28.2 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 288

ಭರತೇಶ ಶೆಟ್ಟಿ,ಎಕ್ಕಾರ್

ಶ್ರೀಕೃಷ್ಣ ಪರಮಾತ್ಮ ಮಹತ್ಕಾರ್ಯದ ಹೊಣೆ ಹೊತ್ತು ಹಸ್ತಿನಾವತಿಯತ್ತ ತೆರಳುತ್ತಿದ್ದಾನೆ. ಸಾಗುತ್ತಾ “ಶಾಲಿ ಭವನ” ಎಂಬ ಪ್ರದೇಶಕ್ಕೆ ಬಂದು ತಲುಪಿದನು. ಅಲ್ಲಿ ನಾರದ, ಪರಶುರಾಮ, ಶ್ವೇತಕೇತು, ಕಶ್ಯಪ, ಕಣ್ವ, ಭರದ್ವಾಜ ಮೊದಲಾದ ಮಹರ್ಷಿಗಳ ಬಳಗ ಜೊತೆಯಾಗಿ ವಾಸುದೇವನ ಪ್ರತೀಕ್ಷೆಯಲ್ಲಿದ್ದರು. ಅದ್ಬುತವಾದ ಪ್ರಭೆಯಿಂದ ಕಂಗೊಳಿಸುವ ಮಹಿಮಾನ್ವಿತ ತಪೋನಿಧಿಗಳನ್ನು ಕಂಡೊಡನೆ ಕೃಷ್ಣ ರಥ ನಿಲ್ಲಿಸಿ, ಕೆಳಗಿಳಿದು ಅವರೆಲ್ಲರಿಗೂ ಪ್ರಣಾಮಗಳನ್ನು ಸಲ್ಲಿಸಿದನು. ಎಲ್ಲರ ಯೋಗಕ್ಷೇಮವನ್ನು ವಿಚಾರಿಸಿದನು. ಆಗ ಋಷಿವರ್ಯರು ಪರಶುರಾಮರನ್ನು ಮುಂದಕ್ಕೆ ಕಳುಹಿಸಿ ತಮ್ಮ ಇಚ್ಚೆ ತಿಳಿಸಲು ಹೇಳಿದರು. ಅಂತೆಯೆ ಮುಂದೊತ್ತಿ ಬಂದ ಭಾರ್ಗವರು “ಶ್ರೀ ಕೃಷ್ಣಾ, ಇಲ್ಲಿ ನೆರೆದಿರುವವರೆಲ್ಲಾ ಮಹಾನ್ ತಪಸ್ವಿಗಳು. ಹಿಂದೆ ದೇವತೆಗಳಿಗೂ ರಾಕ್ಷಸರಿಗೂ ನಡೆದ ಅದೆಷ್ಟೋ ಮಹಾಯುದ್ದಗಳನ್ನು ನೋಡಿದವರೇ ಆಗಿದ್ದಾರೆ. ಆದರೂ ಅವರಿಗೆ ಈಗಿನ ಸಂಧಿಕಾಲದಲ್ಲಿ ರಾಜ – ಮಹಾರಾಜರುಗಳು, ಭೀಷ್ಮ – ದ್ರೋಣಾದಿಗಳಿಂದಲೂ ತುಂಬಿರುವ ಹಸ್ತಿನಾವತಿಯ ರಾಜಸಭೆಯಲ್ಲಿ ನೀನು ರಾಯಭಾರಿಯಾಗಿ ನಡೆಯಲಿರುವ ಸಂಧಾನ ಮಾತುಕತೆಗಳನ್ನೂ, ನಿನ್ನ ವಿಶೇಷ ದರ್ಶನವನ್ನೂ ಪ್ರತ್ಯಕ್ಷವಾಗಿ ಕೇಳಿ – ನೋಡಿ ಕೃತಾರ್ಥರಾಗುವ ಮಹದಾಸೆಯಾಗಿದೆ. ಕುತೂಹಲದಿಂದ ಜೊತೆಯಾಗಿರುವ ನಾವೆಲ್ಲರೂ ನಿನಗೆ ಯಶಸ್ಸನ್ನು ಹರಸಿ ಜೊತೆಯಾಗಲು ಇಲ್ಲಿ ಒಟ್ಟಾಗಿದ್ದೇವೆ” ಎಂದರು. ಶ್ರೀ ಕೃಷ್ಣನು “ಹಾಗೆಯೇ ಆಗಲಿ – ತಮ್ಮೆಲ್ಲರ ಅನುಗ್ರಹ ನಿರಂತರವಾಗಿ ನನ್ನ ಮೇಲಿರಲಿ” ಎಂದು ಹೇಳಿ ಜೊತೆಯಾಗಿ ಮುಂದೆ ಹೊರಟರು.

ಊರಲ್ಲೆಲ್ಲಾ ಈ ಸುದ್ದಿ ಹಬ್ಬಿ ಪ್ರಜಾಜನರು ಊರ ಪ್ರಮುಖರ, ಪೂಜ್ಯರಾದ ಬ್ರಾಹ್ಮಣರ ಜೊತೆ ಸೇರಿಕೊಂಡು ಶ್ರೀ ಕೃಷ್ಣನನ್ನು ಇದಿರ್ಗೊಳ್ಳಲು ಸಿದ್ದರಾದರು. ಸಾಗಿ ಬಂದ ಕೃಷ್ಣನನ್ನು, ಜೊತೆಗಿರುವ ಸರ್ವರನ್ನೂ ಸ್ವಾಗತಿಸಿ, ಸತ್ಕರಿಸಿದರು. ವಾಸುದೇವನೂ ಅವರೆಲ್ಲರನ್ನೂ ಆದರದಿಂದ ಸ್ವೀಕರಿಸುತ್ತಾ ಮನ್ನಿಸತೊಡಗಿದನು. ಭಕ್ತಿಯ ಪರಾಕಾಷ್ಟೆಯಂತೆ ಆ ಜನರು ಕೃಷ್ಣನನ್ನು ತಮ್ಮ ಮನೆಗಳಿಗೆ ಒಮ್ಮೆ ಬಂದು ಪಾವನಗೊಳಿಸಬೇಕೆಂದು ಅಂಗಾಲಾಚಿದಾಗ, ‌ಭಕ್ತವತ್ಸಲ ಮುರಳೀಧರ ಎಲ್ಲರ ಮನೆ ಮನಗಳನ್ನು ಹೊಕ್ಕು ಸಂತಸ ತುಂಬಿದನು. ಅಲ್ಲಿ ಭಕ್ತರ ಕಾಣಿಕೆಯ ಮಹಾಪೂರವೇ ಹರಿದು ಬಂತು. ಹೂವಿನ ಹಾರಗಳನ್ನು ಹಾಕಿ ಅಕ್ಕಿಯ ಸೇಸೆಯನ್ನೂ ತಳಿದರು. ಬ್ರಾಹ್ಮಣರು ದಿವ್ಯ ಮಂತ್ರಗಳಿಂದ ಸ್ತುತಿಸಿ ಮಧು ಪರ್ಕಾದಿಗಳಿಂದ ಆರಾಧಿಸಿದರು. ಸಹೃದಯಿ, ಸಚ್ಚಿದಾನಂದ, ಅಚ್ಯುತ, ನಿತ್ಯ ಸಂತೋಷಿ, ಸದಾನಂದ, ಮುಕುಂದ ಎಲ್ಲರನ್ನೂ – ಎಲ್ಲವನ್ನೂ ಮುದದಿಂದ ಸ್ವೀಕರಿಸಿ ಮೃದು ವಾಕ್ಯಗಳಿಂದ ಕುಶಲೋಪಚರಿ ವಿಚಾರಿಸಿದನು. ಭಕ್ತ ಪ್ರಜಾವರ್ಗಕ್ಕೆ ಅಂದು ವಿಶೇಷ ಹಬ್ಬವೇ ಆಗುತ್ತಿರುವಂತೆ ಸಂತೋಷ ಸಡಗರ ಮನಮಾಡಿತ್ತು. ಶ್ರೀ ಕೃಷ್ಣನು ಅವರೆಲ್ಲರನ್ನೂ ತನ್ನ ಶಿಬಿರದತ್ತ ಕರೆದೊಯ್ದನು. ಅಲ್ಲಿ ಎಲ್ಲರೂ ಜೊತೆಯಾಗಿ ಮೃಷ್ಟಾನ್ನ ಭೋಜನವನ್ನು ಸವಿದರು. ಆನಂತರ ಎಲ್ಲರನ್ನೂ ಅಭಿನಂದಿಸುತ್ತಾ, ಅಲ್ಲಿಂದ ಪ್ರಯಾಣ ಮುಂದುವರಿಸಿ ಸೂರ್ಯಸ್ತಮಾನದ ಸಮಯ ಇಂದ್ರಪ್ರಸ್ಥಕ್ಕೆ ಬಂದು ಮುಟ್ಟಿದರು. ಹೊತ್ತು ಮೀರಿದ ಕಾರಣ ಇಲ್ಲೇ ವಿಶ್ರಾಂತರಾಗಿ ರಾತ್ರಿಯ ಹೊತ್ತು ಕಳೆದು ನಾಳೆ ಗಜಪುರದತ್ತ ಸಾಗುವ ನಿರ್ಣಯ ಮಾಡಿ ತಂಗಿದರು.

ಶ್ರೀ ಕೃಷ್ಣ ಇಂದ್ರಪ್ರಸ್ಥ ತಲುಪಿದ ಕೂಡಲೆ ಶೀಘ್ರವಾಗಿ ಸಾಗಬಲ್ಲ ಕುದುರೆ ಸವಾರರು ದುರ್ಯೋಧನನಿಗೆ ಸುದ್ಧಿ ತಿಳಿಸಲು ಹಸ್ತಿನಾಪುರದತ್ತ ಧಾವಿಸಿದರು. ಮಹಾರಾಜ ಧೃತರಾಷ್ಟ್ರನಿಗೂ – ದುರ್ಯೋಧನನಿಗೂ ಕೃಷ್ಣಾಗಮನದ ವಿಚಾರ ತಿಳಿಯಿತು. ತಕ್ಷಣ ಹಸ್ತಿನೆಯ ನಗರದ ಬೀದಿ ಬೀದಿಯಲ್ಲಿ ಡಂಗುರ ಸಾರಿಸಿದರು “ನಾಳೆ ಶ್ರೀ ಕೃಷ್ಣ ಹಸ್ತಿನಾವತಿಗೆ ಬರುತ್ತಾನೆ. ಅತ್ಯಂತ ವೈಭವೋಪೇತವಾದ ಸ್ವಾಗತ – ಸತ್ಕಾರವನ್ನು ನಾವು ಮಾಡಬೇಕು. ಯಾರ ಮನೆಗೆ ಹೊಕ್ಕರೂ ಅಲ್ಲಿ ಬಹುವಿಧ ಭೋಜ್ಯ, ಭಕ್ಷ್ಯ, ಪೇಯ ಸಿದ್ಧವಾಗಿರಬೇಕು. ನಗರ ಅಲಂಕಾರ, ಶೃಂಗಾರ, ತೋರಣಾದಿ ಮಂಗಳ ವಸ್ತುಗಳು, ಹೂವಿನ ಅಲಂಕಾರ, ಸ್ವಾಗತ ಗೋಪುರಗಳ ವ್ಯವಸ್ಥೆಯಾಗಲಿ.” ಎಂದು ಸಿದ್ಧತೆ ಸಮರೋಪಾದಿಯಲ್ಲಿ ಆರಂಭಿಸಿದರು. ದುರ್ಯೋಧನನ ಮಗಳನ್ನು ಶ್ರೀ ಕೃಷ್ಣನ ಮಗನಿಗೆ ಮದುವೆಯಾಗಿದೆ. ಆ ಸಂಬಂಧದಿಂದ ಬರುತ್ತಿರುವ ವಾಸುದೇವ ಬೀಗನೂ ಹೌದು. ಕೃಷ್ಣನನ್ನು ಕರೆ ತರುವುದಕ್ಕಾಗಿ ಬಾಹ್ಲಿಕ ದೇಶದ ಕಪ್ಪು ವರ್ಣದ ಉತ್ಕೃಷ್ಟ ನಾಲ್ಕು ನಾಲ್ಕು ಕುದುರೆಗಳನ್ನು ಬಿಗಿದ ಹದಿನಾರು ಬಂಗಾರದ ರಥಗಳನ್ನೂ ಸಿದ್ಧಪಡಿಸಿದನು. ಹಾಗೆಯೆ ಸ್ವಾಗತಿಸಲು ನೂರು ಮಂದಿ ದಾಸ ದಾಸಿಯರಿಗೂ ಆದೇಶ ನೀಡಿದನು. ಆನೆಗಳನ್ನೂ, ಪರ್ವತ ಪ್ರದೇಶದ ನುಣುಪಾದ ಕೂದಲಿನ ಸಾವಿರ ಮೇಕೆಗಳನ್ನೂ, ಹಗಲು ರಾತ್ರಿ ಸ್ವಯಂ ಪ್ರಭೆಯಿಂದ ಹೊಳೆಯಬಲ್ಲ ನಿರ್ಮಲವಾದ ರತ್ನಗಳನ್ನೆಲ್ಲ ಕಾಣಿಕೆಯಾಗಿ ನೀಡಲು ವ್ಯವಸ್ಥೆ ಮಾಡಿದನು. ದುರ್ಯೋಧನನ ಅರಮನೆಗಿಂತಲೂ ದುಶ್ಯಾಸನನದ್ದು ಉತ್ತಮವಾದದ್ದು. ಹಾಗಾಗಿ ಅದನ್ನು ಮತ್ತಷ್ಟು ಅಲಂಕರಿಸಿ ಶ್ರೀ ಕೃಷ್ಣನ ಉಳಿಯುವಿಕೆಗಾಗಿ ಸಜ್ಜುಗೊಳಿಸಿದರು. ಹೀಗೆ ಕೃಷ್ಣನನ್ನು ಸ್ವಾಗತಿಸಲು ಹಸ್ತಿನೆಯ ಕಣ ಕಣವೂ ಪಾದರಸದಂತೆ ಕ್ರಿಯಾಶೀಲವಾಗಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page