ಭಾಗ – 539
ಭರತೇಶ್ ಶೆಟ್ಟಿ, ಎಕ್ಕಾರು

ಸ್ತ್ರೀರಾಜ್ಯದಿಂದ ಹೊರ ಬರುತ್ತಿರುವ ಕೋಟೆ ರಕ್ಷಣಾ ಪಡೆಯ ಮಹಿಳಾ ಸೇನಾನಿಗಳಿಗೆ ಪಾಂಡವ ಸೇನೆಯ ಪುರುಷರನ್ನು ಕಂಡಾಗ ತಮ್ಮ ಮೇಲಿನ ನಿಯಂತ್ರಣ ಇಲ್ಲದಾಗಿ ಹೋಯಿತು. ಏನೋ ಒಂದು ತರಹ ಬೇಕೂ.. ಬೇಕು… ಎನ್ನುವಂತಹ ಅವ್ಯಕ್ತ ಭಾವ ಸಂಚಲನವಾಗುತ್ತಿದೆ. ತಾವ್ಯಾರು, ತಮ್ಮ ಹೊಣೆಗಾರಿಕೆ ಏನು ಎಂಬುದನ್ನು ಮರೆತು ಬಿನ್ನಾಣ, ವೈಯಾರ ಪ್ರದರ್ಶಿಸುತ್ತಾ, ತಮ್ಮನ್ನು ತಾವು ನೋಡಿಕೊಳ್ಳುತ್ತಾ ಏನೇನೋ ವಿಚಿತ್ರ ವರ್ತನೆಗಳನ್ನು ಪ್ರದರ್ಶಿಸುತ್ತಾ ವಿವೇಕಶೂನ್ಯರಾಗಿ ಪಾಂಡವ ಸೇನೆಯ ಸನಿಹಕ್ಕೆ ಬರತೊಡಗಿದರು. ಆಗ ಮೊದಲೆ ಸೂಚನೆ ಪಡೆದಿದ್ದ ಪಾಂಡವ ಸೇನೆಯ ಸೈನಿಕರು ಒಮ್ಮಿಂದೊಮ್ಮೆಲೆ ಸರಸರನೆ ಕಠಾರಿಯಿಂದ ಖಡ್ಗಗಳನ್ನೆಳೆದು ಸೆಳೆದು ಬೀಸಿ ಝಳಪಿಸತೊಡಗಿದರು. ನಾವೇನೋ ಬಯಸಿ ಮುಂದುವರಿದರೆ ಆಯುಧಧಾರಿಗಳಾಗಿ ಕಡಿದು ಕತ್ತರಿಸಲು ಉತ್ಸುಕರಾದ ಸೈನ್ಯವನ್ನು ಕಂಡು ಸ್ತ್ರೀ ಸೇನೆ ಬೆಚ್ಚಿಬಿದ್ದಿತು. ಇಲ್ಲಿ ನಿಂತರೆ ಅಪಾಯ ತಪ್ಪಿದ್ದಲ್ಲ ಎಂದು ಒಂದೇ ಸಮನೆ ಹಿಂದುರುಗಿ ಓಟಕ್ಕಿತ್ತರು. ಹಾಗೆ ಓಡಿ ಬಂದ ಅವರೆಲ್ಲರು ತಮ್ಮ ಸ್ತ್ರೀರಾಜ್ಯದ ಒಡತಿ ಪ್ರಮೀಳೆಯಲ್ಲಿ ಸಮಸ್ತ ವಿಚಾರ ತಿಳಿಸಿದರು. ಮಾತ್ರವಲ್ಲ ಬಂದಿರುವ ಕುದುರೆ, ಸೇನೆ ಎಲ್ಲ ವಿಚಾರಗಳನ್ನು ನಿವೇದಿಸಿ ದೂರಿಕೊಂಡರು.
“ಕುದುರೆ? ಸೇನೆ? ಏನು ಹೇಳುತ್ತಿರುವಿರಿ? ಎಲ್ಲಿದೆ ಕುದುರೆ? ಬಂಧಿಸಿ ತನ್ನಿರಿ” ಎಂದು ಆಜ್ಞೆ ಮಾಡಿದಳು. ಹಾಗೆ ಕರೆತಂದ ಕುದುರೆಯ ಹಣೆಯ ತಿಲಕದ ಲಿಖಿತವನ್ನು ಓದಿದಳು. ಪಾಂಡವರ ಅಶ್ವಮೇಧದ ಕುದುರೆ, “ಬಲುಹುಳ್ಳ ಭಟರಾದರೆ ಕಟ್ಟಿ ಕದನಕ್ಕೆ ಬರಬೇಕು. ಅಸಾಧ್ಯವಾದರೆ ಶರಣಾಗತರಾಗಿ ಕಪ್ಪಕಾಣಿಕೆ ನೀಡಬೇಕು” ಎಂಬ ಒಕ್ಕಣೆ ಓದಿ ಕೆಂಡಾಮಂಡಲಳಾದ ಪ್ರಮೀಳೆ, ಈ ಕೂಡಲೆ ಈ ಕುದುರೆಯನ್ನು ಲಾಯದಲ್ಲಿ ಕಟ್ಟಿ ಹಾಕಿ ಎಂದು ಅಪ್ಪಣೆ ಮಾಡಿದಳು. ಹಾಗೆಯೆ ವೀರ ಪಾರ್ಥನ ಸೇನೆಯೊಡನೆ ಕಾದಾಟಕ್ಕೆ ಸಿದ್ಧರಾಗಲು ಆಜ್ಞೆ ಮಾಡಿದಳು. ಪ್ರಮೀಳೆ ಯುದ್ದಕ್ಕೆ ಹೊರಡುವಾಗಲೆ ಅರ್ಜುನನ ಹೆಸರು ಕೇಳಿ ಮೋಹ ಪರವಶಳಾಗಿದ್ದಾಳೆ. ಅದಕ್ಕೆ ಕಾರಣವೂ ಇದೆ. ಆಕೆಯ ಹುಟ್ಟಿನಿಂದಲೆ ಅಂಟಿಕೊಂಡು ಬಂದಿರುವ ಹಿನ್ನೆಲೆ ಕಥೆಯಿದೆ.
ಹಿಂದೆ ಈ ಸ್ತ್ರೀರಾಜ್ಯ ರಾಣಿ ಶಶಿಪ್ರಭೆಯ ಆಳ್ವಿಕೆಗೆ ಒಳಪಟ್ಟಿತ್ತು. ಮಂತ್ರಿಣಿ ಭ್ರಮರಕುಂತಳೆ, ಸೇನಾಧ್ಯಕ್ಷೆ ಕಮಲಗಂಧಿನಿ ಜೊತೆಗೆ ಕೇರಳದ ರಾಜನಾಗಿರುವ ಮಾವ ಮೇಧಾವಿಯ ಸಹಕಾರವೂ ಆಕೆಗಿತ್ತು.
ಹೀಗಿರಲು ಒಂದು ದಿನ ಪದ್ಮಪುರದ ಅರಸ ಪದ್ಮಶೇಖರನು ತನ್ನ ಸುಪುತ್ರರಾದ ಮಾರ್ತಾಂಡತೇಜ ಮತ್ತು ಕಮಲಧ್ವಜ ಈರ್ವರಿಗೂ ವಿವಾಹ ಮಾಡಿಸುವ ಕುರಿತಾಗಿ ಮಕ್ಕಳಾದ ಅವರ ಅಭಿಪ್ರಾಯ ಕೇಳಿದ್ದನು. ಆ ಸಂದರ್ಭ ಯುವಕರಾದ ಅವರಿಬ್ಬರೂ ನಮಗೆ ಇಷ್ಟವಾಗುವ ಕನ್ಯೆಯನ್ನು ನಾವೇ ಹುಡುಕಿ ಮದುವೆಯಾಗುತ್ತೇವೆ ಎಂಬ ಆಶಯ ವ್ಯಕ್ತ ಪಡಿಸಿದರು. ಅಂತೆಯೆ ಅಪ್ಪಣೆ ಪಡೆದು ಕನ್ಯಾರ್ಥಿಗಳಾಗಿ ಹೊರಟಿದ್ದರು. ಮಾರ್ತಾಂಡತೇಜ ಮತ್ತು ಕಮಲಧ್ವಜ ಹೊರಟು ಅನೇಕ ರಾಜ್ಯಗಳನ್ನು ಸುತ್ತಿದರೂ ಅವರಿಗೆ ಇಷ್ಟವಾಗುವ ಕನ್ಯಾಮಣಿ ಸಿಗಲಿಲ್ಲ. ಹಾಗೆ ಬರುತ್ತಾ ಸ್ತ್ರೀರಾಜ್ಯಕ್ಕೂ ಬಂದರು. ಅನ್ಯ ಪುರುಷರಿಗೆ ಪ್ರವೇಶವಿಲ್ಲವೆಂದು ಕಾರಣ ನೀಡಿ ದ್ವಾರ ಪಾಲಿಕೆಯರು ತಡೆದಾಗ, ಅವರಿಗೆ ತಕ್ಕ ಶಾಸ್ತಿ ಮಾಡಿದ ರಾಜಕುಮಾರರು “ಹೋಗಿ ನಿಮ್ಮ ರಾಣಿಗೆ ನಮ್ಮ ಬಗ್ಗೆ ತಿಳಿಸಿ ವಿಚಾರಿಸಲು ಅವಳು ಬರಬೇಕು” ಎಂದು ಹೇಳಿ ಕಳುಹಿಸಿದರು.
ಅಂತೆಯೆ ದ್ವಾರಪಾಲಿಕೆಯರು ಬಂದು ರಾಣಿ ಶಶಿಪ್ರಭೆಯಲ್ಲಿ ದೂರಿಕೊಂಡರು. ವಿಚಾರಣೆಗೆಂದು ಆಕೆ ಹೊರಟು ನಿಂತಾಗ, ವೀರಾವೇಶದಿಂದ ಎದ್ದು ನಿಂತಳು ಸೇನಾಧ್ಯಕ್ಷೆ ಕಮಲಗಂಧಿನಿ. ಅವಳ ನಿಲುವನ್ನು ಕಂಡು ಅರ್ಥೈಸಿದ ರಾಣಿ ಶಶಿಪ್ರಭೆ “ಬಂದಂತಹ ಮಾರ್ತಾಂಡತೇಜ ಮತ್ತು ಕಮಲಧ್ವಜರಿಗೆ ತಕ್ಕ ಶಾಸ್ತಿ ಮಾಡು” ಎಂದು ಆಜ್ಞೆ ಮಾಡಿದಳು. ಸೇನಾಸಹಿತಳಾಗಿ ಹೋದ ಕಮಲಗಂಧಿ ಕಮಲಧ್ವಜನೊಂದಿಗೆ ಅತ್ಯುಗ್ರ ಸಮರ ಸಾರಿದಳಾದರೂ ಸೋತು ಹಿಂದಿರುಗಬೇಕಾಯಿತು. ಆಗ ಸ್ವಯಂ ರಾಣಿ ಶಶಿಪ್ರಭೆ ಯುದ್ಧಕ್ಕೆ ಸಿದ್ಧಳಾಗಿ ಹೊರಟು ನಿಂತಳು. ಅಷ್ಟಾಗುವಾಗ ಮಂತ್ರಿಣಿ ಭ್ರಮರಕುಂತಳೆ “ಮಹಾರಾಣಿ, ಯಾರೋ ಇಬ್ಬರು ತರುಣರನ್ನು ವಿಚಾರಿಸಲು ನೀವು ಹೋಗಬೇಕೆ? ನಾನಿರುವಾಗ ನಿಮಗಂತಹ ಅನಿವಾರ್ಯತೆ ಬಾರದು. ನಾನು ಹೋಗಿ ವಿಚಾರಿಸಿಕೊಳ್ಳುವೆ. ಅವರ ಅತಿಕ್ರಮಣಕ್ಕೆ ತಕ್ಕ ಶಿಕ್ಷೆಯಿತ್ತು ಬರುವೆ. ಅಪ್ಪಣೆ ಕೊಡಿ” ಎಂದು ಕೇಳಿಕೊಂಡಳು. ಆಗ ರಾಣಿ ಶಶಿಪ್ರಭೆ ಜಯಕ್ಕಾಗಿ ಹರಸಿ ಕಳುಹಿಸಿದಳು. ನಮ್ಮ ಸೇನಾನಾಯಕಿ ಕಮಲಗಂಧಿನಿಯೂ ಮಹಾ ಪರಾಕ್ರಮಿ ಹೌದು. ಆ ತರಳರು ಆಕೆಯನ್ನು ಸಮರ ಮುಖದಲ್ಲಿ ಸೋಲಿಸಿದ್ದಾರೆ ಎಂದರೆ ಅವರೂ ವಿಕ್ರಮಿಗಳಾಗಿದ್ದಾರೆ. ಹಾಗಾಗಿ ಇದೋ ನಿನಗೆ ಕಾಳಿಕಾದೇವಿಯ ಪ್ರಸಾದ ರೂಪದ ಅದೃಶ್ಯಾಂಜನವನ್ನು ನೀಡುತ್ತೇನೆ. ಅಗತ್ಯ ಬಿದ್ದರೆ ಅವ್ಯಕ್ತಳಾಗಿದ್ದು ಕಾರ್ಯ ಸಾಧಿಸಿ ಬಾ” ಎಂದು ಕಾಳಿಕಾ ದೇವಿಯ ವರ ಪ್ರಸಾದ ಅದೃಶ್ಯ ಅಂಜನವನ್ನು ನೀಡಿ, ಜಾಗ್ರತೆಯನ್ನು ಹೇಳಿ ಕಳುಹಿಸಿದಳು.
ಯುದ್ಧಕ್ಕೆ ಬೇಕಾದ ಸಕಲ ಸಿದ್ಧತೆಗಳೊಂದಿಗೆ ಎದೆಗವಚ, ಶಿರಸ್ತ್ರಾಣ, ಆಯುಧಾಧಿಗಳನ್ನು ಧರಿಸಿಕೊಂಡು ಭ್ರಮರಕುಂತಳೆ ಹೊರಟಳು. ಹಾಗೆ ಬಂದವಳು ಎದುರಾದ ಕಮಲಧ್ವಜನೊಂದಿಗೆ ಯುದ್ಧಕ್ಕೆ ತೊಡಗಿದಳು. ಯುದ್ಧ ಸಾರುತ್ತಾ ದೇವಿಯ ವರ ಪ್ರಸಾದವಾದ ಅದೃಶ್ಯಾಂಜನದ ಶಕ್ತಿಯನ್ನು ವಿನಿಯೋಗಿಸಿ ಯಾರಿಗೂ ದೃಶ್ಯಳಾಗದೆ ಅವ್ಯಕ್ತಳಾಗಿದ್ದು ಕಮಲಧ್ವಜನೊಂದಿಗೆ ಮಾಯಾ ಯುದ್ಧ ಮಾಡಿ ಆತನನ್ನು ಸೋಲಿಸಿ ಬಗ್ಗು ಬಡಿದಳು. ಯುದ್ಧದಲ್ಲಿ ಸೋತು ಬಿದ್ದಿರುವ ತಮ್ಮ ಕಮಲಧ್ವಜನ ಸ್ಥಿತಿಗೆ ಮರುಗಿ ದೊರೆತ ವಿರಾಮದಲ್ಲಿ ಅಣ್ಣ ಮಾರ್ತಾಂಡತೇಜ ಆತನ ಆರೈಕೆ ಮಾಡತೊಡಗಿದ್ದನು. ಅವನಿಗೆ ತಪೋನಿಧಿಗಳಾದ ಮಾಂಡವ್ಯರಿಂದ ಅನುಗ್ರಹಿತವಾದ ಕವಳೌಷಧಿ ಪ್ರಾಪ್ತವಾಗಿತ್ತು. ಮಾರ್ತಾಂಡತೇಜನು ಆ ಔಷಧಿಯನ್ನು ಪೂಸಿ ಕಮಲಧ್ವಜನ ತನುವಿಗಾದ ನೋವು, ಗಾಯಗಳನ್ನು ಮಾಯಗೊಳಿಸಿ ಸಚೇತನಗೊಳಿಸುತ್ತಿದ್ದಾನೆ. ಹೀಗೆ ತಮ್ಮ ಕಮಲಧ್ವಜನನ್ನು ಪ್ರೀತಿಯಿಂದ ಆರೈಕೆ ಮಾಡುತ್ತಿದ್ದ ಅಣ್ಣ ಮಾರ್ತಾಂಡತೇಜನ ರೂಪ, ಲಾವಣ್ಯ, ತೇಜಸ್ಸನ್ನು ಅದೃಶ್ಯಳಾಗಿ ಇದ್ದು ನೋಡುತ್ತಿದ್ದ ಭ್ರಮರಕುಂತಳೆ ಮೋಹಿತಳಾದಳು. ಮಾರ್ತಾಂಡತೇಜನೆದುರು ಪ್ರಕಟಳಾಗಿ ಆತನಿಗೆ ವಂದಿಸಿ, ತನ್ನ ಪರಿಚಯ ಹೇಳಿಕೊಂಡಳು. ಸೋದರರಿಬ್ಬರ ಪರಿಚಯ ಕೇಳಿ ತಿಳಿದು, ಅವರು ವಿವಾಹವಾಗಲು ಕನ್ಯಾರ್ಥಿಗಳಾಗಿ ಬಂದ ಕಾರ್ಯಕಾರಣವನ್ನು ಅರಿತುಕೊಂಡಳು. ಮದುವೆಯಾದರೆ ಇಂತಹ ಗಂಡನ್ನು ಮದುವೆಯಾಗಬೇಕೆಂದು ಮಾರ್ತಾಂಡತೇಜನ ಬಗ್ಗೆ ಅನುರಾಗ ಭಾವ ತುಂಬಿಕೊಂಡು, “ಸ್ವಾಮೀ, ನಿಮ್ಮ ಜೊತೆ ಯುದ್ಧ ಮಾಡದೆ ಮನ ಸೋತು ನಿಮಗೆ ಶರಣಾಗತಳಾಗಿದ್ದೇನೆ. ನಿಮ್ಮ ತಮ್ಮನನ್ನು ಯುದ್ಧದಲ್ಲಿ ಸೋಲಿಸಿ ಕೆಡಹಾಕಿದವಳು ನಾನು. ಈಗ ಆತನಿಗೆ ವಿಶೇಷ ಚೈತನ್ಯ ಪ್ರಾಪ್ತವಾಗುವಂತೆ ಶ್ರೀ ಕಾಳಿಕಾದೇವಿಯ ಶಕ್ತಿಯ ಪ್ರಸಾದದಿಂದ ಸಹಕರಿಸುತ್ತೇನೆ. ಆದರೆ ಶರಣಾರ್ಥಿಯಾಗಿ ಬಂದಿರುವ ನನ್ನ ಕೈ ಬಿಡಬೇಡಿ” ಎಂದು ಪ್ರೇಮ ನಿವೇದನೆ ಮಾಡಿಕೊಂಡಳು. ಮಾರ್ತಾಂಡತೇಜನು ಅವಳ ರೂಪ ಲಾವಣ್ಯ, ಗುಣ ವಿನಯ ವಿಕ್ರಮಗಳನ್ನು ಕಂಡು ಒಪ್ಪಿ ಆಕೆಗೆ ಆಶ್ರಯ ನೀಡಿದನು.
ಸಮರಕ್ಕೆ ಹೋದ ಭ್ರಮರಕುಂತಳೆಯ ಸುದ್ಧಿ ಇಲ್ಲದ್ದನ್ನು ನೋಡಿ, ಕಾದು ವಿಚಾರ ಸಂಗ್ರಹಿಸಿ ಸತ್ಯ ತಿಳಿದುಕೊಂಡ ಶಶಿಪ್ರಭೆ ಕ್ರೋಧಾವೇಶಕ್ಕೊಳಗಾದಳು. ವಿಶ್ವಾಸದ್ರೋಹಿಯಾದ ತನ್ನವಳಾದ ಭ್ರಮರಕುಂತಳೆಗೆ ಸರಿಯಾದ ಶಿಕ್ಷೆ ನೀಡಬೇಕೆಂದು ನಿರ್ಣಯಿಸಿದಳು.
ಶಶಿಪ್ರಭೆಗೆ ದೇವಿ ಮಹಾಕಾಳಿಯಿಂದ ಅನುಗ್ರಹಿತವಾದ ವರಹಮಾಲಿಕೆಯಿತ್ತು. ಅಗತ್ಯ ಬಿದ್ದಾಗ ಆ ಕಾಂಚನಸರವನ್ನೆತ್ತಿ ಅದರ ಮಣಿಗಳನ್ನು ಘರ್ಷಿಸಿ ತೀಡಿದರೆ ಕಾಳಿಕಾದೇವಿಯ ಶಕ್ತಿಗಣ ಘೋರರೂಪಿ ರಾಕ್ಷಸ ಪ್ರಕಟಗೊಳ್ಳುತ್ತಿದ್ದನು. ಹಾಗೆ ಮಾಡಿದರೆ ರಾಣಿ ಶಶಿಪ್ರಭೆ ಪ್ರಾರ್ಥಿಸಿ ಬೇಡುವ ಕಾರ್ಯವನ್ನು ಚಾಚೂ ತಪ್ಪದೆ ಪೂರೈಸಿ ಬರುತ್ತಿದ್ದನು ಆ ಘೋರರೂಪಿ ರಾಕ್ಷಸ.
ಇಂದು ಅದುವೆ ಸರಿಯೆಂದು ನಿರ್ಧರಿಸಿ ಕಾಳಿಕಾ ಮಾತೆಯನ್ನು ಮನಸಾರೆ ಸ್ಮರಿಸಿ, ನಮಸ್ಕರಿಸಿದಳು. ತನ್ನ ವರಹಮಾಲಿಕೆಯನ್ನೆತ್ತಿ ಮಣಿಗಳನ್ನು ತೀಡಿದಳು. ಪ್ರಕಟಗೊಂಡ ಭೀಕರ ರಾಕ್ಷಸ “ಅಮ್ಮಾ ಯಾಕಾಗಿ ನನ್ನನ್ನು ಕರೆಸಿದಿರಿ? ನನ್ನಿಂದ ಏನಾಗಬೇಕು?” ಎಂದು ಕೇಳಿತು.
ರಾಣಿ ಶಶಿಪ್ರಭೆ ಘೋರರೂಪಿಯನ್ನು ಸ್ಮರಿಸಿದ ಕಾರಣ ವಿವರಿಸಿ ಹೇಳ ತೊಡಗಿದಳು “ನಮ್ಮ ಮಂತ್ರಿಣಿಯಾದ ಭ್ರಮರಕುಂತಳೆಯನ್ನು ಆಗಂತುಕರಾಗಿ ಬಂದಿರುವ ಇಬ್ಬರು ತರುಣರನ್ನು ಶಿಕ್ಷಿಸಲು ಕಳುಹಿಸಿದೆ. ಆದರೆ ಅವಳು ತರುಣರನ್ನು ಕಂಡು ಮೋಹಪರವಶಳಾಗಿ, ಅನುರಕ್ತೆಯಾಗಿ ವಿಶ್ವಾಸಘಾತಕ ಕೃತ್ಯವನ್ನು ಮಾಡಿದ್ದಾಳೆ. ಅಯ್ಯಾ ಘೋರರೂಪಿಯೇ! ಈ ರೀತಿ ನಂಬಿಕೆ ದ್ರೋಹಗೈದ ಆಕೆಗೆ ತಕ್ಕುದಾದ ಶಿಕ್ಷೆ ನೀಡಬೇಕು. ಅದಕ್ಕಾಗಿ ನೀನು ಅವಳನ್ನು ಹುಡುಕಿ ಎಳೆದು ತರಬೇಕು” ಎಂದು ಪ್ರಾರ್ಥಿಸಿದಳು. ಅಂತೆಯೆ ಘೋರರೂಪಿ ರಾಕ್ಷಸ ಭ್ರಮರಕುಂತಳೆಯನ್ನು ಅರಸುತ್ತಾ ಹೊರಟಿತು.
ಮುಂದುವರಿಯುವುದು…




























