ಭಾಗ – 293
ಭರತೇಶ ಶೆಟ್ಟಿ, ಎಕ್ಕರ್

ವಿದುರನ ಜೊತೆ ಈ ರೀತಿ ಪ್ರೀತನಾಗಿ ವ್ಯವಹರಿಸುತ್ತಿರುವ ಕೃಷ್ಣ, ಎಲ್ಲೂ ಉಳಿಯದೆ ಈತನ ಮನೆಗೆ ಬಂದಿರುವುದಕ್ಕೂ ಕಾರಣವಿದೆ. ಹಸ್ತಿನೆಯ ಅಧರ್ಮ ರಾಜಕಾರಣವನ್ನೂ, ಅದರಿಂದಾಗಿ ಪಾಂಡವರಿಗಾದ ಅನ್ಯಾಯವನ್ನು ಅಡಿಗಡಿಗೆ ವಿರೋಧಿಸುತ್ತ ಬಂದು, ಎಚ್ಚರಿಸಿ ಸನ್ಮಾರ್ಗ ತೋರುವ ಪ್ರಯತ್ನಶೀಲನಾಗಿದ್ದವನು ಧರ್ಮಪಕ್ಷಪಾತಿ ವಿದುರ. ಅದೂ ದುಷ್ಟ ಚತುಷ್ಟಯರ ಹೀಯಾಳಿಕೆ, ಅವಗಣನೆಯ ನಡುವೆಯೂ ತನಗೆಂತಹ ಕಷ್ಟ, ನಿಂದನೆ, ಶಿಕ್ಷೆ ಒದಗಿದರೂ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದ ವಿದುರನ ಯೋಗ್ಯತೆ ಅರಿತು ಪರಮಾತ್ಮ ಬಂದು ಇಂದು ನೆಲೆಸಿದ್ದಾನೆ. ಪಾಂಡವರ ಮಾತೆ ಕುಂತಿಗೆ ಆಶ್ರಯದಾತನೂ ಆಗಿದ್ದಾನೆ.
ರಾತ್ರಿ ಕಳೆದು ಹೋದುದು ಗೊತ್ತಾಗಲಿಲ್ಲ. ಬ್ರಾಹ್ಮೀ ಮುಹೂರ್ತದಲ್ಲೆದ್ದು ಪ್ರಾತಃವಿಧಿಗಳನ್ನು ಪೂರೈಸಿ ಕೊಂಡನು ಶ್ರೀಕೃಷ್ಣ ಪರಮಾತ್ಮ. ವಿದುರನೂ ನಿತ್ಯಕರ್ಮಗಳನ್ನು ಗೈದು ಸಿದ್ಧನಾದನು. ಅಷ್ಟರಲ್ಲಿ ಕಶ್ಯಪ, ನಾರದಾದಿ ಮಹರ್ಷಿಗಳು ಅಲ್ಲಿಗೆ ಬಂದರು. ವಿದುರನ ಮನೆ ಈಗ ಪುಣ್ಯತೀರ್ಥದ ಸ್ನಾನ ಘಟ್ಟದಂತೆ ಕಂಗೊಳಿಸುತ್ತಿದೆ. ಪವಿತ್ರವಾದ ಪುಣ್ಯಕ್ಷೇತ್ರದಂತೆ ಭಾಸವಾಗುತ್ತಿದೆ. ಋಷಿಗಣೋಪೇತನಾದ ಶ್ರೀಕೃಷ್ಣನು ಸಾಕ್ಷಾತ್ ವೈಕುಂಠವಾಸನಂತೆ ವಿದುರನಿಗೆ ಗೋಚರಿಸುತ್ತಿದ್ದಾನೆ. ಭೂಭಾರಹರಣಾರ್ಥವಾಗಿ ಸಾಧುಗಳೆಲ್ಲ ನಾರಾಯಣನಲ್ಲಿ ಮೊರೆಯಿಟ್ಟಂತೆ ಕಾಣುತ್ತಿದೆ ಅಲ್ಲಿನ ವಾಸ್ತವ ಸ್ಥಿತಿ.
ಅದೇ ಸಮಯಕ್ಕೆ ಸರಿಯಾಗಿ ದುರ್ಯೋಧನನೂ ಶಕುನಿಯೂ ಅಲ್ಲಿಗೆ ಬಂದು ಶ್ರೀ ಕೃಷ್ಣನನ್ನು ರಾಜಸಭೆಗೆ ಬರುವಂತೆ ಆಹ್ವಾನಿಸಿದರು. ಅಂತೆಯೆ ಶ್ರೀಕೃಷ್ಣನು ಮಹಾತ್ಮರಾದ ಋಷಿಮುನಿಗಳೆಲ್ಲರನ್ನು ಮುಂದಿಟ್ಟುಕೊಂಡು ವಿದುರನೊಂದಿಗೆ ರಥವನ್ನೇರಿ ಹಸ್ತಿನಾವತಿಯ ರಾಜಸಭೆಯತ್ತ ಸಾಗಿದರು. ಕೌರವ, ಶಕುನಿಯರು ತಾವು ಬಂದ ರಥದಲ್ಲಿ ಅನುಸರಿಸಿದರು.
ಶ್ರೀ ಕೃಷ್ಣನು ಅರಮನೆಯ ಬಾಗಿಲಲ್ಲಿ ರಥದಿಂದಿಳಿದುಕೊಂಡನು. ಎಡ ಬಲದಲ್ಲಿ ವಿದುರನೂ ಸಾತ್ಯಕಿಯೂ ಜೊತೆಯಾಗಿದ್ದರು. ಕರ್ಣ ದುರ್ಯೋಧನ, ದುಶ್ಯಾಸನ ಶಕುನಿ ಚತುಷ್ಟಯರು ಸೇರಿ ಸ್ವಾಗತಿಸಿದರು. ಶಂಖ ಭೇರಿಯ ನಿನಾದದ ಸುಸ್ವಾಗತದೊಂದಿಗೆ ಶ್ರೀಕೃಷ್ಣ ಸಭಾಗೃಹ ಪ್ರವೇಶ ಮಾಡಿದನು. ಭೀಷ್ಮ, ದ್ರೋಣಾದಿ ಆಚಾರ್ಯರು ಧೃತರಾಷ್ಟ್ರನನ್ನು ಮುಂದಾಗಿರಿಸಿ ಆತ್ಮೀಯತೆಯಿಂದ ಆದರಿಸಿದರು. ಎಲ್ಲ ರಾಜರು ಎದ್ದು ನಿಂತು ಗೌರವ ಸೂಚಿಸಿದರು. ಶ್ರೀಕೃಷ್ಣನು ನಗು ನಗುತ್ತಾ ಬಂದು ತನ್ನೊಂದಿಗೆ ಆಗಮಿಸಿದ್ದ ಋಷಿ ವರೇಣ್ಯರತ್ತ ನೋಡಿದನು. ಅವರೆಲ್ಲರೂ ಸತ್ಕರಿಸಲ್ಪಟ್ಟು ನಿಯೋಜಿತ ಪೀಠಗಳಲ್ಲಿ ಉಪಸ್ಥಿತರಾದ ಬಳಿಕ ತಾನು ತನಗಾಗಿ ಸಿದ್ಧವಾಗಿದ್ದ ಉಚಿತಾಸನದಲ್ಲಿ ವಿರಾಜಮಾನನಾದನು. ದುಶ್ಯಾಸನನು ಸಾತ್ಯಕಿಗೂ ಉತ್ತಮವಾದ ಆಸನವಿತ್ತು ಸತ್ಕರಿಸಿದನು. ಶ್ರೀಕೃಷ್ಣನ ಸರತಿಯಲ್ಲಿ ಕರ್ಣ ದುರ್ಯೋಧನರು ಏಕಾಸನದಲ್ಲಿ ಮಂಡಿತರಾದರು. ವಿದುರನು ಕೃಷ್ಣನ ಒತ್ತಿನ ಆಸನದಲ್ಲಿ ಕುಳಿತುಕೊಂಡನು. ಕೃಷ್ಣಾಜಿನ ಹೊದಿಸಿದ್ದ ಚಿನ್ನದ ಪೀಠದಲ್ಲಿ ಕುಳಿತಿದ್ದ ಶ್ರೀಕೃಷ್ಣ ಕುರು ಆಸ್ಥಾನದಲ್ಲಿ ಕುಂದಣದ ನೀಲಮಣಿಯಂತೆ ಶೋಭಿಸುತ್ತಿದ್ದನು. ಸಭೆ ಕೌತುಕಪ್ರದವೂ, ಗಂಭೀರವೂ ಆಗಿ ಮೌನವಾಗಿತ್ತು. ಎಲ್ಲರೂ ಕೃಷ್ಣನನ್ನು ತದೇಕ ಚಿತ್ತದಿಂದ ಏಕಾಗ್ರ ದೃಷ್ಟಿಯಲ್ಲಿ ನೋಡುತ್ತಿದ್ದಾರೆ.
ಕ್ಷಣ ಹೊತ್ತು ನೀರವತೆ ಸಭೆಯಲ್ಲಿ ಆವರಿಸಿದಾಗ ಕೃಷ್ಣನೇ ಮೌನ ಮುರಿದು ಮುಗುಳ್ನಗುವನ್ನು ಸೂಸಿ ಗಂಭೀರ ನಿಸ್ವನದಂತೆ ಅಲ್ಲಿ ನೆರೆದಿದ್ದ ಎಲ್ಲರಿಗೂ ಕೇಳಿಸುವಷ್ಟು ಧ್ವನಿಯಲ್ಲಿ ” ಮಹಾರಾಜ ಧೃತರಾಷ್ಟ್ರ, ಇಂದಿನ ಸಭೆಯಲ್ಲಿ ತಪೋಧನರೂ, ಜ್ಞಾನಸಂಪನ್ನರೂ ಆಗಿರುವ ನಾರದ, ಕಶ್ಯಪ, ಕಣ್ವ, ಶ್ವೇತಕೇತಾದಿ ಮಹಾ ಋಷಿಗಳು, ಭೀಷ್ಮಾದಿ ಕುರು ವೃದ್ದರೂ, ದ್ರೋಣ ಕೃಪಾದಿ ಗುರು ಜನರೂ, ಅಲ್ಲದೆ ರಾಜ ಮಹರಾಜರು ನೆರೆದಿದ್ದಾರೆ. ಇಲ್ಲಿ ನಡೆಯಲಿರುವ ಕಾರ್ಯ ಕಲಾಪಗಳ ಕುರಿತಾಗಿ ಜಗತ್ತು ಕುತೂಹಲದಿಂದ ಕಾಯುತ್ತಿದೆ. ಮಾತ್ರವಲ್ಲ ಲೋಕವೆಲ್ಲವೂ ಯಾವುದೊ ಒಂದು ಮಹತ್ತರ ಆಸೆಯನ್ನಿರಿಸಿ ನಿರೀಕ್ಷೆಯಲ್ಲಿದೆ. ನಿನ್ನ ಮಕ್ಕಳಾದ ಕೌರವರಿಗೂ, ನಿನ್ನ ಸೋದರ ಪಾಂಡುವಿನ ಪುತ್ರರಾದ ಪಾಂಡವರಿಗೂ ಕಲಹವುಂಟಾಗಿರುವುದನ್ನು ಎಲ್ಲರೂ ಬಲ್ಲರು. ಯಾಕೆ ಹಾಗಾಗಿದೆಯೊ? ಆ ದುರ್ವಿಧಿಯನ್ನು ನೆನೆಸಿಕೊಂಡು ನಾವೆಲ್ಲರೂ ಮರುಗಬೇಕಾಗಿದೆ. ಕುರುಕುಲವು ವಿದ್ಯೆ, ಶೀಲ, ಗುಣಗಳಿಂದ ರಾಜಕುಲಗಳಲ್ಲಿ ಪ್ರಸಿದ್ದವಾದುದು. ಕೃಪೆ, ಅನುಕಂಪ, ಅಹಿಂಸೆ, ಋಜುತ್ವ, ತಾಳ್ಮೆ, ಸತ್ಯ ಇವುಗಳೆಲ್ಲ ಕುರುವಂಶದ ವಿಶೇಷ ಲಕ್ಷಣಗಳು. ಇಂತಹ ಚಂದ್ರಾನ್ವಯದಲ್ಲಿ ದುರ್ಯೋಧನಾದಿ ನಿನ್ನ ಪುತ್ರರು ಯಾಕೆ ಧರ್ಮ ಪಥ ತೊರೆದು ವ್ಯವಹರಿಸುತ್ತಿದ್ದಾರೆ. ಕ್ರೂರಿಗಳಂತೆ ವರ್ತಿಸಿ, ಲೋಭ ಪರವಶರಾಗಿ ನಡೆದ ನಡತೆಯಿಂದಾಗಿ ಆತ್ಮೀಯರಾದ ಸೋದರ ಬಂಧುಗಳಾದ ಪಾಂಡವರ ಜೊತೆ ಅನಾರ್ಯರಾಗಿ ವ್ಯವಹರಿಸಿ ವೈರತ್ವವನ್ನು ಬೆಳಸಿಕೊಂಡಿದ್ದಾರೆ. ಇಂತಹ ಅನ್ಯಾಯವನ್ನು ತಡೆದು ನಿವಾರಿಸುವ ಶಕ್ತಿ ಸಂಪನ್ನರಾದ ಹಿರಿಯರು ಹಿಂದುಳಿದ ಕಾರಣದಿಂದಾಗಿ ಅದು ಬೆಳೆದು ಬೃಹದಾಕಾರ ತಳೆದಿದೆ. ಇನ್ನಾದರೂ ಅದನ್ನು ಸರಿಪಡಿಸಿ ಶಾಂತಗೊಳಿಸದಿದ್ದರೆ ಪರಿಣಾಮ ಅತಿ ಕೆಟ್ಟ ಸ್ಥಿತಿ ತಲುಪುವುದು. ಆ ವಿನಾಶಕಾರಿ ವಿಪತ್ತಿನಿಂದ ಪಾರಾಗುವುದು ನಂತರದ ಕಾಲದಲ್ಲಿ ಕಷ್ಟ ಸಾಧ್ಯವೇ ಹೌದು. ಈ ಕುರಿತಾಗಿ ವಿವೇಚಿಸಬೇಕಾದ ಹಿರಿಯರು ಉಪೇಕ್ಷಿಸಿದರೆ ಭೂಮಂಡಲದ ವೀರ ಕುಲಗಳೆಲ್ಲ ಸರ್ವನಾಶವಾದೀತು. ಅದಕ್ಕಿಂತಲೂ ಭೀಕರತೆ ಸೃಷ್ಟಿಯಾದೀತು. ತಾಳ್ಮೆಗೂ ಒಂದು ಮಿತಿ ಇದೆ. ಅದನ್ನೆಲ್ಲಾ ನೀನು ಸದ್ಯದ ಸ್ಥಿತಿಯಲ್ಲಿ ಅರ್ಥೈಸಿಕೊಂಡು ಹಸ್ತಿನಾವತಿಯ ಪರಮಾಧಿಕಾರಿಯಾಗಿ, ಕುಲದ ಸಂರಕ್ಷಣೆಯ, ಕ್ಷಾತ್ರ ವಂಶಗಳ ಪಾಲನೆಯ ಹೊಣೆ ಹೊತ್ತು ವಿವೇಚಿಸಬೇಕು. ನೀನೇನೂ ತಿಳಿಯದವನಲ್ಲ. ತಿಳಿದವರು ನಿನಗೆ ಸಾಕಷ್ಟು ಹೇಳಿದ್ದಾರಾದರೂ ನೀನೇಕೆ ಔದಾಸೀನ್ಯವನ್ನು ತಳೆದಿರುವೆ?” ಎಂದು ಪ್ರಶ್ನಿಸಿದನು.
ಮುಂದುವರಿಯುವುದು…













