24.7 C
Udupi
Sunday, June 7, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 545

ಭರತೇಶ ಶೆಟ್ಟಿ, ಎಕ್ಕಾರು

ಮಣಿಪುರದ ಸೌಂದರ್ಯ ವರ್ಣನಾತೀತ. ಗೋಪುರಗಳು, ರಕ್ಷಾ ಗೋಪುರ, ಕೊತ್ತಲಗಳು, ರಂಗ ಮಂದಿರಗಳು, ಅರಮನೆಗಳು, ಮಹಲುಗಳು, ಉದ್ಯಾನವನ, ದೇವಾಲಯಗಳು, ಗುಡಿ ಕೈಗಾರಿಕಾ ತಾಣಗಳು, ಸರೋವರ, ಗಿರಿಧಾಮಗಳು ಹೀಗೆ ನೋಡಿದಷ್ಟು ಮುಗಿಯದ ಸೌಂದರ್ಯ, ಸಮೃದ್ಧಿ ಪುರದಲ್ಲಿ ಮೇಳೈಸಿ ಶೋಭಾಯಮಾನವಾಗಿದೆ.

ಅರ್ಜುನನು ಹಿಂದೊಮ್ಮೆ ಈ ಪರಿಸರ ಪುರವನ್ನು ಸುತ್ತಾಡಿ ಹೋಗಿದ್ದಾನೆ. ಹಾಗೆ ಅರ್ಜುನ ಈ ಪ್ರದೇಶಕ್ಕೆ ಬಂದು ಹೋಗಲು ಕಾರಣವಾದ ಹಿನ್ನೆಲೆಯೂ ಇದೆ. ದ್ರೌಪದಿಯನ್ನು ಐವರು ಪಾಂಡವರು ವಿವಾಹವಾಗಿದ್ದರು. ಅದಾದ ಬಳಿಕ ಓರ್ವಳು ಹೆಣ್ಣಿಗೆ ಐವರು ಗಂಡಂದಿರೆ? ಸಂಸಾರ ಹೇಗೆ ಎಂಬ ಅವ್ಯಕ್ತ ಗೊಂದಲ ಉತ್ಪನ್ನವಾಗಿತ್ತು. ಆಗ ಅದಕ್ಕೊಂದು ಸೂಕ್ತ ಪರಿಹಾರದ ವ್ಯವಸ್ಥೆಯೂ ಆಯಿತು. ಐವರಲ್ಲಿ ಒಬ್ಬರ ಜೊತೆ ಅನುಕ್ರಮಣಿಕೆಯಂತೆ ಒಂದೊಂದು ಸಂವತ್ಸರ ಕಾಲ ದ್ರೌಪದಿ ಪತ್ನಿಯಾಗಿ ಇರಬೇಕು. ಆ ಸಮಯ ಯಾರಿಗೆ ಪತ್ನಿಯೋ ಉಳಿದ ನಾಲ್ವರು ಪಾಂಡವರಿಗೆ ಸೋದರನ ಮಡದಿಯಾಗಿ ಅತ್ತಿಗೆ ಅಥವಾ ನಾದಿನಿಯಾಗಿ ವ್ಯವಹರಿಸಬೇಕು. ಸಂವತ್ಸರ ಕಾಲ ಸಂಸಾರ ಪೂರೈಸಿದ ಬಳಿಕ ದ್ರೌಪದಿ ಅಗ್ನಿ ಸ್ನಾನ ವಿಧಿ ವಿಧಾನ ಪೂರೈಸಿ ಪರಿಶುದ್ಧಳಾಗಿ ಮತ್ತೊಬ್ಬನಿಗೆ ಪತ್ನಿಯಾಗಬೇಕು. ಮತ್ತೆ ಯಾರ ಪತ್ನಿಯಾಗುತ್ತಾಳೆ ಅವನೊಬ್ಬನನ್ನು ಬಿಟ್ಟು ಉಳಿದವರಿಗೆ ಸೋದರ ಪತ್ನಿಯಾಗಿ ಆಯಾ ಸಂಬಂಧ ಗೌರವದಿಂದ ವರ್ತಿಸಬೇಕು ಎಂಬ ನಿಯಮದ ಒಪ್ಪಂದವಾಗಿತ್ತು. ಹೀಗಿರಲು ಆಕೆ ಯಾರ ಪತ್ನಿಯೋ ಆತನ ಜೊತೆಗಿರುವಾಗ ಅನ್ಯ ಸೋದರರು ಯಾವ ಕಾರಣಕ್ಕೂ ಅಂತಃಪುರ ಪ್ರವೇಶ ನಿಷೇಧವೆಂದು ನಿಯಮವಾಯಿತು. ಅದನ್ನು ಮೀರಿ ಯಾರಾದರು ಅಂತಃಪುರ ಪ್ರವೇಶ ಮಾಡಿದರೆ, ಆ ತಪ್ಪಿಗಾಗಿ ಉಲ್ಲಂಘನೆ ಮಾಡಿದವರು ಹನ್ನೆರಡು ವರ್ಷ ಏಕಾಂಗಿಯಾಗಿ ತೀರ್ಥಯಾತ್ರೆ ಮಾಡಬೇಕು ಎಂಬ ಶಿಕ್ಷೆಯೂ ನಿರ್ಣಯವಾಗಿತ್ತು.

ಹೀಗಿರಲು ಧರ್ಮರಾಯನ ಪತ್ನಿಯಾಗಿ ದ್ರೌಪದಿ ಇರುವಾಗ ಗೋಪಾಲಕರು ಮುಸ್ಸಂಜೆ ಕಳೆದು ನಿಶೆ ಆವರಿಸಲಾರಂಭಿಸುವ ಹೊತ್ತಿನಲ್ಲಿ ಆಕ್ರಂದನಗೈಯುತ್ತಾ ಓಡಿ ಬರುತ್ತಾರೆ. ನಮ್ಮ ಗೋವುಗಳ ಅಪಹರಣವಾಗಿದೆ ಎಂದು ದೂರಿಕೊಳ್ಳುತ್ತಾರೆ. ಭೀಮಾರ್ಜುನ, ನಕುಲ ಸಹದೇವಾದಿಗಳು ಅವರಿಗೆ ಸಾಂತ್ವಾನ ಹೇಳಿ, ಅಪಹೃತವಾಗಿರುವ ನಿಮ್ಮ ಗೋವುಗಳ ರಕ್ಷಣೆ ನಮ್ಮ ಕರ್ತವ್ಯ. ಸಂಕಟಕ್ಕೊಳಗಾಗದಿರಿ, ಚೋರರ ಕೈಯಿಂದ ಗೋವುಗಳನ್ನು ಬಿಡಿಸಿ ತರುತ್ತೇವೆಂದು ಅಭಯಪ್ರದರಾದರು. ಆಪತ್ಕಾಲದಲ್ಲೂ ವಿವೇಚಿಸದೆ ದುಡುಕುವವರು ಪಾಂಡವರಲ್ಲ. ಯಾರಿಂದ ಈ ಕೃತ್ಯವಾಗಿದೆ ಎಂಬ ವಿವೇಚನೆ ಮಾಡಿದಾಗ, ಕುಕೃತ್ಯವೆಸಗಿದವನು ನಾಗ ಸಂಕುಲದ ತಕ್ಷಕ ಎಂಬವನೆಂದು ಅರ್ಜುನ ತಿಳಿದುಕೊಂಡನು. ರಾತ್ರಿಯ ಹೊತ್ತಾದುದರಿಂದ ಭೀಮ, ನಕುಲ, ಸಹದೇವರಿಂದ ಈ ಕಾಲದಲ್ಲಿ ಯುದ್ಧ ಮಾಡಿ ತಕ್ಷಕನನ್ನು ಗೆಲ್ಲಲು ಕಷ್ಟವಾದೀತು. ರಾತ್ರಿ -ಹಗಲು, ನಿದ್ರೆ – ಎಚ್ಚರ ಈ ಎಲ್ಲಾ ಸ್ಥಿತಿಯಲ್ಲೂ ಸಮಾನ ಬಲ ಹೊಂದಿದ್ದು, ಯಾವ ವ್ಯತ್ಯಾಸವೂ ಆಗದೆ ಯುದ್ಧ ಮಾಡಬಲ್ಲವನು ಒಬ್ಬನೇ ಒಬ್ಬ. ಅಂತಹ ಶಕ್ತಿ ಸಂಪನ್ನನಾದುದರಿಂದ ಅರ್ಜುನನಿಗೆ ಗುಢಾಕೇಶ ಎಂಬ ಹೆಸರು. ಜಿತೇಂದ್ರೀಯನೂ, ಸವ್ಯಸಾಚಿಯೂ ಆಗಿರುವವನು ಅರ್ಜುನ. ಹಾಗಾಗಿ ತನ್ನ ಬಲ ಅರಿತಿದ್ದ ಅರ್ಜುನ ಈ ಹೊತ್ತು ಯುದ್ಧಕ್ಕೆ ತಾನು ಮುಂದಾದರೆ ರಾತ್ರಿಯ ಕತ್ತಲೆಯಲ್ಲೂ ತಕ್ಷಕನನ್ನು ಎದುರಿಸಬಲ್ಲೆ ಎಂಬ ಧೈರ್ಯವಿತ್ತು. ಮಾಯಾವಿಯೂ, ಬಲಾನ್ವಿತನೂ ಆದ ತಕ್ಷಕನ್ನು ಮಣಿಸಬೇಕಾದರೆ ಗಾಂಡೀವ ಧನುಸ್ಸು ಬೇಕು. ಆದರೆ ಈ ಹೊತ್ತು ಗಾಂಡೀವ ಅಣ್ಣ ಧರ್ಮರಾಯನ ಅಂತಃಪುರದಲ್ಲಿದೆ. ಒಳ ಹೋಗುವಂತಿಲ್ಲ. ಕಾರಣ ಒಪ್ಪಂದವಾದ ನಿಯಮ ಪ್ರಕಾರ ದ್ರೌಪದಿ ಆಕೆಯ ಪತಿಯ ಜೊತೆಗಿರುವಾಗ ಯಾವ ಕಾರಣಕ್ಕೂ ಒಳ ಪ್ರವೇಶ ನಿಷಿದ್ಧ. ಹೋಗದೆ ಉಳಿಯುವುದೇ? ಗೋವುಗಳ ಸಂರಕ್ಷಣೆ ಅಸಾಧ್ಯ. ಹೋದೆ ಎಂದಾದರೆ ಶಿಕ್ಷೆಯನ್ನು ಅನುಭವಿಸಲು ಸಿದ್ಧನಾಗಿ ಹನ್ನೆರಡು ವರ್ಷ ಏಕಾಂಗಿ ತೀರ್ಥ ಯಾತ್ರೆ ಮಾಡುತ್ತಿರಬೇಕು. ಶಿಕ್ಷೆಗೆ ಅಂಜಿ ಹಿಂದುಳಿದರೆ ಗೋಪಾಲಕರಿಗಿತ್ತ ಅಭಯ ವಚನ ಹುಸಿಯಾದೀತು. ಗೋವುಗಳ ಪ್ರಾಣಕ್ಕೂ ಸಂಚಕಾರ ತಪ್ಪಿದ್ದಲ್ಲ. ಏನು ಮಾಡೋಣ! ಧರ್ಮ ಸಂಕಟದ ಸ್ಥಿತಿ ನಿರ್ಮಾಣವಾಯಿತು ಅರ್ಜುನನಿಗೆ. ಯೋಚಿಸಿ ತನ್ನೊಳಗೆ ಒಂದು ಪರಿಹಾರ ಕಂಡು ಹಾಗೆಯೇ ಮಾಡೋಣ ಎಂದು ತೀರ್ಮಾನ ಕೈಗೊಂಡನು.

ಮುಂದುವರಿಯುವುದು..

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page