28.8 C
Udupi
Tuesday, July 21, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 586

ಭರತೇಶ್ ಶೆಟ್ಟಿ ,ಎಕ್ಕಾರು

ಮಾಯಾಜಾಲವನ್ನು ಭೇದಿಸಿ, ಅದೃಶ್ಯವಾಗಿದ್ದು ಯುದ್ಧ ಮಾಡುತ್ತಿರುವ ಅಗೋಚರ ಶಕ್ತಿಯನ್ನು ಪ್ರಕಟಗೊಳಿಸಬಲ್ಲ ಚಾಕ್ಷುಷಿ ವಿದ್ಯೆಯನ್ನು ಅರ್ಜುನ ಪ್ರಯೋಗಿಸಿ ಕಾತರದಿಂದ ಕಾಯುತ್ತಿದ್ದಾನೆ. ಆದರೆ ವಿಚಿತ್ರ ಎಂಬಂತೆ ಚಾಕ್ಷುಷಿ ಪ್ರಯೋಗವೂ ನಷ್ಟವಾಗಿ ಹೋಯಿತು. ಅಂದರೆ ಇಲ್ಲೇನೋ ಮಹತ್ತರವಾದ ಶಕ್ತಿಯೇ ನಮ್ಮೊಂದಿಗೆ ಹೋರಾಡುತ್ತಿದೆ. ಇದನ್ನು ಭೇದಿಸುವ ಪರಿ ಹೇಗೆ ಎಂಬ ಚಿಂತೆ ಅರ್ಜುನದ್ದಾಯಿತು.

ಅರ್ಜುನ ಮಾಯಾ ಯುದ್ಧದ ಕುರಿತಾಗಿ ತನ್ನ ಅನುಭವಗಳನ್ನು ಸ್ಮರಿಸತೊಡಗಿದ. ಮೊದಲು ವನವಾಸ ಕಾಲದಲ್ಲಿ ಕಾಡ ದಾರಿಯಲ್ಲಿ ನಡೆಯುತ್ತಾ ಅರಿಯದೆ ಗಂಧರ್ವರ ಕ್ರೀಡಾವನ ಪ್ರವೇಶಿಸುವ ಸಮಯ, ಚಿತ್ರಸೇನನೆಂಬ ಗಂಧರ್ವನೋರ್ವ ಅದೃಶ್ಯನಾಗಿ ಯುದ್ಧ ಸಾರಿದ್ಧ. ಆದರೆ ಆ ಸಮಯದಲ್ಲಿ ಅರ್ಜುನ ಆಗ್ನೇಯಾಸ್ತ್ರ ಪ್ರಯೋಗದಿಂದ ಆತನನ್ನು ಸೋಲಿಸಿ ನಂತರ ಸಂಧಾನ ನಡೆಯಿತು. ಸಂಧಾನ ಸಮಯ ಮೈತ್ರಿಯ ಪ್ರತೀಕವಾಗಿ ಪರಸ್ಪರ ವಿದ್ಯಾ ವಿನಿಮಯ ಮಾಡಿಕೊಳ್ಳುವ ಒಪ್ಪಂದವಾಯಿತು. ಗಂಧರ್ವ ಚಿತ್ರಸೇನನಿಗೆ – ಅರ್ಜುನ ಆಗ್ನೇಯ ಅಸ್ತ್ರವನ್ನೂ, ಗಂಧರ್ವನಿಂದ ಅರ್ಜುನ ಚಾಕ್ಷುಷಿ ವಿದ್ಯೆಯನ್ನೂ ಪರಸ್ಪರ ಉಪದೇಶಿಸಿಕೊಂಡಿದ್ದರು.

ಅದಾದ ಬಳಿಕ ವನವಾಸ ಕಾಲದಲ್ಲೇ ಪಾಂಡವರು ಕಾಮ್ಯಕಾವನದಲ್ಲಿ ಇರುವಾಗ ಒಂದು ಘಟನೆ ಸಂಭವಿಸಿತ್ತು. ಅರ್ಜು‌ನನಿಗದರ ಕುರಿತೂ ನೆನಪಾಯಿತು. ಒಮ್ಮೆ ಬ್ರಾಹ್ಮಣನೋರ್ವನು ಅರಣಿಯನ್ನು ( ಅರಣಿ = ಗಟ್ಟಿಯಾದ ಮರದ ತುಂಡುಗಳು – ಅವುಗಳನ್ನು ಉಜ್ಜಿ ಅಂದರೆ ಅರಣಿ ಮಥನದಿಂದ ಯಾಗಾಗ್ನಿಯನ್ನು ಉತ್ಪತ್ತಿ ಮಾಡಲು ಬಳಸುವುದು) ಆಶ್ರಮದ ಬಳಿಯ ಮರದಲ್ಲಿ ಸಿಕ್ಕಿಸಿಟ್ಟಿದ್ದರು. ಅತ್ತ ಬಂದ ಜಿಂಕೆಯೊಂದು ಅದೇ ಮರಕ್ಕೆ ಮೈ ಉಜ್ಜುತ್ತಿದ್ದ ಸಂದರ್ಭ ಅದರ ಕೋಡಿಗೆ ಸಿಲುಕಿತು. ಬ್ರಾಹ್ಮಣ ತನ್ನ ಅರಣಿಯನ್ನು ಜಿಂಕೆಯ ಕೋಡಿನಿಂದ ತೆಗೆಯಲು ಬಳಿ ಸಾಗಿದರೆ ಜಿಂಕೆ ದೂರ ಓಡಿತು. ಬ್ರಾಹ್ಮಣ ಪ್ರಯತ್ನಿಸಿದರೂ ಜಿಂಕೆ ಸಿಗಲಿಲ್ಲ. ಅಲ್ಲೇ ಸನಿಹದಲ್ಲಿ ಪಾಂಡವರ ಶಿಬಿರ ಇರುವುದನ್ನು ತಿಳಿದಿದ್ದ ಬ್ರಾಹ್ಮಣ ಪಾಂಡವಾಗ್ರಜ ಯುಧಿಷ್ಠಿರನಲ್ಲಿ ದೂರಿಕೊಂಡಾಗ, ಬ್ರಾಹ್ಮಣನಿಗೆ ಅರಣಿಯನ್ನು ತಂದೊಪ್ಪಿಸುವ ಧೈರ್ಯದ ಮಾತನ್ನು ಹೇಳಿದ. ಬಳಿಕ ತನ್ನ ನಾಲ್ವರು ತಮ್ಮಂದಿರ ಜೊತೆ ಸೇರಿ ಜಿಂಕೆಯನ್ನು ಹಿಡಿದು ಅರಣಿಯನ್ನು ಪಡೆಯುವ ಪ್ರಯತ್ನದಲ್ಲಿ ಅದನ್ನು ಬಹುದೂರ ಬೆನ್ನಟ್ಟುತ್ತಾ ಸಾಗಿದರೂ ಹಿಡಿಯಲಾಗಲಿಲ್ಲ. ಬಹಳಷ್ಟು ಓಡಿ ಓಡಿ ದಣಿದು ಸುಸ್ತಾಗಿ ಐವರು ಸೋದರರೂ ಬಾಯಾರಿ ಬಸವಳಿದರು. ಧರ್ಮರಾಯ ಸನಿಹದಲ್ಲೆಲ್ಲಾದರು ನೀರು ಸಿಕ್ಕೀತೆ ಎಂದು ಕೇಳಿದಾಗ, ನಕುಲ ಸಹದೇವರು ಮರವೇರಿ ಸಮೀಪದಲ್ಲೇ ಒಂದು ತಿಳಿ ನೀರ ಸರೋವರವಿರುವುದನ್ನು ತಿಳಿಸಿದರು. ನೀರು ತರಲು ಅತ್ತ ಸಾಗಿ ಮರಳಿ ಬರಲಿಲ್ಲ. ನೋಡಲು ಹೋದ ಭೀಮನೂ ಹಿಂದಿರುಗಲಿಲ್ಲ. ಆಗ ಅಲ್ಲಿಗೆ ಹೋದ ಅರ್ಜುನ ಅಲ್ಲೊಂದು ವಿಶೇಷ ಶಕ್ತಿಯನ್ನು ಕಂಡಿದ್ದು ನೆನಪಾಯಿತು. ತಾನೆಷ್ಟು ಧನುರ್ವಿದ್ಯಾ ವಿಶೇಷ ಪ್ರದರ್ಶಿಸಿದರೂ ಗೆಲ್ಲಲಾಗದೆ ಸೋತು ಧರಾಶಾಯಿಯಾಗಿದ್ದ ಕ್ಷಣ ಸ್ಮರಣೆಯಾಯಿತು. ತತ್ಸಮಾನ ರೀತಿಯಲ್ಲಿ ಇಂದೂ ಯುದ್ಧ ಸಾಗುತ್ತಿರುವಂತೆ ಭಾಸವಾಯಿತು. ಅಂದು ಯಮಧರ್ಮರಾಜನೇ ಮಾಯಾ ಯಕ್ಷರೂಪದಲ್ಲಿ ಅವರಿಗೆದುರಾಗಿದ್ದು, ನಂತರ ಯುಧಿಷ್ಠಿರನೊಡನೆ ಸಾಗಿದ ಯಕ್ಷ ಪ್ರಶ್ನೆಯ ಬಳಿಕ ನಾಲ್ವರು ಸೋದರರನ್ನೂ ಮರುಜೀವಗೊಳಿಸಿ ವರಪ್ರಧಾನವನ್ನೂ ಮಾಡಿದ್ದ ಘಟನೆಯೂ ನೆನಪಾಯಿತು. ಆದರೆ ಈಗ ಸಾರಸ್ವತ ನಗರದಲ್ಲಿ ನಮಗೆದುರಾಗಿರುವ ಈ ವಿಶಿಷ್ಟ ಶಕ್ತಿ ಯಾವುದೆಂದು ತಿಳಿಯಲಾಗದೆ ಹೋಗಿದೆ.

ಇನ್ನು ಯೋಚಿಸಿ ಫಲವಿಲ್ಲ ಎಂದು ರಥದ ಸಾರಥಿಯಾಗಿ ಕುಳಿತಿರುವ ಶ್ರೀಕೃಷ್ಣ ಪರಮಾತ್ಮನಲ್ಲೇ ಕೇಳಿಕೊಂಡನು. ಆಗ ಪರಮಾತ್ಮ “ಅರ್ಜುನಾ! ವೀರವರ್ಮನ ಮಗಳು ಮಾಲಿನಿ ತಪಸ್ಸಿನ ಮೂಲಕ ಕೃತಾಂತನಾದ ಯಮಧರ್ಮನನ್ನೇ ಮೆಚ್ಚಿಸಿ ವರಿಸಿಕೊಂಡಿದ್ದಾಳೆ. ಈ ಪುರದ ರಕ್ಷಕನಾಗಿ ಧರ್ಮಮೂರ್ತಿಯೇ ಸ್ಥಿತನಾಗಿದ್ದಾನೆ. ಹಾಗಾಗಿ ನಮ್ಮೆದುರು ಅತಿಪ್ರಬಲನಾಗಿ ಪೌರುಷ ಮೆರೆಯುತ್ತಿರುವ ವೀರವರ್ಮನ ಸಾಧನೆಯ ಹಿಂದೆ ಯಮನ ಅನುಗ್ರಹ ವಿಶೇಷವೇ ಇದೆ. ಇನ್ನು ಯುದ್ಧ ಮುಂದುವರಿಸಿದರೆ ನಿನ್ನಿಂದ ಜಯ ಸಾಧನೆ ಕಷ್ಟವಾದೀತು. ಆಯುಧಗಳನ್ನು ಕೆಳಗಿರಿಸಿ ಏಕಾಗ್ರ ಚಿತ್ತನಾಗಿ ಯಮಧರ್ಮನನ್ನೇ ರಕ್ಷಣೆಗಾಗಿ ಪ್ರಾರ್ಥಿಸಿಕೋ.” ಎಂದು ಸಲಹೆ ನೀಡಿದನು.

ಕೃಷ್ಣನ ನಿರ್ದೇಶನದಂತೆ ತೊಡಗಿದ ಅರ್ಜುನ ನಿರಾಯುಧನಾಗಿ ದಕ್ಷಿಣಾಭಿಮುಖವಾಗಿ ನಿಂತು ಯಮರಾಜನನ್ನು ಧೃಡ ಭಕ್ತಿಯಿಂದ ಪ್ರಾರ್ಥಿಸತೊಡಗಿದ. ಅರ್ಜುನನ ಪ್ರಾರ್ಥನೆಗೊಲಿದು ಪ್ರಕಟನಾದ ಯಮಧರ್ಮ. ತನ್ನ ಮಾವನಾದ ವೀರವರ್ಮನನ್ನು ಕರೆದು ಶ್ರೀಕೃಷ್ಣ ಪರಮಾತ್ಮನ ಸಖ್ಯ ಮಾಡಿಸಿದ. “ಇನ್ನು ಇವರೊಡನೆ ಯುದ್ಧ ಬೇಡ, ಸಂಧಾನ ಮಾಡಿಕೊಳ್ಳಿ. ಶ್ರೀಹರಿಯ ನಿರ್ದೇಶನದಲ್ಲಿ ಸಾಗುತ್ತಿರುವ ಧರ್ಮಕಾರ್ಯವಾದ ಅಶ್ವಮೇಧ ಯಾಗಕ್ಕೆ ಸಹಕಾರಿಯಾಗಿ ” ಎಂದು ಹೇಳಿ ಅದೃಶ್ಯನಾದನು. ಆ ಕೂಡಲೇ ಎರಡೂ ಪಕ್ಷಗಳಿಂದ ಯುದ್ಧ ವಿರಾಮ ಘೋಷಣೆಯೂ ಆಯಿತು.

ವೀರವರ್ಮನೂ ತನ್ನ ಅಂತರಂಗದ ದೇವರು ಶ್ರೀಕೃಷ್ಣನ ಸನಿಹದಲ್ಲಿ ನಿಂತು ಕಣ್ದಣಿಯೆ ನೋಡಿ ಕೈಮುಗಿದು ಮನ ತಣಿಯುವಷ್ಟು ಮತ್ತೆ ಮತ್ತೆ ನೋಡಿ ಕರ ಜೋಡಿಸಿ ಗೋವಿಂದನ ಪದತಲದಲ್ಲಿ ಸಾಷ್ಟಾಂಗ ಪ್ರಣಾಮ ಸಲ್ಲಿಸಿ ನಿಂತನು “ದೇವರೇ, ನಿಮ್ಮ ದರುಶನ ಭಾಗ್ಯಕ್ಕಾಗಿ ಬುದ್ಧಿ ಬಂದಾಗಿನಿಂದ ನನ್ನ ಜೀವನ ಪೂರ್ತಿ ಈ ಕ್ಷಣದವರೆಗೂ ಹಾತೊರೆಯುತ್ತಿದ್ದೆ. ಸಾರಸ್ವತ ನಗರದಲ್ಲಿ ನಮಗೊಲಿದ ಯಮರಾಜನಲ್ಲೂ ಶ್ರೀಕೃಷ್ಣ ದರ್ಶನದ ವರ ಬೇಡಿದ್ದೆ. ಆ ಸಮಯ ಪರೋಕ್ಷ ರೂಪದ ಅನುಗ್ರಹವನ್ನೂ ಪಡೆದಿದ್ದೆ. “ಎಲ್ಲಿಯವರೆಗೆ ನನಗೆ ಶ್ರೀಕೃಷ್ಣ ದರ್ಶನವಾಗದೋ, ಆವರೆಗೆ ಮರಣ ಬಾರದು”. ಅಂದರೆ ಸಾಯುವ ಮೊದಲು ಹರಿದರ್ಶನದ ಸೌಭಾಗ್ಯ ನನಗಿದೆಯೆಂಬ ಸತ್ಯ ತಿಳಿದು ಕಾತರದಿಂದ ಕಾಯುತ್ತಿದ್ದೆ. ನನಗೆ ಶ್ರೀಕೃಷ್ಣನ ದರ್ಶನದ ಸುಯೋಗ ಸುನಿಶ್ಚಿತ ಎಂದಾದ ಮೇಲೆ ಅದು ನನ್ನ ಪ್ರಜಾ ಪರಿವಾರಕ್ಕೂ ಒದಗಬೇಕು, ನಾನು ನೋಡಲೇಬೇಕಾಗಿರುವ ನನ್ನ ದೇವರನ್ನು ಸಾರಸ್ವತ ನಗರದ ಈ ಪುಣ್ಯ ಭೂಮಿಯಲ್ಲೇ ನೋಡಬೇಕು ಎಂದು ಹಾತೊರೆಯುತ್ತಿದ್ದೆ. ಭಗವಂತಾ ನಿನ್ನನ್ನು ಪ್ರಾಜ್ಞರು ಭಕ್ತವತ್ಸಲನೆಂದು ಕರೆದಿದ್ದಾರೆ. ಅದು ಅಕ್ಷರಶಃ ಸತ್ಯ ಮಾತು. ನನ್ನ ಮನದಾಸೆಯನ್ನು ಅರಿತು ಈ ಮುಖೇನ ಈಡೇರಿಸಿರುವೆ. ಭಗವಂತಾ ಇನ್ನು ನನಗೆ ಮರಣ ಬಂದರೂ ನಿಶ್ಚಿಂತನಾಗಿ ಸಾಯುವೆ. ನನ್ನ ಮನದಾಸೆ – ಮಹದಾಸೆ ಸಾಕಾರಗೊಂಡಿದೆ. ಯಾವ ಕ್ಷಣದಲ್ಲಾದರೂ ನನ್ನ ಈ ಪ್ರಾಣ ಸಮರ್ಪಣೆಗೆ ಸಿದ್ಧವಾಗಿದೆ. ಆದರೆ ನಿನ್ನಲ್ಲಿ ನಿನ್ನ ಭಕ್ತನ ಒಂದು ಪ್ರಾರ್ಥನೆಯಿದೆ. ಸ್ವಾಮಿ ಈ ಮರ್ತ್ಯಲೋಕದಲ್ಲಿ ಮರಣ ಮತ್ತೆ ಜನನ, ಬೆಂಬತ್ತಿ ಸಾವು ಅದಾಗಿ ಮರು ಹುಟ್ಟು… ಹೀಗೆ ಹುಟ್ಟಿ ಸಾಯುತ್ತಾ ಕರ್ಮಫಲವನ್ನು ಅನುಭವಿಸುತ್ತಾ ಸಾಗುವ ಈ ಜೀವನ ಚಕ್ರದಿಂದ ನನಗೆ ಮುಕ್ತಿ ಬೇಕು. ನಿನಗಾಗಿ ತಪಸ್ಸಿನಂತೆ ಕಾದು ಇಂದು ಪ್ರತ್ಯಕ್ಷೀಕರಿಸಿಕೊಂಡಂತೆ ಭಾವಿಸಿ ವರ ಪ್ರಸಾದವಾಗಿ ಬೇಡುತ್ತಿದ್ದೇನೆ, ನನಗೆ ಮೋಕ್ಷವನ್ನು ಕರುಣಿಸು ದೇವಾ. ನಿನ್ನನ್ನು ಸಾಕ್ಷಾತ್ಕರಿಸಿಕೊಂಡು ದರುಶನ ಪಡೆದ ಮೇಲೆ ನಾನು ಈ ಅರಿಯದೆ ಮಾಡಿದ ಪಾಪಗಳಿದ್ದರೂ ನಾಶವಾಗಿ ಹೋದಾವು. ಜನ್ಮ ಜನ್ಮಾಂತರದಿಂದ ಹೊತ್ತು ತಂದಿರುವ ಪ್ರಾರಬ್ಧ ಕರ್ಮ ಫಲಗಳೂ ನಷ್ಟವಾದೀತು ಎಂದೇ ಭಾವಿಸುತ್ತೇನೆ. ಕರ್ಮ ಫಲ ಜೀರ್ಣವಾದುದೇ ಆದರೆ ಅದೇ ಮೋಕ್ಷ ಸಾಧನದ ಮಾರ್ಗವಲ್ಲವೇ ಸ್ವಾಮೀ… ನನಗೆ ಆ ದಿವ್ಯ ಪದವಿ ಒಂದನ್ನುಳಿದು ಅನ್ಯ ಯಾವ ಆಸೆಯೂ ಉಳಿದಿಲ್ಲ. ಕರುಣಿಸುವೆಯಾ ದೇವಾ ” ಎಂದು ಪ್ರಾರ್ಥಿಸಿಕೊಂಡನು.

ಶ್ರೀಕೃಷ್ಣನು ಮುಗುಳ್ನಗುತ್ತಾ “ವೀರವರ್ಮಾ ನೀನು ಮಹಾವೀರನೇ ಆಗಿ ಈ ವರೆಗೆ ಯುದ್ಧವನ್ನು ಮುಂದುವರಿಸಿದೆ. ಪುಣ್ಯಾತ್ಮನೇ ಆಗಿರುವ ಕಾರಣ ದೈವಬಲವೂ ನಿನಗೊಲಿದು ಜೊತೆಯಾಗಿತ್ತು. ಹಾಗಾಗಿ ಸೋಲದೆ ಗೆದ್ದವನು ನೀನೇ. ಇದೋ ಈ ಅರ್ಜುನನೂ ಇನ್ನು ನಿನ್ನವನೇ ಆಗಿದ್ದಾನೆ ಎಂದು ಸಖ್ಯದ ಸಂಕೇತವಾಗಿ ಅರ್ಜುನನ ಕೈಯನ್ನು ವೀರವರ್ಮನ ಕೈಯಲ್ಲಿಟ್ಟನು. ವೀರವರ್ಮನು ಸ್ನೇಹಪೂರ್ವಕವಾಗಿ ಅರ್ಜುನನತ್ತ ನೋಡಿ ಮತ್ತೆ ಕೃಷ್ಣನತ್ತ ತಿರುಗಿ “ಸ್ವಾಮೀ ನಾವೀರ್ವರೂ ನಿನ್ನವರೇ ಆಗಿದ್ದೇವೆ. ನಮ್ಮನ್ನು ಹೇಗೆ ಬೇಕೋ ಹಾಗೆ ನೀನೇ ನಡೆಸಿಕೋ” ಎಂದು ತನ್ನ ಕೈಯಿಂದಲೇ ಎತ್ತಿ ಅರ್ಜುನನ ಕೈಯನ್ನೂ ಶ್ರೀಕೃಷ್ಣನ ಕೈಯಲ್ಲಿ ಇಟ್ಟನು. ಭಕ್ತರೀರ್ವರ ಕೈಗಳೂ ಗೋಪಾಲ ಕೃಷ್ಣನ ಕೈಯಲ್ಲಿದೆ. ಇಬ್ಬರನ್ನೂ ಬರಸೆಳೆದು ಬಿಗಿದಪ್ಪಿದ ಕೃಷ್ಣ.

ಬಳಿಕ ಅರಮನೆಗೆ ಜೊತೆಯಾಗಿ ಸಾಗಿ ಸಕಲ ಸತ್ಕಾರ ಉಪಚಾರಗಳಾದ ಬಳಿಕ ವೀರವರ್ಮನು ಕಟ್ಟಿದ ಅಶ್ವಮೇಧ ಯಾಗದ ಕುದುರೆಗಳೆರಡನ್ನೂ ವೈಭವದಿಂದ ಗೌರವಪೂರ್ವಕವಾಗಿ ಬಿಟ್ಟು ಕೊಟ್ಟನು. ಮಾತ್ರವಲ್ಲ ಕೋಶವನ್ನೇ ಬರಿದು ಮಾಡಿದನೋ ಎಂಬಂತೆ ಬಂಡಿ ಬಂಡಿಗಳಲ್ಲಿ ತುಂಬಿ ಧನ ಕನಕ, ದವಸ ಧಾನ್ಯಾದಿಗಳನ್ನು, ವಿಶೇಷ ವಸ್ತ್ರಗಳನ್ನೂ, ಅಮೂಲ್ಯ ಸುವಸ್ತುಗಳನ್ನೂ ತುಂಬಿಸಿ ಕಾಣಿಕೆ ರೂಪದಲ್ಲಿ ಸಮರ್ಪಿಸಿದನು. ಅರ್ಜುನನು ಸ್ವೀಕರಿಸಿ ಕಾಣಿಕೆಗಳನ್ನು ಹಸ್ತಿನಾವತಿಗೆ ಸಾಗಿಸುವ ವ್ಯವಸ್ಥೆ ಮಾಡಿಸಿ ಅನುಸಾಲ್ವನನ್ನು ಉಸ್ತುವಾರಿಯಾಗಿ ಕಳುಹಿಸಿ ಕೊಟ್ಟನು.

ವೀರವರ್ಮನು ತನ್ನ ಐವರು ಪುತ್ರರನ್ನೂ ಸೇನೆಯನ್ನೂ ಜೊತೆಯಾಗಿಸಿ ಮುಂದಿನ ದಿಗ್ವಿಜಯಕ್ಕಾಗಿ ಕಳುಹಿಸಿದನು. ಕೃಷ್ಣಾರ್ಜುನರು ವೀರವರ್ಮನಿಂದ ಬೀಳ್ಕೊಂಡು ಕುದುರೆಗಳೆರಡನ್ನೂ ಅನುಸರಿಸಿ ಸಾರಸ್ವತ ನಗರದಿಂದ ಮುಂದೆ ಹೊರಟರು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page