ಭಾಗ – 488
ಭರತೇಶ ಶೆಟ್ಟಿ, ಎಕ್ಕಾರು

ಸಂಚಿಕೆ ೪೮೮ ಮಹಾಭಾರತ
ಭೀಷ್ಮಾಚಾರ್ಯರು ಧರ್ಮರಾಯನು ಕೇಳಿದ ಧರ್ಮ ಸೂಕ್ಷ್ಮದ ಪ್ರಶ್ನೆಯನ್ನು ಕೇಳಿ ಸಂತಸಗೊಂಡು “ಮಗೂ ಇಂತಹ ಪ್ರಶ್ನೆಯನ್ನು ನಿನ್ನಂತಹ ಧರ್ಮಾತ್ಮರ ಹೊರತು ಅನ್ಯರು ಯಾರೂ ತರ್ಕಿಸಲಾರರು. ವತ್ಸಾ! ನಾವು ಹುಟ್ಟಿರುವುದು ಮರ್ತ್ಯ ಲೋಕದಲ್ಲಿ. ಇಲ್ಲಿ ಮೃತ್ಯುವನ್ನು ಬೆನ್ನಲ್ಲಿ ಹೊತ್ತುಕೊಂಡು ಜನ್ಮ ತಾಳುತ್ತಾರೆ. ಪ್ರತಿಯೊಂದು ಜೀವರುಗಳ ಜನ್ಮಕ್ಕೆ ನಿರ್ದಿಷ್ಟವಾದ ಕಾರಣವಿರುತ್ತದೆ. ಹಾಗೆಯೆ ಅವರ ಜೀವನದ ಸುಖ ದುಃಖಗಳೂ ಪೂರ್ವ ನಿರ್ಧಾರಿತವಾಗಿರುತ್ತದೆ. ಈಗ ನೀನು ಕೇಳಿರುವ ಪ್ರಶ್ನೆ ಎಲ್ಲವೂ ಪೂರ್ವದಲ್ಲಿ ನಿಶ್ಚಿತವಾಗಿರುವಂತೆಯೆ ಸಾಗುವುದಾದರೆ ಹುಟ್ಟಿ ಬೆಳೆಯುತ್ತಿರುವ ಜೀವರಾಶಿಗಳು ಮಾಡಲು ಏನು ಉಳಿಯುತ್ತದೆ. ತನ್ನಿಂದ ತಾನೆ ಎಲ್ಲವೂ ಘಟಿಸಿ ಹೋಗುವುದಾದರೆ ನಾವು ಕೇವಲ ಪಾತ್ರಧಾರಿಗಳಷ್ಟೆ ಆಗುತ್ತೇವೆ ಎಂದಲ್ಲವೇ?
ಮಗೂ ನಮ್ಮ ಹುಟ್ಟು ಪೂರ್ವ ಜನ್ಮದ ಪಾಪ ಮತ್ತು ಪುಣ್ಯಗಳೆಂಬ ಕರ್ಮ ಫಲಗಳನ್ನು ಹೊತ್ತು ತಂದಿರುತ್ತದೆ. ತತ್ಪರಿಣಾಮವಾಗಿ ಕೃತ ಪಾಪ ಕರ್ಮಫಲಗಳು ಕಷ್ಟ, ದುಃಖ, ವಿಯೋಗ, ಅಪಮಾನ, ದೂಷಣೆ, ದಾರಿದ್ರ್ಯ, ರೋಗಾದಿ ದುಸ್ಥಿತಿಗಳಾಗಿ ಒದಗುತ್ತವೆ. ಹಾಗೆಯೆ ಸತ್ಕರ್ಮದಿಂದ ಪ್ರಾಪ್ತವಾಗಿರುವ ಪುಣ್ಯ ಫಲವು ಸುಖ, ಸೌಕರ್ಯ, ಕೀರ್ತಿ, ಹಿತ ಸಂತಾನ, ಸನ್ಮಾನಗಳಾಗಿ ಶ್ರೇಯಸ್ಸನ್ನು ಹೊಂದಿಸುತ್ತಾ ಬರುತ್ತವೆ. ಈಗ ಬುದ್ದಿಯನ್ನೂ ವಿವೇಕವನ್ನೂ ಹೊಂದಿರುವ ಮನುಷ್ಯರಾದ ನಾವು ಕಷ್ಟಗಳು ಬೆಂಬಿಡದೆ ಬಂದಾಗ, ನಮ್ಮ ಆಸೆಗಳು ಕೈಗೂಡದೆ ನಿರಾಸೆಯಾದಾಗ, ನಾನಾ ರೀತಿಯ ಪೀಡನೆ ಒದಗಿದಾಗ ಪೂರ್ವ ಜನ್ಮದ ಪಾಪ ಎಂಬ ಸಾಲವನ್ನು ಸಂದಾಯ ಮಾಡಿ ಮುಕ್ತರಾಗುತ್ತಿದ್ದೇವೆ ಎಂದು ಭಾವಿಸುತ್ತಾ ಧೃಡ ಮನಸ್ಕರಾಗಿ ಉಲ್ಲಾಸದಿಂದ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಳ್ಳಬೇಕು. ಪಾಪ ಎಂಬ ಸಾಲ ಮುಕ್ತರಾದ ತೃಪ್ತಿ ಹೊಂದುತ್ತಿರಬೇಕು. ಹಾಗೆಯೆ ಜೀವನದಲ್ಲಿ ನಾವಂದುಕೊಂಡದ್ದು ಕೈಗೂಡಿದಾಗ, ಸುಖ, ಸೌಕರ್ಯ ಸಮೃದ್ಧಿ, ಸನ್ಮಾನ, ಸತ್ಕೀರ್ತಿಗಳು ದೊರೆತಾಗ ನಮ್ಮ ಸಂಪಾದನೆಯ ಸತ್ಕರ್ಮಗಳಿಂದ ಪ್ರಾಪ್ತವಾಗಿದ್ದ ಪುಣ್ಯ ವ್ಯಯವಾಗುತ್ತಿದೆ ಎಂಬ ಎಚ್ಚರಿಕೆ ನಮ್ಮಲ್ಲಿ ಜಾಗೃತವಾಗಿರಬೇಕು. ಇಲ್ಲಿ ಒಂದು ಸರಳ ಸೂತ್ರ ನಮಗೆ ಗೋಚರವಾಗುತ್ತದೆ. ಜೀವನದಲ್ಲಿ ನಮಗೆ ಖರ್ಚು ಹೆಚ್ಚಾಗುತ್ತಾ ಹೋದರೆ ಆಗ ಉಳಿತಾಯ ಖಾಲಿಯಾಗುತ್ತದೆ.ಆಗ ಒಂದೋ ನಮ್ಮಿಂದ ಪ್ರಸ್ತುತ ದಿನಚರಿಯಲ್ಲಿ ಆಗಬಹುದಾದ ಖರ್ಚುಗಳನ್ನು ಕಡಿಮೆ ಮಾಡಬೇಕು, ಜೊತೆಗೆ ಹೆಚ್ಚಿನ ದುಡಿಮೆಯಿಂದ ಸಂಪಾದನೆಯನ್ನು ವೃದ್ಧಿಸಿ ನಾಳಿನ ಭವಿಷ್ಯಕ್ಕೆ ಭದ್ರ ವ್ಯವಸ್ಥೆ ಮಾಡಿಕೊಳ್ಳಬೇಕು. ಇದೇ ರೀತಿ ಪಾಪ ಎಂಬ ಖರ್ಚನ್ನು ಕಡಿಮೆ ಮಾಡಿ, ಪುಣ್ಯ ಎಂಬ ಸಂಪಾದನೆ ಮಾಡುತ್ತಾ ನಮ್ಮ ಜೀವನ ಎಂಬ ಖಾತೆಯಲ್ಲಿ ಠೇವಣಿಯಾಗಿ ಉಳಿಕೆ ಮಾಡುತ್ತಾ ಸಾಗಬೇಕು. ಅಂದರೆ ಪಾಪಕೃತ್ಯಗಳನ್ನು ಮಾಡಲು ಹೆದರಬೇಕು – ಮಾಡಬಾರದು. ಸತ್ಕರ್ಮ, ಧರ್ಮಪಾಲನೆ, ಸತ್ಯ, ನ್ಯಾಯ, ದೇವತಾ ಪ್ರೀತಿ, ಅಧ್ಯಯನ, ದಾನಾದಿ ಸುಕರ್ಮಗಳನ್ನು ಮಾಡುತ್ತಾ ಸನ್ಮಾರ್ಗದ ದಾರಿಯಲ್ಲಿ ಜೀವನ ನಡೆಸಬೇಕು.
ವತ್ಸಾ ! ನಿನ್ನ ಜೀವನದಲ್ಲಿ ಒಮ್ಮೆ ಹಿಂದಿರುಗಿ ನೋಡು. ರಾಜಸೂಯಾಧ್ವರ ಅವಭೃತ ಕಲಶಾಭಿಷಿಕ್ತ ಚಕ್ರವರ್ತಿ ನೀನಾಗಿದ್ದರೂ ಕ್ಷಾತ್ರ ಧರ್ಮ ಪಾಲಿಸಿ ದ್ಯೂತಾಹ್ವಾನ ಸ್ವೀಕರಿಸಿದೆ. ದ್ಯೂತ ಪರಿಣಾಮವಾಗಿ ವನವಾಸ ಅಜ್ಞಾತವಾಸ ಪ್ರಾಪ್ತವಾದರೂ, ಸರ್ವ ಸಂಪದವನ್ನು ಕಳಕೊಂಡರೂ ಧರ್ಮ ಒಂದನ್ನು ಬಿಡದೆ ನ್ಯಾಯ ಮಾರ್ಗದಲ್ಲಿ ಬದುಕಿದೆ. ಪರಿಣಾಮ ಧರ್ಮವನ್ನು ಪಾಲಿಸಿ ರಕ್ಷಿಸಿದ ನಿನ್ನನ್ನು ಸರ್ವ ಕಷ್ಟಗಳಿಂದಲೂ ಧರ್ಮವೇ ಪಾರು ಮಾಡಿದೆ. ಮಹಾಭಾರತ ಧರ್ಮಯುದ್ಧ ಎಂಬ ಮಹಾಸಾಗರವನ್ನು ದಾಟಿ ಈಗ ಸುರಕ್ಷಿತನಾಗಿ ನಿಂತಿರುವೆ.
ಧರ್ಮರಾಯಾ! ಇನ್ನು ಮುಂದೆಯೂ ನಿನ್ನ ಪೂರ್ವ ಜನ್ಮದ ಪ್ರಾರಬ್ಧ ಫಲ ಪ್ರಕಾರ ಜೀವನ ಒದಗಿ ಬರುತ್ತದೆ. ಅದನ್ನು ಸೇವಿಸಿ ಬದುಕುವಲ್ಲಿ ಧರ್ಮ ಪಾರಾಯಣನಾಗಿ, ಸತ್ಕರ್ಮ ನಿರತನಾಗಿ, ನ್ಯಾಯ ಮಾರ್ಗದಲ್ಲಿ ಬದುಕಬೇಕು. ಜೊತೆಗೆ ಸದಾ ಲೋಕ ಕಲ್ಯಾಣಾರ್ಥ ದೇವತಾ ಸಂಪ್ರೀತಿ ಗಳಿಸುತ್ತಾ, ಜನರ ಮನ ನೋಯಿಸದೆ, ಹಿಂಸಿಸದೆ, ಹಿರಿಯರನ್ನು ವೃದ್ಧರನ್ನು, ಬಾಲರನ್ನು ಗೌರವಿಸಿ ಸಂರಕ್ಷಿಸುತ್ತಾ, ಋಷಿಋಣ ಮುಕ್ತನಾಗಲು ಅಧ್ಯಯನ ಮಾಡುತ್ತಾ, ಪ್ರಕೃತಿಯನ್ನು ಪೂಜಿಸುತ್ತಾ ಆಯುಷ್ಯ ಪೂರ್ಣಗೊಳಿಸು. ಈ ರೀತಿ ನೀನು ಮಾಡುವುದರಿಂದ ಸಂಭವಿಸಬಹುದಾದ ಹುಟ್ಟು ಸಾವುಗಳೆಂಬ ಜೀವನ ಚಕ್ರದಿಂದ ಮುಕ್ತನಾಗಿ ಮುಕ್ತಿ ಪಡೆದು ಪರಮಾತ್ಮನ ಪರಂಧಾಮ ಸೇರಬಹುದು.
ಅದೇ ಜೀವರುಗಳು ಕರ್ಮ ಫಲ ನಿರ್ದೇಶಿತ ಬದುಕು ಸಾಗಿಸುವಾಗ ಬರುವ ಕಷ್ಟ ಕಾರ್ಪಣ್ಯಗಳಿಂದ ಬೇಸತ್ತು ತಮ್ಮ ಮನದಾಸೆ ಈಡೇರಿಸಲು ತಾವು ಅಧರ್ಮ ಪಥ ಹಿಡಿದರೆ, ಮತ್ತಷ್ಟು ಪಾಪಗಳು ಮಾಡಲ್ಪಟ್ಟು ಪ್ರಾರಬ್ಧವಾಗಿ ಜೋಡಣೆಗೊಳ್ಳುತ್ತದೆ. ಆ ಪಾಪ ಕರಗಿಸಲು ಮತ್ತೆ ಹೀನ ಜನ್ಮಕ್ಕೆ ಕಾರಣವಾಗುತ್ತದೆ. ಎಲ್ಲಿಯವರೆಗೆ ಪಾಪದ ಮೂಟೆ ಕರಗದೆ ಉಳಿಯುವುದೋ ಆ ತನಕ ಹುಟ್ಟು ಸಾವುಗಳ ಚಕ್ರ ತಿರುಗುತ್ತಿರುತ್ತದೆ. ಅದಕ್ಕಾಗಿ ಬದುಕಿನಲ್ಲಿ ಸತ್ಕರ್ಮ ಮುಖೇನ ಪುಣ್ಯ ಸಂಪಾದಿಸಿದರೆ ಸಂಚಿತ ಸುಕರ್ಮ ಫಲ ಸುಸ್ಥಿತಿಯನ್ನು ಒದಗಿಸುತ್ತದೆ.
ಹಿಂದೆ ಮೇಧಾವಿ ಎಂಬವನು ತನ್ನ ತಂದೆಗೆ ಉಪದೇಶ ಮಾಡಿದ್ದನಂತೆ “ಒಳ್ಳೆಯದು ಎಂದು ತೋರಿದ ಕೆಲಸವನ್ನು ಕೂಡಲೆ ಮಾಡಬೇಕು. ನಾಳೆ ಮಾಡುವುದನ್ನು ಇಂದು ಮಾಡಬೇಕು. ಮತ್ತೆ ಮಾಡುವುದನ್ನು ಈಗಲೆ ಮಾಡಬೇಕು. ಯಾಕೆಂದರೆ ಒಳ್ಳೆಯದೆಂದು ತಿಳಿದು ಮಾಡಬೇಕೆಂದು ಬಯಸಿದ ಕೆಲಸ ಮಾಡಲಾಗದೆ ಉಳಿದು ಹೋದರೆ, ಅದನ್ನು ಮಾಡುವ ಮೊದಲು ಪೂರ್ವ ನಿಶ್ಚಿತ ಮೃತ್ಯುವಿನ ಮುಖ ನಮ್ಮತ್ತ ತಿರುಗಿದರೆ ಆಗ ಆ ಸತ್ಕರ್ಮ ಮಾಡುವ ಅವಕಾಶ ದೊರೆಯದು. ಎಷ್ಟು ಹೊತ್ತಿಗಾದರೂ, ಯಾವ ವಿಧಾನದಿಂದಾದರು ಆ ಮೃತ್ಯುವಿನ ಮುಖ ಬಾಯ್ತೆರೆದು ನಮ್ಮನ್ನು ನುಂಗಿ ಬಿಡಬಹುದು. ನಾನು ನಾಳೆಯೆ ಮೃತ್ಯುವಶನಾಗಬಹುದು ಎಂದು ತಿಳಿದು ಯಾರಿಗೂ ಅನ್ಯಾಯ ಮಾಡದೆ ಸದ್ಗುಣ ಶೀಲನಾಗಿ ಬದುಕಬೇಕು. ಆಗ ಈ ಜೀವನ ಯಾತ್ರೆ ಮುಗಿಸಿ ಮುಂದೆ ಸಾಗುವ ವಿಧಿಯ ಲೆಕ್ಕಾಚಾರದಲ್ಲಿ ನಮ್ಮ ಆತ್ಮ ಪುಣ್ಯಾತ್ಮವಾಗಿರುತ್ತದೆ. ಆದುದರಿಂದ ಚಿಕ್ಕ ವಯಸ್ಸಿನಲ್ಲಿಯೆ ಧರ್ಮಶೀಲರಾಗಿರಬೇಕು. ವಯಸ್ಸಾದ ಮೇಲೆ ಸಂಸಾರದ ಮೇಲಿನ ಮೋಹದಿಂದ ಮಾಡಬಾರದ್ದನ್ನು ಮಾಡಿಸಿ ಬಿಡಬಹುದು. ಬಾಲ್ಯದಿಂದಲೆ ಧರ್ಮಪಾಲನೆ ಅಭ್ಯಾಸವಾದರೆ ಆ ಸುಗುಣ ಉಳಿದು ಬಿಡುತ್ತದೆ” ಇದು ದಿವ್ಯ ಜ್ಞಾನ ಪಡೆದ ಮಗ ಮೇಧಾವಿ ತನ್ನ ತಂದೆಗೆ ಮಾಡಿದ್ದ ಉಪದೇಶವಾದರೂ ಅದ್ವಿತೀಯ ಸತ್ಯವೇ ಆಗಿದೆ.”
ಕೇಳಿಸಿಕೊಂಡ ಧರ್ಮರಾಯನು “ಅಜ್ಜಾ! ನೀವು ಹೇಳಿದ ಸತ್ಯ ನಿಜವಾಗಿಯೂ ಪಾಲಿಸ ಬೇಕಾದುದು. ಆದರೆ ಸಾಮಾನ್ಯ ಮನುಷ್ಯರ ಜೀವನ ಬಡತನದಿಂದ ಬಳಲುತ್ತಿರುತ್ತದೆ. ಜೀವನಾಧಾರವಾದ ಧನ ಏನು ಮಾಡಿದರೂ ದೊರೆತು ಉಳಿಯುವುದಿಲ್ಲ. ಆದರೆ ಆಸೆಗಳು ಬೆಳೆಯುತ್ತಲಿರುತ್ತದೆ. ಆಗ ಸುಖ ಎನ್ನುವುದು ಖಂಡಿತಾ ಇರದು. ಇಂತಹ ಸ್ಥಿತಿಯಲ್ಲಿ ಹೇಗೆ ಸುಖವನ್ನು ಕಾಣಬೇಕು?” ಎಂದು ಪ್ರಶ್ನಿಸಿದನು.
ಮುಂದುವರಿಯುವುದು…











