31.4 C
Udupi
Tuesday, May 6, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 183

ಭರತೇಶ ಶೆಟ್ಟಿ ,ಎಕ್ಕಾರ್

ಇತ್ತ ಪಾಂಡವರು ಕಾಮ್ಯಕಾವನ ಪ್ರವೇಶಿಸಿದ್ದಾರೆ. ಪತ್ನಿ ದ್ರೌಪದಿ, ಗುರು ಧೌಮ್ಯರು, ಅವರ ಶಿಷ್ಯರ ಜೊತೆ ಕಾಮ್ಯಕಾವನದಲ್ಲಿ ವನವಾಸ ಆರಂಭಿಸಿದ್ದಾರೆ. ಹೀಗೆ ಕೆಲದಿನಗಳು ಕಳೆದಾಗ ಅಲ್ಲಿ ಒಂದು ಸಮಸ್ಯೆ ತಲೆದೋರಿತು. ಕಾಡಿನ ಸುತ್ತಮುತ್ತಲೆಲ್ಲಾ ತಿರುಗಿ ಹಣ್ಣು ಹಂಪಲು, ಗೆಡ್ಡೆಗಳನ್ನು ಸಂಗ್ರಹಿಸಿ ಆಹಾರದ ವ್ಯವಸ್ಥೆ ಮಾಡಿಕೊಳ್ಳುತ್ತಿದ್ದರಾದರೂ ಆಹಾರದ ಕೊರತೆ ಎದುರಾಯಿತು. ಚಕ್ರವರ್ತಿ ಅಭಿಷಿಕ್ತ ದೊರೆ ಧರ್ಮರಾಯನಿಗೆ ಪ್ರಜಾಪರಿಪಾಲನೆ ಆದ್ಯ ಕರ್ತವ್ಯ. ಕಾಡಾದರೂ, ನಾಡಾದರೂ ತನ್ನವರ ಪಾಲನೆ ಆತನಿಗೆ ಅನಿವಾರ್ಯವಾಗಿ ಈಗ ಚಿಂತೆಗೊಳಗಾಗಿದ್ದಾನೆ. ತಮ್ಮ ಜೊತೆಗಿರುವ ಧೌಮ್ಯರ ಶಿಷ್ಯರು, ಪ್ರಜೆಗಳ ಹಸಿವೆಗೆ ಉತ್ತರವಾಗುವ ಹೊಣೆ ಆತನದ್ದಾಗಿತ್ತು.

ಗುರುಗಳಾದ ಧೌಮ್ಯರು ಧರ್ಮರಾಯನ ಮನದ ಚಿಂತೆ ಅರಿತು ಆತನನ್ನು ಕರೆದು ಸಮಾಲೋಚನೆಗೆ ತೊಡಗಿದರು. “ಧರ್ಮರಾಜಾ, ನೀನು ಎಲ್ಲೆ ಇದ್ದರೂ ಪ್ರಜಾಪರಿಪಾಲಕನೆ ಹೌದು. ಹಾಗಾಗಿ ಇಂದು ತಲೆದೋರಿರುವ ಸಮಸ್ಯೆಗೆ ಪರಿಹಾರವನ್ನು ಹುಡುಕಬೇಕಾಗಿದೆ. ನಿಮ್ಮ ಪುರೋಹಿತನಾಗಿ, ನೀನಿರುವ ಸ್ಥಳವನ್ನೆ ಪುರವಾಗಿ ಅದರ ಹಿತ ಬಯಸಬೇಕಾದದ್ದು ನನ್ನ ಕರ್ತವ್ಯವೂ ಹೌದು. ಓಂಕಾರ ಪ್ರಣವ ಮಂತ್ರ ಅತ್ಯಂತ ಶ್ರೇಷ್ಟವೂ, ಇಷ್ಟ ಸಿದ್ಧಿ ಪ್ರದಾಯಕವೂ, ತೇಜೋಶಕ್ತಿ ಸಂಪನ್ನವೂ ಆಗಿದೆ. ಸೂರ್ಯನಾರಾಯಣನು ತೇಜೊಪುಂಜ ಶಕ್ತಿ ಸ್ವರೂಪನಾಗಿದ್ದು ಪ್ರಣವ ಮೂರ್ತ ಸ್ವರೂಪನು ಆಗಿದ್ದಾನೆ. ರಾಜನು ಕೂಡ ನಾರಾಯಣ ಅಂಶವೆಂದೆ ಶಾಸ್ತ್ರ ಸಮ್ಮತ ವಿಚಾರ. ನಿನಗೆ ಶ್ರೇಷ್ಟವಾದ, ಇಷ್ಟಾರ್ಥಪ್ರದವಾದ ಬೀಜ ಮಂತ್ರದ ದೀಕ್ಷೆ ಉಪದೇಶಿಸುವೆ. ಸೂರ್ಯನಾರಾಯಣನನ್ನು ಅಧಿದೇವತೆಯಾಗಿ ನಿತ್ಯಾನುಷ್ಠಾನದ ಜೊತೆ ಧ್ಯಾನಿಸಿದೆ ಎಂದಾದರೆ ನಮಗೊದಗಿದ ಸಮಸ್ಯೆಗೆ ಜಗಚಕ್ಷುವಾದ ಸೂರ್ಯನಾರಾಯಣನಿಂದ ಪರಿಹಾರ ಸಾಧ್ಯ” ಎಂದು ಸೂಚಿಸಿದರು. ಅಂತೆಯೇ ಬ್ರಾಹ್ಮಿ ಮುಹೂರ್ತದಲ್ಲಿ ಶುಚಿರ್ಭೂತನಾಗಿ ಧರ್ಮರಾಯ ಬಂದನು. ಗುರುಗಳಾದ ಧೌಮ್ಯರು ದೀಕ್ಷಾ ಮಂತ್ರ ಉಪದೇಶಿಸಿದರು. ಬಳಿಕ ತಪೋ ನಿರತನಾದ ಯುಧಿಷ್ಟಿರ ಆಹೋರಾತ್ರಿ ಕೆಲದಿನಗಳ ಕಾಲ ದ್ವಾದಶಾದಿತ್ಯರ ಉಪಾಸನೆ ಮಾಡಿದನು. ಪ್ರಸನ್ನನಾದ ಸೂರ್ಯದೇವ ಅಭೀಷ್ಟವನ್ನು ಕೇಳಿ ತಿಳಿದು “ಬಂಗಾರದ ಪಾತ್ರೆ” ಯೊಂದನ್ನು ಕರುಣಿಸಿದನು. ಅದನ್ನು ದ್ರೌಪದಿಗೆ ನೀಡಲು ಆದೇಶಿಸಿ, ನಿಯಮ ಪ್ರಕಾರ ಪೂಜಿಸಿದರೆ ಬಯಸಿದ ಖಾದ್ಯ ಆಹಾರಗಳನ್ನು ಒದಗಿಸುತ್ತದೆ. ಬಳಸಿದಷ್ಟೂ ಮುಗಿದು ಕ್ಷಯವಾಗದ ” ಅಕ್ಷಯ ಪಾತ್ರೆ ” ಯಿದು. ಎಲ್ಲರಿಗೂ ಉಣ ಬಡಿಸಿ, ಯಾರೂ ಉಣ್ಣಲು ಉಳಿದಿಲ್ಲ ಎಂದು ಖಾತ್ರಿಯಾದ ಬಳಿಕವಷ್ಟೆ ದ್ರೌಪದಿ ಉಣ್ಣಬೇಕು. ಆಕೆಯ ಊಟವಾಗಿ ಸಂತೃಪ್ತಳಾದ ಬಳಿಕ ಆಹಾರ ಸಮಾಪ್ತಿಯಾಗುತ್ತದೆ. ದಿನಕ್ಕೊಂದು ಭಾರಿ ಮಾತ್ರ ವಿಧಿ ಪ್ರಕಾರ ಪೂಜಿಸಿ ಬಳಸಬೇಕು. ನಿಮ್ಮ ವನವಾಸ ಪೂರ್ತಿಯಾಗುವವರೆಗೂ ಈ ಕನಕ ಪಾತ್ರೆ ನಿಮಗೆ ಬೇಕು ಬೇಕಾದ ಖಾದ್ಯ, ಭೋಜ್ಯ, ಪೇಯ ಪೂರೈಸುತ್ತಿರುತ್ತದೆ. ಹೀಗೆ ನಿಯಮ ನೀತಿ ವಿವರಿಸಿ, ಅನುಗ್ರಹಿಸಿ ಸೂರ್ಯದೇವ ಅಂತರ್ಧಾನನಾದ.

ಅಂದಿನಿಂದ ಆಹಾರ ಕೊರತೆಯ ಸಮಸ್ಯೆ ಪರಿಹಾರವಾಗಿ ಎಲ್ಲರೂ ಸಂತೋಷಗೊಂಡರು. ಅದೆ ಪ್ರದೇಶದಲ್ಲಿ ಪರ್ಣಕುಟೀರಗಳನ್ನು ನಿರ್ಮಿಸಿ ಧೌಮ್ಯರ ಪೌರೋಹಿತ್ಯದಲ್ಲಿ ಸ್ಥಳ ಶುದ್ಧಿ, ವಾಸ್ತು ಪೂಜೆಯಾದಿ ವಿಧಿ ಪೂರೈಸಿ ಗೃಹ ಪ್ರವೇಶ ಮಾಡಿದರು. ಅದ್ದೂರಿಯ ಮೃಷ್ಟಾನ್ನ ಭೋಜನವೂ ರಾಜವೈಭವದಂತೆ ನೆರವೇರಿತು.

ರಾತ್ರಿ ಎಲ್ಲರೂ ಮಲಗಿದ್ದಾರೆ. ಆದರೆ ಭೀಮನಿಗೆ ಮಾತ್ರ ನಿದ್ದೆ
ಬರುತ್ತಿಲ್ಲ. ಆ ಕಾಡಿನೊಳಗೆ ವಾಸವಾಗಿದ್ದ ಕಿಮ್ಮೀರ ಎಂಬ ಬಲಾಢ್ಯ ರಾಕ್ಷಸನಿಗೆ ಮನುಷ್ಯರ ಮೈಯ ವಾಸನೆ ಮೂಗಿಗೆ ಬಡಿದು ಆತನನ್ನು ಇವರಿದ್ದ ನಿವಾಸದತ್ತ ಸೆಳೆದು ತಂದಿದೆ.

ಮುಂದುವರಿಯುವುದು

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page