28.8 C
Udupi
Sunday, July 19, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 585

ಭರತೇಶ ಶೆಟ್ಟಿ,ಎಕ್ಕಾರು

ಸಾರಸ್ವತ ನಗರದ ಸೇನೆ ಸಿದ್ಧಗೊಳ್ಳುತ್ತಿದೆ. ವೀರವರ್ಮನ ಮಕ್ಕಳೂ ಒಬ್ಬರಿಗಿಂತ ಒಬ್ಬರು ಪರಾಕ್ರಮಿಗಳೇ. ಆದರೂ ಪಾಂಡವರ ಸೇನಾ ಸಾಗರಕ್ಕೆ ಹೋಲಿಸಿದರೆ ವೀರವರ್ಮನದು ಅತ್ಯಲ್ಪ ಸೇನೆ. ರಾಜನಾದವ ಪ್ರಜೆಗಳಿಗೆ ತಂದೆಯ ಸಮಾನನೂ, ಪ್ರತ್ಯಕ್ಷ ದೇವರಂತೆಯೂ ವ್ಯವಹರಿಸಬೇಕಾದವನು. ಓರ್ವ ರಾಜಕಾರಣಿಯಾಗಿ ರಾಜಧರ್ಮ ಪಾಲನೆ ಮಾಡುವಾಗ ಯುದ್ಧ ಸಂಭವನೀಯವಾಗಿದ್ದರೆ ತಾನು ಬಲಿಷ್ಠನಾದರೆ ಕೇವಲ ತನ್ನ ಅತಿಬಲ ಶಕ್ತಿ ಪ್ರದರ್ಶನದಿಂದ ಎದುರಾಳಿಯನ್ನು ನಡುಗಿಸಿ ಯುದ್ಧವಾಗದಂತೆ ತಡೆದು ಜಯ ಸಂಪಾದಿಸುವುದೂ ಒಂದು ತಂತ್ರ. ಯಾಕೆಂದರೆ ಯುದ್ದ ಎಂದಾದ ಮೇಲೆ ಎರಡೂ ಪಕ್ಷಕ್ಕೆ ಸಾವು ನೋವುಗಳ ಬಾಧೆ ತಪ್ಪಿದ್ದಲ್ಲ. ಅದೇ ವ್ಯತಿರಿಕ್ತ ಸನ್ನಿವೇಶ ಎದುರಾಗಿ ತನ್ನ ವೈರಿಯೇ ಅತಿ ಬಲಾನ್ವಿತ, ಏನು ಮಾಡಿದರೂ ಗೆಲ್ಲಲು ಸಾಧ್ಯವೇ ಇಲ್ಲ ಎಂಬ ಸ್ಪಷ್ಟತೆ ಗೋಚರಿಸಿದಾಗ ಸಂಧಾನ ಮುಖೇನ ಯುದ್ಧವನ್ನು ತಪ್ಪಿಸುವ ಪ್ರಯತ್ನಶೀಲನಾಗಬೇಕು ಎಂಬುವುದೇ ರಾಜತಾಂತ್ರಿಕ ಸಿದ್ದಾಂತ. ಯಾಕೆಂದರೆ ಅಂತಹ ಸಂದರ್ಭ ಯುದ್ಧಕ್ಕೆ ಮನ ಮಾಡಿದರೆ ತನ್ನ ಪೂರ್ಣ ಸೇನೆಯ ಜೊತೆ ರಾಜನೂ ಸಾಯಬೇಕಾದೀತು. ಪರಿಣಾಮ ಎಷ್ಟೋ ಸಂಸಾರಗಳು ತಮ್ಮವರನ್ನು ಕಳಕೊಂಡು ಅನಾಥರಾಗಿ ಪರಿತಪಿಸುತ್ತಾ ಜೀವನ ನಿರ್ವಹಣೆಗೂ ಹೆಣಗಾಡುವ ಸ್ಥಿತಿ ನಿರ್ಮಾಣವಾಗುತ್ತದೆ. ಪ್ರಜೆಗಳ ರಕ್ಷಣೆಯ ಹೊಣೆ ರಾಜನದ್ದಲ್ಲವೇ? ತಪ್ಪು ನಿರ್ಧಾರದಿಂದ ಅನರ್ಥವಾಗದಂತೆ ಸಮರ್ಥ ನಿರ್ಣಯ ಕೈಗೊಂಡು ಅನಾಹುತ ತಪ್ಪಿಸಬೇಕಾದುದೂ ರಾಜನ ಆದ್ಯ ಕರ್ತವ್ಯ. ಈಗ ವೀರವರ್ಮನಿಗೂ ಈ ವಿಭಾಗದಲ್ಲಿ ಯೋಚಿಸಲೇ ಬೇಕಾದ ಸಮಯ. ಗುಪ್ತಚರರನ್ನು ಕಳುಹಿಸಿ ವಿಷಯ ಸಂಗ್ರಹಿಸಿದ ಸಮಯ ಚಾರಕರು ಬಂದು ಒಪ್ಪಿಸಿದ ವರದಿಯಂತೆ ಪಾಂಡವರ ಅಮಿತ ಸೇನೆ, ರಥ ಧ್ವಜಗಳ ಚಿತ್ರಣಗಳ ಲೆಕ್ಕಾಚಾರದಲ್ಲಿ ಅಲ್ಲಿ ಸೇರಿರುವ ರಾಜರು ಬಹಳಷ್ಟು, ಯಾರು ಯಾರು ಇದ್ದಾರೆ ಎಂಬ ಕಲ್ಪನೆ, ಅವರ ಸಾಮರ್ಥ್ಯದ ಸಮಗ್ರತೆಯನ್ನು ಕಲ್ಪಿಸಿ ಅಂದಾಜಿಸಿ ಅರಿತುಕೊಂಡನು. ಅದರಲ್ಲೂ ಕಪಿಧ್ವಜದ ರಥ, ಶೋಭಿಸುವ ರಥಿಕ, ದಿವ್ಯ ಧನುರ್ಧಾರಿ, ಸಾರಥಿಯೂ ಮೇಘವರ್ಣದವನು, ಬಹಳಷ್ಟು ಆಕರ್ಷಕ ವ್ಯಕ್ತಿತ್ವ ಎಂಬಿತ್ಯಾದಿ ವರ್ಣನೆಗಳನ್ನು ಕೇಳಿದಾಗಲೇ ಅದು ಕೃಷ್ಣಾರ್ಜುನರು ಎಂದು ವೀರವರ್ಮ ತರ್ಕಿಸಿಕೊಂಡ. ನಮ್ಮ ದೇವರು ಶ್ರೀಕೃಷ್ಣ ಪರಮಾತ್ಮನೇ ಸ್ವಯಂ ಭಕ್ತನ ರಾಜ್ಯಕ್ಕೆ ಬಂದು ಯುದ್ಧ ಮಾಡಿದರೆ ಜಯಾಪಜಯದ ಬಗ್ಗೆ ಸಂಶಯವಿದೆಯೇ? ಅಪರಿಮಿತ ಕೌರವ ಸೇನೆ, ಭೀಷ್ಮ, ದ್ರೋಣ ಕರ್ಣಾದಿಗಳನ್ನೇ ಸಂಹರಿಸಿ ಮೆರೆದ ಇವರೀರ್ವರು ಜೊತೆಯಾದರೆ ಗೆದ್ದು ಬರುವವರು ಲೋಕ ಲೋಕಗಳಲ್ಲೂ ಯಾರೂ ಇಲ್ಲ. ಅರ್ಜುನನ ಶಕ್ತಿ ಸಾಲದಾದರೆ, ಪರಮಾತ್ಮನ ಯುಕ್ತಿಯಿಂದ ಜಯಲಕ್ಷ್ಮಿಯನ್ನು ಪರಿಗ್ರಹಿಸಬಲ್ಲವರು ಈ ಈರ್ವರು ಎಂದೂ ಕುಳಿತಲ್ಲೇ ಗ್ರಹಿಸಿಕೊಂಡ. ಹೀಗಿರುವಾಗ ನನಗೆ ರಾಜಧರ್ಮವೂ ಅನುಸರಣೀಯ. ಪ್ರಜಾ ಪರಿಪಾಲನೆಯಂತೆ ಸಂರಕ್ಷಣೆಯ ಹೊಣೆಯೂ ಇದೆ. ಇತ್ತ ಕುದುರೆಗಳನ್ನು ಬಂಧಿಸಿಯಾಗಿದೆ. ಆದ ಕಾರಣ ಕ್ಷಾತ್ರಧರ್ಮವೂ ಪಾಲಿಸಲೇ ಬೇಕಾದುದು. ನಾವು ಅನವರತ ಪೂಜಿಸಿರುವ ದೇವರು ಸಾರಸ್ವತ ನಗರದ ಮಣ್ಣಿಗೆ ಪಾದ ಸ್ಪರ್ಶ ಮಾಡಿದ್ದಾರೆ ಎಂದಾದ ಬಳಿಕ ಭಕ್ತರಿಗೆ ಕೆಡುಕುಂಟಾಗಬಾರದು. ಶ್ರೀ ಕೃಷ್ಣ ಭಕ್ತವತ್ಸಲನಲ್ಲವೇ? ಸೇನಾಸಹಿತನಾಗಿ ಯುದ್ದ ಕಾರಣದಿಂದ ಬಾರದೇ ಇರುತ್ತಿದ್ದರೆ, ಆದರದಿಂದ ಸ್ವಾಗತಿಸಿ, ಷೋಡಶ ಉಪಚಾರಗಳಿಂದ ಪೂಜಿಸಿ ಸತ್ಕರಿಸಬಹುದಿತ್ತು. ನಮಗೀಗ ಆಯ್ಕೆಯನ್ನೇ ನೀಡದೆ ದೇವರೇ ನಿರ್ಣಯಿಸಿ ಯುದ್ಧ ಒಂದನ್ನಷ್ಟೇ ಆಚರಿಸಬೇಕಾದ ಕರ್ಮವನ್ನಾಗಿ ನಿರೂಪಿಸಿರುವಾಗ ಅನ್ಯ ಮಾರ್ಗಗಳ ಬಗ್ಗೆ ಯೋಚಿಸಿ ಫಲವೇನಿದೆ? ನಮ್ಮ ದೇವರು ಬಂದು ಪ್ರೇರಣೆ ನೀಡಿರುವ ಕ್ರಮದಲ್ಲಿಯೇ ಇದಿರ್ಗೊಂಡು ಧನುರ್ಬಾಣಗಳಿಂದಲೇ ಪೂಜಿಸುವೆ. ನಮ್ಮ ಬಳಿ ಇನ್ನೂ ಒಂದು ವಿಶೇಷ ಶಕ್ತಿಯಿದೆ. ಶ್ರೀಕೃಷ್ಣ ಪರಮಾತ್ಮನ ಪರಮ ಭಕ್ತರೇ ಹೌದಾದರೂ, ಯಮಧರ್ಮರಾಜನ ಮೇಲೂ ನಾವು ಅಪಾರ ಶ್ರದ್ಧೆ ಹೊಂದಿದ್ದೇವೆ. ಅದೇ ಕಾರಣದಿಂದಲೋ ಏನೋ ನನ್ನ ಮಗಳು ಮಾಲಿನಿಯೂ ಯಮರಾಜನ ಅಭಿಮಾನಿಯಾಗಿ, ಭಕ್ತೆಯಾಗಿ ವೈವಸ್ವತನನ್ನೇ ತಪಸ್ಸಿನ ಮೂಲಕ ಮೆಚ್ಚಿಸಿ ವರರೂಪದಲ್ಲಿ ಬೇಡಿ ವರಿಸಿಕೊಂಡಿದ್ದಾಳೆ. ಈಗ ನನಗೆ ಮಗಳ ಗಂಡನಾದ ಕಾರಣ ಅಳಿಯನಾಗಿ ಯಮರಾಜ ನಮ್ಮ ಸಾರಸ್ವತ ನಗರದ ರಕ್ಷಣೆಯ ಹೊಣೆ ಹೊತ್ತು ಅಭಯದಾನವನ್ನು ನೀಡಿದ್ದಾನೆ. ನಮ್ಮ ಅರಮನೆಯ ಒಳಗೆ ಗುಡಿಯಲ್ಲಿ ಯಮರಾಜನಿಗೆ ನಿತ್ಯ ಆರಾಧನೆ ನಿರಂತರವಾಗಿ ನಡೆಯುತ್ತಲೇ ಇದೆ. ವ್ಯಕ್ತ – ಅವ್ಯಕ್ತ ಎರಡೂ ರೂಪದಲ್ಲಿದ್ದು ಪೂಜೆ ಸ್ವೀಕರಿಸುತ್ತಾ ನಮ್ಮ ಸಂಸಾರ, ಪ್ರಜಾ ಪರಿವಾರ, ನಗರದ ಸಂರಕ್ಷಕನೂ ಆಗಿದ್ದಾನೆ. ಸರಿ ನಮ್ಮ ದೇವರಾದ ಶ್ರೀಕೃಷ್ಣನಿಗೂ, ಯಮರಾಜನಿಗೂ ವಿಶೇಷ ಪೂಜೆ ಸಲ್ಲಿಸಿ ಯುದ್ದಕ್ಕೆ ಸಿದ್ಧನಾಗುತ್ತೇನೆ. ಯಮರಾಜ ನೀಡಿರುವ ವಾಗ್ದಾನದಂತೆ ಪುರದ ರಕ್ಷಣೆಗಾಗಿ ಆತನನ್ನೂ ಪ್ರಾರ್ಥಿಸಿ ಸಮರಕ್ಕೆ ಸೇನೆಯನ್ನು ಮುನ್ನಡೆಸುತ್ತೇನೆ. ಮಿಕ್ಕಿದೆಲ್ಲವೂ ದೈವಸಂಕಲ್ಪಕ್ಕೆ ಬಿಟ್ಟದ್ದು, ಏನು ಆಗಬೇಕೋ ಅದೇ ಆಗಿ ಹೋಗಲಿ. ನನ್ನ ಮಕ್ಕಳೂ ವೀರಾವೇಶವಿಂದ ಪಾಂಡವ ಪಕ್ಷದ ವೀರಾಗ್ರಣಿಗಳನ್ನು ಎದುರಿಸಲು ಕಾತರ ವ್ಯಕ್ತ ಪಡಿಸುತ್ತಿದ್ದಾರೆ. ಹಾಗಾಗಿ ಕುದುರೆ ಕಟ್ಟಿಯಾದ ಬಳಿಕ ಸಂಧಾನದ ಕುರಿತಾದ ಯೋಚನೆಯನ್ನೇ ಮಾಡಲಾಗದು. ಏನಿದ್ದರೂ ಸಂಗ್ರಾಮವೇ ನಿರ್ಣಾಯಕ. ಹೀಗೆಲ್ಲಾ ವೃತ್ತಾಕ್ಕಾರದಲ್ಲಿ ಅನುಕೂಲ ಪ್ರತಿಕೂಲ ವಿಚಾರಗಳ ಕುರಿತಾಗಿ ಕೂಲಂಕುಷವಾಗಿ ವಿವೇಚಿಸಿ ಸಂಗ್ರಾಮಕ್ಕೆ ತಯಾರಾದನು. ಅಂತೆಯೇ ವಿಧಿವತ್ತಾಗಿ ದೇವತಾರಾಧನೆ, ಶಾಂತಿ ಹವನಗಳನ್ನೂ ನಡೆಸಿದನು. ಯಥೇಚ್ಚವಾಗಿ ಸತ್ಪಾತ್ರರಿಗೆ ದಾನ ಧರ್ಮಾದಿಗಳನ್ನೂ ನೀಡಿ ಆಶೀರ್ವಾದ ಹಾರೈಕೆಗಳ ಬಲ ಸಂಚಯಗೊಳಿಸಿದನು.

ಸೂರ್ಯೋದಯ ಕಾಲಕ್ಕೆ ಎದ್ದು ನಿತ್ಯ ಕರ್ಮಾದಿಗಳನ್ನು ಪೂರೈಸಿ, ಅನುಷ್ಠಾನಗಳನ್ನೂ ನೆರವೇರಿಸಿ ಸೇನಾ ಸಹಿತನಾಗಿ ರಣಭೂಮಿಯತ್ತ ಧಾವಿಸಿದನು. ಜಯ ಘೋಷಗಳು, ನಾನಾ ವಿಧದ ವಾದ್ಯ, ವಾದಕ, ಭೇರಿಗಳ ಮೊಳಗುವಿಕೆಯೊಂದಿಗೆ ಸೇನೆ ರಣಾಂಗಣದಲ್ಲಿ ಸಮಾಹಿತವಾಯಿತು. ಸೇನಾಪತಿಗಳೂ, ವೀರವರ್ಮನ ಪುತ್ರರೂ ನಿರ್ಣಯಿಸಿರುವಂತೆ ವ್ಯೂಹ ರಚನೆಯೂ ಆಯಿತು. ಬಳಿಕ ಸಾರಸ್ವತ ನಗರದ ಸೇನೆ ಯುದ್ಧ ಸಿದ್ಧರಾಗಿರುವ ವಿಚಾರ ದೂತನ ಮೂಲಕ ಕೃಷ್ಣಾರ್ಜುನರಿಗೆ ತಲುಪಿಸಲಾಯಿತು. ಕೂಡಲೇ ಪಾಂಡವ ಸೇನೆಯೂ ಸಮರಕ್ಕೆ ಸಿದ್ಧವಾಗಿದೆ ಎಂಬ ಪ್ರತ್ಯುತ್ತರ ರೂಪದಲ್ಲಿ ಶಂಖನಾದವನ್ನು ಮಾಡಿತು. ಕೃಷ್ಣಾರ್ಜುನರ ಪಾಂಚಜನ್ಯ – ದೇವದತ್ತ ಶಂಖಗಳ ಜೊತೆ ಎಲ್ಲಾ ವೀರಾಗ್ರಣಿಗಳ ಶಂಖನಾದದ ಭೀಕರ ಧ್ವನಿ ದಶದಿಕ್ಕುಗಳನ್ನೂ ಆವರಿಸಿ ಪ್ರತಿಧ್ವನಿಸತೊಡಗಿತು. ಎಂತಹ ಧೀರ, ವೀರ, ವಿಕ್ರಮಿಯೇ ಆದರೂ ಮೊಳಗಿದ ಪಾಂಡವ ಪಕ್ಷದ ಶಂಖನಾದದ ತರಂಗಗಳ ಹೊಡೆತಕ್ಕೆ ತತ್ತರಿಸಿ ಹೋಗಲೇ ಬೇಕು. ಅಷ್ಟು ತೀಕ್ಷ್ಣವೂ, ಪ್ರಭಾವಶಾಲಿಯೂ ಆಗಿತ್ತು.

ಯಾವುದಕ್ಕೂ ಅಳುಕದ ಅಂಜದ ವೀರವರ್ಮನ ಸೇನೆಯೂ ಪ್ರತಿಯಾಗಿ ಅನುಮೋದನೆಯ ರೂಪದಲ್ಲಿ ರಥಿಕರು ಶಂಖನಾದವನ್ನೂ, ಸೇನೆ ಜಯಕಾರವನ್ನೂ, ಹಲವು ವಾದ್ಯ, ಭೇರಿ, ವಾದಕಗಳನ್ನೂ ಮೊಳಗಿಸಿ ಸಮಬಲದ ಧ್ವನಿಯೆಬ್ಬಿಸಿ ಯುದ್ಧಾರಂಭಕ್ಕೆ ಸೂಚನೆ ನೀಡಿದರು.

ಎರಡೂ ಸೇನೆಗಳಿಗೂ ಆಕ್ರಮಣದ ಆದೇಶ ದೊರೆತ ಕೂಡಲೇ ಯುದ್ಧ ಆರಂಭವಾಗಿಯೇ ಬಿಟ್ಟಿತು. ಪಾಂಡವ ಪಕ್ಷ ಪರಾಕ್ರಮಿಗಳ ಗಡಣವನ್ನೇ ಹೊಂದಿದೆ. ವೀರವರ್ಮ ದೇವರು ಕೃಷ್ಣನನ್ನು ಪ್ರತ್ಯಕ್ಷವಾಗಿ ಕಣ್ತುಂಬಾ ನೋಡಿ ವಂದಿಸಿ ನೀನೇ ನಮ್ಮ ಸಂರಕ್ಷಕ. ನಿನ್ನಿಚ್ಚೆಯೇ ಮೆರೆಯಲಿ ಎಂದು ವಂದಿಸಿದನು. ಸಹಾಯಕ್ಕಾಗಿ ಯಮರಾಜನನ್ನೂ ಮನಸಾರೆ ಸ್ಮರಿಸಿ ಪ್ರಾರ್ಥಿಸಿ ಯುದ್ಧದಲ್ಲಿ ತೊಡಗಿ ಕೃಷ್ಣಾರ್ಜುನರಿಗೆ ಎದುರಾದನು. ವೀರವರ್ಮನ ಐವರು ಗಂಡು ಮಕ್ಕಳು ಮಹಾನ್ ವಿಕ್ರಮಿಗಳಾದ ತಾಮ್ರಧ್ವಜ, ಬಬ್ರುವಾಹನ, ಸಾತ್ಯಕಿ, ಅನಿರುದ್ಧ, ಪ್ರದ್ಯುಮ್ನಾದಿಗಳನ್ನು ಎದುರಿಸಿ ಯುದ್ಧ ನಿರತರಾದರು. ಸಾರಸ್ವತ ನಗರದ ಸೇನೆ ಮಿತವಾಗಿದ್ದರೂ ಅಮಿತವಾದ ಪಾಂಡವ ಸೈನ್ಯಕ್ಕೆ ಪ್ರಬಲ ಪ್ರತಿರೋಧವನ್ನೇ ಒಡ್ಡತೊಡಗಿತು.

ಘನಘೋರ ಸಂಗ್ರಾಮ ಸಾಗುತ್ತಿದೆ. ಅರ್ಜುನನು ದಿವ್ಯಾಸ್ತ್ರಗಳ ಪ್ರಯೋಗ ಆರಂಭಿಸಿದ್ದಾನೆ. ಮಂತ್ರಾಸ್ತ್ರಗಳನ್ನು ಸೆಳೆದು ಸೆಳೆದು ಅಭಿಮಂತ್ರಿಸಿ ಪ್ರಯೋಗಿಸುತ್ತಿದ್ದಾನೆ. ಆದರೂ ವೀರವರ್ಮನ ಸೇನೆ ಮುನ್ನುಗ್ಗುತ್ತಲೇ ಇದೆ. ವೀರವರ್ಮನೂ ಅತಿಬಲನಾಗಿ ಅರ್ಜುನನಿಗೆ ಹಿಡಿದಿಡಲಾಗದ ಪೌರುಷ ಮೆರೆಯುತ್ತಿದ್ದಾನೆ. ಅತ್ತ ವೀರವರ್ಮನ ಮಕ್ಕಳೂ ವೀರಾವೇಶದಿಂದ ಪಾಂಡವ ಸೇನಾನಾಶ ಮಾಡತೊಡಗಿದ್ದಾರೆ. ಅರ್ಜುನನಿಗೇ ವಿಸ್ಮಯವಾಗತೊಡಗಿದೆ. ಇದೇನು ವಿಚಿತ್ರ? ಯಾಕೆ ಹೀಗಾಗುತ್ತಿದೆ? ವೀರವರ್ಮನೇನಾದರು ಮಾಯಾ ಯುದ್ಧ ಪ್ರವೀಣನೋ? ಅವ್ಯಕ್ತವಾಗಿ ನಮ್ಮ ಸೇನೆ ನಾಶಗೊಳ್ಳುತ್ತಿದೆ. ಏನೆಂದು ತಿಳಿಯಲೇ ಬೇಕು. ಈ ಮಾಯಾಶಕ್ತಿಯನ್ನು ಭೇದಿಸಿ ನೋಡಿಯೇ ಬಿಡುತ್ತೇನೆ ಎಂದು ಶಬ್ಧವೇಧಿ ಬಾಣಗಳನ್ನು ಅಗೋಚರ ಶಬ್ದ ಕೇಳಿಸಿದತ್ತ ಪ್ರಯೋಗಿಸತೊಡಗಿದ. ಏನೂ ಪ್ರಯೋಜನವಾಗಲಿಲ್ಲ. ವೀರವರ್ಮನನ ಶರಾಘಾತಗಳನ್ನು ತಡೆಯುತ್ತಾ ತನ್ನ ಯುದ್ಧ ವೇಗವನ್ನು ಇಮ್ಮಡಿ ವರ್ಧಿಸಿ ಅಕ್ಷಯಾಸ್ತ್ರವನ್ನು ಪ್ರಯೋಗಿಸಿದ. ಲಕ್ಷ ಲಕ್ಷ ಶರಗಳು ಚಿಮ್ಮಿದರೂ ಏನೂ ವಿಶೇಷ ಕಾರ್ಯಗಳನ್ನು ಮಾಡಲಿಲ್ಲ. ಇದೇನಿದು? ನನ್ನ ಬಾಣಗಳನ್ನು ನಿಷ್ಕ್ರಿಯಗೊಳಿಸಿ ಸೇನಾನಾಶ ಮಾಡುತ್ತಿರುವುದು ಯಾರು? ಈ ಅವ್ಯಕ್ತ ಮಾಯಾ ಯುದ್ಧಕ್ಕೆ ಪ್ರತಿಯಾಗಿ ಚಾಕ್ಷುಷಿ ವಿದ್ಯೆಯಿಂದಲೇ ಉತ್ತರ ನೀಡುವೆ. ಪರಿಣಾಮವಾಗಿ ಅವ್ಯಕ್ತ ಶಕ್ತಿ ಪ್ರಕಟವಾಗಲೇ ಬೇಕು. ಹೀಗೆಂದು ಯೋಚಿಸಿ ಚಾಕ್ಷುಷಿ ವಿದ್ಯೆಯನ್ನೇ ಪ್ರಯೋಗಿಸಿದ. ಕಾತರದಿಂದ ಅರ್ಜುನ ನೋಡತೊಡಗಿದ್ದಾನೆ.

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page