28.3 C
Udupi
Thursday, April 30, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 16

ಭರತೇಶ್ ಶೆಟ್ಟಿ, ಎಕ್ಕಾರ್

ಚಾಚಿದ ಹರಿಯ ಕರದತ್ತ ಬ್ರಹ್ಮಕಪಾಲ ನೆಗೆಯಿತು. ಕ್ರಿಯೆ ಪ್ರತಿಕ್ರಿಯೆಯ ಚತುರನಾದಂತಹ ಪಾಲನಾಕರ್ತ ಶ್ರೀಹರಿ ಜಾಣ್ಮೆಯಿಂದ ತನ್ನ ಕೈಯನ್ನು ಹಿಂದಕ್ಕೆ ಸೆಳೆದು ಕೊಂಡನು. ಜಿಗಿದ ಕಪಾಲ ದೊಪ್ಪೆಂದು ಭೂಮಿಗೆ ಬಿತ್ತು. ಬಿದ್ದರೂ ಸುಮ್ಮನಿರದೆ ಭೂಮಿಯ ಗಂಧವನ್ನೇ ಹೀರತೊಡಗಿತು. ಕಪಾಲದ ಈ ಕೃತ್ಯದಿಂದ ಅಪಾರ ಹಾನಿ ಸಂಭವಿಸೀತು ಎನ್ನುವುದನ್ನು ಮನಗಂಡ ಶ್ರೀ ಹರಿ, ಕಪಾಲವನ್ನು ತಡೆದು ಕಾಲಾಂತರದಲ್ಲಿ ನಿನಗೆ ಸಂಪೂರ್ಣ ತೃಪ್ತಿಯಾಗುವಷ್ಟು ರಕ್ತ ತರ್ಪಣವನ್ನು ಒದಗಿಸಿ ಕೊಡುತ್ತೇನೆ ಎಂದು ವಾಗ್ದಾನ ನೀಡಿ ಶಾಂತಗೊಳಿಸಿದ. ಕಪಾಲ ತೃಪ್ತಿಯಾಗುವಷ್ಟರ ಮಟ್ಟಿನ ರಕ್ತಪಾತದ ಸಂಕಲ್ಪ ಜಗನ್ನಿಯಾಮಕ ಹರಿಯ ಚಿತ್ತದಲ್ಲಿ ಸಂಕಲ್ಪಗೊಂಡು ಈಗಲೇ ಮೂರ್ತ ಸ್ವರೂಪ ತಳೆದಿದೆ ಎಂದಾಯಿತಲ್ಲವೆ.

ಹೀಗಿರಲು ಅತ್ರಿ ಮಹರ್ಷಿಯ ಪುತ್ರ ಚಂದ್ರನು ಗುರುಗಳಾದ ಬ್ರಹಸ್ಪತಿ ಆಚಾರ್ಯರ ಗುರು ಮಠದಲ್ಲಿ ವಿದ್ಯಾಭ್ಯಾಸ ಮಾಡಿ, ಸಕಲ ವಿದ್ಯಾ ಪಾರಂಗತನಾಗಿದ್ದನು. ಮಾತ್ರವಲ್ಲ ದೇವಾನುಗ್ರಹದಿಂದ ಗ್ರಹಾಧಿಪತ್ಯವನ್ನೂ ಪಡೆದಾಗಿತ್ತು. ಮಹಾತ್ಮ ಅಂಗೀರಸ ಮುನಿಯ ಪುತ್ರ ಬ್ರಹಸ್ಪತಿ ಆಚಾರ್ಯರು ತಮ್ಮ ಜ್ಞಾನ ಸಂಪನ್ನತೆಯಿಂದ ಕೇವಲ ತನ್ನ ಶಿಷ್ಯರಿಗೆ ಬೋಧಿಸುವ ಗುರು ಮಾತ್ರ ಆಗಿರದೆ, ದೇವ ಗುರು ಸ್ಥಾನವನ್ನೂ ಅಲಂಕರಿಸಿರುವ ಮಹಿಮಾನ್ವಿತರಾಗಿದ್ದರು . ಹೀಗಿರಲೊಂದು ದಿನ ಬ್ರಹಸ್ಪತಿ ಆಚಾರ್ಯರು ಕಾರ್ಯ ಕಾರಣದಿಂದ ಜವಾಬ್ದಾರಿಯುತರಾಗಿ ಆಶ್ರಮದಿಂದ ದೂರ ಸಾಗಿದ್ದರು. ಏಕಾಂತದಲ್ಲಿದ್ದ ಆಚಾರ್ಯರ ಪತ್ನಿ “ತಾರೆ” ವಿರಹ ಸಂತ್ರಸ್ತೆಯಾಗಿ ವೇದನೆಯ ಪರಿಹಾರಕ್ಕಾಗಿ ವಿಹಾರ ಸ್ನಾನಗೈಯಲು ಸರೋವರದತ್ತ ಬಂದಳು. ಬರುತ್ತಾ ಆಕೆಗೆ ಆಶ್ರಮದಲ್ಲಿ ವಿದ್ಯಾರ್ಜನೆಗೈದು ಹೋಗಿರುವ ಚಂದ್ರನ ಕೋಮಲ ಕಾಂತಿ, ಲೋಕಮೋಹಕ ರೂಪ ಸ್ಮರಣೆಗೆ ಬಂತು. ಏನೋ ಅಪ್ರಕಟಿತ ಚಾಂಚಲ್ಯ ಕಾಮನೆಗಳು ಉತ್ಪತ್ತಿಯಾಗತೊಡಗಿದವು. ಅದೃಷ್ಟವೋ – ಕಾಕತಾಳಿಯವೋ ಅದೇ ಸಮಯ ಚಂದ್ರನೂ ಆ ಸರೋವರದತ್ತ ಆಗಮಿಸಿದನು. ನಿಸರ್ಗದ ಮೈ ನವಿರೇಳಿಸುವ ಸೌಂದರ್ಯದ ಮಧ್ಯೆ ಇವರಿಬ್ಬರು ಒಬ್ಬರನ್ನೊಬ್ಬರು ನೋಡುತ್ತಿದ್ದರೂ ಇವರನ್ನು ನೋಡುವರ್ಯಾರು ಅಲ್ಲಿರಲಿಲ್ಲ. ಅಂದರೆ ಅಲ್ಲಿ ಏಕಾಂತ ಸಿದ್ಧವಾಗಿತ್ತು. ದಿಟ್ಟ ನೋಟದಲ್ಲಿ ಕಂಗಳು ಅಲುಗದೆ – ಮಿಸುಕಾಡದೆ ಸೆಳೆತಕ್ಕೊಳಗಾಗಿ ಪರಸ್ಪರ ಹೀರತೊಡಗಿದ್ದವು. ಮುಖವು ಮನದ ಕೈಗನ್ನಡಿಯಂತೆ. ಅಂತರಂಗದ ಭಾವನೆಗಳ ಅಲೆಗಳು ಉಮ್ಮಳಿಸಿ ಕಂಗಳ ಮಾಧ್ಯಮವನ್ನಾಂತು ಮಾದಕ ನೋಟದಲ್ಲೇ ವಿನಿಮಯಗೊಳ್ಳುತ್ತಿದ್ದವು. ಮೌನ ಸಂಭಾಷಣೆಯಲ್ಲೇ ಚರ್ಚಿಸಿ ಒಪ್ಪಿಗೆ ನೀಡಿ – ಪಡೆದು ಯಾಂತ್ರಿಕ ವಿನಿಮಯವಸಗಿ ಸನಿಹವಾದ ತಾರಾ ಶಶಾಂಕರು (ಚಂದ್ರನಿಗಿರುವ ಹೆಸರು) ಯಾರ – ಯಾವ ಭಯವೂ ಇಲ್ಲದೆ, ಲಜ್ಜೆ ಸಂಕೋಚಗಳನ್ನೇ ಮರೆತವರಾಗಿ ಕ್ಷಣ, ದಿನ, ಮಾಸಗಳ ಎಣಿಕೆ ಗಣಿಸದೆ, ಶರೀರ ಸಹಜ ಆಯಾಸ, ಹಸಿವು, ತೃಷೆ, ನಿದ್ದೆಗಳನ್ನೇ ಮರೆತು ಬಹುಕಾಲ ಸುಖಿಸುತ್ತಿದ್ದರು.

ಹೋದ ಕಾರ್ಯ ಪೂರೈಸಿ ಮರಳಿ ಬ್ರಹಸ್ಪತಿ ಆಚಾರ್ಯರು ಬಂದಾಗ ಆಶ್ರಮದಲ್ಲಿ ಪತ್ನಿ ತಾರಾ ಇರಲಿಲ್ಲ. ಏನಾಗಿದೆ ಎಂದು ಜ್ಞಾನಮಾರ್ಗದಿಂದ ತರ್ಕಿಸಿ ವಾಸ್ತವವನ್ನು ಅರಿತುಕೊಂಡಾಗ ಚಂದ್ರ ತಾರೆಯರ ವಿಚಾರ ತಿಳಿಯಿತು. ತಾನೇ ದಂಡಿಸಬಲ್ಲ ಅಥವಾ ತೀರ್ಮಾನಿಸುವ ಸರ್ವಶಕ್ತರೂ, ಅಧಿಕಾರಿಯೂ ಆಗಿದ್ದರೂ ಹಾಗೆ ಮಾಡದೆ ಈ ಕುರಿತಾಗಿ ಬ್ರಹ್ಮ ದೇವರಿಗೆ ದೂರಿತ್ತರು. ಬ್ರಹ್ಮ ದೇವರು ಆದೇಶವಿತ್ತಂತೆ ಚಂದ್ರನು ಗುರುಪತ್ನಿಯನ್ನು ಮರಳಿ ಬ್ರಹಸ್ಪತಿ ಆಚಾರ್ಯರ ವಶಕ್ಕೆ ಒಪ್ಪಿಸುವಾಗ ಆಕೆ ಗರ್ಭ ಧರಿಸಿದ್ದಳು. ಇದನ್ನರಿತ ಗುರು ಬ್ರಹಸ್ಪತಿಯವರು ಗರ್ಭವನ್ನು ಇಳುಹಲು ಪತ್ನಿಯಾದ ತಾರೆಗೆ ಆಜ್ಞಾಪಿಸಿದರು. ಒಪ್ಪದ ಆಕೆ, ಪತಿಯ ಬಲವಂತಕ್ಕೆ ಮಣಿಯಲೆ ಬೇಕಾಯಿತು. ಶಿಶು ಪೂರ್ಣ ಬೆಳೆಯದಿದ್ದರೂ ಅದು ಚಂದ್ರಮನ ಲಾವಣ್ಯದ ಮೂರ್ತಿಯಾಗಿತ್ತು. ಈ ಒತ್ತಾಯದ ಪ್ರಕರಣವನ್ನರಿತ ಚಂದ್ರನು ಧಾವಿಸಿ ಬಂದು ಶಿಶುವನ್ನೆತ್ತಿಕೊಂಡನು. ಮಗುವಿನ ಕಾಂತಿ ಬ್ರಹಸ್ಪತಿ ಆಚಾರ್ಯರನ್ನು ಸೆಳೆಯಿತೋ ಏನೋ! ಅವರು ಶಿಶುವನ್ನು ಸ್ವಾಧೀನ ಪಡಿಸಿದ ಚಂದ್ರನನ್ನು ಆಕ್ಷೇಪಿಸಿದರು. ಚಂದ್ರನೂ ಕೇಳಲಿಲ್ಲ- ಗುರುವೂ ಬಿಡಲಿಲ್ಲ. ತನಗೆ ತನಗೆ ಎಂಬ ವಾದಕ್ಕೆ ಕಾರಣವಾಯಿತು. ಓರ್ವ ಕೃಷಿಕ ಮತ್ತೋರ್ವನ ಒಡೆತನದ ಭೂಮಿಯಲ್ಲಿ ಗಿಡ ನೆಟ್ಟರೆ, ಫಲದ ಮೇಲಿನ ಪೂರ್ಣಾಧಿಕಾರ ಗಿಡ ನೆಟ್ಟವನಿಗೋ ಅಥವಾ ಕ್ಷೇತ್ರಾಧಿಕಾರಿ ಭೂಮಿಯ ಒಡೆಯನಿಗೋ? ಹಾಗೆಯೇ ಇಲ್ಲಿ ಕೃತ್ಯಗೈದವ ಮತ್ತು ಕ್ಷೇತ್ರಾಧಿಕಾರಿಯ ಮಧ್ಯೆ ಫಲ ವಿಚಾರದಲ್ಲಿ ದ್ವಂದ್ವಕ್ಕೆ ಹೇತುವಾಯಿತು. ಈ ವಾಗ್ಯುದ್ದ ನಿಲ್ಲಿಸಲು ಬ್ರಹ್ಮದೇವನೇ ಮಧ್ಯ ಪ್ರವೇಶಿಸಿ ದಿವ್ಯ ಕಾಂತಿಪ್ರದ ಮಗುವನ್ನು ಸ್ವತಂತ್ರಗೊಳಿಸಿ – ತೀರ್ಮಾನಕ್ಕಾಗಿ ನವ ಜಾತ ಶಿಶುವನ್ನೇ ಪ್ರಶ್ನಿಸಿದರು. ನೀನು ಯಾರ ಮಗನೆಂದು? ಅದು ತಾನು ಚಂದ್ರನ ಮಗನೆಂದೇ ಹೇಳಿತು. ಮಗುವಿತ್ತ ತೀರ್ಮಾನದಂತೆ ಚಂದ್ರನ ಸುತನಾಗಿ ಆತನ ವಶವಾಯಿತು. ಪರಮೇಷ್ಠಿ ಬ್ರಹ್ಮದೇವರು ‘ಬುಧ’ ಎಂದು ಮಗುವಿಗೆ ನಾಮಕರಣ ಮಾಡಿ ಆತನಿಗೆ ಗ್ರಹಾಧಿಪತ್ಯ ಸ್ಥಾನ ನೀಡಿದರು. ತಾರೆಗೂ ಅತಿಯಾದ ಸಂತಸವಾಯಿತು. ಚಂದ್ರನಿಗೂ ಕೃತಾರ್ಥತೆ ಪ್ರಾಪ್ತಿಯಾಯಿತು.

ಈ ಪ್ರಕರಣದಲ್ಲಿ ದುಡುಕಿ ಮುನಿಯಬೇಕಾಗಿದ್ದ ಮುನಿಪೋತ್ತಮ ಬ್ರಹಸ್ಪತಿ ಆಚಾರ್ಯರು ಜ್ಞಾನ ಸಂಪನ್ನರು. ತರ್ಕಿಸಿ ಜ್ಞಾನ ದೃಷ್ಟಿಯಿಂದ ಮಗುವಿನ ಹುಟ್ಟಿನ ಕಾರ್ಯಕಾರಣ ಅರಿತಿರಬೇಕು. ಹಾಗಾಗಿ ಕುಪಿತರಾಗಲಿಲ್ಲ. ಭವಿಷ್ಯದ ಕಾಲ ಚಕ್ರದ ಚಲನೆ ಪಾಲನೆಗೆ ಪೂರಕನಾಗಬಲ್ಲ ಈ ಮಗು ಎಂದು ಅರ್ಥೈಸಿಕೊಂಡು ಶಾಂತರಾಗಿದ್ದರು. ಏನೋ ಒಂದು ರೀತಿಯ ನೆಮ್ಮದಿ ಅವರಲ್ಲೂ ವ್ಯಕ್ತವಾಯಿತು. ಚಂದ್ರನ ಆಶ್ರಯದಲ್ಲಿ ಸಕಲ ವಿದ್ಯಾ ಪ್ರವೀಣನಾದ ಬುಧ ಬ್ರಹ್ಮ ದೇವನಿಂದ ಪ್ರಾಪ್ತವಾದ ಗ್ರಹಾಧಿಪತ್ಯದ ಯೋಗ್ಯತೆಯ ಗಳಿಕೆಗಾಗಿ ತಪೋನಿರತನಾದ.

ಮುಂದುವರಿಯುವುದು……

✍️ಭರತೇಶ್ ಶೆಟ್ಟಿ ಎಕ್ಕಾರ್

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page