ಭಾಗ – 540
ಭರತೇಶ ಶೆಟ್ಟಿ,ಎಕ್ಕಾರು

ಘೋರರೂಪಿ ರಾಕ್ಷಸ ನೇರವಾಗಿ ಮನೋವಾಂಛಿತ ಸ್ಥಳಕ್ಕೆ ಬಂದು ಭ್ರಮರ ಕುಂತಳೆಯನ್ನು ಸೆಳೆದೊಯ್ಯಲು ಮುಂದಾದನು. ಆಗ ಪ್ರತಿಭಟಿಸಿ ಹೋರಾಡಿದ ಮಾರ್ತಾಂಡತೇಜ ಮತ್ತು ಕಮಲಧ್ವಜರನ್ನು ಬಡಿದೋಡಿಸಿದನು. ಎಷ್ಟು ಹೋರಾಡಿದರೂ ಕಾಳಿಕಾ ಮಾತೆಯ ಅಂಶ ಸಂಭೂತನಾದ ಘೋರರೂಪಿಯೆದುರು ಕೈಸಾಗದೆ ಅವರಿಬ್ಬರೂ ಜೀವ ಉಳಿಸಲು ಓಡಿ ಹೋಗ ಬೇಕಾಯಿತು. ಭ್ರಮರಕುಂತಳೆಯನ್ನು ಬಂಧಿಸಿದ ಘೋರರೂಪಿ ನೇರವಾಗಿ ಮಹಾರಾಣಿ ಶಶಿಪ್ರಭೆಯ ಎದುರು ತಂದು ನಿಲ್ಲಿಸಿದನು. ರಾಣಿಯಾಜ್ಞೆಯಂತೆ ಶಿಕ್ಷೆಯಾಗಿ ಕೇಶವನ್ನು ಮೂರು ಹಂತದಲ್ಲಿ ಕತ್ತರಿಸಿ ಕೆತ್ತಿ, ತಲೆಯ ಮೇಲೆ ಸೆಗಣಿಯ ಕಟ್ಟೆ ಕಟ್ಟಿ ದೀಪ ಹಚ್ಚಿ ಮಾನವಧೆ ಮಾಡಿಸಿ, ಕೈಕಾಲು ಕಟ್ಟಿ, ಕಣ್ಣಿಗೆ ಬಟ್ಟೆ ಬಿಗಿದು, ಸ್ತ್ರೀರಾಜ್ಯ ಪುರದೆಲ್ಲೆಡೆ ರಾಜ ಬೀದಿಯಲ್ಲಿ ಕತ್ತೆಯ ಮೇಲೆ ಕೂರಿಸಿ ಮೆರವಣಿಗೆ ಮಾಡಿಸಿ, ಆನಂತರ ಊರ ಹೊರಗೆಸೆದು ಬಂದು ಬಿಟ್ಟ ಘೋರರೂಪಿ.
ಎಲ್ಲೋ ರಾಜ್ಯದ ಹೊರಗೆ ಅಡಗಿ ತಪ್ಪಿಸಿಕೊಂಡಿದ್ದ ಮಾರ್ತಾಂಡತೇಜ ಮತ್ತು ಕಮಲಧ್ವಜ ಅಳುತ್ತಿರುವ ಭ್ರಮರಕುಂತಳೆಯನ್ನು ಸಂಧಿಸಿ ಸಾಂತ್ವಾನ ಹೇಳಿ ರಕ್ಷಣೆಯ ಭರವಸೆ ನೀಡಿದರು. ಮಾರ್ತಾಂಡತೇಜನು ಸಂತೈಸುತ್ತಾ ಮಾಂಡವ್ಯ ಮುನಿಗಳಿಂದ ಅನುಗ್ರಹ ರೂಪದಲ್ಲಿ ತನಗೆ ಸಿದ್ಧಿಸಲ್ಪಟ್ಟ ಕವಳೌಷಧವನ್ನು ಭ್ರಮರಕುಂತಳೆಯ ಶರೀರಾದ್ಯಂತ ಪೂಸಿ ರಾಕ್ಷಸನ ಹೊಡೆತದ ನೋವಿನ ವೇದನೆಯಿಂದ ಮುಕ್ತಗೊಳಿಸಿದನು. “ಘೋರರೂಪಿಯೆದುರು ಯುದ್ಧಮಾರ್ಗದಿಂದ ಜಯ ಕಾಣಲು ಸಾಧ್ಯವಿಲ್ಲ. ಈ ರಾಕ್ಷಸನನ್ನು ಮಣಿಸುವ ದಾರಿ ಹೇಗೆ?” ಎಂದು ವ್ಯಥೆಗೊಳಗಾಗಿ ಯುವರಾಜ ಮಾರ್ತಾಂಡತೇಜ ಭ್ರಮರ ಕುಂತಳೆಯಲ್ಲಿ ಕೇಳಿದನು.
ಆಗ ಭ್ರಮರಕುಂತಳೆ ಏನೋ ಆಲೋಚನೆ ತಲೆಗೆ ಹೊಳೆದಂತೆ “ಅಯ್ಯಾ ರಾಜಕುಮಾರಾ! ಒಂದು ದಾರಿಯಿದೆ. ನಾನು ಯುದ್ದಕ್ಕಾಗಿ ಹೊರಡುವ ಸಮಯ ರಾಣಿ ಶಶಿಪ್ರಭಾ ದೇವಿ ನನ್ನ ರಕ್ಷೆಗಾಗಿ ದೇವಿಯ ದಿವ್ಯಾನುಗ್ರಹದ ಅದೃಷ್ಯಾಂಜನವನ್ನು ನೀಡಿದ್ದಾಳೆ. ಅದನ್ನು ನಾನು ನಿಮಗೀಯುತ್ತೇನೆ. ನೀವು ಅದರ ಶಕ್ತಿಯನ್ನು ವಿನಿಯೋಗಿಸಿ ಅರಮನೆಗೆ ಹೋಗಬೇಕು. ರಾಣಿಯ ಕೊರಳಲ್ಲಿ ಒಂದು ಚಿನ್ನದ ವಿಶೇಷ ಸರವಿದೆ. ಅದು ಕಾಳಿಕಾದೇವಿ ವರವಾಗಿತ್ತಿರುವ ವರಹಮಾಲಿಕೆ. ಅದನ್ನು ಹೇಗಾದರು ಮಾಡಿ ಅಪಹರಿಸಿ ತಂದರೆ ಮತ್ತೆ ಘೋರರೂಪಿ ನಮಗೆ ಬಾಧೆ ನೀಡಲಾರನು. ಯಾಕೆಂದರೆ ವರ ಇರುವುದು ಹಾಗೆ, ಆಪತ್ತು ಬಂದಾಗ ಕಾಳಿಕಾದೇವಿಯನ್ನು ಸ್ಮರಿಸಿ ಕಾಂಚನಮಾಲಿಕೆಯ ಮಣಿಗಳನ್ನು ತೀಡಿದರೆ ಘೋರರೂಪಿ ಪ್ರಕಟಗೊಳ್ಳುತ್ತಾನೆ. ನೀವು ಆ ವರಹಮಾಲಿಕೆಯೊಂದನ್ನು ವಶಪಡಿಸಿದರೆ ಸಾಕು. ಮತ್ತೆ ಘೋರರೂಪಿಯನ್ನು ಅಹ್ವಾನಿಸಲು ರಾಣಿ ಅಸಮರ್ಥಳಾಗುತ್ತಾಳೆ. ನೀವೀಗ ಈ ಅದೃಷ್ಯಾಂಜನದ ಬಲದಿಂದ ಯಾರ ಕಣ್ಣಿಗೂ ಕಾಣಿಸದಂತೆ ಅರಮನೆ ಪ್ರವೇಶಿಸಿ ಕಾರ್ಯ ಸಾಧಿಸಬಹುದು” ಎಂದು ಕುಂತಳೆ ಉಪಾಯವನ್ನು ವಿವರಿಸಿದಳು. (ಕೆಲವೊಮ್ಮೆ ತೀರಾ ಆತ್ಮೀಯರಾಗಿರುವ ನಮ್ಮವರಿಂದಲೆ ಆಪತ್ತು ಬಂದೊದಗುತ್ತದೆ. ಯಾಕೆಂದರೆ ನಮ್ಮ ಬಲ, ಸಂಪರ್ಕ, ಇತ್ಯಾದಿ ರಹಸ್ಯ ವಿಚಾರಗಳು ಅವರಿಗೆ ತಿಳಿದಿರುತ್ತದೆ. ಭ್ರಮರಕುಂತಳೆ ಇದಕ್ಕೆ ಉತ್ತಮ ನಿದರ್ಶನವಾಗಿದ್ದಾಳೆ)
ಭ್ರಮರಕುಂತಳೆಯ ನಿರ್ದೇಶನದಂತೆ ಆಕೆಯಿಂದ ಅದೃಷ್ಯಾಂಜನವನ್ನು ಸ್ವೀಕರಿಸಿದ ಮಾರ್ತಾಂಡತೇಜ ಶಶಿಪ್ರಭೆಯ ಅರಮನೆ ಹೊಕ್ಕು ಅಂತಃಪುರ ಪ್ರವೇಶಿಸಿದನು. ಆ ಹೊತ್ತು ಶಶಿಪ್ರಭೆ ಮಲಗಿ ವಿಶ್ರಾಂತಳಾಗುವ ಸಿದ್ಧತೆಯಲ್ಲಿದ್ದಳು. ತನ್ನ ಕೊರಳಲ್ಲಿದ್ದ ವರಹ ಮಾಲಿಕೆಯನ್ನು ಹೊರತೆಗೆದು ಕೈ ಮುಗಿದು ಕಣ್ಣುಗಳಿಗೆ ಒತ್ತಿ ಮತ್ತೆ ಮತ್ತೆ ವಂದಿಸಿ ಎದುರಿನ ಮಂಟಪದಲ್ಲಿಟ್ಟು ಪವಡಿಸಿದಳು. ಇದೆಲ್ಲವನ್ನು ಅದೃಶ್ಯನಾಗಿ ನೋಡುತ್ತಿದ್ದ ಮಾರ್ತಾಂಡತೇಜನಿಗೆ ಕುಂತಳೆ ಹೇಳಿದ ದಿವ್ಯ ಸರವಿದು ಎಂದು ಸ್ಪಷ್ಟವಾಯಿತು. ಇದುವೆ ಸೂಕ್ತ ಸಮಯವೆಂದು ಮಾರ್ತಾಂಡತೇಜ ಅಂಜನದ ಬಲದಿಂದ ಅವ್ಯಕ್ತನಾಗಿದ್ದುಕೊಂಡು ಯಾರ ಕಣ್ಣಿಗೂ ಕಾಣಿಸದೆ ಆ ವರಹಮಾಲಿಕೆಯನ್ನು ಎತ್ತಿ ತನ್ನ ವಶಕ್ಕೆ ಪಡೆದನು.
ತುಸು ಸಮಯ ಕಳೆದು ಶಶಿಪ್ರಭೆಗೆ ಎಚ್ಚರವಾದಾಗ ವರಹಮಾಲಿಕೆ ಇಲ್ಲ. ಎಲ್ಲಿ ಹೋಯಿತೆಂದು ಪರಿಚಾರಕರನ್ನು ಕರೆಸಿ ಹುಡುಕಿಸಿದರೂ ಸುಳಿವಿಲ್ಲ. ಈ ಹುಡುಕಾಟದಲ್ಲಿರುವಾಗಲೆ ಹೊರಗಿನಿಂದ ಮಾರ್ತಾಂಡತೇಜನಿಂದ ಯುದ್ಧಾಹ್ವಾನ ಬಂತು. ವಿಕ್ರಮಿಯಾದ ಶಶಿಪ್ರಭೆಗೆ ಅನ್ಯ ಮಾರ್ಗವಿಲ್ಲದೆ ಯುದ್ದ ಸಿದ್ಧಳಾಗ ಬೇಕಾಯಿತು. ಕಾಳಿಕಾಮಾತೆಗೆ ವಂದಿಸಿ, ಮಾರ್ತಾಂಡತೇಜನೆದುರು ವೀರಾವೇಶದಿಂದ ಹೋರಾಡಿದಳಾದರೂ ಕೈ ಸಾಗಲಿಲ್ಲ. ಸೋತು ಹೋದ ರಾಣಿ ಶಶಿಪ್ರಭೆ ಯುದ್ಧ ವಿರಾಮ ಘೋಷಿಸಿ ಕೇರಳದ ರಾಜನಾಗಿರುವ ತನ್ನ ಮಾವ ಮೇಧಾವಿಗೆ ಸಮಗ್ರ ವಿಚಾರ ವಿವರಿಸಿ ರಕ್ಷಣೆಗೆ ಒದಗುವಂತೆ ಕೇಳಿಕೊಂಡಳು.
ಮಹಾರಾಜ ಮೇಧಾವಿ ಅತಿ ಶೀಘ್ರ ಗಮನನಾಗಿ ಸೇನಾ ಸಹಿತ ಬಂದು ಮಾರ್ತಾಂಡತೇಜನೆದುರು ಹೋರಾಡಿದನಾದರೂ, ಗೆಲ್ಲಲಾಗಲಿಲ್ಲ. ಬದಲಾಗಿ ಮಾರ್ತಾಂಡತೇಜನಿಂದ ವಧಿಸಲ್ಪಟ್ಟನು. ಮೇಧಾವಿ ಮಡಿದ ವಾರ್ತೆ ತಿಳಿದ ಆತನ ಮಡದಿ ಮಹಾರಾಣಿ ಅಗ್ನಿ ಪ್ರವೇಶಗೈದು ಸಹಗಮನ ಮಾಡಿದಳು. ಈ ಸಮಯ ಮೇಧಾವಿಯ ಮಗು ಚಂದ್ರಹಾಸ ನನ್ನು ಹೇಗಾದರು ಕಾಪಾಡಬೇಕೆಂದು ಧಾತ್ರಿ ಎಂಬ ಹೆಸರಿನ ದಾಸಿ ಎತ್ತಿಕೊಂಡು ಓಡಿ ಕಾಡು ಸೇರಿದಳು. (ಮುಂದೆ ಆತನು ಭಕ್ತ ಚಂದ್ರಹಾಸನಾಗಿ ಖ್ಯಾತನಾಗುತ್ತಾನೆ).
ಇತ್ತ ಯುದ್ಧದಲ್ಲಿ ಸೋತ ಶಶಿಪ್ರಭೆ ಕಾಳಿಕಾ ಮಂದಿರ ಸೇರಿ ಮಾತೆ ಕಾಳಿಯನ್ನು ಅನನ್ಯ ಭಕ್ತಿಯಿಂದ ಧ್ಯಾನಿಸಿ ರಕ್ಷಣೆಗಾಗಿ ಬೇಡಿಕೊಳ್ಳತೊಡಗಿದಳು. ಭಕ್ತಿಗೆ ಮೆಚ್ಚಿ ಮೈದೋರಿದ ಮಹಾಕಾಳಿ “ಮಗಳೇ! ಇನ್ನು ನನ್ನನ್ನು ಬೇಡಿ, ವರ ಪಡೆದು ಯುದ್ಧ ಮುಂದುವರಿಸಬೇಡ. ಬಂದಿರುವಂತಹ ಪದ್ಮಪುರದ ರಾಜಕುಮಾರ ಮಾರ್ತಾಂಡತೇಜ ಸಾಮಾನ್ಯನಲ್ಲ. ಮಾಂಡವ್ಯಮುನಿಯಿಂದ ದಿವ್ಯೋಪದೇಶ ಪಡೆದು ಬೇಕು ಬೇಕಾದ ಶಕ್ತ್ಯಾಯುಧಗಳನ್ನು ಸಂಪಾದಿಸಿದವನಿದ್ದಾನೆ. ಆತನು ಬಂದಿರುವುದು ಕನ್ಯಾರ್ಥಿಯಾಗಿ ಹೊರತು ಸಂಗ್ರಾಮಕ್ಕಲ್ಲ. ನೀನಿನ್ನು ಯುದ್ದ ಮಾಡದೆ ಆತನಿಗೆ ಶರಣಾಗಿ ನನ್ನ ಅಭಯವಾಕ್ಯವನ್ನು ಆತನಿಗೆ ತಿಳಿಸು. ನೀನು ಮತ್ತು ನಿನ್ನ ಮಂತ್ರಿಣಿಯಾದ ಭ್ರಮರಕುಂತಳೆ ಮಾರ್ತಾಂಡತೇಜನನ್ನು ವಿವಾಹವಾಗಿರಿ. ನಿನ್ನ ಸೇನಾನಾಯಕಿಯಾದ ಕಮಲಗಂಧಿನಿ ಆತನ ಸೋದರನಾದ ಕಮಲಧ್ವಜನನ್ನು ವರಿಸಲಿ. ಹೀಗೆ ಮಾಡುವುದರಿಂದ ಸ್ತ್ರೀರಾಜ್ಯಕ್ಕೆ ಸನ್ಮಂಗಲವಾಗಲಿದೆ. ನೀನು ಮತ್ತು ಮಾರ್ತಾಂಡತೇಜನ ದಾಂಪತ್ಯದ ಫಲಸ್ವರೂಪವಾಗಿ ಒಂದು ಹೆಣ್ಣು ಮಗು ಜನಿಸಲಿದೆ. ಆ ಮಗುವಿಗೆ ಪ್ರಮೀಳೆ ಎಂದು ನಾಮಕರಣ ಮಾಡಿ. ಕಾಲಾಂತರದಲ್ಲಿ ಶ್ರೀಹರಿ ಅವತಾರಿಯಾಗಿ ಶ್ರೀಕೃಷ್ಣ ನೆಂಬ ಅಭಿದಾನದಿಂದ ಭೂಧರೆಗಿಳಿದು ಬರಲಿದ್ದಾನೆ. ಆತನ ನಿರ್ದೇಶನದಲ್ಲಿ ಚಂದ್ರವಂಶೀಯರು ಅಶ್ವಮೇಧ ಯಾಗ ಮಾಡಲಿದ್ದಾರೆ. ಆ ಸಮಯ ಚಂದ್ರವಂಶೀಯನಾದ ಕೃಷ್ಣ ಸಖ ಅರ್ಜುನ ಯಾಗಾಶ್ವದ ಸಂರಕ್ಷಕನಾಗಿ ಈ ಪುರಕ್ಕೆ ಬರಲಿದ್ದಾನೆ. ನಿನ್ನ ಮಗಳಾದ ಪ್ರಮೀಳೆ ಅರ್ಜುನನ್ನು ವರಿಸಿ ಈ ಸ್ತ್ರೀರಾಜ್ಯಕ್ಕೆ ಮತ್ತಷ್ಟು ಸತ್ಕೀರ್ತಿ ತರಲಿದ್ದಾಳೆ ಉತ್ತರೋತ್ತರವಾದ ಸಮೃದ್ಧಿಯಾಗಲಿರುವ ಮಹಾ ಕಲ್ಯಾಣವಾಗಲಿ” ಎಂದು ಭವಿತವ್ಯದ ನಿಗೂಢ ಸತ್ಯವನ್ನು ಅನಾವರಣಗೊಳಿಸಿ ಕಾಳಿಕಾಮಾತೆ ರಣಕಹಳೆಯನ್ನು ಗಟ್ಟಿಮೇಳದ ಮಂಗಲವಾದ್ಯವಾಗಿಸಿದಳು.
ಅಂತೆಯೆ ರಾಣಿ ಶಶಿಪ್ರಭೆ ಮಾರ್ತಾಂಡತೇಜನಿಗೆ ಶರಣಾಗತಳಾಗಿ ಆರಾಧ್ಯಮೂರ್ತಿ ಕಾಳಿಕಾಮಾತೆ ಒಲಿದು ಉಲಿದ ದಿವ್ಯ ಸತ್ಯವನ್ನು ಮಾರ್ತಾಂಡತೇಜನಲ್ಲಿ ನಿವೇದಿಸಿಕೊಂಡಳು. ಅವರಿಬ್ಬರ ವಿವಾಹವಾಗಿ ಆನಂತರ ಜನಿಸಿದವಳು ಸ್ತ್ರೀರಾಜ್ಯದ ಪ್ರಸಕ್ತ ಮಹಾರಾಣಿ ಪ್ರಮೀಳೆ. ತನ್ನ ಮಾತೆ ಶಶಿಪ್ರಭೆಯಿಂದ ಚಂದ್ರವಂಶೀಯರ ಅಶ್ವಮೇಧ, ಅರ್ಜುನನ ಆಗಮನದ ಕಥೆಯನ್ನು ಕೇಳಿ ತಿಳಿದ ಬಳಿಕ ಆ ಕುರಿತಾದ ನಿರೀಕ್ಷೆಯಲ್ಲಿ ಇದ್ದವಳು. ಈಗ ಕಾಲ ಕೂಡಿ ಬಂದಿದೆ. ಅರ್ಜುನನ ಮುತಾಲಿಕೆಯಲ್ಲಿ ಪಾಂಡವ ಸೇನೆ ಸ್ತ್ರೀರಾಜ್ಯಕ್ಕೆ ಬಂದಿದೆ. ಪ್ರಮೀಳೆ ಮಹೋತ್ಸಾಹದಿಂದ ಮಹೋತ್ಸವಕ್ಕೆ ಸಿದ್ಧಳಾಗುತ್ತಿದ್ದಾಳೆ.
ಮುಂದುವರಿಯುವುದು…




























