ಭಾಗ – 501
ಭರತೇಶ ಶೆಟ್ಟಿ,ಎಕ್ಕಾರು

ಸಂಚಿಕೆ ೫೦೧ ಮಹಾಭಾರತ
ಅನಿರೀಕ್ಷಿತವಾಗಿ ದಯಮಾಡಿಸಿದ ವೇದವ್ಯಾಸರನ್ನು ಮಹಾರಾಜ ಧರ್ಮರಾಯ ರಾಜೋಚಿತ ರೀತಿಯಲ್ಲಿ ಬಹುವಿಧಗಳಿಂದ ಸತ್ಕರಿಸಿ ಸಂಪ್ರಾರ್ಥಿಸಿ ಗೌರವಿಸಿದನು. ಸಂಪ್ರೀತರಾದ ವ್ಯಾಸರು “ಯುಧಿಷ್ಠಿರಾ! ಧರ್ಮ ಯಾವತ್ತೂ ಸೋಲದು ಎಂಬ ಸತ್ಯಕ್ಕೆ ನೀನು ಮತ್ತು ನಿನ್ನ ತಮ್ಮಂದಿರು ಲೋಕಮುಖಕ್ಕೆ ಮತ್ತೊಂದು ನಿದರ್ಶನವಾಗಿದ್ದೀರಿ. ಆದರೆ ಅಂತಹ ಮಹಿಮಾನ್ವಿತ ಸತ್ಯವಿದ್ದೂ ನೀನು ಸಂಭ್ರಮದಲ್ಲಿಲ್ಲ. ಯಾವುದೊ ವ್ಯಥೆ ನಿನ್ನನ್ನು ಆವರಿಸಿದೆ. ಯಾಕಾಗಿ? ಏನಾಗಿದೆ?” ಎಂದು ಪ್ರಶ್ನಿಸಿದರು. ದಿವ್ಯದೃಷ್ಟಿಯುಳ್ಳ ವ್ಯಾಸರು ಅರಿಯದೆ ಕೇಳಿದವರಲ್ಲ, ತಿಳಿದು ಬಂದವರು ಎಂಬ ಕಲ್ಪನೆ ಧರ್ಮರಾಯನಿಗಿದ್ದರೂ “ಭಗವಾನ್! ನನ್ನ ಮನಸ್ಸು ಬಹಳಷ್ಟು ಸಂಕಟ ಪಡುತ್ತಿದೆ. ನಾನೀಗ ಹಸ್ತಿನೆಯ ಮಹಾರಾಜನಾಗಿದ್ದೇನೆ. ಆದರೆ ಈ ಪದವಿ ಪ್ರಾಪ್ತವಾದದ್ದು ಘೋರ ರಕ್ತಪಾತದ ಬಳಿಕ. ಅದೂ ನಮ್ಮ ಬಂಧು ಬಾಂಧವರು, ಸೋದರರು, ಗುರು ಹಿರಿಯರ ಹತ್ಯೆಯಿಂದ. ಹಾಗಾಗಿ ಅದು ಮರೆಯಲಾಗದ ಘೋರ ಕನಸಿನಂತೆ ನನ್ನನ್ನು ಹೆಜ್ಜೆ ಹೆಜ್ಜೆಗೂ ಬೆಂಬಿಡದ ಭೂತದಂತೆ ಕಾಡುತ್ತಿದೆ. ಮನಸ್ಸು ಈ ವಿಚಾರ ತಿಳಿದು ಅಳುಕುತ್ತಿದೆ. ಶ್ರೀಕೃಷ್ಣನು ಇಲ್ಲಿರುವಾಗ ಹೇಗೋ ನಾನು ಸುಧಾರಿಸಿಕೊಳ್ಳುತ್ತಿದೆ. ಈಗ ಆತನ ಅನುಪಸ್ಥಿತಿಯಲ್ಲಿ ಸಂಕಟ ದಿನೇ ದಿನೇ ವೃದ್ಧಿಸುತ್ತಿದೆ” ಎಂದು ನೇರವಾಗಿ ವಿಚಾರ ಪ್ರಚುರಪಡಿಸಿದನು.
“ಹೇ ಧರ್ಮರಾಜಾ! ನೀನು ಭ್ರಮೆಗೊಳಾಗಿರುವೆ. ಸತ್ಯ ಏನಿದೆ ಅದು ಅಗೋಚರವಾಗಿದೆ. ಯಾರೆಲ್ಲಾ ಸತ್ತಿರುವರೋ ಅವರ ಮರಣಕ್ಕೆ ನೀನು ನೇರ ಕಾರಣ ಎಂಬ ಪಶ್ಚಾತ್ತಾಪದ ಅಗ್ನಿ ನಿನ್ನನ್ನು ಸುಡುತ್ತಿದೆ. ನಿನಗೆ ಈಗಾಗಲೆ ಬಹು ವಿಚಾರಗಳ ಉಪದೇಶವಾಗಿದೆ. ಎಲ್ಲಾ ವಿಚಾರಗಳನ್ನು ಪರಿಹರಿಸಬಲ್ಲ ಧರ್ಮಬುದ್ದಿ ಸ್ವಯಂ ನಿನಗೆ ಇದೆ. ಆದರೂ ವ್ಯಥೆ ಆವರಿಸಿದೆ. ಆಗಲಿ ಯಾವ ಪಾಪ ಕೃತ್ಯಕ್ಕೂ ಪರಿಮಾರ್ಜನೆ ಮಾಡಿದರೆ ಪರಿಹಾರವಿದೆ. ನಿನಗೆ ಪಾಪ ಬಂದಿದೆಯೊ ಅಥವಾ ಇಲ್ಲವೋ ಎಂಬ ಪ್ರಶ್ನೆಯಾದರೆ ನಿನಗಂತಹ ದೋಷವಿಲ್ಲ. ಯಾಕೆಂದರೆ ಸಾಕಷ್ಟು ತಿಳಿ ಹೇಳುವ ಪ್ರಯತ್ನದ ಬಳಿಕ ನ್ಯಾಯಕ್ಕಾಗಿ ನಡೆದ ಧರ್ಮಯುದ್ಧ. ಆ ಯುದ್ಧದಲ್ಲಿ ಧರ್ಮಕ್ಕೆ ಜಯವಾಗಿದೆ. ಇದು ನಿನಗೂ ತಿಳಿದಿದೆ. ಹಾಗಿದ್ದರೂ ಬಂಧು ಹತ್ಯಾ ದೋಷದ ಶಂಕೆ ಬಾಧಿಸುತ್ತಿರುವ ನಿನಗೆ ಮುಕ್ತಿ ಬೇಕಾಗಿದೆ. ಅದಕ್ಕಾಗಿ ಅಮಿತ ಪುಣ್ಯಪ್ರದವಾದ ಅಶ್ವಮೇಧ ಯಾಗ ವನ್ನು ವಿರಚಿಸು. ಪಾಪವು ಬಂದಿಲ್ಲವಾದರೂ ಅಥವಾ ಬಾರದೇ ಇರುವ ದೋಷದ ಪರಿಹಾರಕ್ಕೆ, ಧರ್ಮರಾಯನಾದ ನಿನಗಿರುವ ಮಾನಸಿಕ ಶಂಕೆ ನಿವಾರಣೆಗೆ ಪ್ರಾಯಶ್ಚಿತ್ತವಾಗಿ ನೆರವೇರಲಿ. ಅಶ್ವಮೇಧ ಯಾಗ ಸಕಲ ಪಾಪಗಳನ್ನೂ ನಾಶ ಮಾಡಬಲ್ಲ ಶ್ರೇಯಸ್ಕರ ಯಾಗ. ಅದನ್ನು ಮಾಡಿಸಿದೆಯಾದರೆ ಮತ್ತೆ ನೀನು ನಿರ್ಮಲಚಿತ್ತನಾಗಬಹುದು” ಎಂದು ಪರಿಹಾರೋಪಾಯ ಸೂಚಿಸಿದರು.
ವ್ಯಾಸರು ನಿರ್ದೇಶಿಸಿದ ಯಾಗದ ಬಗ್ಗೆ ಬಹಳಷ್ಟು ಯೋಚನೆ ಮಾಡಿದ ಧರ್ಮರಾಯ ” ಭಗವಾನ್! ಪಾಂಡವ ಕೌರವರ ಮಧ್ಯೆ ಪರಿಸ್ಥಿತಿ ಉಲ್ಬಣವಾಗಿ, ಅದೇ ಕಾರಣದಿಂದ ಮಹಾ ಸಂಗ್ರಾಮ ಆಗಿ ಹೋಯಿತು. ಇತ್ತೀಚೆಗಷ್ಟೆ ಮುಗಿದ ರಣಯಜ್ಞದಲ್ಲಿ ಬಹುಭಾಗ ಕ್ಷಾತ್ರ ಕುಲ ಹೋಮಿಸಲ್ಪಟ್ಟಿದೆ. ಇಂತಹ ದುಸ್ತರ ಪರಿಸ್ಥಿತಿಯಲ್ಲಿ ಸಮೃದ್ಧಿಯುತವಾದ ಅಶ್ವಮೇಧ ಯಾಗ ಮಾಡಬೇಕಾದರೆ ಹೇರಳವಾದ ಧನ ಸಂಪತ್ತು ಹೊಂದಿಸುವುದಾದರು ಹೇಗೆ? ಬಹಳಷ್ಟು ರಾಜ್ಯಗಳು ರಾಜ, ಸೇನೆ ಕಳೆದುಕೊಂಡು ಅರಾಜಕತೆಯಿಂದ ಕಂಗೆಟ್ಟಿರುವ ಈ ಸಮಯ ಅಲ್ಲಿಂದ ಕಪ್ಪ ಸಂಗ್ರಹಿಸುವುದಾದರು ಹೇಗೆ? ಯುದ್ದದಲ್ಲಿ ಭಾಗಿಯಾಗದೆ ತಟಸ್ಥವಾಗಿ ನಿಂತ ರಾಜರನ್ನುಳಿದು ಸಮರದಲ್ಲಿ ಭಾಗಿಯಾದವರೆಲ್ಲರೂ ಅಳಿದಿದ್ದಾರೆ. ಇಂತಹ ಜಟಿಲ ಸಮಸ್ಯೆಯ ಈ ಕಾಲಘಟ್ಟದಲ್ಲಿ ಅಶ್ವಮೇಧ ಯಾಗ ವಿರಚಿಸುವುದಾದರು ಹೇಗೆ? ಅದಕ್ಕೆ ಬೇಕಾಗುವ ದ್ರವ್ಯ, ಧನಧಾನ್ಯ ಸಂಗ್ರಹಿಸುವುದಾದರು ಹೇಗೆ?” ಎಂದು ತನ್ನ ಮನದ ಕಳವಳ ವ್ಯಕ್ತಪಡಿಸಿದನು.
ವ್ಯಾಸರು “ಯುಧಿಷ್ಠಿರಾ! ನೀನು ಗೊಂದಲಕ್ಕೊಳಗಾಗಬೇಡ. ವಾಸುದೇವ ಕೃಷ್ಣನ ಪೂರ್ಣಾನುಗ್ರಹ ಪಾಂಡವರಾದ ನಿಮ್ಮ ಮೇಲಿದೆ. ವನವಾಸ ಕಳೆದು ಅಜ್ಞಾತವಾಸ ಪೂರೈಸಿ ಬಂದ ನಿಮಗೆ ಕೌರವರ ವಿರುದ್ದ ಹೋರಾಡಿ ಗೆಲುವನ್ನು ಸಂಪಾದಿಸುವಲ್ಲಿ ಕೃಷ್ಣಾನುಗ್ರಹ ನಿರ್ಣಾಯಕ ಪಾತ್ರವಹಿಸಿತ್ತು. ಈಗಲೂ ನಿಮಗೆ ಅಂತಹ ಕೃಪೆ ಎಳ್ಳಿನಿತೂ ಕರಗಿಲ್ಲ. ನೀನು ಕೈಗೊಳ್ಳಬೇಕಾಗಿರುವ ಯಜ್ಞಕ್ಕಾಗಿಯೇ ಎಂಬ ರೀತಿಯಲ್ಲಿ ಈ ಮೊದಲೆ ಹೇರಳವಾದ ಸಂಪತ್ತು ನಿಕ್ಷೇಪಿಸಲ್ಪಟ್ಟಿದೆ. ಹಿಂದೆ ಸೂರ್ಯವಂಶದಲ್ಲಿ ಮರುತ್ತ ನೆಂಬ ರಾಜನೊಬ್ಬನಿದ್ದನು.
ಮುಂದುವರಿಯುವುದು…













