28.6 C
Udupi
Sunday, April 26, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 349

ಭರತೇಶ ಶೆಟ್ಟಿ,ಎಕ್ಕಾರ್

ಇತ್ತ ಹಸ್ತಿನೆಯಲ್ಲಿ ಧೃತರಾಷ್ಟ್ರ ಸಂಜಯನ ಜೊತೆ ಪಿತಾಮಹ ಭೀಷ್ಮನು ಧರೆಗೊರಗಿದ ಸುದ್ದಿ ಕೇಳಿ ಮಹಾಭಾರತ ಯುದ್ದವನ್ನು ನಾವು ಸೋತ ಹಾಗೆ. ಇನ್ನೇನಿದ್ದರೂ ಕಾಟಾಚಾರದ ಕಾದಾಟ ಮಾತ್ರ ಉಳಿದಿದೆ. ಕಾಳಭೈರವನಂತೆ ಯಾರು ಇದಿರಾದರೂ ಸೆಣಸಿ ನಿಲ್ಲಬಲ್ಲ ಮತ್ತು ಯಮಪುರಿಗಟ್ಟಬಲ್ಲ ಯೋಧನಿದ್ದರೆ ಅದು ಮಹಾಮಹಿಮ ಭೀಷ್ಮಾಚಾರ್ಯರು. ಅವರು ಇನ್ನು ರಣಾಂಗಣದಲ್ಲಿ ಇಲ್ಲ ಎಂದಾದ ಮೇಲೆ ಆ ಕೃಷ್ಣ ಭೀಮಾರ್ಜುನರನ್ನು ಅಸ್ತ್ರವಾಗಿಸಿಕೊಂಡು ಪೂರ್ಣಾಹುತಿ ಪಡೆಯುವ ಕಾರ್ಯವಷ್ಟೆ ಉಳಿದಿದೆ ಎಂಬಂತೆ ಹತಾಶನಾಗಿ ನುಡಿಯತೊಡಗಿದನು. ಸಂಜಯನು ಸಂತೈಸುತ್ತಾ “ಅರಸ ಕಾಲ ಮಿಂಚಿ ಹೋಗುತ್ತಿದೆ. ಮತ್ತೆ ಚಿಂತಿಸಿ ಫಲವಿಲ್ಲ. ದುರ್ಯೋಧನನ ಜನನ ಕಾಲದಲ್ಲಿ ವಿಶ್ಲೇಷಿಸಲ್ಪಟ್ಟಾಗ ನೀನು ಕೇಳಲಾರದೆ ಹೋದೆ. ನಿನಗೆ ಕಣ್ಣಿನ ದೃಷ್ಟಿ ಕುರುಡು ಇತ್ತು, ಆದರೆ ಕಿವಿ ಸರಿಯಾಗಿ ಕೇಳಿಸುತ್ತಿದ್ದರೂ ಹೇಳಿದ ವಿವೇಕದ ಮಾತು ಕೇಳದ ಕಿವುಡನಾದೆ. ಈಗ ಪರಿಭವ ಎದುರಾಗುತ್ತಿರುವ ಸಮಯ ಪರಿತಪಿಸಿ ಏನು ಪ್ರಯೋಜನವಿದೆ? ನಂತರ ನಿನ್ನ ಬಳಿಗೆ ಸಾಕಷ್ಟು ಅವಕಾಶಗಳು ಒದಗಿ ಬಂದಾಗಲೂ ಸಂಧಿ ಕಾರ್ಯಕ್ಕೆ ಒಪ್ಪುತ್ತಿದ್ದರೆ ಎಲ್ಲರಿಗೂ ಕ್ಷೇಮವಾಗುತ್ತಿತ್ತು. ನೀನು ಹೆಸರಿಗೆ ಮಾತ್ರ ಮಹಾರಾಜನಾಗಿ ನಿನ್ನ ಮಗನ ತಾಳಕ್ಕೆ ತಕ್ಕಂತೆ ಕುಣಿಯತೊಡಗಿದೆ. ನಿನಗಿನ್ನೂ ಒಂದು ಸೂಕ್ಷ್ಮವನ್ನು ವಿವರಿಸುವೆ. ಕರ್ಣ ನಿ‌ನ್ನ ಮಗನ ಮಿತ್ರನೂ ಹೌದು, ಸ್ವಾಮಿ ನಿಷ್ಟೆ, ದಾನ ಧರ್ಮಾದಿಗಳಿಗೆ ಹೆಸರಾದವನೂ ಹೌದು‌. ಅಪ್ರತಿಮ ವೀರನೆಂದೂ ಒಪ್ಪಬಹುದು. ಆದರೆ ಆತನಿಂದಾದ ಮಹಾ ಅಪರಾಧವೆಂದರೆ ನಿನ್ನ ಮಗ ದುರ್ಯೋಧನನಿಗೆ ಈ ಯುದ್ದ ನಡೆಯಲು ಸ್ಥೈರ್ಯ ತುಂಬಿದ ಪ್ರಮುಖ ಮೂವರಲ್ಲಿ ಒಬ್ಬನು. ಶಕುನಿ, ದುಶ್ಯಾಸನರ ಜೊತೆ ಕರ್ಣ ಪ್ರಧಾನ ಸ್ಥಾನಿಯಾಗಿ ದುರ್ಯೋಧನನ ಮನದಲ್ಲಿ ಛಲ ಬೆಳೆಸುವಲ್ಲಿ ಪ್ರೇರಕನಾದವನು. ಅರ್ಜುನನ ಮೇಲಿನ ಹಗೆಯ ಸಾಧನೆಗೆ ಈ ರೀತಿ ವ್ಯವಹರಿಸಿದನೋ ಇಲ್ಲ ಅದೇ ನಿಯತಿಯೋ ತಿಳಿಯದಾಗಿದೆ. ಸ್ವಾಮಿ ಭಕ್ತಿಯುಳ್ಳ ನಿಷ್ಟಾವಂತನು ಹೌದಾದರೆ ಕರ್ಣ ತನ್ನ ಮಿತ್ರನ ಶ್ರೇಯೋಭಿಲಾಷಿಯಾಗಿ ಮೊದಲ ಹತ್ತು ದಿನ ಯುದ್ದ ಮಾಡುತ್ತಿದ್ದನು. ಹಾಗೆ ಮಾಡಲಿಲ್ಲ. ಆ ಹತ್ತು ದಿನಗಳ ಕಾಲ ಶಸ್ತ್ರ ಸನ್ಯಾಸ ಮಾಡಿದ ಕರ್ಣನಿಗೆ ಏನು ವೈರಾಗ್ಯ ಮನ ಮಾಡಿತೋ! ತಾನು ಹಿಂದುಳಿದು ಯುದ್ದ ಮಾಡದೆ ಕ್ಷತ್ರಿಯನಾಗಿ ಅಪಚಾರ ಎಸಗಿದೆ. ಪರಿಣಾಮ ಭೀಷ್ಮಾಚಾರ್ಯರ ಸೋಲಾಯಿತು. ನಾನಿದ್ದಿದ್ದರೆ, ಮನಸ್ಪೂರ್ವಕ ಹೋರಾಟ ಮಾಡುತ್ತಿದ್ದರೆ ಫಲಿತಾಂಶ ವ್ಯತ್ಯಾಸ ಆಗುತ್ತಿತ್ತೋ ಏನೋ ಎಂಬ ವ್ಯಾಕುಲತೆ ಆವರಿಸುವಾಗ ಕಾಲ ಮಿಂಚಿ ಹೋಗಿತ್ತು. ಆಗುವುದು ಆಗಲಿದೆ, ಇನ್ನು ಮುಂದೆಯೂ ಯುದ್ದ ಮಾಡಲಾರೆ, ವನವಾಸಿಯಾಗಿ ಬದುಕುವೆ ಎಂಬಂತೆ ನಿರ್ಣಯ ತಳೆದಾಗ ಅವನನ್ನು ಪ್ರೇರೇಪಿಸಿ ಮನಪರಿವರ್ತನೆ ಮಾಡಿದವರೇ ಭೀಷ್ಮಾಚಾರ್ಯರು. ಇಲ್ಲವಾಗಿದ್ದರೆ ಕರ್ಣ ಈಗಲೂ ಸಮರದಿಂದ ವಿಮುಖನಾಗುವ ದ್ವಂದ್ವ ಭಾವ ಹೊಂದಿದ್ದನು. ಧರ್ಮಾಧರ್ಮಗಳ ವಿವೇಚನೆಯೋ, ತಮ್ಮ ತಪ್ಪು ನಿರ್ಧಾರದ ಪಶ್ಚಾತ್ತಾಪವೋ! ಯಾವುದೋ ಒಂದು ಆವರಿಸಿ ವಾನಪ್ರಸ್ಥಕ್ಕೆ ಮನಮಾಡುವ ಹಂತ ತಲುಪಿ ಬಿಟ್ಟಿದ್ದನಾತ. ಸುದೈವವಶಾತ್ ಪುರುಷ ಸಿಂಹ ಸದೃಶ ಕರ್ಣ ಈಗ ಸಮರಕ್ಕೆ ಮನಮಾಡಿದ್ದಾನೆ. ಸದ್ಬುದ್ದಿಯಿಂದ ದ್ರೋಣರ ಹೆಸರನ್ನು ಸೇನಾಧಿಪತ್ಯಕ್ಕೆ ಸೂಚಿಸಿದ್ದಾನೆ. ಅರ್ಜುನನ ಮೇಲಿನ ವೈರ ಮರುಕಳಿಸಿ ಯುದ್ದಕ್ಕೆ ಸಿದ್ಧನಾಗಿದ್ದಾನೆ. ದುರ್ಯೋಧನನಿಗೆ ಧೈರ್ಯ ತುಂಬುತ್ತಾ ಆಚಾರ್ಯ ದ್ರೋಣರನ್ನು ಸೇನಾಧಿಪತಿಯಾಗಿಸಲು ಸಲಹೆ ನೀಡಿದ್ದಾನೆ” ಎಂದನು. ಧೃತರಾಷ್ಟ್ರನ ಮನಸ್ಸು ಗೊಂದಲದ ಗೂಡಾಗಿದೆ ಹೊರತು ಸಮಾಧಾನವಾಗುತ್ತಿಲ್ಲ.

ಇತ್ತ ಕೌರವ ಬಿಡಾರದಲ್ಲಿ ದುರ್ಯೋಧನಾದಿ ಪ್ರಮುಖರು ಸೇರಿ ದ್ರೋಣರನ್ನು ಕಂಡು ಸೇನಾಪತಿಯಾಗುವಂತೆ ವಿನಂತಿಸುತ್ತಿದ್ದಾರೆ. ಕೌರವ ಗುರುಗಳಿಗೆ ನಮಿಸಿ “ಆಚಾರ್ಯರೇ, ನೀವು ಸರ್ವ ಶ್ರೇಷ್ಟರು ಹೌದು. ನಮ್ಮ ಪಕ್ಷದಲ್ಲಿ ಭೀಷ್ಮ ಪಿತಾಮಹರನ್ನುಳಿದರೆ ಹಿರಿಯರೂ, ಸಮರ್ಥರೂ ಆಗಿರುವಿರಿ. ರುದ್ರರಲ್ಲಿ ಶಂಕರ, ವಸುಗಳಲ್ಲಿ ಪಾವಕ, ಯಕ್ಷರಲ್ಲಿ ಕುಬೇರ, ಮರುದ್ಗಣಗಳಲ್ಲಿ ವಾಸವ, ಪಿತೃದೇವತೆಗಳಲ್ಲಿ ಯಮಧರ್ಮ, ಜಲಗಳಲ್ಲಿ ವರುಣ, ನಕ್ಷತ್ರಗಳಲ್ಲಿ ಚಂದ್ರ, ದಿತಿಯ ಮಕ್ಕಳಾದ ದೈತ್ಯರಿಗೆ ಶುಕ್ರಾಚಾರ್ಯ ಹೇಗೆ ಶ್ರೇಷ್ಟರೋ ಹಾಗೆಯೇ ನಮ್ಮ ಸೇನೆಯಲ್ಲಿ ನೀವು ಅತ್ಯುತ್ತಮರಾಗಿರುವಿರಿ. ನೀವು ಕುರುಸೇನೆಯ ದಂಡನಾಯಕನಾಗಿ ಜಯವನ್ನು ಹೊಂದಿಸಿಕೊಡಬೇಕಾಗಿ ನಿಮ್ಮಲ್ಲಿ ಪ್ರಾರ್ಥಿಸುತ್ತಿದ್ದೇವೆ” ಎಂದನು.

ದ್ರೋಣಾಚಾರ್ಯರಿಗೆ ಏನನಿಸಿತೋ ಏನೋ! ಮುಕ್ತಿಗೆ ಇದೇ ದಾರಿ ಎಂದುಕೊಂಡರೋ ಅಲ್ಲ ಭೀಷ್ಮರನ್ನುಳಿದರೆ ನೀವೇ ಸರ್ವ ಶ್ರೇಷ್ಟರು ಎಂಬ ಅಭಿಪ್ರಾಯ ಹಿತವೆಣಿಸಿತೋ! ಸೇನಾಧಿಪತ್ಯಕ್ಕೆ ಒಪ್ಪಿಗೆ ನೀಡಿದರು. ದುರ್ಯೋಧನ ದುರ್ಬುದ್ಧಿಯವನಾದರೂ ಈಗ ತೋರುತ್ತಿರುವ ಜಾಣತನ, ಸ್ಥೈರ್ಯ ಗುರುವಾಗಿ ಶಿಷ್ಯನ ಬಗ್ಗೆ ಅಭಿಮಾನ ಮೂಡುವಂತೆ ಮಾಡಿತು. “ಗುರುಭಕ್ತಿ ತೋರಿ ಗೌರವಿಸಿರುವ ನಿನ್ನ ನಡೆಯಿಂದ ಸಂತೃಪ್ತನಾಗಿದ್ದೇನೆ. ಹಾಗಾಗಿ ನಿನಗೊಂದು ವರ ನೀಡುವ ಮನಸ್ಸಾಗಿದೆ. ನನ್ನಿಂದ ಏನು ಬಯಸುವೆ ಹೇಳು” ಎಂದು ಭಾರಾಧ್ವಜ ಪುತ್ರ ದ್ರೋಣಾಚಾರ್ಯರು ಕೇಳಿದರು. ದುರ್ಯೋಧನ “ಗುರುವರ್ಯ, ಧರ್ಮರಾಯನನ್ನು ಬಂಧಿಸಿ ನೀವು ಸೆರೆ ಹಿಡಿದರೆ ನಮಗದು ಗೆಲುವಾಗುತ್ತದೆ. ಅಷ್ಟು ಮಾಡಿದರೆ ಸಾಕು ಧನ್ಯನಾಗುವೆ” ಎಂದನು. ಗುರು ದ್ರೋಣರು ನಸುನಕ್ಕು “ಕುರುಶ್ರೇಷ್ಟನೇ, ನೀನು ಪ್ರಬುದ್ಧನಾಗಿ ವರ್ತಿಸುತ್ತಿರುವೆ. ಧರ್ಮರಾಯನನ್ನು ವಧಿಸಿದರೆ ಸಾಕು ಎಂದೇನಾದರು ಕೇಳಿರುತ್ತಿದ್ದರೆ ಸಮಸ್ಯೆಯಾಗುತ್ತಿತ್ತು. ಸೆರೆ ಹಿಡಿದರೆ ಸಾಕು ಎಂದು ಸರಳ ಬೇಡಿಕೆಯಿಟ್ಟು ನನ್ನ ಮನಸ್ಸನ್ನು ಮುದಗೊಳಿಸಿರುವೆ. ಒಂದು ವೇಳೆ ಆ ರೀತಿ ನೀನು ಕೇಳುತ್ತಿದ್ದರೆ ಅನಾಹುತವೇ ಆಗಿ ಬಿಡುತ್ತಿತ್ತು.” ಎಂದರು.

ಆಗ ದುರ್ಯೋಧನ ಶಕುನಿಯತ್ತ ನೋಡಿ, ಧರ್ಮರಾಯನನ್ನು ಕೊಂದರೆ ಅರ್ಜುನ ಉಗ್ರನಾಗಿ ನಮ್ಮ ಸಮಸ್ತ ಸೇನೆ ನಾಶಗೊಳಿಸಲ್ಪಡುವ ಸಾಧ್ಯತೆ ಇತ್ತು. ಧರ್ಮರಾಯ ಸೆರೆ ಸಿಕ್ಕರೆ ಮತ್ತೆ ದ್ಯೂತ ಆಹ್ವಾನ ನೀಡಿ ಸೋಲಿಸಿ ಮತ್ತೆ ಕಾಡಿಗೆ ಅಟ್ಟಬಹುದು” ಎಂದನು. ದ್ರೋಣಾಚಾರ್ಯರಿಗೆ ದುರ್ಯೋಧನ ವಂಚಕ ಬುದ್ಧಿ ಕಂಡು ಮೂರ್ಖನೀತ ಅನಿಸಿತು. ಮೊದಲಾಗಿ ಸೆರೆ ಹಿಡಿಯುವುದು ಅಸಾಧ್ಯ ಕಾರ್ಯ. ಹಾಗೂ ಆಗಿ ಹೋದರೆ ಈಗ ಅಕ್ಷ ಹೃದಯ ವಿದ್ಯೆ ಅರಿತಿರುವ ಧರ್ಮರಾಯ ದ್ಯೂತದಲ್ಲಿ ಗೆದ್ದು ಬಿಡುತ್ತಾನೆ ಎಂಬುದು ಈ ಧೂರ್ತ ಕೌರವನಿಗೆ ತಿಳಿದಿಲ್ಲ ಎಂದು ಯೋಚಿಸಿ ನಕ್ಕು ಬಿಟ್ಟರು. ಸಮರ ಸಮಯ ಯಾರನ್ನೂ ಅಪಮಾನಿಸಿ ನಿಸ್ತೇಜರನ್ನಾಗಿಸಬಾರದೆಂದು ಭಾವಿಸಿ, ಮೂರ್ಖನಂತೆ ವರ್ತಿಸಿದರೂ ನಿಂದಿಸದೆ ಸುಮ್ಮನಾದರು.

ಬ್ರಾಹ್ಮೀ ಮುಹೂರ್ತದಲ್ಲಿ ಶಾಸ್ತ್ರೋಕ್ತ ಕ್ರಮದಿಂದ ಸೇನಾಧಿಪತಿಯಾಗಿ ಪದಗ್ರಹಣ ಮಾಡಲಾಯಿತು. ಬಳಿಕ ಗುರು ದ್ರೋಣರಿಗೆ ಅಭಿಷೇಕ, ಶಾಂತಿ ಪೂಜೆಗಳು, ಪುಣ್ಯಾಹ, ಸ್ವಸ್ತಿವಾಚನಗಳಾದಿ ವೈದಿಕ ಪ್ರಕ್ರಿಯೆಗಳೂ ನಡೆದವು. ರಣತಂತ್ರದ ಸಮಾಲೋಚನೆಯೂ ಆರಂಭವಾಯಿತು. ಜಯದ್ರಥ, ಕಳಿಂಗರಾಜ, ವಿಕರ್ಣಾದಿ ವೀರರು ದ್ರೋಣರ ದಕ್ಷಿಣ ಭಾಗದಲ್ಲಿ, ಗಾಂಧಾರ ದೇಶದ ಸೇನೆಯ ಜೊತೆ ಶಕುನಿ, ಕೃಪಾಚಾರ್ಯ, ಕೃತವರ್ಮ, ಚಿತ್ರಸೇನಾದಿಗಳು ಎಡಭಾಗದಲ್ಲಿ, ಸಮಗ್ರವಾದ ಮಹಾಸೇನೆಯ ಜೊತೆ ಕರ್ಣ ದುರ್ಯೋಧನರು ರಕ್ಷಕರಾಗಿ ಹಿಂಭಾಗದಲ್ಲಿ ಸ್ಥಾನ ಪಡೆದರು. ಎಲ್ಲರಿಗೂ ಈಗ ದ್ರೋಣ ಮತ್ತು ಕರ್ಣರ ಮೇಲೆ ಅಮಿತ ವಿಶ್ವಾಸ ಮೂಡಿದೆ. ದ್ರೋಣಾಚಾರ್ಯರು ಶಕಟವ್ಯೂಹ ರಚಿಸಿ ಮಧ್ಯದಲ್ಲಿ ತಾನೇ ನಿಂತು ಯುದ್ದ ಮಾಡುವ ಯೋಜನೆ ಸಿದ್ದವಾಯಿತು.

ಪಾಂಡವರು ಸೂಕ್ಷ್ಮವಾಗಿ ಕುರುಸೇನೆಯ ಬಲಾಬಲಗಳನ್ನು ಅವಲೋಕನ ಮಾಡಿ, ದೃಷ್ಟದ್ಯುಮ್ನನ ನಿರ್ದೇಶನದಲ್ಲಿ ಕ್ರೌಂಚವ್ಯೂಹ ರಚಿಸಿದರು.

ಮುಂದುವರಿಯುವುದು….

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page