿಲ್ಲ. ಓರ್ವ ಹಿಡಿಡುಕೊಂಡಿದ್ದಾನೆ, ಮತ್ತೋರ್ವ ಖಡ್ಗ ಝಳಪಿಸುತ್ತಿದ್ದಾನೆ. ಆದರೂ ಚಂದ್ರಹಾಸ ನಾಮಸ್ಮರಣೆಯಲ್ಲೇ ತಲ್ಲೀನನಾಗಿದ್ದಾನೆ.
ಕಟುಕರು ಚಂದ್ರಹಾಸನನ್ನೇ ನೋಡುತ್ತಿದ್ದಾರೆ. ಯಾಕೋ ಅವರ ಮನಸ್ಸು ಆ ಮುಗ್ದ ಬಾಲಕನನ್ನು ಕಂಡು ಕರಗಲಾರಂಭಿಸಿದೆ. ಖಡ್ಗ ಹಿಡಿದಿರುವ ಕಟುಕ ಜೊತೆಗಾರನಲ್ಲಿ “ನನ್ನ ಮನಸ್ಸೇಕೋ ಸರಿ ಇಲ್ಲ. ಇದೋ ಖಡ್ಗ, ಈ ಹುಡುಗನ ತಲೆಗಡಿದು ಹಾಕು. ಒಮ್ಮೆ ಇಲ್ಲಿಂದ ನಮ್ಮ ಕೆಲಸ ಮುಗಿಸಿ ಹೋಗಿ ಬಿಡೋಣ.” ಎಂದನು. ಆಗ ಆತನೂ ಬಾಲಕನನ್ನು ನೋಡುತ್ತಾ “ಈವರೆಗೆ ನಾವು ಅದೆಷ್ಟೋ ಜನರ ಅಪರಾಧಕ್ಕೆ ಶಿಕ್ಷಾ ರೂಪವಾಗಿ ಮೃತ್ಯುದಂಡ ಆದೇಶವಾದಾಗ ಕಿಂಚಿತ್ ಚಂಚಲತೆಗೂ ಒಳಗಾಗದೆ ಕತ್ತಿ ಬೀಸಿದವರು. ನಮಗದೇ ಉದ್ಯೋಗ. ಕರುಣೆ, ಕ್ಷಮೆ ಇದೆಲ್ಲಾ ನಮಗೆ ತಿಳಿಯದ ಭಾವಗಳು. ಆದರೆ ಇಂದು ನನಗೂ ಈ ಮಗುವಿನ ಮೇಲೆ ಪ್ರೀತಿ ಉಕ್ಕೇರುತ್ತಿದೆ. ಏನು ಮಾಡುವುದೀಗ. ನನ್ನಿಂದ ಈ ಮಗುವಿನ ಶಿರಚ್ಛೇದನ ಅಸಾಧ್ಯ” ಎಂದು ಕೈ ಚೆಲ್ಲಿ ಕುಳಿತನು.
ಮಂತ್ರಿಗಳಿಗೆ ನಾವು ಈ ಬಾಲಕನನ್ನು ಕೊಂದು ಗುರುತಾಗಿ ಏನಾದರು ಒಯ್ಯಲೇ ಬೇಕು. ಏನು ದಾರಿಯಿದೆ? ಎಂದು ಯೋಚಿಸುತ್ತಾ ನೆಲ ನೋಟಕನಾದಾಗ ಚಂದ್ರಹಾಸನ ಎಡಗಾಲಿನಲ್ಲಿ ಆರು ಬೆರಳುಗಳಿರುವುದು ಗೋಚರಿಸಿತು. ಕೂಡಲೆ ಸೊಂಟದಿಂದ ಕಿರುಗತ್ತಿಯನ್ನೆಳೆದು ಚಂದ್ರಹಾಸನ ಪಾದ ಹಿಡಿದು ಹೆಚ್ಚಿನದ್ದಾದ ಆರನೇ ಬೆರಳನ್ನು ಕತ್ತರಿಸಿ ತೆಗೆದರು. ತುಂಡರಿಸಿದ ಬೆರಳನ್ನು ಹಿಡಿದುಕೊಂಡು ಬಾಲಕನನ್ನು ಅಲ್ಲೇ ತೊರೆದು ಕಟುಕರು ನೇರವಾಗಿ ಮಂತ್ರಿಯ ಮನೆಗೆ ಬಂದರು. ತಾವು ಕಡಿದು ಕೊಯ್ದು ತಂದ ಚಂದ್ರಹಾಸನ ಬೆರಳನ್ನು ನೀಡಿ “ಒಡೆಯಾ! ಇದೋ ನೀವು ಆಜ್ಞೆ ಮಾಡಿದ ಕಾರ್ಯ ಮಾಡಿ ಬಂದದ್ದಕ್ಕೆ ಸಾಕ್ಷಿ” ಎಂದರು.
ಮಂತ್ರಿ ದುಷ್ಟಬುದ್ಧಿ ಮಹದಾನದಿಂದ “ಕಡಿದು ಹಾಕಿದಿರಾ? ಕೊಂದು ಬಂದಿರಲ್ಲಾ ಶಹಬ್ಬಾಸ್” ಎಂದು ಕೇಳಿದಾಗ, “ಹೌದು ಸ್ವಾಮಿ, ತಲೆಗಡಿದು ಹಾಕಿ ಬಂದಿದ್ದೇವೆ” ಎಂದು ಹೇಳಿ ಕೈ ಕಟ್ಟಿ ನಿಂತರು. ದುಷ್ಟಬುದ್ಧಿಗೆ ಮಹದಾನಂದ. ತನ್ನ ಬದುಕಿನ ಕನಸಿಗೆ ಆತಂಕವಾಗಿದ್ದ ಬಾಲಕ ನಾಶಗೊಂಡ ಮೇಲೆ ಇನ್ನು ನಿರಾತಂಕನಾಗಿದ್ದೇನೆ. “ಇದೋ ನಿಮಗೆ ಬಹುಮಾನ” ಎಂದು ಮತ್ತಷ್ಟು ಧನ ಕನಕಗಳನ್ನು ನೀಡಿ ಕಳುಹಿಸಿದನು.
ಕಾಡಿನ ಮಧ್ಯದಲ್ಲಿ ಮೊದಲೇ ಆಗಸದೆತ್ತರಕ್ಕೆ ಬೆಳೆದು ನಿಂತ ವೃಕ್ಷರೆಂಬೆಗಳ ಚಪ್ಪರದೊಳಗೆ ತೂರಿ ಬರುತ್ತಿದ್ದ ಸೂರ್ಯ ಕಿರಣಗಳಿಂದ ಸಾಧಾರಣ ಬೆಳಕಿತ್ತು. ಈಗಲಂತೂ ಕತ್ತಲೆ ಆವರಿಸತೊಡಗಿದೆ. ಕತ್ತರಿಸಿದ ಬೆರಳಿನಿಂದಾದ ಗಾಯದಿಂದ ರಕ್ತ ಚಿಮ್ಮಿ ಒಸರುತ್ತಿದೆ. ಬಾಲಕನಲ್ಲವೆ ಗಾಯದ ನೋವು ಸಹಿಸಿ ನಡೆದಾಡಲೂ ಆಗುತ್ತಿಲ್ಲ. ಎತ್ತ ನೋಡಿದರೂ ಘೋರ ಕಾನನ. ಚಂದ್ರಹಾಸನ ಅಳು ಅರಣ್ಯರೋದನವಾಗಿದೆ.
ಮುಂದುವರಿಯುವುದು..


















































